Vijay Hazare Trophy| ಚಿನ್ನಸ್ವಾಮಿ ಕ್ರೀಡಾಂಗಣ ಬದಲಿಗೆ ದೇವನಹಳ್ಳಿಗೆ ಶಿಫ್ಟ್; ಪ್ರೇಕ್ಷಕರಿಗೆ ನೋ ಎಂಟ್ರಿ!

ಕಾಲ್ತುಳಿತ ಪ್ರಕರಣ ಸಂಬಂಧ ಜ| ಮೈಕಲ್‌ ಡಿ. ಕುನ್ಹಾ ವರದಿ ಮತ್ತು ಶಿಫಾರಸುಗಳ ಅನುಷ್ಠಾನ ಬಾಕಿ ಇರುವುದರಿಂದ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಖಚಿತತೆ ಇಲ್ಲಿದರುವುದರಿಂದ ಗೃಹ ಇಲಾಖೆ ಪಂದ್ಯ ನಡೆಸಲು ನಿರಾಕರಿಸಿದೆ.

Update: 2025-12-23 14:55 GMT

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ

Click the Play button to listen to article

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿಕ್ಕೆ 11 ಮಂದಿ ಬಲಿಯಾದ ಬಳಿಕ ನಿಂತುಹೋಗಿದ್ದ ಕ್ರಿಕೆಟ್‌ ಪಂದ್ಯಾವಳಿಗಳನ್ನು ಪುನರಾರಂಭಿಸಬೇಕೆಂಬ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌ (ಕೆಎಸ್‌ಸಿಎ) ಪ್ರಯತ್ನಕ್ಕೆ ಇನ್ನೂ ಯಶಸ್ಸುಸಿಕ್ಕಿಲ್ಲ.

ಆದರೆ, ಚಿನ್ನಸ್ವಾಮಿ  ಸ್ಟೇಡಿಯಂ ಬದಲಿಗೆ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ ಇರುವ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅನುಮತಿ ಇಲ್ಲ  ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

40 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿರುವ ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ ನಲ್ಲಿ ಮೂರು ಮೈದಾನಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಸಾರ್ವಜನಿಕರ ಪ್ರವೇಶವಿಲ್ಲದೆ ವಿಜಯ್‌ ಹಜಾರೆ ಟ್ರೋಫಿ ಸರಣಿಯನ್ನು ನಡೆಸಲು ನಿರ್ಧರಿಸಲಾಗಿದೆ.

ಭಾರತದ ಮಾಜಿ ವೇಗಿ ಹಾಗೂ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಆಯೋಜಿಸಲು ಮನವಿ ಮಾಡಿತ್ತು. ಅದರೆ,   ಸರ್ಕಾರದಿಂದ ಮನವಿಗೆ ಪುರಸ್ಕಾರ ಸಿಕ್ಕಿಲ್ಲ.


ಡಿಸೆಂಬರ್ 24 ರಂದು ದೆಹಲಿ ಹಾಗೂ ಆಂಧ್ರ ಪ್ರದೇಶ ನಡುವೆ  ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಸುವ ಬಗ್ಗೆ ಕೆಎಸ್‌ಸಿಎ ಮನವಿಯನ್ನು ನಿರಾಕರಿಸಲಾಗಿದೆ.  ಈ ಪಂದ್ಯಕ್ಕೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮತ್ತು ಪೊಲೀಸ್‌ ಆಯುಕ್ತರು  ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡ ಸ್ಟೇಡಿಯಂನಲ್ಲಿನ ಸುರಕ್ಷತೆಯನ್ನು ಪರಿಶೀಲಿಸಿದ್ದರು. ಈ ಪರಿಶೀಲನೆಯ ವರದಿಯು ನಕಾರತ್ಮಕವಾಗಿದ್ದು, ಪಂದ್ಯವನ್ನು ಆಯೋಜಿಸಲು ಸೂಕ್ತವಲ್ಲ ಎಂದು ತಿಳಿಸಿದೆ. 

ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯವನ್ನು ಆಯೋಜಿಸಲು ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. 

ಡಿ.ಕೆ. ಶಿವಕುಮಾರ್‌ಗೆ ಗೊತ್ತಿಲ್ಲ!

ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ. "ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯಕ್ಕೆ ಪೊಲೀಸರ ಅನುಮತಿ ನಿರಾಕರಣೆ ವಿಚಾರ ಗೊತ್ತಿಲ್ಲ. ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಬೇಕು, ಗೌರವ ಉಳಿಯಬೇಕು ಎಂದು ಬಯಸುವವನು ನಾನು. ಮುಂದೆ ಮತ್ತೆ ಅನಾಹುತ ಆಗದಂತೆ ನೋಡಿಕೊಳ್ಳಲು ಯಾವ ಮಾನದಂಡ ನಿಗದಿ ಮಾಡಬಹುದು ಎಂದು ಶೀಘ್ರವೇ ಚರ್ಚಿಸಲಾಗುವುದು," ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.


"ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯಗಳನ್ನು ನಡೆಸಲಿರುವ ಬಗ್ಗೆ ಸಾಧ್ಯತೆಗಳು ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ಗೆ ಜವಾಬ್ದಾರಿ ನೀಡಲಾಗಿದ್ದು, ಅವರೊಂದಿಗೆ ಚರ್ಚೆ ಮಾಡುತ್ತೇನೆ. ಅವರು ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷರಾಗಿದ್ದವರು, ಅವರಿಗೂ ಅನುಭವವಿದೆ," ಎಂದರು.

ಈ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಟೂರ್ನಿ ನಡೆಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದ ಡಿ.ಕೆ. ಶಿವಕುಮಾರ್‌ ಅವರಿಗೆ ರಾಜಕೀಯವಾಗಿ ಹಿನ್ನಡೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದೆ.  ಕಾಲ್ತುಳಿತ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಜ| ಮೈಕಲ್‌ ಡಿ. ಕುನ್ಹಾ ವರದಿ ಮತ್ತು ಶಿಫಾರಸುಗಳ ಅನುಷ್ಠಾನ ಬಾಕಿ ಇರುವುದರಿಂದ ಮತ್ತು ಇನ್ನೂ ಸುರಕ್ಷತಾ ಕ್ರಮಗಳ ಬಗ್ಗೆ ಖಚಿತತೆ ಇಲ್ಲಿದರುವುದರಿಂದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಾವಳಿ ನಡೆಸುವುದಕ್ಕೆ ನಿರಾಕರಿಸಿದ್ದರು ಎಂದು ಹೇಳಲಾಗಿದೆ.

ನೀರಾವರಿ ಯೋಜನೆ ಬಗ್ಗೆ ಚರ್ಚೆ

ನಾನು ಯಾವುದೇ ರಾಜಕೀಯ ವಿಷಯ ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳು ಹಾಗೂ ಬೆಂಗಳೂರಿನ ಪ್ರಮುಖ ಯೋಜನೆಗಳ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ಇದರ ಹೊರತಾಗಿ ರಾಜಕೀಯ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Tags:    

Similar News