ಕಾಂಗ್ರೆಸ್‌ನಿಂದಲೇ ಹಲವು ಬಾರಿ ಗಾಂಧೀಜಿ ಹತ್ಯೆ: ಬೊಮ್ಮಾಯಿ ತಿರುಗೇಟು

ಗಾಂಧಿಜಿಯವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಹೇಳಿದ್ದರು. ಆದರೆ ಮಾಜಿ ಪ್ರಧಾನಿ ನೆಹರು ವಿಸರ್ಜನೆ ಮಾಡಲಿಲ್ಲ, ಅವತ್ತೇ ಗಾಂಧಿಯ ಕೊಲೆಯಾಯಿತು ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

Update: 2025-12-23 15:46 GMT

ಸಂಸದ ಬಸವರಾಜ ಬೊಮ್ಮಾಯಿ

Click the Play button to listen to article

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಾವಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರಪಿತ ಮಹಾತ್ಮಗಾಂಧಿಯವರನ್ನು ಕೊಲೆ ಮಾಡಿದೆ ಎಂಬ ಕಾಂಗ್ರೆಸ್‌ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ನಿಂದಲೇ ಹಲವು ಬಾರಿ ಗಾಂಧಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಮಂಗಳವಾರ (ಡಿ.23) ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯವರನ್ನು ಕಾಂಗ್ರೆಸ್ ಒಂದಲ್ಲ ಹಲವಾರು ಬಾರಿ ಕೊಲೆ ಮಾಡಿದೆ. ಕಾಂಗ್ರೆಸ್ ಪಕ್ಷ ಗಾಂಧಿ ಹೆಸರನ್ನು ಹೇಳಿ ಲಾಭ ಪಡೆಯುತ್ತದೆ. ಅದೆಲ್ಲಿ ಹೋಗಿಬಿಡುತ್ತದೆ ಎನ್ನುವ ಭಯದಲ್ಲಿ ಗಾಂಧೀಜಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗಾಂಧೀಜಿಯವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಹೇಳಿದ್ದರು. ಆದರೆ ಮಾಜಿ ಪ್ರಧಾನಿ ನೆಹರು ವಿಸರ್ಜನೆ ಮಾಡಲಿಲ್ಲ, ಅವತ್ತೇ ಗಾಂಧಿಯ ಕೊಲೆಯಾಯಿತು. ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಿ ಮತ್ತೊಂದು ಸಾರಿ ಗಾಂಧಿಯನ್ನು ಕೊಲೆ ಮಾಡಿದರು. ಹಲವಾರು ಬಾರಿ ಗಾಂಧಿ ವಿಚಾರಗಳ ವಿರುದ್ಧ ಕಾಂಗ್ರೆಸ್ ಕೆಲಸ ಮಾಡಿ ಕೊಲೆ ಮಾಡಿದೆ ಎಂದರು. 

ಚುನಾವಣೆಗಾಗಿ ಕಾಂಗ್ರೆಸ್‌ನಿಂದ ಗಾಂಧಿ ಜಪ

"ಗಾಂಧಿ ಮತ್ತು ರಾಮನನ್ನು ಬೇರೆ ಮಾಡಿ ಕಾಂಗ್ರೆಸ್ ಪಾಪದ ಕೆಲಸ ಮಾಡುತ್ತಿದೆ. ರಾಮ ಬೇರೆಯಲ್ಲ, ಗಾಂಧಿ ಬೇರೆಯಲ್ಲ. ಗಾಂಧಿ ಆತ್ಮ ರಾಮನ ಹೆಸರು ಹೇಳುತ್ತದೆ. ರಾಮನ ವಿಚಾರಗಳನ್ನು ಪ್ರತಿಪಾದಿಸಿದ ಗಾಂಧಿ ರಾಮರಾಜ್ಯದ ಪರಿಕಲ್ಪನೆಯನ್ನು ಹೇಳಿದ್ದರು. ಗಾಂಧಿಯ ಆತ್ಮದಲ್ಲಿದ್ದ ರಾಮನ ಹೆಸರನ್ನು ಇವತ್ತು ಉದ್ಯೋಗ ಖಾತ್ರಿಗೆ ಇಟ್ಟಿದ್ದೇವೆ. ಮೊದಲು ಇದಕ್ಕೆ ನೆಹರು ಹೆಸರಿತ್ತು, ಚುನಾವಣೆ ಸಂದರ್ಭದಲ್ಲಿ ಗಾಂಧಿ ಹೆಸರನ್ನು ಇಟ್ಟರು" ಎಂದು ತಿಳಿಸಿದರು.

ರಾಹುಲ್‌ ಮಾತಿಗೆ ಬೆಲೆ ಇಲ್ಲ

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ಭಾರತದ ಸಂವಿಧಾನಿಕ ಸಂಸ್ಥೆಗಳು ಹಾಗೂ ಪ್ರಜಾಪ್ರಭುತ್ವದ ವಿರುದ್ದ ಮಾತನಾಡುವುದು ಹವ್ಯಾಸವಾಗಿದೆ. ತಾವು ಮಾಡಿರುವ ಭ್ರಷ್ಟಾಚಾರದಿಂದ ರಕ್ಷಣೆ ಪಡೆಯಲು ಸೋರಸ್ ನಂತಹ ವಿದೇಶಿ ಸಂಸ್ಥೆಗಳ ರಕ್ಷಣೆ ಪಡೆಯಲು ಬಯಸುತ್ತಾರೆ. ಅವರ ಮಾತಿಗೆ ಭಾರತದಲ್ಲಿ ಬೆಲೆ ಇಲ್ಲ ಅದಕ್ಕಾಗಿ ವಿದೇಶಕ್ಕೆ ಹೋಗಿ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಡಿಸಿಎಂ ಡಿಕೆಶಿ ಹೇಳಿದ್ದೇನು ?

"ಮಹಾತ್ಮಾ ಗಾಂಧಿ ಅವರ ಹೆಸರು ಬದಲಾವಣೆ ಮಾಡುತ್ತಿರುವುದು ನೋಡಿದರೆ ಕೇಂದ್ರ ಸರ್ಕಾರದ ಅಂತಿಮ ದಿನಗಳ ಆರಂಭ ಎನ್ನಬಹುದು. ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಹತ್ಯೆ ಮಾಡುತ್ತಿದೆ. ಈ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ಅನುಪಾತವನ್ನು 60:40ಕ್ಕೆ ಬದಲಾಯಿಸಿದ್ದು, ಬಿಜೆಪಿ ಆಡಳಿತ ರಾಜ್ಯ ಸರ್ಕಾರಗಳು ಸೇರಿದಂತೆ ಯಾವುದೇ ರಾಜ್ಯ ಸರ್ಕಾರಗಳು ಇದನ್ನು ಭರಿಸುವುದಿಲ್ಲ. ಇದರಿಂದಾಗಿ ಭವಿಷ್ಯದಲ್ಲಿ ಈ ಯೋಜನೆ ಸಂಪೂರ್ಣ ವಿಫಲವಾಗಲಿದೆ" ಎಂದು ತಿಳಿಸಿದ್ದರು.

Tags:    

Similar News