ರಾಜ್ಯದಲ್ಲಿ ಮೈಕೊರೆಯುವ ಚಳಿ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಾದ್ಯಂತ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಮಳೆಯ ಬೆನ್ನಲ್ಲೇ ಇದೀಗ ವಿಪರೀತ ಚಳಿ ಆವರಿಸಿದೆ. ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದಲ್ಲಿ ಶೀತಗಾಳಿ ಮತ್ತು ದಟ್ಟ ಮಂಜು ಮುಂದುವರಿಯಲಿದೆ.

Update: 2025-12-23 05:01 GMT

ಸಾಂದರ್ಭಿಕ ಚಿತ್ರ 

Click the Play button to listen to article

ರಾಜ್ಯದಾದ್ಯಂತ ಚಳಿಯ ಅಲೆ  ವ್ಯಾಪಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿದಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಲಾಗಿದೆ.

ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿಯ ಆರ್ಭಟ ಜೋರಾಗಿದೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಸುಮಾರು 7 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆ ಕಂಡುಬಂದಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಭಾನುವಾರ ಕನಿಷ್ಠ 6.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು, ಇದು ಕಳೆದ 20 ವರ್ಷಗಳಲ್ಲೇ ದಾಖಲಾದ ಅತಿ ಕಡಿಮೆ ತಾಪಮಾನವಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಗೆ ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ್' ಘೋಷಿಸಿದೆ.

ರಾಜಧಾನಿ ಬೆಂಗಳೂರಿನ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಬೆಳಿಗ್ಗೆ ಎದ್ದ ತಕ್ಷಣ ಇಡೀ ನಗರ ಮಂಜಿನಿಂದ ಆವೃತವಾಗುತ್ತಿದ್ದು, ವಾಹನ ಸವಾರರು ದಟ್ಟ ಮಂಜಿನಿಂದಾಗಿ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ ಹಾಗೂ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.

ಶೀತಗಾಳಿಯ ಪ್ರಭಾವ ಹೆಚ್ಚುತ್ತಿರುವುದರಿಂದ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಬೆಳಿಗ್ಗೆ ಮತ್ತು ರಾತ್ರಿ ಅವಧಿಯಲ್ಲಿ ಹೊರಬರುವಾಗ ಬೆಚ್ಚನೆಯ ಉಡುಪುಗಳನ್ನು ಧರಿಸುವುದು ಹಾಗೂ ಬಿಸಿಯಾದ ಮತ್ತು ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆಯೂ ಮುಂದುವರಿಯಲಿದ್ದು, ಚಳಿಯ ತೀವ್ರತೆ ಇನ್ನೆರಡು ದಿನ ಕಾಯಂ ಆಗಿರಲಿದೆ.

Tags:    

Similar News