2027ರ ಡಿಸೆಂಬರ್‌ಗೆ ವಿಮಾನ ನಿಲ್ದಾಣ ಮೆಟ್ರೊ : ಡಿ.ಕೆ. ಶಿವಕುಮಾರ್ ಘೋಷಣೆ
ಮಾಗಡಿ ರಸ್ತೆಯ ತಾವರೆಕೆರೆ, ಹೊಸಕೋಟೆ, ಬಿಡದಿ ಮತ್ತು ನೆಲಮಂಗಲದವರೆಗೆ ಮೆಟ್ರೊ ಸಂಪರ್ಕ ಕಲ್ಪಿಸಲಾಗುವುದು.
ಡಿಸಿಎಂ ಡಿ.ಕೆ. ಶಿವಕುಮಾರ್
ನಗರದ ವಾಹನ ದಟ್ಟಣೆ ನಿಯಂತ್ರಣಕ್ಕೆ ಮೆಟ್ರೊ ಜಾಲ ವಿಸ್ತರಣೆಗೆ ರಾಜ್ಯ ಸರ್ಕಾರ ವೇಗ ನೀಡಿದ್ದು, ಬಹುನಿರೀಕ್ಷಿತ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ 'ನೀಲಿ ಮಾರ್ಗ'ದ ಮೆಟ್ರೊ ಸಂಚಾರವು 2027ರ ಡಿಸೆಂಬರ್ ವೇಳೆಗೆ ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ಬಿಎಂಆರ್‌ಸಿಎಲ್ (BMRCL) ಕಚೇರಿಯಲ್ಲಿ ಮೆಟ್ರೊ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಎರಡು ವರ್ಷಗಳಲ್ಲಿ ಮೆಟ್ರೊ ಜಾಲದ ವಿಸ್ತರಣೆಯ ರೂಪುರೇಷೆಗಳನ್ನು ಬಿಚ್ಚಿಟ್ಟರು.
175 ಕಿ.ಮೀ.ಗೆ ಏರಲಿರುವ ಮೆಟ್ರೊ ಜಾಲ
"ಪ್ರಸ್ತುತ ಬೆಂಗಳೂರಿನಲ್ಲಿ 96 ಕಿ.ಮೀ. ಮೆಟ್ರೊ ಮಾರ್ಗ ಬಳಕೆಯಲ್ಲಿದೆ. ಕಾಮಗಾರಿ ಭರದಿಂದ ಸಾಗುತ್ತಿದ್ದು, 2026ರಲ್ಲಿ 41 ಕಿ.ಮೀ. ಉದ್ದದ ಹೊಸ ಮಾರ್ಗ ಸೇರ್ಪಡೆಯಾಗಲಿದೆ. 2027ರಲ್ಲಿ ವಿಮಾನ ನಿಲ್ದಾಣ ಮಾರ್ಗ ಸೇರಿದಂತೆ ಒಟ್ಟು 38 ಕಿ.ಮೀ. ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ. ಗುಲಾಬಿ (Pink Line) ಮತ್ತು ನೀಲಿ (Blue Line) ಮಾರ್ಗಗಳು ಪೂರ್ಣಗೊಂಡರೆ, ರಾಜಧಾನಿಯಲ್ಲಿ ಒಟ್ಟು 175 ಕಿ.ಮೀ. ಉದ್ದದ ಮೆಟ್ರೊ ಜಾಲ ಕಾರ್ಯನಿರ್ವಹಿಸಲಿದೆ," ಎಂದು ಡಿಕೆಶಿ ವಿವರಿಸಿದರು.
ಉಪನಗರಗಳಿಗೂ ಮೆಟ್ರೊ ಸಂಪರ್ಕ
ನಗರದ ಹೊರವಲಯಗಳಿಗೂ ಮೆಟ್ರೊ ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ. ಮಾಗಡಿ ರಸ್ತೆಯ ತಾವರೆಕೆರೆ, ಹೊಸಕೋಟೆ, ಬಿಡದಿ ಮತ್ತು ನೆಲಮಂಗಲದವರೆಗೆ ಮೆಟ್ರೊ ಸಂಪರ್ಕ ಕಲ್ಪಿಸಲಾಗುವುದು. ಈ ಪೈಕಿ ಕೆಲವು ಯೋಜನೆಗಳು ಅನುಷ್ಠಾನದ ಹಂತದಲ್ಲಿದ್ದರೆ, ಉಳಿದೆಡೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜನವರಿಯಲ್ಲಿ 3ನೇ ಹಂತಕ್ಕೆ ಟೆಂಡರ್
ಮೆಟ್ರೊ 3ನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡ ಉಪಮುಖ್ಯಮಂತ್ರಿಗಳು, "ಮುಂದಿನ ತಿಂಗಳು (ಜನವರಿ) ಸುಮಾರು 100 ಕಿ.ಮೀ. ಉದ್ದದ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ಇದರಲ್ಲಿ ಎತ್ತರಿಸಿದ ಕಾರಿಡಾರ್ (ಡಬಲ್ ಡೆಕರ್) ಕೂಡ ಸೇರಿದೆ. ಒಟ್ಟು 25,311 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ಜೈಕಾ ಸಂಸ್ಥೆಯಿಂದ 15,600 ಕೋಟಿ ರೂಪಾಯಿ ಸಾಲ ಪಡೆಯಲಾಗುತ್ತಿದೆ. 9,700 ಕೋಟಿ ರೂಪಾಯಿ ವೆಚ್ಚದ ಎತ್ತರಿಸಿದ ಮಾರ್ಗಕ್ಕೂ ಜನವರಿಯಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ," ಎಂದು ತಿಳಿಸಿದರು.
ಈಗಾಗಲೇ ಕಾರ್ಯಾರಂಭ ಮಾಡಿರುವ ಹಳದಿ ಮಾರ್ಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಿನಕ್ಕೆ ಸರಾಸರಿ 1 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.