ಬಾರ್ ಲೈಸೆನ್ಸ್ : 477 ಸಿಎಲ್-2 ಮತ್ತು 92 ಸಿಎಲ್-9 ಸನ್ನದುಗಳ ಇ-ಹರಾಜಿಗೆ ಚಾಲನೆ
ಸ್ಥಗಿತಗೊಂಡಿರುವ, ಹಂಚಿಕೆಯಾಗದಿರುವ 569 ಮದ್ಯದ ಸನ್ನದುಗಳ ಪೈಕಿ ಹರಾಜು ಪ್ರಕ್ರಿಯೆಗೆ 477 ಸಿಎಲ್(2-ಎ) ಮತ್ತು 92 ಸಿಎಲ್(9-ಎ) ಸನ್ನದುಗಳು ಹರಾಜಿಗೆ ರಾಜ್ಯ ಸರ್ಕಾರ. ಅಧಿಸೂಚನೆ ಪ್ರಕಟಿಸಿದೆ.
ರಾಜ್ಯದಲ್ಲಿ ಮದ್ಯದ ಸನ್ನದು (ಲೈಸೆನ್ಸ್) ಹಂಚಿಕೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಬಹುನಿರೀಕ್ಷಿತ ಇ-ಹರಾಜು ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಿದೆ. ಹೈಕೋರ್ಟ್ ನೀಡಿದ್ದ ತಾತ್ಕಾಲಿಕ ತಡೆ ತೆರವಾಗುತ್ತಿದ್ದಂತೆ, ಸ್ಥಗಿತಗೊಂಡಿದ್ದ 569 ಮದ್ಯದ ಸನ್ನದುಗಳನ್ನು ಆನ್‌ಲೈನ್ ಮೂಲಕ ಹರಾಜು ಹಾಕಲು ಅಬಕಾರಿ ಇಲಾಖೆ ಸಜ್ಜಾಗಿದೆ. 2025-26ರ ಬಜೆಟ್ ಘೋಷಣೆಯಂತೆ ಹೆಚ್ಚುವರಿ ಆದಾಯ ಸಂಗ್ರಹದ ಗುರಿಯೊಂದಿಗೆ ಈ ಪ್ರಕ್ರಿಯೆ ನಡೆಯಲಿದ್ದು, ಆಸಕ್ತರು ಇಂದಿನಿಂದಲೇ (ಡಿ.22) ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿಶೇಷ ಮೀಸಲಾತಿಯೊಂದಿಗೆ ನಡೆಯುವ ಈ ಹರಾಜಿನಲ್ಲಿ ಯಶಸ್ವಿಯಾದವರಿಗೆ ಮೊದಲ ವರ್ಷದ ಲೈಸೆನ್ಸ್ ಶುಲ್ಕದಿಂದ ವಿನಾಯಿತಿ ಸಿಗಲಿದೆ ಎಂಬುದು ವಿಶೇಷ.
ಸ್ಥಗಿತಗೊಂಡು ಹಂಚಿಕೆಯಾಗದೆ ಉಳಿದಿದ್ದ ಸಿಎಲ್–2 ಮತ್ತು ಸಿಎಲ್ (11–ಸಿ) ಸನ್ನದುಗಳನ್ನು ಸಿಎಲ್ (2–ಎ) ಎಂದು, ಹಾಗೆಯೇ ಸಿಎಲ್–9 ಸನ್ನದುಗಳನ್ನು ಸಿಎಲ್ (9–ಎ) ಎಂದು ನವ ವರ್ಗೀಕರಿಸಲಾಗಿದೆ. ಒಟ್ಟು 569 ಸನ್ನದುಗಳಲ್ಲಿ, 477 ಸಿಎಲ್ (2–ಎ) ಮತ್ತು 92 ಸಿಎಲ್ (9–ಎ) ಸನ್ನದುಗಳನ್ನು ಇ–ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಈ ಸನ್ನದುಗಳನ್ನು ಹಂಚಿಕೆ ಮಾಡಲಾಗಿದ್ದು, ಬೆಂಗಳೂರು ದಕ್ಷಿಣಕ್ಕೆ 11, ದಕ್ಷಿಣ ಕನ್ನಡಕ್ಕೆ 30, ಮೈಸೂರು ನಗರಕ್ಕೆ 13, ಮೈಸೂರು ಗ್ರಾಮಾಂತರಕ್ಕೆ 14, ಬೆಳಗಾವಿ ಉತ್ತರಕ್ಕೆ 10, ಬೆಳಗಾವಿ ದಕ್ಷಿಣಕ್ಕೆ 11, ತುಮಕೂರಿಗೆ 24, ದಾವಣಗೆರೆಗೆ 12, ಉಡುಪಿ ಜಿಲ್ಲೆಯಿಗೆ 8 ಸನ್ನದುಗಳ ಜೊತೆಗೆ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಿಗೂ ಸನ್ನದುಗಳನ್ನು ವಿನ್ಯಾಸಗೊಳಿಸಲಾಗಿದೆ.
ಸರ್ಕಾರವು ಸಿಎಲ್(2-ಎ) ಮತ್ತು ಸಿಎಲ್ (9 -ಎ) ಸನ್ನದುಗಳನ್ನು ಇ-ಹರಾಜಿನಲ್ಲಿ ಹರಾಜು ಮಾಡುವ ಸಂಬಂಧ ಪರಿಶಿಷ್ಟ ಜಾತಿ - ಎ ವರ್ಗದವರಿಗೆ ಶೇ. 6 ರಷ್ಟು, ಪರಿಶಿಷ್ಟ ಜಾತಿ - ಬಿ ವರ್ಗದವರಿಗೆ ಶೇ.6 ರಷ್ಟು, ಪರಿಶಿಷ್ಟ ಜಾತಿ - ಸಿ ವರ್ಗದವರಿಗೆ ಶೇ.5 ರಷ್ಟು ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ. 7 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇ-ಹರಾಜನ್ನು ಭಾರತ ಸರ್ಕಾರ ಸ್ವಾಮ್ಯದ ಸಂಸ್ಥೆಯಾದ ಎಂಎಸ್ ಟಿಸಿ ಲಿಮಿಟೆಡ್‍ನ ಇ-ಪೋರ್ಟಲ್‍ನಲ್ಲಿ ನಡೆಸಲಾಗುತ್ತದೆ. ಇ-ಹರಾಜಿನ ವೇಳಾಪಟ್ಟಿಯ ವಿವರಗಳು ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯ ಪೋರ್ಟಲ್ https://stateexcise.karnataka.gov.in ಮತ್ತು ಇ-ಹರಾಜು ವೇದಿಕೆ ಎಂಎಸ್ ಟಿಸಿ ಯ ಪೋರ್ಟಲ್ https://www.mstcecommerce.com ನಲ್ಲಿ ಲಭ್ಯವಿರುತ್ತದೆ.
ಇ-ಹರಾಜಿನ ವೇಳಾಪಟ್ಟಿ ಮತ್ತು ಪ್ರಕ್ರಿಯೆ
ಸೋಮವಾರ (ಡಿ.22)ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಮಂಗಳವಾರ (ಡಿ.23)ದಿಂದ 2026ರ ಜನವರಿ 7ರವರೆಗೆ ಬಿಡ್‌ದಾರರು ಮತ್ತು ಜಿಲ್ಲಾ ಇ-ಹರಾಜು ನೋಡ್‌ಲ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ. ನೇರ ಇ-ಹರಾಜು 2026ರ ಜನವರಿ 13ರಿಂದ 20ರವರೆಗೆ ಆನ್‌ಲೈನ್‌ನಲ್ಲಿ ನಡೆಯುವಂತೆ ವೇಳಾಪಟ್ಟಿ ನಿಗದಿಯಾಗಿದೆ. ತರಬೇತಿ ಮತ್ತು ಹರಾಜಿನ ಸಂಪೂರ್ಣ ವಿವರಗಳನ್ನು ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯ ಅಧಿಕೃತ ಜಾಲತಾಣ ಹಾಗೂ ಎಂಎಸ್ಟಿಸಿ ಇ-ಹರಾಜು ಪೋರ್ಟಲ್‌ನಲ್ಲಿ ಪ್ರಕಟಿಸಲಾಗುತ್ತದೆ.
ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಆಸಕ್ತರು ಹರಾಜು ಪ್ರಾರಂಭಕ್ಕೂ ಮುನ್ನ ಎಂಎಸ್ಟಿಸಿಯ ಇ-ಹರಾಜು ವೇದಿಕೆಯಲ್ಲಿ ಆನ್‌ಲೈನ್ ನೋಂದಣಿ ಮಾಡಿಸಿಕೊಳ್ಳಬೇಕು. ವೈಯಕ್ತಿಕ ವ್ಯಕ್ತಿಗಳು, ಏಕವ್ಯಕ್ತಿ ಮಾಲೀಕತ್ವದ ಘಟಕಗಳು, ಜೊತೆಗೆ ಭಾರತದ ಕಾನೂನುಗಳ ಅಡಿಯಲ್ಲಿ ನೋಂದಾಯಿತ ಟ್ರಸ್ಟ್, ಸೊಸೈಟಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಪಾಲುದಾರಿಕೆ ಒಡಂಬಡಿಕೆ ಹಾಗೂ ಕಂಪನಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಕೆ ಮತ್ತು ಹಣಕಾಸು ನಿಯಮಗಳು
ಪ್ರತಿ ಬಿಡ್‌ದಾರರಿಗೆ ಒಂದೇ ಬಾರಿ ಪಾವತಿಸಬೇಕಾದ ನೋಂದಣಿ ಶುಲ್ಕ ರೂ.1,000 (ಜಿಎಸ್‌ಟಿ ಸೇರಿ) ಆಗಿದೆ. ಸನ್ನದಿಗೆ ಸಲ್ಲಿಸುವ ಪ್ರತಿಯೊಂದು ಅರ್ಜಿಗೂ ಮರುಪಾವತಿಸದ ಅರ್ಜಿ ಶುಲ್ಕವಾಗಿ ರೂ.50,000 ವಿಧಿಸಲಾಗುತ್ತದೆ. ಒಂದೇ ಬಿಡ್‌ದಾರರು ಅನೇಕ ಸನ್ನದುಗಳಿಗೆ ಅರ್ಜಿ ಸಲ್ಲಿಸಬಹುದಾದರೂ, ಪ್ರತಿಯೊಂದು ಸನ್ನದಿಗೆ ಪ್ರತ್ಯೇಕ ಅರ್ಜಿ ಮತ್ತು ಅದರಿಗೇ ಸಂಬಂಧಿಸಿದ ಶುಲ್ಕ, ಮುಂಗಡ ಠೇವಣಿ (EMD) ಪಾವತಿಸಬೇಕಾಗುತ್ತದೆ.
ಬಿಡ್‌ದಾರರಿಗಾಗಿ ‘ವಾಲೆಟ್’ ವ್ಯವಸ್ಥೆ ಕಲ್ಪಿಸಲಾಗಿದ್ದು, ಆನ್‌ಲೈನ್ ಮೂಲಕ ಅದಕ್ಕೆ ಮೊತ್ತ ಜಮಾ ಮಾಡಿಕೊಳ್ಳಬಹುದು. ಅದೇ ವಾಲೆಟ್‌ನಿಂದ ಅರ್ಜಿ ಶುಲ್ಕ ಮತ್ತು ಮುಂಗಡ ಠೇವಣಿಯನ್ನು ನೈಜ ಸಮಯದಲ್ಲೇ ಕಟ್ ಮಾಡಲು ಅವಕಾಶವಿರುತ್ತದೆ. ಮುಂಗಡ ಠೇವಣಿ ಸನ್ನದಿಯ ಮೂಲಬೆಲೆಯ ಶೇಕಡಾ 2ರಷ್ಟಾಗಿದ್ದು, ಅರ್ಜಿ ಸಲ್ಲಿಸುವಾಗಲೇ ಪಾವತಿಸಬೇಕು. ಪ್ರತಿಯೊಂದು ಸನ್ನದಿಗೆ ಬಿಡ್ಡಿಂಗ್ ಅದರ ಮೂಲಬೆಲೆಯಿಂದ ಆರಂಭವಾಗುತ್ತಿದ್ದು, ಪ್ರತೀ ಬಾರಿ ಬಿಡ್ ಮಾಡುವಾಗ ಕನಿಷ್ಠ ರೂ.2 ಲಕ್ಷ ಅಥವಾ ಅದರ ಗುಣಾಕಾರದಷ್ಟು ಹೆಚ್ಚಳ ಮಾಡುವುದು ಅನಿವಾರ್ಯ. ಇ-ಹರಾಜಿನಲ್ಲಿ ಅತಿ ಹೆಚ್ಚಿನ ಮಾನ್ಯ ಬಿಡ್ ಸಲ್ಲಿಸಿದ ವ್ಯಕ್ತಿಯನ್ನು (H–1) ಸ್ವಯಂಚಾಲಿತ ಆನ್‌ಲೈನ್ ಪ್ರಕ್ರಿಯೆಯಿಂದ ಆಯ್ಕೆ ಮಾಡಲಾಗುತ್ತದೆ.
ಸನ್ನದು ಅವಧಿ ಮತ್ತು ಶುಲ್ಕ ವ್ಯವಸ್ಥೆ
ಹರಾಜು ಮಾಡಿದ ಸನ್ನದುಗಳು ಹರಾಜು ನಡೆದ ಅಬಕಾರಿ ವರ್ಷ ಸೇರಿ ಒಟ್ಟು ಐದು ಅಬಕಾರಿ ವರ್ಷಗಳವರೆಗೆ, ಅಂದರೆ 2030ರ ಜೂನ್ 30ರವರೆಗೆ ಮಾನ್ಯವಾಗಿರುತ್ತವೆ. ಯಶಸ್ವಿ H–1 ಬಿಡ್‌ದಾರರಿಗೆ ಮೊದಲ ಅಬಕಾರಿ ವರ್ಷಕ್ಕೆ ಸನ್ನದು ಶುಲ್ಕ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ. ಆದರೆ ಉಳಿದ ನಾಲ್ಕು ವರ್ಷಗಳಿಗಾಗಿ ಪ್ರತಿವರ್ಷ ನಿಗದಿತ ವಾರ್ಷಿಕ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಶುಲ್ಕವನ್ನು ಪಾವತಿಸುವುದು ಕಡ್ಡಾಯ.
ಇ-ಹರಾಜು ಅಧಿಸೂಚನೆ, ತರಬೇತಿ ವೇಳಾಪಟ್ಟಿ, ನೋಂದಣಿ ಲಿಂಕ್ ಮತ್ತು ಬಿಡ್ಡಿಂಗ್ ಸಂಬಂಧಿತ ಎಲ್ಲಾ ತಾಂತ್ರಿಕ ವಿವರಗಳು ಅಬಕಾರಿ ಇಲಾಖೆಯ ಜಾಲತಾಣ ಮತ್ತು ಎಂಎಸ್ಟಿಸಿ ಇ-ಹರಾಜು ಪೋರ್ಟಲ್‌ಗಳಲ್ಲಿ ಲಭ್ಯವಿರುವುದಾಗಿ ಅಬಕಾರಿ ಆಯುಕ್ತರು ತಿಳಿಸಿದ್ದಾರೆ.