Murder Case| ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವಲು ಪುತ್ರ, ಪುತ್ರಿ, ಡಿವೈಎಸ್‌ಪಿ ಬಂಧಿಸಿದ ಸಿಬಿಐ
ಆದಿಕೇಶವಲು ಪುತ್ರ ಡಿ.ಎ. ಶ್ರೀನಿವಾಸ್, ಪುತ್ರಿ ಡಿ.ಎ. ಕಲ್ಪಜಾ, ಡಿವೈಎಸ್‌ಪಿ ಎಸ್.ವೈ. ಮೋಹನ್‌ರನ್ನು ಸಿಬಿಐ ಬಂಧಿಸಿದೆ. ಕಲ್ಪಜಾ ಅವರು ಪ್ರಸಿದ್ಧ ವೈದೇಹಿ ವೈದ್ಯಕೀಯ ಕಾಲೇಜು ಅಧ್ಯಕ್ಷೆಯೂ ಆಗಿದ್ದಾರೆ.
ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಸಾಕ್ಷ್ಯ ನಾಶಪಡಿಸಿದ ಗಂಭೀರ ಆರೋಪದ ಮೇಲೆ ಪ್ರಭಾವಿ ಉದ್ಯಮಿಯಾಗಿದ್ದ ತಿರುಪತಿ ಟಿಟಿಡಿ ಮಾಜಿ ಅಧ್ಯಕ್ಷ ಹಾಗೂ ಮದ್ಯದ ದೊರೆ ದಿವಂಗತ ಡಿ.ಕೆ. ಆದಿಕೇಶವಲು ಅವರ ಪುತ್ರ ಡಿ.ಎ. ಶ್ರೀನಿವಾಸ್, ಪುತ್ರಿ ಡಿ.ಎ. ಕಲ್ಪಜಾ ಮತ್ತು ಡಿವೈಎಸ್‌ಪಿ ಎಸ್.ವೈ. ಮೋಹನ್ ಅವರನ್ನು ಸಿಬಿಐ ಬಂಧಿಸಿದೆ.
ಡಿ.ಎ. ಕಲ್ಪಜಾ ಅವರು ಪ್ರಸಿದ್ಧ ವೈದೇಹಿ ವೈದ್ಯಕೀಯ ಕಾಲೇಜು ಅಧ್ಯಕ್ಷೆಯೂ ಆಗಿದ್ದಾರೆ. ಈ ಬಂಧನವು ಆದಿಕೇಶವಲು ಆಪ್ತಸಹಾಯಕರಾಗಿದ್ದ ಕೆ. ರಘುನಾಥ್ ನಿಗೂಢ ಸಾವು ಮತ್ತು ಅದಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಭಾರಿ ಪ್ರಮಾಣದ ದಾಖಲೆಗಳ ನಕಲು ಪ್ರಕರಣಕ್ಕೆ ಸಂಬಂಧಿಸಿದೆ. ಈ ಹಿಂದೆ ರಾಜ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ, ತನಿಖೆಯಲ್ಲಿ ಪಾರದರ್ಶಕತೆ ಇಲ್ಲ ಎಂಬ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.
ಆಸ್ತಿ ಪಡೆದುಕೊಳ್ಳಲು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದು. ಅಮೂಲ್ಯವಾದ ಸೆಕ್ಯೂರಿಟಿ ದಾಖಲೆಗಳು ಮತ್ತು ವಿಲ್‌ಗಳನ್ನು ನಕಲು ಮಾಡಲಾಗಿತ್ತು. ಅಲ್ಲದೇ, ಸರ್ಕಾರದ ಅಧಿಕೃತ ಮುದ್ರೆ ಮತ್ತು ಸೀಲುಗಳನ್ನು ಫೋರ್ಜರಿ ಮಾಡಿರುವುದು ಸಹ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಅಸಲಿ ಪುರಾವೆಗಳನ್ನು ನಾಶಪಡಿಸಿ, ತನಿಖಾ ಸಂಸ್ಥೆಯನ್ನು ದಾರಿ ತಪ್ಪಿಸಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಎಂದು ಸಿಬಿಐ ಹೇಳಿದೆ.
ಡಿವೈಎಸ್‌ಪಿ ಎಸ್.ವೈ. ಮೋಹನ್ ಅವರು ಈ ಹಿಂದೆ ಪ್ರಕರಣದ ತನಿಖಾ ಹಂತದಲ್ಲಿದ್ದಾಗ ಆರೋಪಿಗಳೊಂದಿಗೆ ಕೈಜೋಡಿಸಿ, ಪುರಾವೆಗಳನ್ನು ನಾಶಪಡಿಸಲು ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಲು ನೆರವಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಸಿಬಿಐ ಮಾಡಿದೆ
ಪ್ರಭಾವಿ ಉದ್ಯಮಿ ಹಾಗೂ ಮಾಜಿ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಮ್- Tirumala Tirupati Devasthanams) ಅಧ್ಯಕ್ಷ ದಿವಂಗತ ಡಿ.ಕೆ. ಆದಿಕೇಶವಲು ಪುತ್ರ ಡಿ.ಎ. ಶ್ರೀನಿವಾಸ್, ಪುತ್ರಿ ಡಿ.ಎ. ಕಲ್ಪಜಾ ಮತ್ತು ಕರ್ನಾಟಕ ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಎಸ್.ವೈ. ಮೋಹನ್ ಬಂಧನವು ಕೇವಲ ವಂಚನೆ ಪ್ರಕರಣವಲ್ಲ, ಬದಲಾಗಿ ದಶಕದ ಕಾಲದ ಕೌಟುಂಬಿಕ ಕಲಹ, ಆಸ್ತಿ ಹಪಹಪಿ ಮತ್ತು ಅಧಿಕಾರದ ದುರ್ಬಳಕೆಯ ಕರಾಳ ಮುಖವನ್ನು ಅನಾವರಣಗೊಳಿಸಿದೆ.
ಮದ್ಯದ ಉದ್ಯಮದಿಂದ ಆರಂಭಿಸಿ ವೈದ್ಯಕೀಯ ಮತ್ತು ಶಿಕ್ಷಣದವರೆಗೆ ಭಾರಿ ಸಾಮ್ರಾಜ್ಯ ಕಟ್ಟಿದ್ದ ಡಿ.ಕೆ. ಆದಿಕೇಶವಲು ಅವರು ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ಅವರು ಬೆಂಗಳೂರಿನ ಪ್ರತಿಷ್ಠಿತ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸೇರಿದಂತೆ ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರು.
2013ರಲ್ಲಿ ಆದಿಕೇಶವಲು ನಿಧನ ನಂತರ, ಅವರ ಉತ್ತರಾಧಿಕಾರದ ಕುರಿತು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡವು. ಈ ಸಂದರ್ಭದಲ್ಲಿ ಆದಿಕೇಶವಲು ಅವರ ಆಪ್ತ ಸಹಾಯಕ ಕೆ. ರಘುನಾಥ್ ಅವರ ಪಾತ್ರ ನಿರ್ಣಾಯಕವಾಗಿತ್ತು.
ಆದಿಕೇಶವಲು ಅವರ ಎಲ್ಲಾ ವ್ಯವಹಾರಿಕ ರಹಸ್ಯಗಳು ಮತ್ತು ಆಸ್ತಿ ಪತ್ರಗಳ ಬಗ್ಗೆ ರಘುನಾಥ್‌ಗೆ ಸಂಪೂರ್ಣ ಮಾಹಿತಿ ಇತ್ತು ಎನ್ನಲಾಗಿದೆ. ಆದರೆ, ಕೆಲವೇ ವರ್ಷಗಳಲ್ಲಿ ಕೆ. ರಘುನಾಥ್ ಅವರ ಸಾವು ನಿಗೂಢವಾಗಿ ಸಂಭವಿಸಿತು.
ಈ ಸಾವಿನ ಸುತ್ತ ಅನೇಕ ಅನುಮಾನಗಳು ಹುಟ್ಟಿಕೊಂಡವು. ಇದೇ ಅವಧಿಯಲ್ಲಿ, ಆದಿಕೇಶವಲು ಅವರ ಆಸ್ತಿಗಳಿಗೆ ಸಂಬಂಧಿಸಿದಂತೆ ಕೆಲವು 'ವಿಲ್' ಸೃಷ್ಟಿಯಾದವು. ಈ ವಿಲ್ ಮತ್ತು ದಾಖಲೆಗಳು ನಕಲಿ ಎಂದು ಆರೋಪಿಸಿ ರಘುನಾಥ್ ಅವರ ಕುಟುಂಬಸ್ಥರು ಮತ್ತು ಇತರ ಹಿತಾಸಕ್ತಿದಾರರು ನ್ಯಾಯಾಲಯದ ಮೊರೆ ಹೋದರು.
ರಾಜ್ಯ ಪೊಲೀಸರು ಈ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಮತ್ತು ಪ್ರಭಾವಿ ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪಗಳ ಪ್ರಕಾರ, ಪೊಲೀಸರು ಸಕ್ಷಮ ಪುರಾವೆಗಳನ್ನು ನಾಶಪಡಿಸಲು ಸಹಕರಿಸುತ್ತಿದ್ದರು.
ಬಂಧನಕ್ಕೊಳಗಾಗಿರುವ ಡಿವೈಎಸ್‌ಪಿ ಎಸ್.ವೈ. ಮೋಹನ್ ಅವರು ಈ ಹಿಂದೆ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಲು ಮತ್ತು ಸತ್ಯವನ್ನು ಮರೆಮಾಚಲು ಆರೋಪಿಗಳಿಗೆ ನೆರವಾಗಿದ್ದಾರೆ ಎಂಬುದು ಸಿಬಿಐ ತನಿಖೆಯಲ್ಲಿ ಗೊತ್ತಾಗಿದೆ.