Crypto Currency Scam|ಬೆಂಗಳೂರಿನಲ್ಲಿ ಪತ್ತೆಯಾಯ್ತು ಬೃಹತ್ ಕ್ರಿಪ್ಟೋ ಹಗರಣ, ಇಡಿ ದಾಳಿ
ಮಲ್ಟಿ-ಸ್ಟೇಟ್ ಕ್ರಿಪ್ಟೋಕರೆನ್ಸಿ ಹಗರಣ ತನಿಖೆ ತೀವ್ರಗೊಳಿಸಿರುವ ಇಡಿ ಹೂಡಿಕೆದಾರರನ್ನು ವಂಚಿಸಲು ಆರೋಪಿಗಳು ಬಳಸುತ್ತಿದ್ದ 24 ನಕಲಿ ವೆಬ್‌ಸೈಟ್‌ಗಳ ಪಟ್ಟಿ ಬಿಡುಗಡೆ ಮಾಡಿದೆ.
ಕ್ರಿಪ್ಟೋಕರೆನ್ಸಿ ಹೂಡಿಕೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate-ಇಡಿ) ಅಧಿಕಾರಿಗಳು ದೇಶದ ವಿವಿಧೆಡೆ ಬೃಹತ್ ಶೋಧ ಕಾರ್ಯ ನಡೆಸಿದ್ದಾರೆ. ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಕರ್ನಾಟಕ, ಮಹಾರಾಷ್ಟ್ರ ಮತ್ತು ದೆಹಲಿಯ ಒಟ್ಟು 21 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
'4th ಬ್ಲಾಕ್ ಕನ್ಸಲ್ಟೆಂಟ್ಸ್' ಮತ್ತು ಇತರರ ವಿರುದ್ಧ ಕರ್ನಾಟಕ ರಾಜ್ಯ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಕೈಗೆತ್ತಿಕೊಂಡಿದೆ. ಆರೋಪಿಗಳು ಸಂಘಟಿತ ಹಣಕಾಸು ವಂಚನೆಯಲ್ಲಿ ತೊಡಗಿದ್ದು, ಕ್ರಿಪ್ಟೋಕರೆನ್ಸಿ ಆಧಾರಿತ ಹೂಡಿಕೆ ವೇದಿಕೆಗಳ ಮೂಲಕ ಭಾರತೀಯರು ಮಾತ್ರವಲ್ಲದೆ ವಿದೇಶಿ ಪ್ರಜೆಗಳಿಗೂ ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ತನಿಖೆಯ ವೇಳೆ ಆರೋಪಿಗಳು ಸಾರ್ವಜನಿಕರನ್ನು ನಂಬಿಸಲು ಬಳಸುತ್ತಿದ್ದ ಉಪಾಯಗಳು ಪತ್ತೆಯಾಗಿವೆ. ಅಧಿಕೃತ ಹೂಡಿಕೆ ಸಂಸ್ಥೆಗಳಂತೆಯೇ ಕಾಣುವ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ, ಅದರಲ್ಲಿ ಅತಿ ಕಡಿಮೆ ಅವಧಿಯಲ್ಲಿ ಭಾರಿ ಲಾಭದ ಆಮಿಷ ಒಡ್ಡಲಾಗುತ್ತಿತ್ತು. ಹೂಡಿಕೆದಾರರ ವಿಶ್ವಾಸ ಗಳಿಸಲು ಪ್ರಸಿದ್ಧ ಕ್ರಿಪ್ಟೋ ತಜ್ಞರು ಮತ್ತು ಗಣ್ಯ ವ್ಯಕ್ತಿಗಳ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ಜಾಹೀರಾತುಗಳಲ್ಲಿ ಬಳಸಲಾಗುತ್ತಿತ್ತು.
ಆರಂಭಿಕ ಹೂಡಿಕೆದಾರರಿಗೆ ನಂಬಿಕೆ ಬರಿಸಲು ಸ್ವಲ್ಪ ಲಾಭವನ್ನು ಪಾವತಿಸಲಾಗುತ್ತಿತ್ತು. ಇದನ್ನು ನೋಡಿ ಮತ್ತಷ್ಟು ಜನರು ಹೂಡಿಕೆ ಮಾಡುವಂತೆ 'ಮಲ್ಟಿ ಲೆವೆಲ್ ಮಾರ್ಕೆಟಿಂಗ್' ಮಾದರಿಯನ್ನು ಅನುಸರಿಸಲಾಗುತ್ತಿತ್ತು.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಟೆಲಿಗ್ರಾಮ್‌ಗಳ ಮೂಲಕ ಈ ವಂಚನೆಯ ಜಾಲವನ್ನು ವ್ಯಾಪಕವಾಗಿ ಹರಡಲಾಗಿತ್ತು. ರೆಫರಲ್ ಬೋನಸ್ ನೀಡುವ ಮೂಲಕ ಹೆಚ್ಚಿನ ಜನರನ್ನು ಈ ಕೂಪಕ್ಕೆ ಎಳೆಯಲಾಗುತ್ತಿತ್ತು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆಯ ಮೂಲಕ ಸಂಗ್ರಹಿಸಿದ ಹಣವನ್ನು ಮರೆಮಾಚಲು ಆರೋಪಿಗಳು ಹಲವಾರು ಕ್ರಿಪ್ಟೋ ವಾಲೆಟ್‌ಗಳು ಮತ್ತು ವಿದೇಶಿ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದರು. ಈ ಹಣವನ್ನು ಹವಾಲಾ ಮಾರ್ಗಗಳ ಮೂಲಕ ಹಾಗೂ 'ಪೀರ್ ಟು ಪೀರ್' (ವ್ಯಕ್ತಿ-ವ್ಯಕ್ತಿಯ ನೇರ ಹಣಕಾಸು ವಹಿವಾಟು) ವರ್ಗಾವಣೆಗಳ ಮೂಲಕ ಭಾರತಕ್ಕೆ ತರಲಾಗುತ್ತಿತ್ತು. ಹೀಗೆ ಸಂಗ್ರಹಿಸಿದ ಅಕ್ರಮ ಹಣದಿಂದ ಭಾರತ ಮತ್ತು ವಿದೇಶಗಳಲ್ಲಿ ಸ್ಥಿರ ಆಸ್ತಿಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
ಇಡಿ ಅಧಿಕಾರಿಗಳ ತನಿಖೆಯ ಪ್ರಕಾರ, ಆರೋಪಿಗಳು 2015 ರಿಂದಲೇ ವಿವಿಧ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದರು. ವಂಚನೆಯ ಮೂಲಕ ಸಂಗ್ರಹಿಸಿದ ಅಕ್ರಮ ಹಣವನ್ನು ನೇರವಾಗಿ ಕ್ರಿಪ್ಟೋ ವಹಿವಾಟುಗಳಿಗೆ ಬಳಸುತ್ತಿದ್ದರು. ಅಷ್ಟೇ ಅಲ್ಲದೆ, ಕೆಲವು ನಿರ್ದಿಷ್ಟ ಕ್ರಿಪ್ಟೋ ವೇದಿಕೆಗಳ ಮೂಲಕ 'ಪೀರ್-ಟು-ಪೀರ್' ವಹಿವಾಟು ನಡೆಸಿ ಅಕ್ರಮ ಹಣವನ್ನು ನಗದು ರೂಪಕ್ಕೆ ಅಥವಾ ಬ್ಯಾಂಕ್ ಬ್ಯಾಲೆನ್ಸ್ ರೂಪಕ್ಕೆ ಪರಿವರ್ತಿಸಿಕೊಳ್ಳುತ್ತಿದ್ದರು. ಈ ರೀತಿ ಸಂಗ್ರಹಿಸಿದ ನೂರಾರು ಕೋಟಿ ರೂಪಾಯಿಗಳನ್ನು ಆರೋಪಿಗಳು ಭಾರತ ಮತ್ತು ವಿದೇಶಗಳಲ್ಲಿ ಸ್ಥಿರ ಮತ್ತು ಚರಾಸ್ತಿಗಳನ್ನು ಖರೀದಿಸಲು ಬಳಸಿದ್ದಾರೆ. ಇತ್ತೀಚೆಗೆ ನಡೆದ ದಾಳಿಯ ಸಂದರ್ಭದಲ್ಲಿ ಇಂತಹ ಹಲವಾರು ಆಸ್ತಿಗಳನ್ನು ಇಡಿ ಅಧಿಕಾರಿಗಳು ಗುರುತಿಸಿದ್ದಾರೆ. ವಂಚನೆಯ ಹಣದಿಂದ ಖರೀದಿಸಲಾದ ಮನೆಗಳು, ಜಮೀನುಗಳು ಮತ್ತು ಇತರ ಹೂಡಿಕೆಗಳ ಬಗ್ಗೆ ತನಿಖೆ ತೀವ್ರಗೊಂಡಿದೆ ಎಂದಿದ್ದಾರೆ.
ದಾಳಿಯ ಸಂದರ್ಭದಲ್ಲಿ ಆರೋಪಿಗಳು ಹಣ ಸ್ವೀಕರಿಸಲು ಮತ್ತು ವರ್ಗಾಯಿಸಲು ಬಳಸುತ್ತಿದ್ದ ಹಲವಾರು 'ಕ್ರಿಪ್ಟೋ ವಾಲೆಟ್ ಅಡ್ರೆಸ್' ಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ವಾಲೆಟ್‌ಗಳ ಮೂಲಕ ನಡೆದಿರುವ ಸಾವಿರಾರು ವಹಿವಾಟುಗಳ ಮೇಲೆ ಇಡಿ ಕಣ್ಣಿಟ್ಟಿದೆ.
ಇದಕ್ಕಿಂತಲೂ ಮುಖ್ಯವಾಗಿ, ಬಹುತೇಕ ಆರೋಪಿಗಳು ವಿದೇಶಗಳಲ್ಲಿ ಘೋಷಿಸದ ಗುಪ್ತ ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಮತ್ತು ವಿದೇಶಿ ಕಂಪನಿಗಳ ಮೂಲಕ ಹಣವನ್ನು ಲೂಟಿ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಈ ಗುಪ್ತ ಖಾತೆಗಳ ಮೂಲಕ ಅಕ್ರಮ ಹಣವನ್ನು ಲಾಂಡರಿಂಗ್ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.
24 ನಕಲಿ ವೆಬ್‌ಸೈಟ್‌ಗಳ ಪಟ್ಟಿ ಬಿಡುಗಡೆ
4th ಬ್ಲಾಕ್ ಕನ್ಸಲ್ಟೆಂಟ್ಸ್ ಮತ್ತು ಇತರರು ನಡೆಸಿದ ಮಲ್ಟಿ-ಸ್ಟೇಟ್ ಕ್ರಿಪ್ಟೋಕರೆನ್ಸಿ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ಇಡಿ, ಹೂಡಿಕೆದಾರರನ್ನು ವಂಚಿಸಲು ಆರೋಪಿಗಳು ಬಳಸುತ್ತಿದ್ದ 24 ನಕಲಿ ವೆಬ್‌ಸೈಟ್‌ಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಈ ವೆಬ್‌ಸೈಟ್‌ಗಳೇ ವಂಚನೆಯ ಜಾಲದ ಬೆನ್ನೆಲುಬಾಗಿದ್ದವು. ಅಧಿಕೃತ ಹೂಡಿಕೆ ವೇದಿಕೆಗಳಂತೆಯೇ ಕಾಣುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿತ್ತು. ಅತಿ ಕಡಿಮೆ ಅವಧಿಯಲ್ಲಿ ಹಣವನ್ನು ದ್ವಿಗುಣಗೊಳಿಸುವ ಅಥವಾ ಅತಿ ಹೆಚ್ಚಿನ ಲಾಭ ನೀಡುವ ಆಮಿಷವನ್ನು ಈ ತಾಣಗಳ ಮೂಲಕ ಒಡ್ಡಲಾಗುತ್ತಿತ್ತು.
ದಾಳಿಯ ಸಂದರ್ಭದಲ್ಲಿ ಪತ್ತೆಯಾದ ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ವೆಬ್‌ಸೈಟ್‌ಗಳ ಸರ್ವರ್‌ಗಳು ಮತ್ತು ಹಣ ವರ್ಗಾವಣೆಯ ಮೂಲಗಳನ್ನು ಪತ್ತೆಹಚ್ಚಲು ಇಡಿ ತಾಂತ್ರಿಕ ತಂಡ ಕಾರ್ಯಪ್ರವೃತ್ತವಾಗಿದೆ.