ಹೈಕಮಾಂಡ್‌ನಿಂದ ರಾಜ್ಯ ನಾಯಕರತ್ತ ಹೊರಳಿತಾ ಸಿಎಂ ಗದ್ದುಗೆ ಚೆಂಡು?

“ನಾಯಕತ್ವ ಬದಲಾವಣೆಯು ಹೈಕಮಾಂಡ್ ಮಟ್ಟದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಯಲ್ಲ. ರಾಜ್ಯ ನಾಯಕರೇ ಪರಸ್ಪರ ಮಾತುಕತೆ ಮೂಲಕ ಒಂದು ನಿರ್ಧಾರಕ್ಕೆ ಬಂದರೆ ಹೈಕಮಾಂಡ್ ಅದನ್ನು ಬಗೆಹರಿಸಲಿದೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Update: 2025-12-22 07:52 GMT

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ವಿಚಾರವು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ತೀವ್ರ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ. ಸಿಎಂ ಸ್ಥಾನದ ಕುರಿತಂತೆ ಉಭಯ ನಾಯಕರ ತಮ್ಮ ವರಸೆ ಪ್ರದರ್ಶಿಸುತ್ತಿದ್ದರೆ ಹೈಕಮಾಂಡ್‌ ಮಾತ್ರ ನಾಯಕತ್ವದ ಚೆಂಡನ್ನು ಮರಳಿ ರಾಜ್ಯ ನಾಯಕರ ಅಂಗಳಕ್ಕೇ ತಂದು ಹಾಕಿದೆ. ವರಿಷ್ಠರ ಈ ನಿರ್ಧಾರವು ಸಿಎಂ- ಡಿಸಿಎಂ ನಡುವಿನ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ನೀಡಿದ ಹೇಳಿಕೆ ಇದೀಗ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಕರ್ನಾಟಕದಲ್ಲಿ ನಾಯಕತ್ವದ ಬಿಕ್ಕಟ್ಟು ಸೃಷ್ಟಿಸಿದ್ದು ಹೈಕಮಾಂಡ್ ಅಲ್ಲ. ಅವರೇ ಸೃಷ್ಟಿಸಿಕೊಂಡ ಸಮಸ್ಯೆ. ರಾಜ್ಯ ಘಟಕದವರೇ ಮಾತುಕತೆ ಮೂಲಕ ವಿವಾದ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.

ʼರಾಜ್ಯ ನಾಯಕರೇ ಬಗೆಹರಿಸಿಕೊಳ್ಳಲಿʼ

“ನಾಯಕತ್ವ ಬದಲಾವಣೆಯು ಹೈಕಮಾಂಡ್ ಮಟ್ಟದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಯಲ್ಲ. ರಾಜ್ಯ ನಾಯಕರೇ ಪರಸ್ಪರ ಮಾತುಕತೆ ಮೂಲಕ ಒಂದು ನಿರ್ಧಾರಕ್ಕೆ ಬಂದರೆ ಹೈಕಮಾಂಡ್ ಅದನ್ನು ಬಗೆಹರಿಸಲಿದೆ" ಎಂದು ಹೇಳುವ ಮೂಲಕ ಕೇಂದ್ರ ವರಿಷ್ಠರ ಮೇಲಿನ ಒತ್ತಡವನ್ನು ಸಿಎಂ ಮತ್ತು ಡಿಸಿಎಂ ಹೆಗಲಿಗೆ ರವಾನಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ಅಸಮಾಧಾನ ದಿನೇ ದಿನೇ ಗಂಭೀರವಾಗುತ್ತಿದ್ದು, ಅಧಿಕಾರ ಹಂಚಿಕೆ ವಿಚಾರ ಮತ್ತಷ್ಟು ಗೋಜಲಾಗಿದೆ.

ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ಬಿಕ್ಕಟ್ಟು ಇತ್ಯರ್ಥ ಮಾಡಬೇಕೆಂದು ಉಭಯ ನಾಯಕರು ನಿರೀಕ್ಷಿಸಿದ್ದರು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯದವರೇ ತೀರ್ಮಾನಕ್ಕೆ ಬರಬೇಕೆಂದು ಹೇಳಿರುವುದು ಹೊಸ ರಾಜಕೀಯ ಲೆಕ್ಕಾಚಾರಕ್ಕೆ ದಾರಿ ಮಾಡಿಕೊಟ್ಟಿದೆ.

ಸಿದ್ದರಾಮಯ್ಯ ಹೇಳಿಕೆ ಚರ್ಚೆಗೆ ಗ್ರಾಸ

ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷಗಳ ಹೇಳಿಕೆಗೆ ಉತ್ತರ ನೀಡುವ ವೇಳೆ, “ನಾನೇ ಐದು ವರ್ಷ ಸಿಎಂ, ಅಧಿಕಾರ ಹಂಚಿಕೆ ಮಾತುಕತೆ ನಡೆದೇ ಇಲ್ಲ, ಹೈಕಮಾಂಡ್‌ ತೀರ್ಮಾನವನ್ನು ಪಾಲಿಸುತ್ತೇವೆ ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಸಿಎಂ ಹೇಳಿಕೆಗೆ ಅಧಿವೇಶನದ ಹೊರಗೆ ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು,“ಅಧಿಕಾರ ಹಂಚಿಕೆ ಒಪ್ಪಂದ ನಡೆದಿರುವುದು ನಿಜ. ಹೈಕಮಾಂಡ್ ಇಬ್ಬರನ್ನೂ ಕರೆಯುವುದಾಗಿ ಹೇಳಿದೆ. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ” ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು.

ಬಿಕ್ಕಟ್ಟಿನಿಂದ ಅಂತರ ಕಾಯ್ದುಕೊಂಡ ಹೈಕಮಾಂಡ್

ಕರ್ನಾಟಕ ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ನಾಯಕತ್ವ ಬಿಕ್ಕಟ್ಟು ಕುರಿತಂತೆ ಹೈಕಮಾಂಡ್ ತನ್ನ ನಿಲುವು ಬದಲಿಸಿಕೊಂಡಿದ್ದು, ವಿವಾದ ಬಗೆಹರಿಸಿಕೊಳ್ಳುವಂತೆ ರಾಜ್ಯ ನಾಯಕರಿಗೆ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಿಎಂ-ಡಿಸಿಎಂ ಒಮ್ಮತದಿಂದ ಚರ್ಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಹೊರಗಿನ ಹಸ್ತಕ್ಷೇಪ ಬೇಡ ಎಂದು ಸಲಹೆ ನೀಡಿದ್ದಾರೆ. ಖರ್ಗೆ ಅವರ ಈ ಹೇಳಿಕೆಯಿಂದ ತಕ್ಷಣಕ್ಕೆ ವಿವಾದ ಬಗೆಹರಿಸುವ ಸೂಚನೆ ಕಾಣದಂತಾಗಿದೆ.

ಸಿಎಂ-ಡಿಸಿಎಂ ಬಣಗಳ ನಡುವೆ ಸಂಧಾನ ಸಾಧ್ಯತೆ ಅನಿಶ್ಚಿತವಾಗಿದ್ದು, ಪಕ್ಷದ ಒಳ ಆಟ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ. ಇದು ರಾಜ್ಯ ಸರ್ಕಾರದ ಭವಿಷ್ಯ, ಅಧಿಕಾರ ಹಂಚಿಕೆ ಮತ್ತು 2028 ರ ವಿಧಾನಸಭೆ ಚುನಾವಣೆ ತಂತ್ರಗಳ ಮೇಲೆ ನೇರ ಪರಿಣಾಮ ಬೀರಲಿದೆ ಎನ್ನಲಾಗಿದೆ.

ರಾಜ್ಯ ರಾಜಕೀಯದಲ್ಲಿ ಖರ್ಗೆ ಅವರ ಹೇಳಿಕೆ ಹೊಸ ತಿರುವು ನೀಡಿದ್ದು, ಮುಂದಿನ ಕೆಲವು ದಿನಗಳು ಕಾಂಗ್ರೆಸಿಗೆ ನಿರ್ಣಾಯಕವಾಗಿರಬಹುದೆಂಬ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

Tags:    

Similar News