ರಾಜ್ಯದಲ್ಲಿ ಮರ್ಯಾದಾ ಹತ್ಯೆ; ತಂದೆಯಿಂದಲೇ ಗರ್ಭಿಣಿ ಮಗಳ ಬರ್ಬರ ಕೊಲೆ!
ಮನೆಯವರನ್ನು ವಿರೋಧಿಸಿ ಅಂತರ್ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಪಾಪಿ ತಂದೆಯೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕೆಲವು ವರ್ಷಗಳ ಹಿಂದೆ ಮರಾಠಿಯ ಸೈರಾಟ್ ಸಿನಿಮಾ ಭಾರೀ ಸದ್ದು ಮಾಡಿತ್ತು. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಮರ್ಯಾದಾ ಹತ್ಯೆ ಕಥಾಹಂದರ ಇರುವ ಸಿನಿಮಾ ಅದು. ಇದೀಗ ಅಂತಹದ್ದೇ ಒಂದು ಘಟನೆ ರಾಜ್ಯದಲ್ಲಿ ನಡೆದಿದೆ. ಮನೆಯವರನ್ನು ವಿರೋಧಿಸಿ ಅಂತರ್ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಪಾಪಿ ತಂದೆಯೋರ್ವ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹುಬ್ಬಳ್ಳಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಹೆತ್ತ ತಂದೆಯಿಂದಲೇ ಗರ್ಭಿಣಿ ಮಗಳು ಹತ್ಯೆಯಾಗಿದ್ದಾಳೆ. ಮಗಳು ದಲಿತ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ಕೋಪಗೊಂಡಿದ್ದ ಪಾಪಿ ತಂದೆ ಈಮಕೃತ್ಯ ಎಸಗಿದ್ದಾನೆ. 19 ವರ್ಷ ಯುವತಿಗೆ ಪೈಪ್ನಿಂದ ಹೊಡೆದು ಆರೋಪಿ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಘಟನೆ ನಡೆದಿದ್ದಲ್ಲಿ?
ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಯುವತಿ ಮಾನ್ಯ ಮತ್ತು ಅದೇ ಗ್ರಾಮದ ದಲಿತ ಯುವಕ ವಿವೇಕಾನಂದ ಸುಮಾರು ಏಳು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರ ಪ್ರೀತಿಗೆ ಇಬ್ಬರ ಮನೆಯವರ ಕಡೆಯಿಂದಲೂ ಭಾರೀ ವಿರೋಧವಿತ್ತು. ಬಳಿಕ ಪೊಲೀಸರು ಸಮ್ಮುಖದಲ್ಲಿ ಎರಡು ಕುಟುಂಬದವರನ್ನು ರಾಜಿ ಪಂಚಾಯತಿ ಕೂಡ ಮಾಡಿಸಿದ್ದರು.
ಮಾನ್ಯ ವರೂರು ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ಸಮಯದಲ್ಲಿ ವಿವೇಕಾನಂದ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ. ಇಬ್ಬರಿಗೂ ಮೊದಲು ಪರಿಚಯವಿತ್ತು. ಆದರೆ, ಡಿಗ್ರಿ ಓದುವಾಗ ಇನ್ಸ್ಟಾಗ್ರಾಂನಲ್ಲಿ ಮೆಸೆಜ್ ಮಾಡುತ್ತಾ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಯುವತಿ ಲಿಂಗಾಯತ ಸಮಾಜಕ್ಕೆ ಸೇರಿದವಳಾದ್ದರಿಂದ ಮಗಳು ದಲಿತ ಯುವಕನನ್ನ ಪ್ರೀತಿಸಿ ಮದುವೆಯಾಗಿರುವ ಬಗ್ಗೆ ಯುವತಿ ಕುಟುಂಬಸ್ಥರಿಗೆ ಅಸಮಾಧಾನ ಇದ್ದೇ ಇತ್ತು.
ಸೈರಾಟ್ ಸಿನಿಮಾದಂತೆ ಕೊಂದ ಪಾಪಿಗಳು
ಪೊಲೀಸರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯಾಗಿದ್ದರು, ಯುವತಿ ಮತ್ತು ಯುವಕ ಮದುವೆಯ ನಂತರ ಪ್ರಾಣಭಯದಿಂದ ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದರು. ಕಳೆದ ಡಿಸೆಂಬರ್ 8ರಂದು ಯುವತಿ ಮತ್ತು ವಿವೇಕಾನಂದ ಊರಿಗೆ ಮರಳಿದ್ದರು. ಆದರೆ ಮನೆಗೆ ಬಂದ ಯುವತಿಯ ಕುಟುಂಬಸ್ಥರು ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿಗೆ ಪೈಪ್ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಜಗಳ ಬಿಡಿಸಲು ಬಂದ ಸಂಬಂಧಿಗಳ ಮೇಲೆ ಹಲ್ಲೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.
ಇನ್ನು, ವಿವೇಕಾನಂದ ಆಸ್ಪತ್ರೆಗೆ ಧಾರವಾಡ ಎಸ್.ಪಿ ಗುಂಜನ್ ಆರ್ಯ ಭೇಟಿ ನೀಡಿ ಗಾಯಾಳುಗಳನ್ನ ಪರಿಶೀಲನೆ ನಡೆಸಿದ್ದಾರೆ. ಪ್ರಕಾಶ್, ವೀರಣ್ಣ, ಅರುಣ್ ಮೇಲೆ ಪ್ರಕರಣ ದಾಖಲಾಗಿದೆ. ಮೂವರನ್ನು ವಶಕ್ಕೆ ಪಡೆಯಲಾಗಿದೆ