ಎಲ್‌ಕೆಜಿ, ಪಿಯುಸಿ ವಿದ್ಯಾರ್ಥಿಗಳಿಗೂ ಬಿಸಿಯೂಟ ಯೋಜನೆ ವಿಸ್ತರಣೆ
ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ 11 ಮತ್ತು 12ನೇ ತರಗತಿ (ಪಿಯುಸಿ) ವಿದ್ಯಾರ್ಥಿಗಳಿಗೂ ಯೋಜನೆ ವಿಸ್ತರಿಸಲು ಆದೇಶಿಸಿದ್ದು, 2026-27ರ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ.
ಅಪೌಷ್ಟಿಕತೆ ನಿರ್ಮೂಲನೆಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಬರುವ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ/ಯುಕೆಜಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
ಡಿ.1 ರಿಂದಲೇ ಸರ್ಕಾರಿ ಶಾಲೆಗಳ ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಕ್ಷೀರ ಭಾಗ್ಯ ಯೋಜನೆಯಡಿ ಹಾಲು ಮತ್ತು ವಾರದಲ್ಲಿ ಆರು ದಿನ ಮೊಟ್ಟೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಆರಂಭಿಕ ಬೆಳವಣಿಗೆಯಲ್ಲೇ ಅಪೌಷ್ಟಿಕತೆ ತಡೆಯುವುದು ಸರ್ಕಾರದ ಉದ್ದೇಶವಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ 11 ಮತ್ತು 12ನೇ ತರಗತಿ (ಪಿಯುಸಿ) ವಿದ್ಯಾರ್ಥಿಗಳಿಗೂ ಯೋಜನೆ ವಿಸ್ತರಿಸಲು ಆದೇಶಿಸಿದ್ದು, 2026-27ರ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ. ರಾಜ್ಯದ ಎಲ್ಲಾ ಸರ್ಕಾರಿ ಪಿಯು ಕಾಲೇಜುಗಳಿಗೂ ಬಿಸಿಯೂಟ ಯೋಜನೆ ವಿಸ್ತರಿಸಲು ಬಜೆಟ್ನಲ್ಲಿ ಅನುದಾನ ಮೀಸಲಿಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಬಿಸಿಯೂಟ ಯೋಜನೆಗೆ ಕೇಂದ್ರ ಸರ್ಕಾರವು ಅಡುಗೆ ವೆಚ್ಚವನ್ನು ಶೇ 9.50 ರಷ್ಟು ಹೆಚ್ಚಿಸಿದ್ದು, ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಬಿಸಿಯೂಟ ಯೋಜನೆಯಿಂದ ಯಾವುದೇ ಅರ್ಹ ಮಗು ವಂಚಿತವಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ಸ್ಯಾಟ್ಸ್ (Student Achievement Tracking System) ಪೋರ್ಟಲ್ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ರಾಜ್ಯ ಸರ್ಕಾರದ ಈ ಕ್ರಮದಿಂದ ಸುಮಾರು 51 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದ್ದು, ಅಪೌಷ್ಠಿಕತೆ ದೂರವಾಗಲಿದೆ.
ಬಿಸಿಯೂಟ ವಿಸ್ತರಣೆಗೆ 200 ಕೋಟಿ ವೆಚ್ಚ
ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ಪೂರ್ವ ಶಿಕ್ಷಣದವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಸ್ತರಣೆಗಾಗಿ ಹೆಚ್ಚುವರಿಯಾಗಿ 200 ಕೋಟಿ ರೂ. ವೆಚ್ಚವಾಗಲಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ತಿಳಿಸಿದರು.
ಭಾನುವಾರ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸದಾಗಿ ಆರಂಭವಾಗುವ ಶಾಲೆಗಳು ಸೇರಿದಂತೆ ರಾಜ್ಯದ ಎಲ್ಲ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಸಂಗೀತ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಸ್ಕೂಲ್ ಬ್ಯಾಂಡ್ ಕಡ್ಡಾಯ ಮಾಡಲಾಗುವುದು ಎಂದು ಹೇಳಿದರು.
ದ್ವೇಷ ಭಾಷಣ ವಿರೋಧಿ ಕಾಯ್ದೆ ಜಾರಿಗೊಳಿಸುವ ಮೂಲಕ ದೇಶದಲ್ಲಿಯೇ ಕರ್ನಾಟಕವು ಮಾದರಿ ನಡೆ ಪ್ರದರ್ಶಿಸಿದೆ. ಮಸೂದೆಗೆ ಕರಾವಳಿ ಭಾಗದ ಬಿಜೆಪಿ ಶಾಸಕರು ವಿರೋಧಿಸಿದ್ದಾರೆ. ದ್ವೇಷ ಭಾಷಣಕ್ಕೆ ನಿಯಂತ್ರಣ ಹೇರಿದರೆ ತಮ್ಮ ಬಂಡವಾಳ ಬರಿದಾಗುವ ಆತಂಕ ಅವರದ್ದು' ಎಂದು ಮಧು ಬಂಗಾರಪ್ಪ ಛೇಡಿಸಿದರು.
ಇದೇ ಕಾನೂನನ್ನು ರಾಷ್ಟ್ರಮಟ್ಟದಲ್ಲಿ ಜಾರಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಕೂಡ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ವಿಧಾನಮಂಡಲದ ಅಧಿವೇಶನದಲ್ಲಿ ನಿರ್ಧರಿಸಿ ಆ ಬಗ್ಗೆ ಸರ್ಕಾರಿ ಆದೇಶ ಕೂಡ ಹೊರಡಿಸಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.