ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಡಿಕೆಶಿ- ಕೆ.ಎನ್‌.ರಾಜಣ್ಣ ಭೇಟಿ

ಮಹದೇವಪುರ ಕ್ಷೇತ್ರದಲ್ಲಿ‌ ವೋಟ್ ಚೋರಿ ಪ್ರಕರಣ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾಗ ಪಕ್ಷದ ನಿಲುವನ್ನೇ ಪ್ರಶ್ನಿಸಿದ್ದರಿಂದ ಸಚಿವ ಸ್ಥಾನ ಕಳೆದುಕೊಂಡಿದ್ದರು.

Update: 2025-12-21 06:19 GMT

ಶಾಸಕ ಕೆ.ಎನ್‌. ರಾಜಣ್ಣ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌

Click the Play button to listen to article

ಸಿಎಂ ಸಿದ್ದರಾಮಯ್ಯ ಅವರ ಆಪ್ತ‌ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ನೇರವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿದ್ದ ಕೆ.ಎನ್. ರಾಜಣ್ಣ ಅವರನ್ನು ಡಿಕೆಶಿ ಭೇಟಿ ಮಾಡಿರುವುದು ಪಕ್ಷದ ನಾಯಕರಲ್ಲೇ ಅಚ್ಚರಿ ಮೂಡಿಸಿದೆ.

ಈ ಹಿಂದೆ ಕೆ.ಎನ್.ರಾಜಣ್ಣ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಾಗ, ಕಾಂಗ್ರೆಸ್ ನಾಯಕರಿಂದಲೇ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ತೀವ್ರ ಚರ್ಚೆ ಹುಟ್ಟುಹಾಕಿದ್ದರು. ಅದಾದ ಬಳಿಕ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ‌ ವೋಟ್ ಚೋರಿ ಪ್ರಕರಣ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾಗ ಪಕ್ಷದ ನಿಲುವನ್ನೇ ಪ್ರಶ್ನಿಸಿದ್ದರಿಂದ ಸಚಿವ ಸ್ಥಾನ ಕಳೆದುಕೊಂಡಿದ್ದರು. ಅಂದಿನಿಂದ ರಾಜಣ್ಣ ಅವರು ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಡಿ.ಕೆ.ಶಿವಕುಮಾರ್ ಅವರು ಕೆ.ಎನ್.ರಾಜಣ್ಣ ಅವರನ್ನು ಬೆಂಗಳೂರಿನ ಖಾಸಗಿ ಅತಿಥಿಗೃಹದಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಡಿಕೆಶಿ ಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು, ಡಿ.ಕೆ. ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ  ಭೇಟಿ ಮಾಡಿದ್ದರು. ಯಾರನ್ನಾದರೂ ಬೇಕಾದರೂ ಭೇಟಿ ಮಾಡಬಹುದು, ಯಾರನ್ನಾದರೂ ಕರೆದು ಮಾತನಾಡಬಹುದು. ಪಕ್ಷದ ಹಿತದೃಷ್ಟಿಯಿಂದ ಏನೆಲ್ಲಾ ಮಾಡಬೇಕು ಅನಿಸುತ್ತದೆಯೋ ಅದನ್ನು ಅವರು ಮಾಡುತ್ತಾರೆ. ಇದರಲ್ಲಿ ಯಾವುದೇ ಪ್ರಮುಖ ವಿಚಾರ ಇಲ್ಲ. ನಾವು ಯಾವಾಗಲೂ ಸಿದ್ದರಾಮಯ್ಯ ಪರವಾಗಿ ಇದ್ದೇವೆ. ಡಿ.ಕೆ. ಶಿವಕುಮಾರ್ ಏನೇ ಪ್ರಯತ್ನ ‌ಮಾಡಿದರೂ ಕೂಡ ನನ್ನ ಹಿಂದಿನ ಎಲ್ಲ ಹೇಳಿಕೆಳಿಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

“ಡಿ.ಕೆ.ಶಿವಕುಮಾರ್ ಸಿಎಂ ಆದರೆ 2028ರಲ್ಲಿ ನಾನು ಸ್ಪರ್ಧಿಸುವುದಿಲ್ಲ" ಎಂದು ಹೇಳುವ ಮುಲಕ ರಾಜಣ್ಣ ಅವರು ಡಿಕೆಶಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದರು.‌

ಸತೀಶ್‌ ಜಾರಕಿಹೊಳಿಯನ್ನು ಭೇಟಿ ಮಾಡಿದ್ದ ಡಿಕೆಶಿ

ಸಿಎಂ ಸಿದ್ದರಾಮಯ್ಯನವ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ್‌ ಜಾರಕಿಹೊಳಿಯನ್ನು ಇತ್ತೀಚೆಗೆ ಖಾಸಗಿ ಸಮಾರಂಭದಲ್ಲಿ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಪ್ರಮುಖ ಖಾತೆಗಳ ಆಫರ್‌ ನೀಡಿದ್ದರು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು.

ಕೊನೆವರೆಗೂ ಸಿಎಂ ಪರ: ಸತೀಶ್‌ ಸ್ಪಷ್ಟನೆ

ಡಿಸಿಎಂ ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರು, ಅವರು ಎಲ್ಲರನ್ನು ಭೇಟಿ ಮಾಡಿದಂತೆ ನನ್ನನ್ನು ಭೇಟಿಯಾಗಿದ್ದಾರೆ. ಇದಕ್ಕೆ ರಾಜಕೀಯವನ್ನು ಬೆರೆಸಬಾರದು. ನಾವು ಮೊದಲಿನಿಂದಲೂ ಸಿಎಂ ಸಿದ್ದರಾಮಯ್ಯ ಪರವಾಗಿ ಗುರುತಿಸಿಕೊಂಡಿದ್ದೇವೆ. ನಮ್ಮ ರಾಜಕೀಯದ ಕೊನೆವರೆಗೂ ಅವರ ಪರವಾಗಿಯೇ ಇರುತ್ತೆವೆ ಎಂದು ಸತೀಶ್‌ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದರು. 

Tags:    

Similar News