ಆರ್.ಟಿ.ನಗರದಲ್ಲಿ ‘ಪ್ರಾಜೆಕ್ಟ್ ವಾಕಲೂರು’ 7ನೇ ಪಾದಚಾರಿ ನಡಿಗೆ ಯಶಸ್ವಿ
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ‘ದಿ ಅಗ್ಲಿ ಇಂಡಿಯನ್’ ಹಾಗೂ ನಾಗರಿಕರ ಗುಂಪು ‘ಪ್ರಾಜೆಕ್ಟ್ ವಾಕಲೂರು’ ಅಡಿಯಲ್ಲಿ ಇಂದು ಆರ್.ಟಿ. ನಗರದಲ್ಲಿ 7ನೇ ಪಾದಚಾರಿ ನಡಿಗೆಯನ್ನು ನಡೆಸಿತು.
ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಜಂಟಿ ಆಯುಕ್ತರಾದ ಶ್ರೀ ಮೊಹಮ್ಮದ್ ನಯೀಮ್ ಮೊಮಿನ್ ಮತ್ತು ಶ್ರೀಮತಿ ಪಲ್ಲವಿ ರವರೊಂದಿಗೆ ಫ್ಲಾಗಿಂಗ್ ಮಾಡುವುದರ ಮೂಲಕ ಪ್ರಾರಂಭಿಸಿ, ನಾಗರಿಕರೊಂದಿಗೆ ನಡಿಗೆಯಲ್ಲಿ ಭಾಗವಹಿಸಿದರು.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ, ನಗರ ಪಾಲಿಕೆ ಅಧಿಕಾರಿಗಳ ಸಹಯೋಗದೊಂದಿಗೆ ‘ದಿ ಅಗ್ಲಿ ಇಂಡಿಯನ್’ ಹಾಗೂ ನಾಗರಿಕ ಗುಂಪು ಜಂಟಿಯಾಗಿ ‘ಪ್ರಾಜೆಕ್ಟ್ ವಾಕಲೂರು’ ಅಡಿಯಲ್ಲಿ ಶನಿವಾರ ಆರ್.ಟಿ. ನಗರದಲ್ಲಿ ಏಳನೇ ಪಾದಚಾರಿ ಮಾರ್ಗ ನಡಿಗೆಯನ್ನು ಯಶಸ್ವಿಯಾಗಿ ನಡೆಸಿತು.
ಈ ಪಾದಚಾರಿ ನಡಿಗೆಯಲ್ಲಿ 80ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರು, ಜಂಟಿ ಆಯುಕ್ತರುಗಳು, ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸ್ಥಳೀಯ ನಿವಾಸಿಗಳು ಹಾಗೂ ನಗರದೆಲ್ಲೆಡೆಯಿಂದ ಬಂದ ವಿವಿಧ ವಯೋಮಾನದ ಪಾದಚಾರಿಗಳ ಹಿತೈಷಿಗಳು ಸಕ್ರಿಯವಾಗಿ ಪಾಲ್ಗೊಂಡು ಸುಮಾರು 7 ಕಿಲೋಮೀಟರ್ ಪಾದಚಾರಿ ಮಾರ್ಗದಲ್ಲಿ ನಡೆದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಗರ ಪಾಲಿಕೆ ಆಯುಕ್ತೆ ಪೊಮ್ಮಲ ಸುನೀಲ್ ಕುಮಾರ್ ಅವರು ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್ ಹಾಗೂ ಪಲ್ಲವಿ ಅವರೊಂದಿಗೆ ನಡಿಗೆಯನ್ನು ಫ್ಲಾಗಿಂಗ್ ಮೂಲಕ ಉದ್ಘಾಟಿಸಿದರು. ಬಳಿಕ ಅವರು ಸ್ವತಃ ನಾಗರಿಕರೊಂದಿಗೆ ಪಾದಚಾರಿ ಮಾರ್ಗದಲ್ಲಿ ನಡೆದು, ವಿವಿಧ ವಯೋಮಾನದ ನಾಗರಿಕರೊಂದಿಗೆ ಸಂವಾದ ನಡೆಸಿದರು. ನಡಿಗೆಯ ವೇಳೆ ಪಾಲ್ಗೊಂಡವರು ತಮ್ಮ ಪ್ರದೇಶದ ಪಾದಚಾರಿ ಮಾರ್ಗಗಳಲ್ಲಿರುವ ಅಡೆತಡೆಗಳು, ಸುಧಾರಣೆ ಅಗತ್ಯಗಳು ಹಾಗೂ ನಡೆಯುವ ಅನುಭವವನ್ನು ನೇರವಾಗಿ ಮೌಲ್ಯಮಾಪನ ಮಾಡಿದರು.
ಈ ನಡಿಗೆ ಮಾರ್ಗವು 7 ಕಿಲೋಮೀಟರ್ ಉದ್ದದ ನಿರಂತರ ಪಾದಚಾರಿ ಮಾರ್ಗವನ್ನು ಒಳಗೊಂಡಿತ್ತು. ಜಯಮಹಲ್ ಮುಖ್ಯರಸ್ತೆಯ ಜೆ.ಸಿ. ನಗರ ಮುಖ್ಯ ದ್ವಾರದಿಂದ ಪ್ರಾರಂಭಗೊಂಡು, ಮೇಕ್ರಿ ವೃತ್ತದ ಮೂಲಕ ಸಿಬಿಐ ಜಂಕ್ಷನ್ ದಾಟಿ ಆರ್.ಟಿ. ನಗರವನ್ನು ಪ್ರವೇಶಿಸಿ, ಆರ್.ಟಿ. ನಗರ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಲೂಪ್ ರೂಪದಲ್ಲಿ ನಡಿಗೆಯನ್ನು ಒಳಗೊಂಡಿತ್ತು. ಈ ಮಾರ್ಗದಲ್ಲಿ ಹಲವು ಉದ್ಯಾನವನಗಳು, ಪ್ರಮುಖ ಕೈಗಾರಿಕಾ, ಸಾಂಸ್ಕೃತಿಕ ಹಾಗೂ ಸರ್ಕಾರಿ ಸಂಸ್ಥೆಗಳು ಇದ್ದವು.
ಈ ಅಭಿಯಾನದ ಮುಖ್ಯ ಉದ್ದೇಶ ನಾಗರಿಕರು ಯಾವುದೇ ಭಯಭೀತಿ ಅಥವಾ ಅಡೆತಡೆಗಳಿಲ್ಲದೆ ಸುರಕ್ಷಿತವಾಗಿ ಪಾದಚಾರಿ ಮಾರ್ಗದಲ್ಲಿ ನಡೆಯುವಂತಾಗಬೇಕು ಎಂಬುದಾಗಿತ್ತು. ಪಾದಚಾರಿಗಳು ಅಡೆತಡೆ ಕಂಡುಬಂದ ಸ್ಥಳಗಳಲ್ಲಿ ನಡಿಗೆಯನ್ನು ನಿಲ್ಲಿಸಿ, ಫೋಟೋ ಮತ್ತು ವಿಡಿಯೋಗಳನ್ನು ದಾಖಲಿಸಿ, ಪಾಲಿಕೆಗೆ ದೂರು ನೀಡಿದಲ್ಲಿ ಅದನ್ನು ತಕ್ಷಣ ಸರಿಪಡಿಸಲಾಗುವುದು ಎಂಬ ಸಂದೇಶವನ್ನು ಈ ನಡಿಗೆಯ ಮೂಲಕ ನೀಡಲಾಯಿತು.
ಸಾಮಾನ್ಯವಾಗಿ ಪ್ರತಿ ಒಂದು ಕಿಲೋಮೀಟರ್‌ಗೆ 2 ರಿಂದ 3 ಅಡೆತಡೆಗಳು ಎದುರಾಗಬಹುದು ಎಂಬ ನಿರೀಕ್ಷೆಯಿದ್ದರೂ, ಇಂದಿನ 7 ಕಿಲೋಮೀಟರ್ ನಡಿಗೆಯಲ್ಲಿ ಕೇವಲ ನಾಲ್ಕು ಪ್ರಮುಖ ಅಡೆತಡೆಗಳು ಮಾತ್ರ ಕಂಡುಬಂದವು. ಕಸದ ಜಾಗಗಳು, ಮುರಿದ ಅಥವಾ ಕಾಣೆಯಾದ ಪಾದಚಾರಿ ಸ್ಲಾಬ್‌ಗಳು, ಎರಡು ಚಕ್ರ ವಾಹನಗಳ ಅತಿಕ್ರಮಣ, ಕಟ್ಟಡ ಕಾಮಗಾರಿ ಸಾಮಗ್ರಿಗಳ ರಾಶಿ, ಅಂಗಡಿಗಳ ಅತಿಕ್ರಮಣ, ಅನಧಿಕೃತ ಪ್ಲೆಕ್ಸ್ ಮತ್ತು ಬಂಟಿಂಗ್‌ಗಳು ಅಥವಾ ಬ್ಲಾಕ್ ಸ್ಪಾಟ್‌ಗಳು ಯಾವುದೇ ಕಂಡುಬಂದಿಲ್ಲ. ಒಂದು ಕಡೆ ಮುಕ್ತ ಮೂತ್ರ ವಿಸರ್ಜನೆ ಜಾಗ ಹಾಗೂ ಎರಡು ಕಡೆ ಬಿಡಬ್ಲ್ಯೂಎಸ್ಎಸ್‌ಬಿಗೆ ಸಂಬಂಧಿಸಿದ ಅಡೆತಡೆಗಳು ಮತ್ತು ಒಂದು ಕಾರಿನ ಅತಿಕ್ರಮಣ ಮಾತ್ರ ದಾಖಲಾಗಿದ್ದು, ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಇಂದಿನ ನಡಿಗೆಯ ವಿಶೇಷ ಲಕ್ಷಣಗಳಾಗಿ ಸ್ವಚ್ಛವಾಗಿ ನಿರ್ವಹಿಸಲಾದ ಸ್ಕೈ ವಾಕ್, ಪಾದಚಾರಿ ಅಂಡರ್ ಪಾಸ್ ಮತ್ತು ಹಲವು ರಸ್ತೆ ದಾಟುವ ಸ್ಥಳಗಳಲ್ಲಿ ಹೊಸದಾಗಿ ಬಣ್ಣ ಬಳಿದ ಜೀಬ್ರಾ ಕ್ರಾಸಿಂಗ್‌ಗಳು ಗಮನ ಸೆಳೆದವು. ನಡಿಗೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಜಲಮಂಡಳಿ ಸಂಬಂಧಿತ ಕೆಲವು ಸುಧಾರಣೆಗಳನ್ನೂ ಗುರುತಿಸಿ, ಅವುಗಳನ್ನು ಅನುಷ್ಠಾನಗೊಳಿಸಲು ಕ್ರಮ ಆರಂಭಿಸಿದ್ದಾರೆ.
ನಡಿಗೆಯಲ್ಲಿ ಪಾಲ್ಗೊಂಡ ಬಹುತೇಕ ನಾಗರಿಕರು ಈ 7 ಕಿಲೋಮೀಟರ್ ಪಾದಚಾರಿ ಮಾರ್ಗವು ಸ್ವಚ್ಛ, ಹಸಿರು ಮತ್ತು ನಡೆಯಲು ಆಹ್ಲಾದಕರವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಶೇಷವಾಗಿ ಮೊದಲ ಬಾರಿಗೆ ಪಾಲ್ಗೊಂಡ ನಡಿಗೆದಾರರು ಮತ್ತು ಸ್ಥಳೀಯ ನಿವಾಸಿಗಳು ಈ ಮಾರ್ಗದ ನಿರ್ವಹಣೆಯನ್ನು ಮೆಚ್ಚಿದರು.
‘ಪ್ರಾಜೆಕ್ಟ್ ವಾಕಲೂರು’ ಅಡಿಯಲ್ಲಿ ‘ದಿ ಅಗ್ಲಿ ಇಂಡಿಯನ್’ ತಂಡವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ವಿವಿಧ ನಗರ ಪಾಲಿಕೆಗಳ ಸಹಯೋಗದೊಂದಿಗೆ ಇದುವರೆಗೆ 50 ಕಿಲೋಮೀಟರ್ ಪಾದಚಾರಿ ನಡಿಗೆಯನ್ನು ಪೂರ್ಣಗೊಳಿಸಿದೆ. 100 ಕಿಲೋಮೀಟರ್ ನಡಿಗೆಯನ್ನು ಪೂರ್ಣಗೊಳಿಸುವ ಗುರಿಯೊಂದಿಗೆ, ಬೆಂಗಳೂರನ್ನು ಪಾದಚಾರಿ ಸ್ನೇಹಿ ನಗರವನ್ನಾಗಿಸುವ ದೃಷ್ಟಿಕೋನವನ್ನು ತಂಡ ಹೊಂದಿದೆ.
ಇದುವರೆಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರದಲ್ಲಿ 11 ಕಿಲೋಮೀಟರ್, ಕೋರಮಂಗಲದಲ್ಲಿ 5 ಕಿಲೋಮೀಟರ್, ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಜಯನಗರದಲ್ಲಿ 5 ಕಿಲೋಮೀಟರ್, ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಬಾಣಸವಾಡಿಯಲ್ಲಿ 5 ಕಿಲೋಮೀಟರ್, ಥಣಿಸಂದ್ರದಲ್ಲಿ 7 ಕಿಲೋಮೀಟರ್, ಯಲಹಂಕದಲ್ಲಿ 10 ಕಿಲೋಮೀಟರ್ ಹಾಗೂ ಇಂದು ಹೆಬ್ಬಾಳದ ಆರ್.ಟಿ. ನಗರದಲ್ಲಿ 7 ಕಿಲೋಮೀಟರ್ ಪಾದಚಾರಿ ನಡಿಗೆ ನಡೆಸಲಾಗಿದೆ. ಇದರಲ್ಲಿ ಒಟ್ಟು 29 ಕಿಲೋಮೀಟರ್ ನಡಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿದ ನಗರ ಪಾಲಿಕೆ ಆಯುಕ್ತ ಸುನೀಲ್ ಕುಮಾರ್ ಪೊಮ್ಮಲ ಅವರು, ನಾಗರಿಕರು ತಮ್ಮ ಪಾದಚಾರಿ ಮಾರ್ಗಗಳನ್ನು ಸ್ವತಃ ಪರಿಶೀಲಿಸಿ, ಸುಧಾರಣೆಗೆ ಅಧಿಕಾರಿಗಳೊಂದಿಗೆ ಕೈಜೋಡಿಸಿದಾಗ ಮಾತ್ರ ಸುರಕ್ಷಿತ ಮೂಲಸೌಕರ್ಯ ನಿರ್ಮಾಣ ಸಾಧ್ಯವಾಗುತ್ತದೆ. ಇದರಿಂದ ಪರಿಣಾಮಕಾರಿ ಹಾಗೂ ದೀರ್ಘಕಾಲೀನ ಫಲಿತಾಂಶಗಳನ್ನು ಸಾಧಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.