ಕಲಬುರಗಿ: ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ನಿಗೂಢ ಸಾವು - ಕೊಲೆಯ ಶಂಕೆ ವ್ಯಕ್ತಪಡಿಸಿದ ಪತಿ
ಕಲಬುರಗಿಯ ಬ್ರಹ್ಮಪುರ ನಿವಾಸಿಯಾದ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್, ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ್ ಅವರ ಮನೆಯ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಜಿಲ್ಲೆಯ ನಂದಿಕೂರ್ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಅವರು ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ್ ಅವರ ಮನೆಯ ಆವರಣದಲ್ಲಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಈ ಪ್ರಕರಣದ ಬೆನ್ನಲ್ಲೇ ಪೊಲೀಸರು ಮಲ್ಲಿನಾಥ್ ಬಿರಾದಾರ್ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಕಲಬುರಗಿಯ ಬ್ರಹ್ಮಪುರ ಬಡಾವಣೆಯ ನಿವಾಸಿ ಜ್ಯೋತಿ ಪಾಟೀಲ್ ಅವರು ತಡರಾತ್ರಿ ನಂದಿಕೂರ್ ಗ್ರಾಮದಲ್ಲಿರುವ ಮಲ್ಲಿನಾಥ್ ಅವರ ಮನೆಗೆ ತೆರಳಿದ್ದರು. ಮಲ್ಲಿನಾಥ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಜ್ಯೋತಿ ಬಾಗಿಲು ಬಡಿದಿದ್ದಾರೆ. ಮಲ್ಲಿನಾಥ್ ಅವರ ಪತ್ನಿ ಮತ್ತು ಮಕ್ಕಳು ಬಾಗಿಲು ತೆರೆದ ಕೂಡಲೇ, ಜ್ಯೋತಿ ತಮ್ಮ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪ್ರಾಥಮಿಕವಾಗಿ ವರದಿಯಾಗಿದೆ. ಘಟನೆಯ ನಂತರ ಮಲ್ಲಿನಾಥ್ ಅವರ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಪತಿಯ ಆರೋಪವೇನು?
ಈ ಘಟನೆಯ ಕುರಿತು ಜ್ಯೋತಿ ಪಾಟೀಲ್ ಅವರ ಪತಿ ಚಿದಾನಂದ ಅವರು ಗಂಭೀರ ಆರೋಪ ಮಾಡಿದ್ದಾರೆ. "ನನ್ನ ಪತ್ನಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲಳಲ್ಲ. ಇದೊಂದು ವ್ಯವಸ್ಥಿತ ಕೊಲೆಯಾಗಿರುವ ಸಾಧ್ಯತೆಯಿದೆ," ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಾವಿನ ಹಿಂದೆ ಬೇರೆಯದೇ ಆದ ನಿಗೂಢ ಕಾರಣಗಳಿರಬಹುದು ಎಂದು ಅವರು ಅನುಮಾನಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು
ಘಟನೆಗೆ ಸಂಬಂಧಿಸಿದಂತೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಕೈಗೊಂಡಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸತ್ಯವನ್ನು ಭೇದಿಸಲು ಸಾಕ್ಷ್ಯಗಳ ಸಂಗ್ರಹದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಮಲ್ಲಿನಾಥ್ ಬಿರಾದಾರ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ.