ಮಾನವ-ವನ್ಯಜೀವಿ ಸಂಘರ್ಷ|ತಂತ್ರಜ್ಞಾನದ ಕಡಿವಾಣ; ಹೈಟೆಕ್ 'ಕಮಾಂಡ್ ಸೆಂಟರ್' ಅಸ್ತ್ರ

ವನ್ಯಜೀವಿಗಳ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, 'ಸಮಗ್ರ ಕಮಾಂಡ್ ಸೆಂಟರ್' ಸ್ಥಾಪನೆ ಮಾಡಲಾಗಿದೆ. ಇದು ವನ್ಯಜೀವಿ ನಿರ್ವಹಣೆಯಲ್ಲಿ ಮಹತ್ವದ ಮೈಲಿಗಲ್ಲಾಗುವ ನಿರೀಕ್ಷೆಯಿದೆ.

Update: 2025-12-20 04:22 GMT
Click the Play button to listen to article

ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗಗಳು ಸೇರಿದಂತೆ ಅರಣ್ಯದಂಚಿನ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಆನೆ, ಚಿರತೆ, ಹುಲಿಗಳಂತಹ ಪ್ರಾಣಿಗಳು ಆಹಾರ ಮತ್ತು ನೀರನ್ನು ಅರಸಿ ನಾಡಿಗೆ ಬರುವುದು, ಬೆಳೆ ಹಾನಿ ಮಾಡುವುದು ಹಾಗೂ ಅಮೂಲ್ಯವಾದ ಮಾನವ ಜೀವಹಾನಿಯಾಗುತ್ತಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.

ರೈತರು ಮತ್ತು ಅರಣ್ಯವಾಸಿಗಳ ನಿದ್ದೆಗೆಡಿಸಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈಗ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, 'ಸಮಗ್ರ ಕಮಾಂಡ್ ಸೆಂಟರ್'  ಗಳ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಇದು ವನ್ಯಜೀವಿ ನಿರ್ವಹಣೆಯಲ್ಲಿ ಮಹತ್ವದ ಮೈಲಿಗಲ್ಲಾಗುವ ನಿರೀಕ್ಷೆಯಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರ (ಎಂ.ಎಂ.ಹಿಲ್ಸ್) ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆಯು ನೂತನ ಕಮಾಂಡ್ ಸೆಂಟರ್ ಅನ್ನು ಆರಂಭಿಸಿದೆ. ಇದು ಕೇವಲ ಒಂದು ಕಚೇರಿಯಾಗಿರದೆ, ಅರಣ್ಯದ ಮೇಲ್ವಿಚಾರಣೆಯ ನರಮಂಡಲದಂತೆ ಕಾರ್ಯನಿರ್ವಹಿಸಲಿದೆ. ವಿಸ್ತಾರವಾದ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಚಲನವಲನವನ್ನು ಮಾನವ ಸಿಬ್ಬಂದಿ ಮಾತ್ರವೇ ನಿರ್ವಹಿಸುವುದು ಅಸಾಧ್ಯದ ಮಾತು. ಈ ಕೊರತೆಯನ್ನು ನೀಗಿಸಲು ಈ ಕೇಂದ್ರ ಸಹಕಾರಿಯಾಗಲಿದೆ. ಇಲ್ಲಿಂದಲೇ ಕಾಡಿನ ಮೂಲೆಮೂಲೆಗಳ ಮೇಲೆ ನಿಗಾ ಇಡಲು ಸಾಧ್ಯವಾಗಲಿದ್ದು, ವನ್ಯಜೀವಿಗಳು ಕಾಡು ಬಿಟ್ಟು ನಾಡಿನತ್ತ ಮುಖ ಮಾಡಿದ ತಕ್ಷಣವೇ ಮಾಹಿತಿ ಲಭ್ಯವಾಗಲಿದೆ.

ತಂತ್ರಜ್ಞಾನದ ಸಮರ್ಪಕ ಬಳಕೆ: ಎ.ಐ ಮತ್ತು ಥರ್ಮಲ್ ಡ್ರೋನ್

ಈ ಕಮಾಂಡ್ ಸೆಂಟರ್‌ನ ಜೀವಾಳವೇ ಆಧುನಿಕ ತಂತ್ರಜ್ಞಾನ. ಸಾಂಪ್ರದಾಯಿಕ ಗಸ್ತು ತಿರುಗುವ ಪದ್ಧತಿಯ ಜತೆಗೆ ಕೃತಕ ಬುದ್ಧಿಮತ್ತೆ ಮತ್ತು ಥರ್ಮಲ್ ಡ್ರೋನ್ ಕ್ಯಾಮೆರಾಗಳನ್ನು ಇಲ್ಲಿ ಬಳಸಿಕೊಳ್ಳಲಾಗುತ್ತಿದೆ.  ಕಾಡಿನ ಪ್ರಮುಖ ದ್ವಾರಗಳು, ಪ್ರಾಣಿಗಳು ದಾಟುವ ಕಂದಕಗಳು  ಮತ್ತು ರಸ್ತೆಗಳಲ್ಲಿ ಅಳವಡಿಸಲಾದ ಎ.ಐ ಕ್ಯಾಮೆರಾಗಳು, ಸೆನ್ಸಾರ್‌ಗಳ ಮೂಲಕ ಪ್ರಾಣಿಗಳ ಚಲನೆಯನ್ನು ಗುರುತಿಸುತ್ತವೆ.

ಸಾಮಾನ್ಯ ಕ್ಯಾಮೆರಾಗಳಿಗಿಂತ ಭಿನ್ನವಾಗಿ, ಇವು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ, ಆನೆ ಅಥವಾ ಹುಲಿ ಕಂಡ ತಕ್ಷಣ ಕಮಾಂಡ್ ಸೆಂಟರ್‌ಗೆ ಅಲರ್ಟ್ ಕಳುಹಿಸುತ್ತವೆ.

ಇನ್ನು, ಥರ್ಮಲ್ ಡ್ರೋನ್‌ಗಳು ರಾತ್ರಿ ವೇಳೆ ಅರಣ್ಯದಂಚಿನಲ್ಲಿ ಆನೆಗಳು ಬಂದರೆ ಬರಿಗಣ್ಣಿಗೆ ಕಾಣುವುದು ಕಷ್ಟ. ಆದರೆ ಥರ್ಮಲ್ ಡ್ರೋನ್‌ಗಳು ಪ್ರಾಣಿಗಳ ದೇಹದ ಉಷ್ಣತೆಯನ್ನು ಗ್ರಹಿಸಿ, ಕತ್ತಲಲ್ಲಿಯೂ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ದಟ್ಟ ಕಾಡಿನಲ್ಲಿ ಅಡಗಿರುವ ಪ್ರಾಣಿಗಳನ್ನು ಪತ್ತೆ ಹಚ್ಚಲು ಇದು ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ.

ಕಾರ್ಯನಿರ್ವಹಣೆ ಮತ್ತು ಮುಂಜಾಗ್ರತಾ ಕ್ರಮಗಳು

ಕಮಾಂಡ್ ಸೆಂಟರ್ ಕೇವಲ ಮಾಹಿತಿ ಸಂಗ್ರಹಿಸುವುದಲ್ಲದೆ, ತ್ವರಿತ ಪ್ರತಿಕ್ರಿಯೆಗೂ ನೆರವಾಗಲಿದೆ. ತ್ವರಿತ ಮಾಹಿತಿ ರವಾನೆ ಮಾಡಲಿದ್ದು, ಕಾಡಿನಂಚಿನಲ್ಲಿ ವನ್ಯಜೀವಿಗಳ ಚಲನವಲನ ಕಂಡುಬಂದ ಕೂಡಲೇ, ಕಮಾಂಡ್ ಸೆಂಟರ್‌ನಲ್ಲಿರುವ ಸಿಬ್ಬಂದಿ ಆ ಮಾಹಿತಿಯನ್ನು ಆಯಾ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಗೆ ಮತ್ತು ತ್ವರಿತ ಪ್ರತಿಕ್ರಿಯೆ ತಂಡಕ್ಕೆ ರವಾನಿಸುತ್ತಾರೆ. ಪ್ರಾಣಿಗಳು ಗ್ರಾಮದ ದಿಕ್ಕಿನಲ್ಲಿ ಚಲಿಸುತ್ತಿದ್ದರೆ, ಕೂಡಲೇ ಎಸ್‌ಎಂಎಸ್ ಅಥವಾ ಧ್ವನಿವರ್ಧಕಗಳ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗುತ್ತದೆ. ಇದರಿಂದ ರೈತರು ರಾತ್ರಿ ವೇಳೆ ಜಮೀನಿಗೆ ಹೋಗುವುದನ್ನು ತಡೆಯಬಹುದು ಹಾಗೂ ಪ್ರಾಣಹಾನಿಯನ್ನು ತಪ್ಪಿಸಬಹುದು. ಕೇವಲ ತಾಂತ್ರಿಕವಲ್ಲದೆ, ಅರಣ್ಯದಂಚಿನ ಜನರಲ್ಲಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಈ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತದೆ.

ರಾಜ್ಯಾದ್ಯಂತ ವಿಸ್ತರಣೆ

ಕೇವಲ ಎಂ.ಎಂ.ಹಿಲ್ಸ್ ಅಷ್ಟೇ ಅಲ್ಲದೆ, ರಾಜ್ಯದ ಅತಿ ಹೆಚ್ಚು ಸಂಘರ್ಷ ಪೀಡಿತ ಪ್ರದೇಶಗಳಾದ ನಾಗರಹೊಳೆ, ಕಾಳಿ (ಉತ್ತರ ಕನ್ನಡ) ಮತ್ತು ಮಡಿಕೇರಿ ಅರಣ್ಯ ಪ್ರದೇಶಗಳಲ್ಲಿಯೂ ಇಂತಹ ಕಮಾಂಡ್ ಕೇಂದ್ರಗಳು ಸಿದ್ಧಗೊಂಡಿವೆ. ಈ ನಾಲ್ಕು ಕೇಂದ್ರಗಳ ಜತೆಗೆ  ಇವುಗಳೆಲ್ಲವನ್ನೂ ನಿಯಂತ್ರಿಸಲು ಮತ್ತು ಸಮಗ್ರ ಮಾಹಿತಿ ಪಡೆಯಲು ಬೆಂಗಳೂರಿನ ಅರಣ್ಯ ಇಲಾಖೆಯ ಕೇಂದ್ರ ಕಚೇರಿಯಲ್ಲಿಯೂ ಸುಸಜ್ಜಿತ ಕಮಾಂಡ್ ಸೆಂಟರ್ ಸಿದ್ಧವಾಗುತ್ತಿದೆ. ಶೀಘ್ರದಲ್ಲಿಯೇ ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು  ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಇದುವರೆಗೂ ಅರಣ್ಯ ಇಲಾಖೆಯು ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ ಅಥವಾ ಆನೆ ಕಂದಕಗಳಂತಹ ಭೌತಿಕ ತಡೆಗೋಡೆಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಇವುಗಳು ಪ್ರಾಣಿಗಳನ್ನು ತಡೆಯಲು ಸಹಕಾರಿಯಾದರೂ, ಸಂಪೂರ್ಣ ಯಶಸ್ಸು ಕಂಡಿರಲಿಲ್ಲ. ಆನೆಗಳು ಬ್ಯಾರಿಕೇಡ್ ಮುರಿಯುವುದು ಅಥವಾ ಕಂದಕ ಮುಚ್ಚುವುದು ಸಾಮಾನ್ಯವಾಗಿದೆ. ಆದರೆ, ಈಗ ಆರಂಭಿಸಿರುವ 'ಮಾಹಿತಿ ಆಧಾರಿತ ಕಣ್ಗಾವಲು ವ್ಯವಸ್ಥೆಹೆಚ್ಚು ಪ್ರಾಯೋಗಿಕವಾಗಿದೆ.

ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಮೈಸೂರು ಮತ್ತು ಕೊಡಗು ಭಾಗದಲ್ಲಿ ಆನೆ ಮತ್ತು ಹುಲಿಗಳ ಸಂಘರ್ಷ ನಿಯಂತ್ರಿಸಲು ಸಾಧ್ಯವಾಗಲಿದೆ. ಮಲೈ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಆನೆಗಳ ಚಲನವಲನ ಮತ್ತು ಕಾಡ್ಗಿಚ್ಚು ತಡೆಗಟ್ಟಲು ಸಹಕಾರಿಯಾಗಲಿದೆ. ಕಾಳಿ ಅರಣ್ಯ ಪ್ರದೇಶದಲ್ಲಿ ಉತ್ತರ ಕನ್ನಡದ ದಟ್ಟಾರಣ್ಯದಲ್ಲಿ ವನ್ಯಜೀವಿಗಳ ನಿಗಾ ಇಡಲು ಸಾಧ್ಯವಾಗಲಿದೆ.  ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತೀವ್ರವಾಗಿರುವುದರಿಂದ ಮಡಿಕೇರಿ ಅರಣ್ಯ ಪ್ರದೇಶದಲ್ಲಿ ಕಮಾಂಡ್ ಸೆಂಟರ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಮಾಸ್ಟರ್ ಕಂಟ್ರೋಲ್ ರೂಂ

ಈ ನಾಲ್ಕು ಪ್ರಾದೇಶಿಕ ಕೇಂದ್ರಗಳ ಜತೆಗೆ ಬೆಂಗಳೂರಿನ ಅರಣ್ಯ ಇಲಾಖೆಯ ಕೇಂದ್ರ ಕಚೇರಿಯಲ್ಲಿಯೂ (ಅರಣ್ಯ ಭವನ) ಬೃಹತ್ ಕಮಾಂಡ್ ಸೆಂಟರ್ ಸಿದ್ಧವಾಗುತ್ತಿದೆ. ಇದು ರಾಜ್ಯಮಟ್ಟದ ಉಸ್ತುವಾರಿ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಪ್ರಾದೇಶಿಕ ಕೇಂದ್ರಗಳಿಂದ ಬರುವ ಮಾಹಿತಿಯನ್ನು ಕ್ರೋಢೀಕರಿಸಿ, ಹಿರಿಯ ಅಧಿಕಾರಿಗಳಿಗೆ ತಕ್ಷಣದ ಮಾಹಿತಿ ನೀಡಲು ನೆರವಾಗಲಿದೆ. ಕಮಾಂಡ್ ಸೆಂಟರ್‌ಗಳು ಕೇವಲ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡುವ ಕೊಠಡಿಗಳಾಗಿರದೆ, ಕೃತಕ ಬುದ್ಧಿಮತ್ತೆ ಮತ್ತು ರಿಯಲ್ ಟೈಮ್ ಮಾನಿಟರಿಂಗ್ ವ್ಯವಸ್ಥೆಯನ್ನು ಹೊಂದಿವೆ.

ಕಾಡಿನಂಚಿನಲ್ಲಿ ಅಳವಡಿಸಲಾದ ಸೆನ್ಸಾರ್ ಮತ್ತು ಕ್ಯಾಮೆರಾಗಳ ಮೂಲಕ ಪ್ರಾಣಿಗಳು ನಾಡಿಗೆ ಬರುವುದನ್ನು ಈ ಕೇಂದ್ರಗಳು ಮೊದಲೇ ಗ್ರಹಿಸಿ, ಸ್ಥಳೀಯ ಸಿಬ್ಬಂದಿಗೆ ಮತ್ತು ಗ್ರಾಮಸ್ಥರಿಗೆ 'ಅಲರ್ಟ್' ಸಂದೇಶ ರವಾನಿಸಲಿವೆ.

ವನ್ಯಜೀವಿ ಎಲ್ಲಿದೆ ಎಂಬ ಮಾಹಿತಿ ನಿಖರವಾಗಿ ಲಭ್ಯವಾಗುವುದರಿಂದ  ಅರಣ್ಯ ಸಿಬ್ಬಂದಿ ಕುರುಡಾಗಿ ಕಾರ್ಯಾಚರಣೆ ನಡೆಸುವ ಬದಲಿಗೆ, ನಿಖರವಾದ ಸ್ಥಳಕ್ಕೆ ತೆರಳಿ ಪ್ರಾಣಿಗಳನ್ನು ಕಾಡಿಗೆ ಅಟ್ಟಲು ಸಾಧ್ಯವಾಗುತ್ತದೆ. ಇದು ಮಾನವ ಸಂಪನ್ಮೂಲದ ಉಳಿತಾಯದ ಜೊತೆಗೆ, ಸಿಬ್ಬಂದಿಯ ಸುರಕ್ಷತೆಗೂ ಒತ್ತು ನೀಡಿದಂತಾಗಲಿದೆ ಎನ್ನಲಾಗಿದೆ. 

ಅಮೂಲ್ಯವಾದ ಮಾನವ ಜೀವ ಮತ್ತು ಬೆಳೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಮಾಂಡ್ ಸೆಂಟರ್‌ಗಳು ಆಶಾಕಿರಣವಾಗಲಿವೆ. ತಂತ್ರಜ್ಞಾನದ ನೆರವಿನಿಂದ ವನ್ಯಜೀವಿಗಳ ಚಲನವಲನದ ಮೇಲೆ ಹದ್ದಿನ ಕಣ್ಣಿಡುವುದರಿಂದ, ಸಂಭಾವ್ಯ ಅಪಾಯಗಳನ್ನು ಮೊದಲೇ ಅಂದಾಜಿಸಿ ತಡೆಯಬಹುದು. ಸರ್ಕಾರ ಮತ್ತು ಅರಣ್ಯ ಇಲಾಖೆಯ ಈ ನಡೆ, ಮಾನವ-ವನ್ಯಜೀವಿ ಸಂಘರ್ಷವನ್ನು ಶೂನ್ಯಕ್ಕೆ ಇಳಿಸಲು ಸಾಧ್ಯವಾಗದಿದ್ದರೂ, ಅದರಿಂದಾಗುವ ಹಾನಿಯನ್ನು ಗಣನೀಯವಾಗಿ ತಗ್ಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಅನುಮಾನವಿಲ್ಲ. ಮುಂದಿನ ದಿನಗಳಲ್ಲಿ ಈ ಕೇಂದ್ರಗಳ ನಿರ್ವಹಣೆ ಮತ್ತು ಸಿಬ್ಬಂದಿಯ ದಕ್ಷತೆ ಈ ಯೋಜನೆಯ ಯಶಸ್ಸನ್ನು ನಿರ್ಧರಿಸಲಿದೆ.

ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ವನ್ಯಜೀವಿ ಸಲಹಾ ಮಂಡಳಿಯ ಮಾಜಿ ಸದಸ್ಯ ಜೋಸೆಫ್ ಹೂವ‌ರ್, ಅರಣ್ಯ ಪ್ರದೇಶದಲ್ಲಿ ಕಟ್ಟಡಗಳು ಬರುವುದರಿಂದ ಹಲವು ಸಮಸ್ಯೆಗಳು ತಲೆದೋರುತ್ತಿವೆ. ಕಟ್ಟಡಗಳ ನಿರ್ಮಾಣಗಳಿಗೆ ಕಡಿವಾಣ ಹಾಕಬೇಕು. ಕಾಡನ್ನು ಕಾಡಂತೆ ಬಿಟ್ಟರೆ ಏನು ಸಮಸ್ಯೆ ಇಲ್ಲ. ಅಭಿವೃದ್ಧಿ ಹೆಸರಲ್ಲಿ ಕಾಡನ್ನು ನಾಶ ಮಾಡಲು ಮುಂದಾದಾಗ ಮಾನವ-ವನ್ಯಜೀವಿ ಸಂಘರ್ಷಗಳು ಉದ್ಭವಿಸುತ್ತವೆ. ಇದು ವಿಪರೀತವಾಗಿರುವ ಕಾರಣ ಕಮಾಂಡ್‌ ಸೆಂಟರ್‌ಗಳನ್ನು ಆರಂಭಿಸಲಾಗುತ್ತಿದೆ. ಈ ಮೂಲಕವಾದರೂ ಸರ್ಕಾರ ಸಮರ್ಪಕ ಕ್ರಮ ಕೈಗೊಳ್ಳಬೇಕು. ಕೇವಲ ಸೆಂಟರ್‌ ಆರಂಭಿಸಿ ಸಮರ್ಪಕವಾಗಿ ಅನುಷ್ಠಾನವಾಗದಿದ್ದರೆ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದರು. 

Tags:    

Similar News