Tiger Corridor| 360 ಕಿ.ಮೀ  ಸಂಚರಿಸಿದ ಬಂಡೀಪುರ ಹುಲಿಯ ದಾಖಲೆಯ ಹೆಜ್ಜೆಯ ಗುರುತು
x

Tiger Corridor| 360 ಕಿ.ಮೀ ಸಂಚರಿಸಿದ ಬಂಡೀಪುರ ಹುಲಿಯ ದಾಖಲೆಯ ಹೆಜ್ಜೆಯ ಗುರುತು

ನಾಗರಹೊಳೆ ಹುಲಿ ಅಭಯಾರಣ್ಯದಿಂದ ಸಾಗಿದ ಸುಮಾರು 4-5 ವರ್ಷ ವಯಸ್ಸಿನ ಗಂಡು ಹುಲಿ ಕಾರವಾರ ಅರಣ್ಯ ವಿಭಾಗವನ್ನು ತಲುಪಿದೆ. ರಾಜ್ಯದಲ್ಲಿ ಹುಲಿಯೊಂದು ಅತಿ ದೂರ ಕ್ರಮಿಸಿದ ಮೊಟ್ಟ ಮೊದಲು ಎನ್ನಲಾಗಿದೆ.


ಬರೋಬ್ಬರಿ 20 ತಿಂಗಳು... 360 ಕಿ.ಮೀ ಗಿಂತ ಹೆಚ್ಚಿನ ದೂರ ಪ್ರಯಾಣ.. ಇದು ರಾಜ್ಯದಲ್ಲಿ ದಾಖಲೆಯ ಹುಲಿಯ ಹೆಜ್ಜೆಯ ಗುರುತು.

ನಾಗರಹೊಳೆ ಹುಲಿ ಅಭಯಾರಣ್ಯದಿಂದ ಸಾಗಿದ ಸುಮಾರು 4-5 ವರ್ಷ ವಯಸ್ಸಿನ ಗಂಡು ಹುಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅರಣ್ಯ ವಿಭಾಗವನ್ನು ತಲುಪಿದೆ. ರಾಜ್ಯದಲ್ಲಿ ಹುಲಿಯೊಂದು ಅತಿ ದೂರ ಕ್ರಮಿಸಿದ ಮೊಟ್ಟ ಮೊದಲು ಎಂದು ಹೇಳಲಾಗಿದೆ. ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಈ ಹಿಂದೆ ಬಂಡೀಪುರ ಅರಣ್ಯ ಪ್ರದೇಶದಿಂದ ಬಿಳಿಗಿರಿ ರಂಗನಬೆಟ್ಟ ಅರಣ್ಯ ಪ್ರದೇಶದರೆಗೆ ಹುಲಿ ಪ್ರಯಾಣಿಸುವ ಉದಾಹರಣೆ ಇದೆ. ಇದು 160 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿತ್ತು. ನಂತರ ಇಷ್ಟೊಂದು ದೂರ ಪ್ರಯಣಿಸಿದ ಹುಲಿ ಇದೇ ಮೊದಲು.

ಸಾಮಾನ್ಯವಾಗಿ ಹುಲಿಗಳು ನಿರ್ದಿಷ್ಟ ಪ್ರದೇಶದೊಳಗೆ ನೆಲೆಸಲಿದ್ದು, ಹೆಚ್ಚಿನ ದೂರ ಪಯಣಿಸುವುದಿಲ್ಲ ಹುಲಿಯು 25ರಿಂದ 30 ಕಿ.ಮೀ. ನಷ್ಟು ವ್ಯಾಪ್ತಿಯಲ್ಲಿ ಮಾತ್ರ ಹುಲಿ ತನ್ನ ವಾಸಸ್ಥಳವನ್ನಾಗಿ ಮಾಡಿಕೊಂಡಿರುತ್ತದೆ. ಆ ಪ್ರದೇಶವನ್ನೇ ತನನ್ನು ರಕ್ಷಿಸಿಕೊಳ್ಳಲು ಮತ್ತು ಆಹಾರಕ್ಕಾಗಿ ಅಲೆದಾಡುತ್ತವೆ. ಹುಲಿಗಳು ವಾಸಸ್ಥಾನ, ಜಲಮೂಲ ಮತ್ತು ಆಹಾರ ಸಂಪನ್ಮೂಲಗಳು ಹೇರವಾಗಿರುವ ಪ್ರದೇಶಗಳನ್ನು ತನ್ನ ವಾಸಸ್ಥಳವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೆ.

ನಾಗರಹೊಳೆಯಿಂದ ಪಯಣಿಸಿರುವ ಹುಲಿಯು ತನ್ನ ವಾಸ ಸ್ಥಳ ಹುಡುಕಾಟದಲ್ಲಿ ಅಷ್ಟು ದೂರ ಪ್ರಯಾಣಿಸಿದೆ ಎಂದು ಹೇಳಲಾಗಿದೆ. ಆದರೆ, ಹುಲಿ ತನ್ನ ಸಂಚಾರವನ್ನು ಮುಂದುವರಿಸಿದರೆ ಕಾಳಿ ಹುಲಿ ಅಭಯಾರಣ್ಯ , ಭೀಮಗಡ್‌ ವನ್ಯಜೀವಿ ಅಭಯಾರಣ್ಯ ಮೂಲಕ ಮಹಾರಾಷ್ಟ್ರ ಅಥವಾ ಗೋವಾ ಅರಣ್ಯ ಪ್ರದೇಶಗಳತ್ತ ಸಾಗುವ ನಿರೀಕ್ಷೆ ಇದೆ. ಈ ಹುಲಿಯ ಫೋಟೋ ಮೊದಲ ಬಾರಿಗೆ 2023ರಲ್ಲಿ ನಾಗರಹೊಳೆ ಸಂರಕ್ಷಿತ ಪ್ರದೇಶದಲ್ಲಿ ಕ್ಯಾಮೆರಾ ಟ್ರಾಪ್‌ನಲ್ಲಿ ಸೆರೆಯಾಗಿತ್ತು. ಇತ್ತೀಚೆಗೆ ಕಾರವಾರ ವಿಭಾಗದಲ್ಲಿಯೂ ಅದರ ಹೊಸ ಛಾಯಾಚಿತ್ರಗಳು ಲಭ್ಯವಾಗಲಿವೆ ಎಂಬುದು ಅರಣ್ಯ ಇಲಾಖೆಯ ಸ್ಪಷ್ಟನೆಯಾಗಿದೆ.

ಹುಲಿ ಕಾರಿಡಾರ್‌ ಮಹತ್ವದ ಸಾರಿದ ಹುಲಿ

ಇತ್ತೀಚಿನ ದಿನದಲ್ಲಿ ಮಾನವ ವನ್ಯಜೀವಿಗಳ ಕಾರಿಡಾರ್‌ಗಳನ್ನು ಅಭಿವೃದ್ಧಿ ಹೆಸರಲ್ಲಿ ತನ್ನ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಪರಿಣಾಮ ವನ್ಯಜೀವಿಗಳು ನಾಡಿಗೆ ಬರುವಂತಾಗಿದೆ. ಆದರೆ, ನಾಗರಹೊಳೆಯಿಂದ ಸಾಗಿದ ಹುಲಿ ತನ್ನ ಕಾರಿಡಾರ್‌ನ ಮಹತ್ವವನ್ನು ಸಾರಿ ಹೇಳಿದೆ. ತನ್ನದೇ ಮಾರ್ಗದಲ್ಲಿ ಸಂಚರಿಸಲು ಯಾವುದೇ ಅಡ್ಡಿ ಇರಬಾರದು ಎಂಬ ಸಂದೇಶವನ್ನು ತಿಳಿಸಿದೆ. ಅದೃಷ್ಟವಶಾತ್‌ 360 ಕಿ.ಮೀ. ಸಾಗಿದ ದೂರದ ಪ್ರಯಾಣದಲ್ಲಿ ಮನುಷ್ಯರ ಮೇಲೆ ಬೇಟೆಯಾಡಿಲ್ಲ. ಹುಲಿ ಕಾರಿಡಾರ್‌ನಲ್ಲಿ ಮನುಷ್ಯ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದಿರುವ ಕಾರಣ ಇದು ಸಾಧ್ಯವಾಗಿದೆ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದೆ.

ಕಾರಿಡಾರ್‌ಗಳು ಮಾನವ ಚಟುವಟಿಕೆಯಿಂದ ಹಾನಿಗೊಳಗಾಗುತ್ತಿವೆ. ಈ ಮಾರ್ಗಗಳನ್ನು ಕಾನೂನುಬದ್ಧವಾಗಿ ರಕ್ಷಿಸುವುದು ಅಗತ್ಯವಾಗಿದೆ. ಹುಲಿ ಕಾರಿಡಾರ್‌ಗಳು ಹುಲಿಗಳ ಸಂರಕ್ಷಿತ ಪ್ರದೇಶಗಳ ನಡುವೆ ಮುಕ್ತವಾಗಿ ಸಂಚರಿಸಲು ಸಹಾಯ ಮಾಡುತ್ತವೆ. ಇದು ಅಳಿವಿನಂಚಿನಿಂದ ರಕ್ಷಿಸಲು ಮತ್ತು ಅವುಗಳ ಜನಸಂಖ್ಯೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಕಾರಿಡಾರ್‌ಗಳು ಹುಲಿಗಳಿಗೆ ಆಹಾರ, ಆಶ್ರಯ ಮತ್ತು ಸಂತಾನೋತ್ಪತ್ತಿಗೆ ಬೇಕಾದ ವಿಶಾಲವಾದ ಪ್ರದೇಶವನ್ನು ಒದಗಿಸುತ್ತವೆ

ಗಂಡು ಹುಲಿ ಸಾಮಾನ್ಯ ಪಯಣ

ಹುಲಿಯ ಸಂಚಾರ ಬಗ್ಗೆ ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಹಿರಿಯ ಅರಣ್ಯ ಸಂರಕ್ಷಣಾಧಿಕಾರಿ ಕೆ. ಶ್ರೀನಿವಾಸ್‌, ಗಂಡು ಹುಲಿಗಳ ಸ್ಥಳಾಂತರವು ಸಾಮಾನ್ಯ ಪ್ರಕ್ರಿಯೆಯಾಗಿದೆ. ತಾಯಿಯಿಂದ ದೂರವಾದ ಬಳಿಕ ಹೊಸ ನೆಲೆ ಕಂಡುಕೊಳ್ಳಲು ಪ್ರಯಾಣಿಸುತ್ತವೆ. ಗಂಡು ಹುಲಿಗಳು ಹೆಣ್ಣು ಹುಲಿಗಳಂತೆ ಇರುವುದಿಲ್ಲ. ಅವು ತಮ್ಮದೇ ಆದ ಪ್ರದೇಶವನ್ನು ಸ್ಥಾಪಿಸುವ ಸ್ವಭಾವ ಹೊಂದಿರುತ್ತದೆ. ಇದು ಹುಲಿಯ ನೈಸರ್ಗಿಕ ಪ್ರಕ್ರಿಯೆಯ ಭಾಗವೂ ಸಹ ಒಂದಾಗಿದೆ. ಇದೇ ಉದ್ದೇಶದಿಂದ ಹುಲಿ ಅಷ್ಟೊಂದು ದೂರ ಕ್ರಮಿಸಿರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಹೊಸ ನೆಲೆ ಹುಡುಕುವ ಸಾಧ್ಯತೆ ಇದೆ. ಇಲ್ಲದಿದ್ದರೆ ಮಹಾರಾಷ್ಟ್ರ ಅಥವಾ ಗೋವಾದ ಕಡೆಗೆ ಸಾಗುವ ನಿರೀಕ್ಷೆಯೂ ಇದೆ ಎಂದು ತಿಳಿಸಿದರು.

ಕೌತುಕ ವಿಚಾರವಾದರೂ ಅರಣ್ಯದ ಮಹತ್ವ ಹೇಳಿದೆ

ಹುಲಿಯ ಪಯಣದ ಕುರಿತು ದ ಫೆಡರಲ್‌ ಕರ್ನಾಟಕ ಜತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ, ನಾಗರಹೊಳೆಯಿಂದ ಕಾರವಾರ ಅರಣ್ಯ ಪ್ರದೇಶದವರೆಗೆ ಹುಲಿ ಪ್ರಯಾಣಿಸಿರುವುದು ಕೌತುಕದ ವಿಚಾರ. ಸಾಮಾನ್ಯವಾಗಿ ಹುಲಿಗಳು ಇಷ್ಟೊಂದು ದೂರ ಕ್ರಮಿಸುವುದಿಲ್ಲ. ಗಂಡು ಹುಲಿ ತಮ್ಮದೇ ವಾಸಸ್ಥಳ ಹುಡುಕಾಟಕ್ಕಾಗಿ ಸಂಚರಿಸುವುದು ಸಾಮಾನ್ಯ. ಆದರೆ, ಇಷ್ಟೊಂದು ದೂರ ಪ್ರಯಾಣಿಸುವುದಿಲ್ಲ. ಹೀಗಾಗಿ ಈ ಘಟನೆಯು ಕೌತುಕವೇ ಸರಿ ಎಂದಿದ್ದಾರೆ.

ಈ ಹುಲಿ ಇನ್ನೊಂದು ಸಂದೇಶವನ್ನು ಸಾರಿದೆ. ಅರಣ್ಯ ಪ್ರದೇಶ ವನ್ಯಜೀವಿಗಳಿಗೆ ಯಾಕೆ ಬೇಕು ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹುಲಿಯ 360 ಕಿ.ಮೀ. ಪ್ರಯಾಣವು ರಾಜ್ಯದ ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ಹೊಸ ಪ್ರೇರಣೆ ನೀಡಿದೆ. ಇದು ಹುಲಿ ಕಾರಿಡಾರ್‌ಗಳನ್ನು ಉಳಿಸುವ ಮತ್ತು ವಿಸ್ತರಿಸುವ ಅಗತ್ಯತೆಯನ್ನು ನೆನಪಿಸಿದೆ. ಅರಣ್ಯ ಇಲಾಖೆ ಮುಂದಿನ ದಿನಗಳಲ್ಲಿ ಪ್ರಾಣಿಗಳ ನೈಸರ್ಗಿಕ ಚಲನೆಗೆ ಅಡೆತಡೆ ಉಂಟುಮಾಡದಂತೆ ಕ್ರಮ ಕೈಗೊಳ್ಳುವ ಯೋಜನೆ ರೂಪಿಸಬೇಕಾದ ಅಗತ್ಯ ಇದೆ ಎಂದು ಸಂಜಯ್‌ ಗುಬ್ಬಿ ತಿಳಿಸಿದರು.

ಪರಿಸರ ಪ್ರೇಮಿ ಮತ್ತು ಗುಬ್ಬಿ ಲ್ಯಾಬ್ಸ್‌ ಸಂಸ್ಥಾಪಕ ಎಚ್‌.ಎಸ್‌. ಸುಧೀರ್‌ ಮಾತನಾಡಿ, ಕಾಡು ಪ್ರದೇಶಗಳನ್ನು ವಶಪಡಿಸಿಕೊಳ್ಳುವುದರಿಂದ ಮಾನವ-ಪ್ರಾಣಿ ಸಂಘರ್ಷದ ಅಪಾಯವನ್ನು ಹೆಚ್ಚಿಸುತ್ತಿದೆ. ಪ್ರಾಣಿಗಳು ತಮ್ಮ ವಲಯಗಳಲ್ಲಿಯೇ ಇರುತ್ತವೆ. ಮನುಷ್ಯರು ಅಭಿವೃದ್ಧಿ ಹೆಸರಲ್ಲಿ ಅವುಗಳ ಸ್ಥಳಗಳನ್ನು ವಶಪಡಿಸಿಕೊಂಡಾಗ ಸಹಜವಾಗಿ ಪ್ರಾಣಿಗಳು ದಾಳಿ ಮಾಡುತ್ತವೆ. ಹುಲಿ ಸಂಚಾರ ಮಾಡಿರುವ ವಿಷಯದಲ್ಲಿ ಹುಲಿಯ ಕಾರಿಡಾರ್‌ ಪ್ರದೇಶ ವಶಪಡಿಸಿಕೊಂಡಿಲ್ಲ ಎಂಬುದು ತಿಳಿದುಕೊಳ್ಳಬಹುದು. ಹುಲಿಗಳ ಕಾರಿಡಾರ್‌ಗಳನ್ನು ಸುರಕ್ಷಿತಗೊಳಿಸುವುದು ಬಹಳ ಮುಖ್ಯ. ಸರ್ಕಾರಗಳು ಈಗಲಾದರೂ ಎಚ್ಚೆತ್ತು ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕಾರ್ಯ ಮಾಡಬೇಕು ಎಂದು ಹೇಳಿದರು.

ದೇಶದಲ್ಲಿ ಅತಿ ಹೆಚ್ಚು ಸಂಚರಿಸಿದ ಹುಲಿಯ ದಾಖಲೆಗಳು

ಮಹಾರಾಷ್ಟ್ರದ ತಿಪೇಶ್ವರ ವನ್ಯಜೀವಿ ಅಭಯಾರಣ್ಯದಿಂದ ಹೊರಟು ಸುಮಾರು 1,600 ಕಿಮೀ ದೂರವನ್ನು ಸಂಚರಿಸಿದ ದಾಖಲೆ ಇದೆ. ಸುಮಾರು 5–6 ತಿಂಗಳ ಕಾಲ ಈ ಹುಲಿ ಮಹಾರಾಷ್ಟ್ರ ಮತ್ತು ತೆಲಂಗಾಣದ ಅರಣ್ಯ ಪ್ರದೇಶಗಳಲ್ಲಿ ಅಲೆದಾಡಿದ್ದು, ಮಾನವ ವಾಸ ಪ್ರದೇಶಗಳನ್ನು ತಪ್ಪಿಸಿ, ಸುರಕ್ಷಿತ ಕಾರಿಡಾರ್‌ಗಳ ಮೂಲಕ ಸಂಚಾರ ಮಾಡಿದೆ. ತಿಪೇಶ್ವರ್ ವನ್ಯಜೀವಿ ಅಭಯಾರಣ್ಯದ ಹುಲಿಗೆ 2019ರ ಫೆ. 27ರಂದು ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಇದಾದ ಬಳಿಕ 2019ರ ಜೂ.21ರಂದು ಈ ಹುಲಿ ಅಭಯಾರಣ್ಯದಿಂದ ಹೊಸ ಮನೆಯ ಹುಡುಕಾಟ ನಡೆಸಿತು. ಈ ಹುಲಿ ಮಹಾರಾಷ್ಟ್ರ ಮತ್ತು ತೆಲಂಗಾಣದ ಆರು ಜಿಲ್ಲೆಗಳಲ್ಲಿ ನಡೆದಾಡಿರುವ ವರದಿಯಾಗಿದೆ. ಈ ಘಟನೆ ಹುಲಿಗಳ ನೈಸರ್ಗಿಕ ವರ್ತನೆ ಮತ್ತು ತಮ್ಮ ವಾಸಸ್ಥಳವನ್ನು ಹುಡುಕುವ ಕ್ರಿಯೆಯನ್ನು ತಿಳಿಸುತ್ತದೆ. 2023 ರಲ್ಲಿ ಮಹಾರಾಷ್ಟ್ರದ ಬ್ರಹ್ಮಪುರಿ ಬಾಗಿಲಿಂದ ಆರಂಭವಾದ ಹುಲಿ ಸುಮಾರು 2 ಸಾವಿರ ಕಿ.ಮೀ. ದೂರವನ್ನು ಚಲಿಸಿದ ವರದಿಯಾಗಿದೆ.

ರಾಜ್ಯದಲ್ಲಿ 393 ಹುಲಿಗಳು

ರಾಜ್ಯದ ಐದು ಹುಲಿ ಅಭಯಾರಣ್ಯಗಳಲ್ಲಿ ಹುಲಿಗಳ ಅಂದಾಜು ಸಂಖ್ಯೆ 393 ಆಗಿದೆ. ರಾಜ್ಯ ಸರ್ಕಾರ ನಡೆಸಿದ ನಾಲ್ಕನೇ ಹಂತದ ಮೇಲ್ವಿಚಾರಣಾ ಸಮೀಕ್ಷೆಯಿಂದ ಗೊತ್ತಾಗಿದೆ. 2023ರ ನವೆಂಬರ್‌ನಿಂದ 2024ರ ಫೆಬ್ರವರಿವರೆಗೆ ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟ, ಕಾಳಿ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದಾಗ ಒಟ್ಟು 393 ಹುಲಿಗಳು ಇರುವ ಮಾಹಿತಿ ಲಭ್ಯವಾಗಿದೆ.

ಹಿಂದಿನ ಸಾಲಿಗೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. 2023 ರಲ್ಲಿ 408 ಹುಲಿಗಳು ಇದ್ದು,15 ಹುಲಿಗಳ ಸಂಖ್ಯೆ ಕುಸಿದಿದೆ. ಹುಲಿ ಸಮೀಕ್ಷೆಗಾಗಿ ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶದಲ್ಲಿ 2,160 ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಲಾಗಿದ್ದು, 61 ಲಕ್ಷ ವನ್ಯಜೀವಿ ಚಿತ್ರಗಳನ್ನು ಪಡೆಯಲಾಗಿತ್ತು. ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಾಂಶ ಮೂಲಕ ಹುಲಿ ಚಿತ್ರಗಳನ್ನು ಪ್ರತ್ಯೇಕಿಸಿ, ಪ್ರತಿ ಹುಲಿ ಪಟ್ಟೆಗಳನ್ನಾಧರಿಸಿ ಹುಲಿಗಳ ಸಂಖ್ಯೆ ಲೆಕ್ಕ ಹಾಕಲಾಗಿದೆ.

ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆಯಲ್ಲಿ ಇಳಿಮುಖ

2014ರಿಂದ ಹುಲಿ ಸಮೀಕ್ಷೆ ಮಾಡಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2014ರಲ್ಲಿ 261 ಇದ್ದಂತಹ ಹುಲಿಗಳ ಸಂಖ್ಯೆ 2018ಕ್ಕೆ472ಕ್ಕೆ ಹೆಚ್ಚಳವಾಗಿತ್ತು. ಅದಾದ ನಂತರದಿಂದ ಹುಲಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2020ರಲ್ಲಿ 403, 2022ರಲ್ಲಿ 417, 2023ರಲ್ಲಿ 408 ಹುಲಿಗಳು ಪತ್ತೆಯಾಗಿತ್ತು. 2024ರಲ್ಲಿ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹುಲಿಗಳ ಸಂಖ್ಯೆ 393ಕ್ಕೆ ಇಳಿಕೆಯಾಗಿದೆ.

Read More
Next Story