
ವನ್ಯಜೀವಿಗಳು ಅರಣ್ಯದಿಂದ ಹೊರಬರಲು ವೈಜ್ಞಾನಿಕ ಕಾರಣ ನೀಡಲು ಸಿಎಂ ಸೂಚನೆ
ಹುಲಿ-ಆನೆಗಳ ದಾಳಿ ಹೆಚ್ಚುತ್ತಿದ್ದು, ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಾರಣವಾಗಿದೆ. ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಶೀಘ್ರದಲ್ಲಿಯೇ ಪ್ರತ್ಯೇಕ ಸಭೆ ನಡೆಸಲಾಗುವುದು. ಪರಿಹಾರದ ಮಾಹಿತಿ ನೀಡಲು ಸೂಚನೆ
ಹುಲಿ, ಆನೆಗಳು ಸೇರಿದಂತೆ ವನ್ಯಜೀವಿಗಳು ಅರಣ್ಯದಿಂದ ಹೊರಗೆ ಬರಲು ಕಾರಣವೇನೆಂಬುದರ ಕುರಿತು ವೈಜ್ಞಾನಿಕ ಕಾರಣ ನೀಡುವಂತೆ ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈಜ್ಞಾನಿಕ ಮಾರ್ಗದಲ್ಲಿ ಪರಿಣಾಮಕಾರಿ ಪರಿಹಾರ ಕಂಡು ಹಿಡಿಯುವ ತುರ್ತು ಅಗತ್ಯ ಇದೆ ಸೂಚನೆ ನೀಡಿದರು.
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಡೀ ದಿನ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಭೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಿದರು. ಇತ್ತೀಚೆಗಿನ ದಿನದಲ್ಲಿ ಹುಲಿ, ಆನೆಗಳ ದಾಳಿ ಹೆಚ್ಚುತ್ತಿದ್ದು, ವನ್ಯ ಜೀವಿ-ಮಾನವ ಸಂಘರ್ಷಕ್ಕೆ ಕಾರಣವಾಗಿದೆ. ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಶೀಘ್ರದಲ್ಲಿಯೇ ಪ್ರತ್ಯೇಕ ಸಭೆ ನಡೆಸಲಾಗುವುದು. ಸಮಗ್ರ ಮಾಹಿತಿ ಮತ್ತು ಪರಿಹಾರದ ಬಗ್ಗೆ ಅಧ್ಯಯನ ನಡೆಸಿ ಪೂರ್ತಿ ಸಿದ್ಧತೆಯೊಂದಿಗೆ ಸಭೆಗೆ ಬರಬೇಕು ಎಂದು ಸೂಚಿಸಿದರು.
ಕಾಡಿನಲ್ಲಿರುವ ನೀರಿನ ಗುಂಡಿಗಳನ್ನು ತುಂಬಿಸುವುದು, ಲಂಟಾನಾ ತೆಗೆಸುವುದು, ಅರಣ್ಯದಲ್ಲಿ ಮೇವು ಬೆಳೆಸುವುದು ಮತ್ತು ಆನೆ, ಹುಲಿಗಳು ಹೊರಗೆ ಬರುವ ಬಗ್ಗೆ ನಿರಂತರ ನಿಗಾ ವಹಿಸಬೇಕಾಗಿದೆ. ಈಗಾಗಲೇ ಸಹಾಯವಾಣಿ ತೆರೆಯಲಾಗಿದೆ. ಕಮಾಂಡ್ ಸೆಂಟರ್ ತೆರೆಯುವ ಕಾರ್ಯ ಪ್ರಗತಿಯಲ್ಲಿದ್ದು, ಅದಷ್ಟು ಬೇಗ ಕಾರ್ಯ ಪೂರ್ಣಗೊಳಿಸಬೇಕು. ಹಾಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಸಮರ್ಪಕವಾಗಿ ಆಗುತ್ತಿದೆಯೇ? ಎಂದು ತರಾಟೆಗೆ ತೆಗೆದುಕೊಂಡ ಅವರು, ಹಾಡಿಗಳು, ಅರಣ್ಯವಾಸಿಗಳ ವಿಚಾರದಲ್ಲಿ ಅಂತಃಕರಣದಿಂದ ವರ್ತಿಸ ಬೇಕು. ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ, ಕರ್ತವ್ಯಲೋಪದಿಂದ ಜೀವ ಹಾನಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹಾಡಿಗಳಿಗೆ ಮೂಲಸೌಕರ್ಯ ಕಲ್ಪಿಸದಿರುವುದಕ್ಕೆ ಗರಂ:
ಕೆಲವು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ವಿದ್ಯುತ್ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಕುಡಿಯುವ ನೀರು, ಹಕ್ಕು ಪತ್ರ, ಅಂಗನವಾಡಿ, ಮನೆ, ಆಹಾರ ವಿತರಣೆ, ಆರೋಗ್ಯ ಕಿಟ್ ವಿತರಣೆಯಲ್ಲಿ ಲೋಪಗಳಾಗುತ್ತಿವೆ. ಹಾಡಿ ನಿವಾಸಿಗಳ ಅರಣ್ಯ ಉತ್ಪನ್ನ ಸಂಗ್ರಹ, ಮಾರಾಟದ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿರುವ ಆರೋಪಗಳ ಪ್ರಸ್ತಾಪಿಸಿ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.
ಮಾಹಿತಿಗಾಗಿ ನಿಮ್ಮ ಮನೆಗೆ ಬರ್ಲಾ : ಅರಣ್ಯಾಧಿಕಾರಿಗೆ ಚಳಿ ಬಿಡಿಸಿದ ಸಿಎಂ
ಮೈಸೂರು ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯದ ಪ್ರಮಾಣ ಎಷ್ಟಿದೆ? ಯಾವ ಭಾಗಗಳಲ್ಲಿ ವಿಸ್ತರಣೆ ಆಗಿದೆ ಎನ್ನುವ ಮಾಹಿತಿ ನೀಡುವಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗೆ ಮುಖ್ಯಮಂತ್ರಿ ಪ್ರಶ್ನಿಸಿದರು. ಈ ವೇಳೆ ಅಧಿಕಾರಿಗಳು ಸರಿಯಾದ ಅಂಕಿ ಅಂಶ ನೀಡದೆ, ಮಾಹಿತಿ ನೀಡಲು ತಡಬಡಾಯಿಸಿದರು. ಇದನ್ನು ಕಂಡ ಸಿದ್ದರಾಮಯ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರಿಯಾದ ಮಾಹಿತಿ ತರದೆ ಅತ್ತೆ ಮನೆಗೆ ಬಂದಂತೆ ಕೈ ಬೀಸಿಕೊಂಡು ಬರುತ್ತೀರಾ? 25 ವರ್ಷದಿಂದ ಕೆಲಸ ಮಾಡಿ ರೈತರ ಜಮೀನಿನಲ್ಲಿ ಎಷ್ಟು ಗಿಡ ನೆಟ್ಟಿದ್ದೀರಿ ? ಎಷ್ಟು ಎಕರೆ ಗಿಡ ಬೆಳೆಸಿದ್ದೀರಿ ಎನ್ನುವ ಮಾಹಿತಿ ಇಲ್ಲದಿದ್ದರೆ ನಿಮ್ಮ ಕಾರ್ಯಕ್ಷಮತೆ ಇಷ್ಟೆನಾ? ಎಂದು ಗರಂ ಆಗಿ ಮಾಹಿತಿಗಾಗಿ ನಾನು ನಿಮ್ಮ ಮನೆಗೆ ಬರಬೇಕಾ? ಎಂದು ಖಾರವಾಗಿ ಪ್ರಶ್ನಿಸಿದರು.
ಹಾಸ್ಟೆಲ್‌ನಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ನಿರ್ದೇಶನ:
ಆಹಾರ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಿ ಹಾಸ್ಟೆಲ್‌ಗಳ ಗುಣಮಟ್ಟ ಮತ್ತು ಆಹಾರ ಗುಣಮಟ್ಟದ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ಇದನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೊಸದಾಗಿ ಆರಂಭಿಸಿರುವ ಹಿಂದುಳಿದ ವರ್ಗದ ಹಾಸ್ಟೆಲ್‌ಗಳನ್ನು ತಕ್ಷಣ ಆರಂಭಿಸಲಾಗಿದೆಯೇ ? ಸ್ವಂತ ಕಟ್ಟಡ ಇಲ್ಲದ ಕಡೆ ಬಾಡಿಗೆ ಕಟ್ಟಡಗಳಲ್ಲಿ ಆರಂಭಿಸಬೇಕು. ಈ ಸೂಚನೆ ಎಷ್ಟರ ಮಟ್ಟಿಗೆ ಪಾಲನೆಯಾಗಿದೆ ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ನಿಗಾವಹಿಸಬೇಕು. ಜಾತಿ ಪ್ರಮಾಣ ಪತ್ರಗಳನ್ನು ನೀಡುವ ವಿಚಾರದಲ್ಲಿ ನಿಧಾನ ಮಾಡಬಾರದು. ತಕ್ಷಣ ನೀಡುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಮೈಸೂರು ಸಿಲ್ಕ್ ಸೀರೆ ಉತ್ಪಾದನೆ ಹೆಚ್ಚಳಕ್ಕೆ ಸೂಚನೆ:
ರೇಷ್ಮೆ ಇಲಾಖೆ ಮತ್ತು ರೇಷ್ಮೆ ಉತ್ಪಾದನೆ ಬಗ್ಗೆ ಚರ್ಚೆ ನಡೆಯುವ ವೇಳೆ ರಾಜ್ಯದಲ್ಲಿ ಮೈಸೂರು ಸಿಲ್ಕ್ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಮಹಿಳೆಯರು ಐದಾರು ಗಂಟೆ ಸಾಲುಗಟ್ಟಿ ನಿಂತರೂ ಸೀರೆ ಸಿಗುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಸೀರೆ ಸಿದ್ದಪಡಿಸಲು ಸಮಸ್ಯೆ ಏನು? ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರ್ ನಾಥ್. ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಬಗ್ಗೆ ಗಮನ ಹರಿಸಿ ಮೈಸೂರು ಸಿಲ್ಕ್ ಸೀರೆ ಉತ್ಪಾದನೆ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು
ಬಿತ್ತನೆ ಪ್ರಮಾಣ ಕಡಿಮೆಗೇನು ಕಾರಣ?
ಒಟ್ಟು ನೀರಾವರಿ ಭೂಮಿಯಲ್ಲಿ ವಾಡಿಕೆಗಿಂತ 3ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕಡಿಮೆ ಬಿತ್ತನೆಯಾಗಿದೆ. ಇದಕ್ಕೆ ಕಾರಣವೇನು? ಮಳೆ ಹೇರಳವಾಗಿ ಬಂದಿದ್ದು, ನೀರಿನ ಕೊರತೆಯೂ ಇಲ್ಲ. ಹೀಗಿದ್ದರೂ ಬಿತ್ತನೆ ಏರಿಯಾ ಕಡಿಮೆಯಾಗಿರುವುದಕ್ಕೆ ಏನು ಕಾರಣ? ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಹುರುಳಿ, ಮುಸುಕಿನ ಜೋಳ ಬಿತ್ತನೆ ಇನ್ನೂ ಆಗಬೇಕಿದೆ. ಕೆಲವು ರೈತರು ಬೆಳೆಯನ್ನು ಬದಲಾಯಿಸಿದ್ದಾರೆ. ಗೊಬ್ಬರ, ಬೀಜ ನಮ್ಮಲ್ಲಿ ಸಂಗ್ರಹ ಇದೆ. ರೈತರಿಗೆ ಅಗತ್ಯಕ್ಕಿಂತ ಹೆಚ್ಚು ಗೊಬ್ಬರವನ್ನೂ ದಾಸ್ತಾನು ಮಾಡಿಟ್ಟುಕೊಂಡಿದ್ದೇವೆ. ಯೂರಿಯಾ ಅಗತ್ಯ ಇರುವುದಕ್ಕಿಂತ ಹೆಚ್ಚು ಸಂಗ್ರಹವಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಉತ್ತರಿಸಿದರು.
ಪ್ರವಾಹದಿಂದ ಆಗಿರುವ ಅನಾಹುತಗಳು ಮತ್ತು ಪರಿಹಾರ, ರೈತರ ಆತ್ಮಹತ್ಯೆಗಳು ಹಾಗೂ ಪರಿಹಾರ ಸಮರ್ಪಕವಾಗಿ ಒದಗಿಸಿರುವ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದರು. ಯಾವ ಯಾವ ಬೆಳೆಗಳಿಗೆ ಯಾವ ಯಾವ ರೋಗ ಬಂದಿದೆ? ಇದಕ್ಕೆ ಕಾರಣಗಳನ್ನು ಮತ್ತು ಪರಿಣಾಮಗಳನ್ನು ರೈತರಿಂದ ಕೇಳಿ ದಾಖಲು ಮಾಡಿಕೊಂಡಿದ್ದೀರಾ? ಎಷ್ಟು ಹೆಕ್ಟೇರ್ ಬೆಳೆಗೆ ವಿಮೆ ಹಣ ಸಂದಾಯ ಆಗಿದೆ ಎನ್ನುವ ಬಗ್ಗೆ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸಿದರು.
ಮಹಾರಾಷ್ಟ್ರದ ರೈತರು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ. ನಮ್ಮ ಜಿಲ್ಲೆಯಲ್ಲಿ ಎರಡು ಬೆಳೆ ಮಾತ್ರ ಸಾಧ್ಯವಾಗುತ್ತಿದೆ. ಒಮ್ಮೆ ಮಹಾರಾಷ್ಟ್ರಕ್ಕೆ ತೆರಳಿ ಅಧ್ಯಯನ ಮಾಡಿಕೊಂಡು, ನಮ್ಮ ಇಲ್ಲಿನ ವಾತಾವರಣ ಮತ್ತು ಪರಿಸ್ಥಿತಿಗೆ ಹೇಗೆ ಅಳವಡಿಸಲು ಸಾಧ್ಯ ಎನ್ನುವ ಬಗ್ಗೆ ವರದಿ ನೀಡಿ ಎನ್ನುವ ಸೂಚನೆಯನ್ನು ಸಹ ಇದೇ ವೇಳೆ ನೀಡಿದರು.

