ಮಾಜಿ ಸಚಿವ ಬಿ.ನಾಗೇಂದ್ರ ಇಡಿ ಶಾಕ್‌! 8.07 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬಿ. ನಾಗೇಂದ್ರ ಅವರಿಗೆ ಸೇರಿದ 4 ಸ್ಥಿರಾಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್​ಗಳಡಿ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.

Update: 2025-12-20 02:11 GMT
ಬಿ.ನಾಗೇಂದ್ರ
Click the Play button to listen to article

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಬಿ.ನಾಗೇಂದ್ರ ಅವರ 8.07 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ನಾಗೇಂದ್ರ ಅವರಿಗೆ ಸೇರಿದ ವಸತಿ ಮತ್ತು ವಾಣಿಜ್ಯ ಆಸ್ತಿ ಸೇರಿದಂತೆ 4 ಸ್ಥಿರಾಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್​ಗಳಡಿ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ. ಈ ಆಸ್ತಿಗಳನ್ನು ಪಿಎಂಎಲ್ ಎ ಅಡಿ ‘ಅಪರಾಧದ ಆದಾಯ’ ಎಂದು ಇಡಿ ಕರೆದಿದೆ. ಅಪರಾಧದ ಉಳಿದ ಆದಾಯವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವುಗಳಿಗೆ ನಾಗೇಂದ್ರ ಈಗಾಗಲೇ ಬೇರೆ ವ್ಯವಸ್ಥೆ ಮಾಡಿರಬಹುದು ಅಥವಾ ಮರೆಮಾಚಿರಬಹುದು ಎಂದು ಇಡಿ ತಿಳಿಸಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಖಾತೆಗಳಿಂದ ಕೋಟ್ಯಂತರ ರೂಪಾಯಿ ಹಣವನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಶೆಲ್ ಘಟಕಗಳ ಮೂಲಕ ಅಕ್ರಮವಾಗಿ ಇತರೆಡೆ ವರ್ಗಾಯಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಸಿಬಿಐ ಶೋಧ: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ. ನಾಗೇಂದ್ರ ಅವರ ಸಂಬಂಧಿಕರು, ಆಪ್ತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಸೆಪ್ಟೆಂಬರ್​ ತಿಂಗಳಲ್ಲಿ ಶೋಧ ನಡೆಸಿದ್ದರು. ಕರ್ನಾಟಕ ಮತ್ತು ಆಂಧ್ರಪ್ರದೇಶದ ಸೇರಿದಂತೆ ಒಟ್ಟು 16 ಸ್ಥಳಗಳಲ್ಲಿ ಶೋಧ ನಡೆಸಿರುವ ಕುರಿತು ಸಿಬಿಐ ಮಾಹಿತಿ ನೀಡಿತ್ತು.

ಬಳ್ಳಾರಿಯಲ್ಲಿರುವ ಬಿ.ನಾಗೇಂದ್ರ ಅವರ ಸಹೋದರಿ, ಭಾವ, ಆಪ್ತ ಸಹಾಯಕ ಸೇರಿದಂತೆ ಇತರ ಕೆಲ ಆಪ್ತರ ಮನೆಗಳು, ಕಚೇರಿಗಳಲ್ಲಿ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ದಾಳಿ ಸಂದರ್ಭದಲ್ಲಿ ಆಸ್ತಿಗೆ ಸಂಬಂಧಿಸಿದ ಕೆಲವು ದಾಖಲೆಗಳು, ಬ್ಯಾಂಕ್ ದಾಖಲೆಗಳು, ವಂಚನೆಯ ಹಣದಲ್ಲಿ ಖರೀದಿಸಲಾಗಿದೆ ಎನ್ನಲಾದ ಕೆಲವು ವಾಹನಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಸಿಬಿಐ ಪ್ರಕಟಣೆಯಲ್ಲಿ ತಿಳಿಸಿತ್ತು.

ವಾಲ್ಮೀಕಿ ನಿಗಮದ ಲೆಕ್ಕಪತ್ರ ವಿಭಾಗದ ಚಂದ್ರಶೇಖರ್‌ ಪಿ. ಎಂಬ ಅಧಿಕಾರಿ ಕಳೆದ ವರ್ಷ ಮೇ 26ರಂದು ಆತ್ಮಹತ್ಯೆ ಬಳಿಕ ಈ ಹಗರಣ ಸ್ಫೋಟವಾಗಿತ್ತು. ಈ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಕೂಡ ರಚನೆ ಮಾಡಿತ್ತು. ಈ ನಡುವೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಕಾರಣ ಇ.ಡಿ. ಕೂಡ ಮಧ್ಯೆ ಪ್ರವೇಶಿಸಿ ತನಿಖೆ ತೀವ್ರಗೊಳಿಸಿತ್ತು. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರ ಬಂಧನ ಕೂಡ ಆಗಿತ್ತು. ಸದ್ಯ ನಾಗೇಂದ್ರ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.

Tags:    

Similar News