ಐದು ವರ್ಷವೂ ನಾನೇ ಸಿಎಂ: ಅಧಿವೇಶನದಲ್ಲಿ ಎರಡೆರಡು ಬಾರಿ ಪುನರುಚ್ಚರಿಸಿದ ಸಿದ್ದರಾಮಯ್ಯ
ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸೂತ್ರವನ್ನು ಮಾಡಿಕೊಂಡೇ ಇಲ್ಲ ಎಂಬುದನ್ನು ಎರಡೆರಡು ಬಾರಿ ಹೇಳಿದ ಸಿದ್ದರಾಮಯ್ಯ ಅವರು ನಾಯಕತ್ವವನ್ನು ಬಿಟ್ಟುಕೊಡುವುದಿಲ್ಲ ಎಂಬ ತಮ್ಮ ಇಂಗಿತವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಬೆಳಗಾವಿಯ ಅಧಿವೇಶನದಲ್ಲಿ ಶುಕ್ರವಾರ ಚರ್ಚೆಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ತಮ್ಮ ನಾಯಕತ್ವದ ಕುರಿತಾದ ಗೊಂದಲಗಳನ್ನು ಸಂಪೂರ್ಣವಾಗಿ ನಿವಾರಿಸಿದ್ದಾರೆ. "ನಾನು ಈಗಾಗಲೇ ಎರಡೂವರೆ ವರ್ಷಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿದ್ದೇನೆ. ಮುಂದಿನ ಎರಡೂವರೆ ವರ್ಷಗಳ ಅವಧಿಯನ್ನೂ ನಾನೇ ಪೂರೈಸಲಿದ್ದೇನೆ. ಇದರಲ್ಲಿ ಯಾವುದೇ ಸಂಶಯ ಬೇಡ, ಮುಂದೆಯೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದೇನೆ" ಎಂದು ಘೋಷಿಸುವ ಮೂಲಕ ಅಧಿಕಾರ ಹಸ್ತಾಂತರದ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.
ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸೂತ್ರವನ್ನು ಮಾಡಿಕೊಂಡೇ ಇಲ್ಲ ಎಂಬುದನ್ನು ಎರಡೆರಡು ಬಾರಿ ಹೇಳಿದ ಸಿದ್ದರಾಮಯ್ಯ ಅವರು ನಾಯಕತ್ವವನ್ನು ಬಿಟ್ಟುಕೊಡುವುದಿಲ್ಲ ಎಂಬ ತಮ್ಮ ಇಂಗಿತವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸರ್ಕಾರ ರಚನೆಯ ಸಂದರ್ಭದಲ್ಲಿ ಕೇಳಿಬಂದಿದ್ದ "ಅಧಿಕಾರ ಹಂಚಿಕೆ" ಸೂತ್ರದ ಕುರಿತಾದ ಒತ್ತಡಗಳ ನಡುವೆಯೇ ಸಿದ್ದರಾಮಯ್ಯ ನೀಡಿರುವ ಈ ಹೇಳಿಕೆ, ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಹೊಸ ಸಂಘರ್ಷ ಅಥವಾ ಹೊಸ ಸಮೀಕರಣಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.
ಹೈಕಮಾಂಡ್ ವಿಶ್ವಾಸ ನನಗಿದೆ: ಅಧಿಕಾರ ಹಂಚಿಕೆ ವದಂತಿಗಳಿಗೆ ಬ್ರೇಕ್
ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಕೆಣಕುವ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, ಅಧಿಕಾರ ಹಂಚಿಕೆ ಎಂಬ ಒಪ್ಪಂದವೇ ನಡೆದಿಲ್ಲ ಎಂದು ಎರಡೆರಡು ಪ್ರತಿಪಾದಿಸಿದರು. "ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ. ನಾನು ಹೈಕಮಾಂಡ್ ನಿರ್ದೇಶನದಂತೆಯೇ ಅಧಿಕಾರದಲ್ಲಿದ್ದೇನೆ ಮತ್ತು ದೆಹಲಿ ನಾಯಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾದರೂ, ಸದ್ಯಕ್ಕೆ ಅಂತಹ ಯಾವುದೇ ಬದಲಾವಣೆಯ ಸೂಚನೆಗಳಿಲ್ಲ" ಎಂದು ಸ್ಪಷ್ಟಪಡಿಸಿದರು.
ಹಿಂದೆ ರಾಷ್ಟ್ರೀಯ ಮಾಧ್ಯಮಗಳ ಮುಂದೆ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ಸೂಚ್ಯವಾಗಿ ಮಾತನಾಡಿದ್ದರು. ಇದು ಶಾಸಕಾಂಗ ಪಕ್ಷದೊಳಗೆ ಹಲವು ಬಣಗಳ ಸೃಷ್ಟಿಗೆ ಕಾರಣವಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಸದನದ ದಾಖಲೆಗೆ ಸೇರುವಂತೆ ನೀಡಿರುವ ಈ ಹೇಳಿಕೆ, ಹೈಕಮಾಂಡ್ ಮಟ್ಟದಲ್ಲಿ ತಮ್ಮ ಹಿಡಿತ ಎಷ್ಟಿದೆ ಎಂಬುದನ್ನು ಸಾಬೀತುಪಡಿಸುವ ತಂತ್ರವೆಂದೇ ವಿಶ್ಲೇಷಿಸಲಾಗುತ್ತಿದೆ.
ವಿರೋಧ ಪಕ್ಷಗಳಿಗೆ ಟಾಂಗ್: "ನಾವೇ ಪ್ರೊಡ್ಯೂಸರ್, ನಾವೇ ಡೈರೆಕ್ಟರ್"
ಚರ್ಚೆಯ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಶಾಸಕ ಮುನಿರತ್ನ ಅವರು ಸಿಎಂ ಕಾಲೆಳೆಯಲು ಯತ್ನಿಸಿದರು. "ಹಿಂದೆ ನೀವು ರೆಟ್ಟೆ ಬಡಿದು ನಾನೇ ಸಿಎಂ ಎಂದಿದ್ದಿರಿ, ಈಗಲೂ ಧೈರ್ಯವಿದ್ದರೆ ಹಾಗೆಯೇ ಹೇಳಿ" ಎಂದು ಸವಾಲು ಹಾಕಿದರು. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಸಿದ್ದರಾಮಯ್ಯ, "ನಮಗೆ ಯಾರೂ ನಿರ್ದೇಶನ ನೀಡುವ ಅಗತ್ಯವಿಲ್ಲ. ನಮ್ಮ ರಾಜಕೀಯದ ನಾಟಕಕ್ಕೆ ನಾವೇ ಪ್ರೊಡ್ಯೂಸರ್, ನಾವೇ ಡೈರೆಕ್ಟರ್ ಮತ್ತು ನಾವೇ ಆಕ್ಟರ್‌ಗಳು. ನಮ್ಮ ಪಾತ್ರವನ್ನು ನಾವೇ ನಿರ್ಧರಿಸುತ್ತೇವೆ" ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಈ ವಾಕ್ಸಮರವು ಸದನದಲ್ಲಿ ನಗೆಯ ಅಲೆ ಎಬ್ಬಿಸಿದರೂ, ವಿರೋಧ ಪಕ್ಷಗಳಿಗೆ ಸಿದ್ದರಾಮಯ್ಯ ಅವರು ನೀಡಿದ ಸಂದೇಶ ಮಾತ್ರ ಗಂಭೀರವಾಗಿತ್ತು. ತಾವು ಕೇವಲ ಗೊಂಬೆಯಲ್ಲ, ಬದಲಾಗಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯುಳ್ಳ ನಾಯಕ ಎಂಬುದನ್ನು ಅವರು ಪುನರುಚ್ಚರಿಸಿದರು.
ಹಣೆಬರಹವಲ್ಲ, ಕಾಯಕವೇ ಮುಖ್ಯ
ರಾಜಕೀಯ ಅದೃಷ್ಟದ ಕುರಿತಾದ ಚರ್ಚೆ ಬಂದಾಗ ಸಿದ್ದರಾಮಯ್ಯ ಅವರು ತಮ್ಮ ವೈಯಕ್ತಿಕ ಜೀವನದ ಹಾದಿಯನ್ನು ಮೆಲುಕು ಹಾಕಿದರು. "ನನಗೆ ಹಣೆಬರಹದ ಮೇಲೆ ನಂಬಿಕೆಯಿಲ್ಲ. ಅವಿದ್ಯಾವಂತ ಪೋಷಕರ ಮಗನಾಗಿ, ಕಡುಬಡತನದಿಂದ ಬಂದ ನಾನು ಇಂದು ಈ ಸ್ಥಾನದಲ್ಲಿದ್ದೇನೆ ಎಂದರೆ ಅದಕ್ಕೆ ನನ್ನ ಹೋರಾಟವೇ ಕಾರಣ. ಹಣೆಬರಹದಲ್ಲಿ ಏನಾದರೂ ಬರೆದಿರಲಿ, ಅದನ್ನು ಮೀರಿ ಬೆಳೆಯುವುದು ನಮಗೆ ಗೊತ್ತು" ಎಂದು ಭಾವನಾತ್ಮಕವಾಗಿ ನುಡಿದರು.
ಇದೇ ವೇಳೆ 2028ರ ಚುನಾವಣೆಯ ಕುರಿತೂ ಭವಿಷ್ಯ ನುಡಿದ ಅವರು, "ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ. ಆದರೆ 2028ರ ನಂತರವೂ ನಾವೇ ಅಧಿಕಾರದಲ್ಲಿರುತ್ತೇವೆ" ಎಂದು ಸವಾಲು ಹಾಕಿದರು. ಸದ್ಯಕ್ಕೆ ಸಿದ್ದರಾಮಯ್ಯ ಅವರ ಈ "ಪಂಚವರ್ಷ" ಪೂರೈಸುವ ಹೇಳಿಕೆಯು ಕರ್ನಾಟಕ ರಾಜಕೀಯದ ಚದುರಂಗದಾಟದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬ ಕುತೂಹಲವನ್ನು ಹೆಚ್ಚಿಸಿದೆ.