ʼಎಳೆʼನಿಂಬೆ ಅಭಿವೃದ್ಧಿ ಮಂಡಳಿಗೆ ಬೇಕಿದೆ ಆರ್ಥಿಕ ಸ್ವಾವಲಂಬನೆ; ನಿಂಬೆ ತವರಿನಲ್ಲಿ ರೈತರು ಕಂಗಾಲು!

ಕೊಡಗು ಕಾಫಿ ಅಥವಾ ಮೈಸೂರು ಸ್ಯಾಂಡಲ್ ಸೋಪ್‌ಗೆ ಇರುವಂತೆ, ವಿಜಯಪುರದ ನಿಂಬೆಗೂ ಒಂದು ಬ್ರ್ಯಾಂಡ್ ಮೌಲ್ಯವಿದ್ದರೆ ಮಾತ್ರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆ ಸಿಗುತ್ತದೆ.

Update: 2025-12-18 12:30 GMT
Click the Play button to listen to article

ರಾಜ್ಯದ ಕೃಷಿ ಭೂಪಟದಲ್ಲಿ ವಿಜಯಪುರ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ನಿಂಬೆ ಕೃಷಿಯ ತವರು ಎಂದೇ ಖ್ಯಾತವಾಗಿದೆ. ಈ ಭಾಗದ ರೈತರ ಜೀವನಾಡಿಯಾಗಿರುವ ನಿಂಬೆ ಬೆಳೆಯನ್ನು ಪ್ರೋತ್ಸಾಹಿಸಲು ಮತ್ತು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು 'ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ'ಯನ್ನು ಸ್ಥಾಪಿಸಿತು. ಸುಮಾರು 14 ಸಾವಿರ ಎಕರೆಗೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಹಬ್ಬಿರುವ ನಿಂಬೆ ಕೃಷಿಯು ಉತ್ತರ ಕರ್ನಾಟಕದ ಶುಷ್ಕ ಪ್ರದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ. ಆದರೆ, ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದರೂ, ಮಾರುಕಟ್ಟೆ ನಿರ್ವಹಣೆ ಮತ್ತು ಮೌಲ್ಯವರ್ಧನೆಯಲ್ಲಿನ ಹಿನ್ನಡೆಯಿಂದಾಗಿ ನಿರೀಕ್ಷಿತ ಲಾಭ ರೈತರಿಗೆ ತಲುಪುತ್ತಿಲ್ಲ. ಪ್ರಸ್ತುತ ಮಂಡಳಿಯು ಶೈಶವಾವಸ್ಥೆಯಲ್ಲಿದ್ದು, ಆರ್ಥಿಕ ಸ್ವಾವಲಂಬನೆ ಮತ್ತು ವೃತ್ತಿಪರತೆಯ ಕೊರತೆಯನ್ನು ಎದುರಿಸುತ್ತಿದೆ.

ಸುಮಾರು 14 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯಲಾಗುವ ನಿಂಬೆಗೆ ತಕ್ಕಮಟ್ಟದ ಕೊಯ್ಲು ನಂತರದ ನಿರ್ವಹಣಾ ಘಟಕಗಳಿಲ್ಲ. ನಿಂಬೆಯು ಬೇಗನೆ ಹಾಳಾಗುವ ಹಣ್ಣಾಗಿರುವುದರಿಂದ, ಶೀತಲ ಶೇಖರಣಾ ಘಟಕಗಳು  ಮತ್ತು ಸಂಸ್ಕರಣಾ ಘಟಕಗಳಿಲ್ಲದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೊಯ್ಲು ನಂತರದ ನಿರ್ವಹಣೆ ಮತ್ತು ರಫ್ತು ಉತ್ತೇಜನವನ್ನು ನಿರ್ವಹಿಸಲು ಯಾವುದೇ ಮೀಸಲಿರುವ ತಾಂತ್ರಿಕ ಮಾರುಕಟ್ಟೆ ಅಥವಾ ವ್ಯವಸ್ಥೆ ಇಲ್ಲ. ಇದರಿಂದಾಗಿ ರೈತರು ದಲ್ಲಾಳಿಗಳ ಮೊರೆ ಹೋಗಬೇಕಾದ ಅಥವಾ ಕಡಿಮೆ ಬೆಲೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯತೆಯಿದೆ. ಮಂಡಳಿಯು ಆಡಳಿತಾತ್ಮಕವಾಗಿ ಅಸ್ತಿತ್ವದಲ್ಲಿದ್ದರೂ, ತಾಂತ್ರಿಕವಾಗಿ ಸೊರಗಿದೆ. ಕೃಷಿ ವಿಜ್ಞಾನಿಗಳು, ಸಂಸ್ಕರಣಾ ತಜ್ಞರು ಮತ್ತು ಮಾರುಕಟ್ಟೆ ಪರಿಣಿತರ ಕೊರತೆಯಿಂದಾಗಿ ಮಂಡಳಿಯು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.

ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 9ನೇ ವರದಿಯಲ್ಲಿ ಈ ಅಂಶಗಳು ಉಲ್ಲೇಖವಾಗಿದ್ದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಮಂಡಳಿಯು ಆರ್ಥಿಕವಾಗಿ ಸ್ವಾವಲಂಬಿಯಾಗಿಲ್ಲ. ಆರ್‌ಐಡಿಎಫ್ ಯೋಜನೆಯಡಿ 12.75 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಶೇ.100 ರಷ್ಟು ಸಬ್ಸಿಡಿಯನ್ನು ನಿರೀಕ್ಷಿಸಲಾಗಿದೆ. ಆದರೆ, ಮಂಡಳಿಯು ಸಂಪೂರ್ಣವಾಗಿ ಬಜೆಟ್ ಬೆಂಬಲದ ಮೇಲೆ ಅವಲಂಬಿತವಾಗಿದೆ. ಮಂಡಳಿಗೆ ಯಾವುದೇ ಪುನರಾವರ್ತಿತ ಆದಾಯ ಅಥವಾ ಸ್ವತಂತ್ರ ಆದಾಯದ ಮೂಲಗಳಿಲ್ಲ. ವಾಣಿಜ್ಯೀಕರಣದ ಮೂಲಕ ಆರ್ಥಿಕ ಭದ್ರತೆ ಕಂಡುಕೊಳ್ಳುವಲ್ಲಿ ಮಂಡಳಿ ವಿಫಲವಾಗಿದೆ ಅಥವಾ ಇನ್ನೂ ಶೈಶವಾವಸ್ಥೆಯಲ್ಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. 

ಮಾನವ ಸಂಪನ್ಮೂಲ ಮತ್ತು ಆಡಳಿತಾತ್ಮಕ ಸವಾಲುಗಳು

ಮಂಡಳಿಯ ಅತ್ಯಂತ ದುರ್ಬಲ ಅಂಶವೆಂದರೆ ಅದರ ಸಿಬ್ಬಂದಿ ರಚನೆ. ಮಂಜೂರಾದ 7 ಹುದ್ದೆಗಳಲ್ಲಿ ಕೇವಲ 2 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಸಹಾಯಕ ನಿರ್ದೇಶಕರಂತಹ ಪ್ರಮುಖ ಹುದ್ದೆಯನ್ನು ನಿಯೋಜನೆ ಮೇಲೆ ನಿರ್ವಹಿಸಲಾಗುತ್ತಿದ್ದು, ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಖಜಾನೆಯ ಅನುಮತಿಯಿಲ್ಲದೆ ತೆಗೆದುಕೊಳ್ಳಲಾಗಿದೆ. ಕೊಯ್ಲು ನಂತರದ ನಿರ್ವಹಣೆ, ಸಂಸ್ಕರಣೆ ಮತ್ತು ರಫ್ತು ಉತ್ತೇಜನದಂತಹ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಲು ಅಗತ್ಯವಿರುವ ತಾಂತ್ರಿಕ ನೈಪುಣ್ಯತೆ ಹೊಂದಿರುವ ಸಿಬ್ಬಂದಿ ಅಥವಾ ಮಾರುಕಟ್ಟೆ ವೃಂದದ ತೀವ್ರ ಕೊರತೆ ಇದೆ ಎಂದು ಆಯೋಗವು ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. 

ಆಯೋಗದ ಶಿಫಾರಸ್ಸುಗಳು

ರಾಜ್ಯ ಸುಧಾರಣಾ ಆಯೋಗವು ಮಂಡಳಿಯನ್ನು ಕೇವಲ ಹೆಸರಿಗೆ ಮಾತ್ರ ಸೀಮಿತಗೊಳಿಸದೆ, ಅದನ್ನು ಕ್ರಿಯಾಶೀಲಗೊಳಿಸಲು ಹಲವಾರು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಮಂಡಳಿಯ ಆಡಳಿತವನ್ನು ಚುರುಕುಗೊಳಿಸಲು ಕೇವಲ ಸಾಮಾನ್ಯ ಸಿಬ್ಬಂದಿ ಮಾತ್ರವಲ್ಲದೇ, ಮೂರು ಪ್ರಮುಖ ವಿಭಾಗಗಳ ತಜ್ಞರನ್ನು ನೇಮಿಸಬೇಕಿದೆ. ಇವರು ನಿಂಬೆ ಇಳುವರಿ ಹೆಚ್ಚಿಸಲು, ರೋಗ ನಿಯಂತ್ರಣಕ್ಕೆ ಮತ್ತು ಉತ್ತಮ ತಳಿಗಳ ಅಭಿವೃದ್ಧಿಗೆ ರೈತರಿಗೆ ನೆರವಾಗುತ್ತಾರೆ. ಹಣ್ಣು ಕೀಳುವ ವಿಧಾನ, ಅದನ್ನು ಕೆಡದಂತೆ ಶೇಖರಿಸುವ ವಿಧಾನ ಮತ್ತು ಸಂಸ್ಕರಣೆಯ ಬಗ್ಗೆ ಇವರು ವೈಜ್ಞಾನಿಕ ಪರಿಹಾರ ನೀಡಲು ಸಹಕಾರಿಯಾಗಲಿದ್ದಾರೆ. ಬೆಳೆದ ಬೆಳೆಗೆ ಎಲ್ಲಿ ಬೇಡಿಕೆಯಿದೆ, ಬೆಲೆಯನ್ನು ಹೇಗೆ ನಿರ್ಧರಿಸುವುದು ಮತ್ತು ರಫ್ತು ಪ್ರಕ್ರಿಯೆಗಳನ್ನು ಇವರು ನಿರ್ವಹಿಸುತ್ತಾರೆ. ಮಂಡಳಿಯನ್ನು 'ಉತ್ಪಾದಕತೆ ಹೆಚ್ಚಳ' ಮತ್ತು 'ರೈತರ ಆದಾಯ ವೃದ್ಧಿ' ಎಂಬ ಎರಡು ಗುರಿಗಳನ್ನಿಟ್ಟುಕೊಂಡು ಮರುವಿನ್ಯಾಸಗೊಳಿಸಬೇಕಿದೆ. ಇದು ಕೇವಲ ಅನುದಾನ ಹಂಚುವ ಸಂಸ್ಥೆಯಾಗದೆ, ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವ ಸಂಸ್ಥೆಯಾಗಬೇಕು ಎಂಬ ಶಿಫಾರಸ್ಸು ಮಾಡಲಾಗಿದೆ. 

ಆರ್ಥಿಕ ಸ್ವಾವಲಂಬನೆಯ ಅವಶ್ಯಕತೆ 

ಮಂಡಳಿಯ ಪ್ರಸ್ತುತ ಆರ್ಥಿಕ ಸ್ಥಿತಿಯು ಸಂಪೂರ್ಣವಾಗಿ ಸರ್ಕಾರದ ಅನುದಾನವನ್ನು ಅವಲಂಬಿಸಿದೆ. ಇದನ್ನು ಬದಲಾಯಿಸಲು ಆಯೋಗವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯನ್ನು ಪ್ರಬಲವಾಗಿ ಪ್ರತಿಪಾದಿಸಿದೆ. ಕೇವಲ ಹಸಿ ನಿಂಬೆಯನ್ನು ಮಾರಾಟ ಮಾಡುವ ಬದಲು, ನಿಂಬೆ ಸಂಸ್ಕರಣೆ, ಒಣಗಿಸುವಿಕೆ, ರಸ ತೆಗೆಯುವಿಕೆ ಮತ್ತು ಸಾರಭೂತ ತೈಲಗಳು ಹಾಗೂ ಸಿಟ್ರಿಕ್ ಆಸಿಡ್‌ಗಳಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದು ಅತ್ಯಗತ್ಯ. ಇದು ನಿಂಬೆಯ ಮೌಲ್ಯವನ್ನು ಮತ್ತು ಶೇಖರಣಾ ಅವಧಿಯನ್ನು ಹೆಚ್ಚಿಸುತ್ತದೆ.  ಖಾಸಗಿ ಹೂಡಿಕೆದಾರರು ಮತ್ತು ರೈತ ಉತ್ಪಾದಕ ಸಂಸ್ಥೆಗಳ  ಸಹಯೋಗದೊಂದಿಗೆ ಉತ್ಪನ್ನಗಳ ವಾಣಿಜ್ಯೀಕರಣ ಮತ್ತು ಬ್ರ್ಯಾಂಡ್ ಪರವಾನಗಿ ಮೂಲಕ ಆದಾಯ ಗಳಿಸುವ ಮಾರ್ಗಗಳನ್ನು ಮಂಡಳಿ ಕಂಡುಕೊಳ್ಳಬೇಕು. ಸದಸ್ಯತ್ವ ಶುಲ್ಕಗಳು, ತರಬೇತಿ ಶುಲ್ಕಗಳು ಮತ್ತು ಮೂಲಸೌಕರ್ಯಗಳ ಬಳಕೆಗೆ ಶುಲ್ಕ ವಿಧಿಸುವ ಮೂಲಕ ಮಂಡಳಿಯು ತನ್ನ ಆಡಳಿತಾತ್ಮಕ ವೆಚ್ಚಗಳನ್ನು ಭರಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಶಕ್ತವಾಗಬೇಕು ಎಂದು ಆಯೋಗವು ಸ್ಪಷ್ಟಪಡಿಸಿದೆ.

ಸಂಶೋಧನೆ, ಅಭಿವೃದ್ಧಿ ಮತ್ತು ಗುಣಮಟ್ಟ ನಿರ್ವಹಣೆ 

ನಿಂಬೆ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳ ಅಳವಡಿಕೆ ಅಗತ್ಯ ಇದೆ ಎಂದು ಆಯೋಗವು ಹೇಳಿದೆ. ಮಂಡಳಿಯು ಕೇವಲ ಆಡಳಿತಾತ್ಮಕ ಸಂಸ್ಥೆಯಾಗದೆ, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದೊಂದಿಗೆ ಸಹಯೋಗ ಹೊಂದಬೇಕು. ಈ ಸಹಯೋಗವು ಕೀಟ ನಿರ್ವಹಣೆ  ಮತ್ತು ಕೊಯ್ಲು ನಂತರದ ನೂತನ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನಿಂಬೆ ರಫ್ತು ಮಾಡಬೇಕಾದರೆ, ಶ್ರೇಣೀಕರಣ, ಪ್ಯಾಕೇಜಿಂಗ್ ಮತ್ತು ಗುಣಮಟ್ಟದ ಮಾನದಂಡಗಳನ್ನು ಪಾಲಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ರೈತರಿಗೆ ನಿಯಮಿತ ತರಬೇತಿಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಬೇಕೆಂದು ಶಿಫಾರಸು ಮಾಡಲಾಗಿದೆ.

'ಕರ್ನಾಟಕ ಲೈಮ್' ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆ 

ಇದು ವರದಿಯ ಅತ್ಯಂತ ಮಹತ್ವದ ಶಿಫಾರಸಾಗಿದೆ. ವಿಜಯಪುರದ ನಿಂಬೆಗೆ ಜಾಗತಿಕ ಮನ್ನಣೆ ದೊರಕಿಸಿಕೊಡಲು ಬ್ರ್ಯಾಂಡಿಂಗ್ ಅತ್ಯಗತ್ಯ. ಬಿಡಿಬಿಡಿಯಾಗಿರುವ ರೈತರನ್ನು ಒಗ್ಗೂಡಿಸಿ ರೈತ ಕ್ಲಸ್ಟರ್‌ಗಳು ಮತ್ತು ಎಫ್.ಪಿ.ಒ.ಗಳನ್ನು ರಚಿಸುವುದರಿಂದ ಒಳಹರಿವಿನ ಪೂರೈಕೆ ಮತ್ತು ಮಾರುಕಟ್ಟೆ ಚೌಕಾಶಿ ಶಕ್ತಿ ಹೆಚ್ಚುತ್ತದೆ. ವಿಜಯಪುರ ಜಿಲ್ಲೆಗೆ ನಿಂಬೆಯನ್ನು 'ಒಂದು ಜಿಲ್ಲೆ ಒಂದು ಉತ್ಪನ್ನವನ್ನಾಗಿ ಗುರುತಿಸಿರುವುದರಿಂದ, ಮಂಡಳಿಯು ಸ್ಥಳೀಯ ಉತ್ಪಾದನೆಯನ್ನು ರಾಷ್ಟ್ರೀಯ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಪರ್ಕಿಸಬೇಕು. 'ಕರ್ನಾಟಕ ಲೈಮ್' ಎಂಬ ಪ್ರತ್ಯೇಕ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಬೇಕು. ಇದು ರೈತರಿಗೆ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳಲು ಸಹಕಾರಿಯಾಗುತ್ತದೆ.

ಕೊಡಗು ಕಾಫಿ ಅಥವಾ ಮೈಸೂರು ಸ್ಯಾಂಡಲ್ ಸೋಪ್‌ಗೆ ಇರುವಂತೆ, ವಿಜಯಪುರದ ನಿಂಬೆಗೂ ಒಂದು ಬ್ರ್ಯಾಂಡ್ ಮೌಲ್ಯವಿದ್ದರೆ ಮಾತ್ರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆ ಸಿಗುತ್ತದೆ. ವಿಜಯಪುರದ ನಿಂಬೆ ತನ್ನದೇ ಆದ ವಿಶಿಷ್ಟ ರುಚಿ ಮತ್ತು ರಸಭರಿತತೆಗೆ ಹೆಸರಾಗಿದೆ. 'ಕರ್ನಾಟಕ ಲೈಮ್' ಹೆಸರಿನಲ್ಲಿ ಬ್ರ್ಯಾಂಡಿಂಗ್ ಮಾಡುವುದರಿಂದ, ಇದು ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್‌ ) ಪಡೆಯಲು ಮತ್ತು ಜಾಗತಿಕವಾಗಿ ತನ್ನತನವನ್ನು ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ. ಬ್ರ್ಯಾಂಡೆಡ್ ಉತ್ಪನ್ನಗಳಿಗೆ ಯುರೋಪ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಬ್ರ್ಯಾಂಡಿಂಗ್ ಮೂಲಕ ಗುಣಮಟ್ಟದ ಭರವಸೆ ನೀಡುವುದರಿಂದ ರಫ್ತು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಬಹುದು.

ದತ್ತಾಂಶ ನಿರ್ವಹಣೆ ಮತ್ತು ಕೇಂದ್ರದ ಅನುದಾನ ಬಳಕೆ 

ಯಾವುದೇ ಯೋಜನೆಯ ಯಶಸ್ಸಿಗೆ ನಿಖರವಾದ ದತ್ತಾಂಶ ಅತ್ಯಗತ್ಯ. ಬೆಳೆ ವ್ಯಾಪ್ತಿ, ಉತ್ಪಾದಕತೆ ಮತ್ತು ಆರ್ಥಿಕ ಬಳಕೆಯನ್ನು ಪತ್ತೆಹಚ್ಚಲು ಮಂಡಳಿಯು ಒಂದು ದೃಢವಾದ 'ನಿರ್ವಹಣಾ ಮಾಹಿತಿ ವ್ಯವಸ್ಥೆ'ಯನ್ನು ಅಳವಡಿಸಿಕೊಳ್ಳಬೇಕು. ಯೋಜನೆಗಳ ಪಾರದರ್ಶಕತೆಗಾಗಿ ನಿಯಮಿತವಾಗಿ ಮೂರನೇ ವ್ಯಕ್ತಿಯಿಂದ ಮೌಲ್ಯಮಾಪನ ನಡೆಯಬೇಕು. 

ಮಂಡಳಿಯು ಕೇವಲ ರಾಜ್ಯ ಸರ್ಕಾರದ ಅನುದಾನವನ್ನೇ ನಂಬದೆ, ಕೇಂದ್ರದ ಯೋಜನೆಗಳಾದ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಮಿಷನ್ , ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಮುಂತಾದ ಸಂಸ್ಥೆಗಳಿಂದ ತಾಂತ್ರಿಕ ಮತ್ತು ಆರ್ಥಿಕ ಬೆಂಬಲವನ್ನು ಪಡೆಯಲು ಸಕ್ರಿಯವಾಗಬೇಕು.

ಸಾಂಸ್ಥಿಕ ಸಮನ್ವಯ ಮತ್ತು ಕೃಷಿ-ಕೈಗಾರಿಕಾ ಕಾರಿಡಾರ್ 

ನಿಂಬೆ ಅಭಿವೃದ್ಧಿಯು ಕೇವಲ ತೋಟಗಾರಿಕೆ ಇಲಾಖೆಗೆ ಸೀಮಿತವಾಗಬಾರದು. ನಬಾರ್ಡ್ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ ನಿಂಬೆ ಸಂಸ್ಕರಣೆಗಾಗಿ ವಿಶಾಲವಾದ 'ಕೃಷಿ-ಕೈಗಾರಿಕಾ ಕಾರಿಡಾರ್'ಗಳನ್ನು ಸ್ಥಾಪಿಸಬೇಕು. ಇದು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ತೋಟಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ನಿಯತಕಾಲಿಕ ಪರಿಶೀಲನಾ ಸಭೆಗಳನ್ನು ನಡೆಸುವ ಮೂಲಕ ಅಂತರ-ಇಲಾಖಾ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಬೇಕು ಎಂದು ವರದಿ ಹೇಳಿದೆ. 

ವಿಶೇಷ ನೋಡಲ್ ಏಜೆನ್ಸಿ 

ಮಂಡಳಿಯನ್ನು ಕೇವಲ ಆಡಳಿತಾತ್ಮಕ ಘಟಕವಾಗಿ ನೋಡದೆ, ನಿಂಬೆ ಆಧಾರಿತ ಕೈಗಾರಿಕೆ ಮತ್ತು ರಫ್ತು ಉತ್ತೇಜಿಸಲು "ವಿಶೇಷ ನೋಡಲ್ ಏಜೆನ್ಸಿ"ಯಾಗಿ ಬಲಪಡಿಸಬೇಕು. ತೋಟಗಾರಿಕೆ ಇಲಾಖೆಯ ಇತರ ಘಟಕಗಳ ಕಾರ್ಯಗಳೊಂದಿಗೆ ಪುನರಾವರ್ತನೆಯಾಗದಂತೆ ಸ್ಪಷ್ಟ ಕಾರ್ಯವ್ಯಾಪ್ತಿಯನ್ನು ನಿಗದಿಪಡಿಸಬೇಕು. ಆಡಳಿತಾತ್ಮಕ ವಿಸ್ತರಣೆಗಿಂತ ತಾಂತ್ರಿಕ ಪರಿಣತಿಗೆ ಒತ್ತು ನೀಡಬೇಕು. ತೋಟಗಾರಿಕಾ ತಜ್ಞರು, ಕೊಯ್ಲೋತ್ತರ ತಂತ್ರಜ್ಞರು ಮತ್ತು ಮಾರುಕಟ್ಟೆ ತಜ್ಞರ ತಂಡವನ್ನು ಗುತ್ತಿಗೆ ಅಥವಾ ನಿಯೋಜನೆ ಆಧಾರದ ಮೇಲೆ ರಚಿಸಿಕೊಳ್ಳಬೇಕು. ಮಂಡಳಿಯು ಒಂದು 'ರಾಜ್ಯ ಸಂಪನ್ಮೂಲ ಕೇಂದ್ರ'ವಾಗಿ ಕಾರ್ಯನಿರ್ವಹಿಸಬೇಕು. ವಿಜಯಪುರದಲ್ಲಿ ಆರ್‌ಕೆವಿವೈ-ರಫ್ತಾರ್ ಅಡಿಯಲ್ಲಿ ಮಂಜೂರಾದ ಸಂಸ್ಕರಣೆ, ಶ್ರೇಣೀಕರಣ ಮತ್ತು ಪ್ಯಾಕೇಜಿಂಗ್ ಘಟಕಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಬೇಕು.

ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ಆಯೋಗದ ಅಧ್ಯಕ್ಷ ಆರ್‌.ವಿ.ದೇಶಪಾಂಡೆ, ನಿಂಬೆ ಬೆಳೆಗಾರರ ಹಿತರಕ್ಷಣೆ, ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜನ ಮಾಡುವ ಕುರಿತು ಆಯೋಗವು ಶಿಫಾರಸ್ಸು ಮಾಡಿದೆ. ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿಯು ವಿಜಯಪುರ ಭಾಗದ ರೈತರಿಗೆ ಒಂದು ಆಶಾಕಿರಣವಾಗಿದೆ. ಆರ್ಥಿಕವಾಗಿ ಸಬಲೀಕರಣವಾದರೆ ಆ ಭಾಗದ ರೈತರ ಆರ್ಥಿಕ ಚಿತ್ರಣ ಬದಲಾಗುವ ಸಾಧ್ಯತೆಯಿದೆ. ಆದರೆ, ಮಂಡಳಿಯು ಅನುದಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವತಂತ್ರ ಆರ್ಥಿಕ ಶಕ್ತಿಯಾಗಿ ಬೆಳೆಯುವ ಅವಶ್ಯಕತೆಯಿದೆ ಎಂದು ಹೇಳಿದರು. 

ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿಯು ಉತ್ತಮ ಧ್ಯೇಯೋದ್ದೇಶಗಳನ್ನು ಹೊಂದಿದ್ದರೂ, ಪ್ರಸ್ತುತ ಅದು ರಚನಾತ್ಮಕ ಮತ್ತು ಆರ್ಥಿಕ ಸವಾಲುಗಳ ಸುಳಿಯಲ್ಲಿದೆ. ಕೇವಲ ಸರ್ಕಾರಿ ಅನುದಾನವನ್ನು ನಂಬಿ ಕುಳಿತುಕೊಳ್ಳದೆ, ತಾಂತ್ರಿಕವಾಗಿ ಸಶಕ್ತಗೊಂಡು, ಸಂಸ್ಕರಣಾ ಘಟಕಗಳನ್ನು ಪೂರ್ಣಗೊಳಿಸಿ ವಾಣಿಜ್ಯ ಲಾಭಗಳಿಸುವ ಮೂಲಕ ರೈತರಿಗೆ ನೆರವಾಗಬೇಕಿದೆ. ಆಯೋಗದ ಶಿಫಾರಸಿನಂತೆ ಇದನ್ನು "ತಾಂತ್ರಿಕ ಮತ್ತು ಮಾರುಕಟ್ಟೆ ಕೇಂದ್ರಿತ" ಸಂಸ್ಥೆಯಾಗಿ ಪರಿವರ್ತಿಸುವುದು ತುರ್ತು ಅಗತ್ಯವಾಗಿದೆ.

'ತಾಂತ್ರಿಕ ಉನ್ನತೀಕರಣ', 'ಆರ್ಥಿಕ ಸ್ವಾವಲಂಬನೆ' ಮತ್ತು 'ಬ್ರ್ಯಾಂಡಿಂಗ್' ಎಂಬ ತ್ರಿಮಂತ್ರಗಳ ಮೂಲಕ ಮಂಡಳಿಯನ್ನು ಪುನಶ್ಚೇತನಗೊಳಿಸಿದರೆ, ಅದು  ಉತ್ತರ ಕರ್ನಾಟಕದ ರೈತರ ಆರ್ಥಿಕ ಸ್ಥಿತಿಯನ್ನು ಆಮೂಲಾಗ್ರವಾಗಿ ಬದಲಾಯಿಸಬಹುದಾಗಿದೆ. 

Tags:    

Similar News