25 ಲಕ್ಷ ಅನರ್ಹ ಪಡಿತರ ಚೀಟಿ ರದ್ದತಿಗೆ ಆಡಳಿತ ಸುಧಾರಣಾ ಆಯೋಗ ಶಿಫಾರಸು
x

25 ಲಕ್ಷ ಅನರ್ಹ ಪಡಿತರ ಚೀಟಿ ರದ್ದತಿಗೆ ಆಡಳಿತ ಸುಧಾರಣಾ ಆಯೋಗ ಶಿಫಾರಸು

ವಾರ್ಷಿಕ ಆದಾಯವು 1.2 ಲಕ್ಷ ರೂ.ಗಳಿಗಿಂತ ಹೆಚ್ಚಿರುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಅಥವಾ ಅದಕ್ಕಿಂತ ಹೆಚ್ಚಿನ ಭೂಮಿ ಇಲ್ಲವೇ 1 ಸಾವಿರ ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವವರನ್ನು ಪಡಿತರ ವ್ಯವಸ್ಥೆಯಿಂದ ಕೈಬಿಡಬೇಕು ಎಂಬ ಮಹತ್ವದ ಶಿಫಾರಸು ಮಾಡಿದೆ.


ತೆರಿಗೆ ಪಾವತಿದಾರರನ್ನು ಪಡಿತರ ವ್ಯವಸ್ಥೆಯಿಂದ ಹೊರಗಿಡಬೇಕೆಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ವಾರ್ಷಿಕ ಆದಾಯವು 1.2 ಲಕ್ಷ ರೂ.ಗಳಿಗಿಂತ ಹೆಚ್ಚಿರುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಅಥವಾ ಅದಕ್ಕಿಂತ ಹೆಚ್ಚಿನ ಭೂಮಿ ಇಲ್ಲವೇ 1 ಸಾವಿರ ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವವರನ್ನು ಪಡಿತರ ವ್ಯವಸ್ಥೆಯಿಂದ ಕೈಬಿಡಬೇಕು ಎಂಬ ಮಹತ್ವದ ಶಿಫಾರಸು ಮಾಡಿದೆ.

ಶಾಸಕ ಆರ್‌.ವಿ.ದೇಶಪಾಂಡೆ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ತನ್ನ ಎಂಟನೇ ವರದಿಯಲ್ಲಿ ಈ ಶಿಫಾರಸುಗಳನ್ನು ಮಾಡಿದೆ.

ಅನರ್ಹರ ಕೈಗೆ ಬಿಪಿಎಲ್‌ ಕಾರ್ಡ್‌ ಸಿಗುವ ಮೂಲಕ ಸಾರ್ವಜನಿಕ ಪಡಿತರ ವ್ಯವಸ್ಥೆಯ ಆಶಯ ಈಡೇರದಂತಾಗಿದೆ. ಜಿಎಸ್‌ಟಿ, ಇಪಿಎಫ್‌, ಆದಾಯ ತೆರಿಗೆ ಮಾಹಿತಿಯನ್ನು ಕುಟುಂಬದ ದತ್ತಾಂಶದೊಂದಿಗೆ ಪರಿಶೀಲಿಸಿ, ಅನರ್ಹರನ್ನು ಪಡಿತರ ವಿತರಣಾ ವ್ಯವಸ್ಥೆಯಿಂದ ಕೈ ಬಿಡಬೇಕು ಎಂದು ಹೇಳಿದೆ.

ರಾಜ್ಯದಲ್ಲಿ 4.46 ಕೋಟಿ ರೇಷನ್ ಕಾರ್ಡ್‌ಗಳಿವೆ. ಇವುಗಳಲ್ಲಿ 46 ಲಕ್ಷ ಹೆಚ್ಚುವರಿ ಕಾರ್ಡ್‌ಗಳಿದ್ದರೆ, 25 ಲಕ್ಷ ಕಾರ್ಡ್‌ಗಳನ್ನು ಅನರ್ಹರು ಬಳಸುತ್ತಿದ್ದಾರೆ. ಅನರ್ಹರ ಬಳಿ ಇರುವ ಕಾರ್ಡ್‌ಗಳನ್ನು ಹಿಂಪಡೆಯಬೇಕು. ತಿಂಗಳಿಗೆ 200 ಯೂನಿಟ್ ಮೀರಿ ವಿದ್ಯುತ್‌ ಬಳಸುವವರರನ್ನೂ ಪಡಿತರ ವ್ಯವಸ್ಥೆಯಿಂದ ಅನರ್ಹಗೊಳಿಸಬೇಕು. ಹೊಸ ಕಾರ್ಡ್‌ ವಿತರಣೆಗೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಬೇಕು. ಬಿಲ್ ಕಲೆಕ್ಟರ್‌ಗಿಂತ ಮೇಲ್ಪಟ್ಟ, ಎಸ್‌ಸಿ/ಎಸ್‌ಟಿ ವರ್ಗದ ಒಬ್ಬರು ಮಹಿಳಾ ಪಡಿತರದಾರರು ಹಾಗೂ 6 ಮಂದಿ ಒಬಿಸಿ ಮಹಿಳೆಯರನ್ನು ಸಮಿತಿಗೆ ನೇಮಿಸಬೇಕು ಎಂದು ಆಯೋಗ ಹೇಳಿದೆ.

ಸರ್ಕಾರದ ಆಡಳಿತ ಯಂತ್ರ ಸುಗಮವಾಗಿ ನಡೆಯಲು ಅಗತ್ಯ ಸಿಬ್ಬಂದಿಯ ಅವಶ್ಯಕತೆ ಇದೆ. ಕೆಲ ಇಲಾಖೆಗಳಲ್ಲಿ ಕಡಿಮೆ ಸಿಬ್ಬಂದಿ ಇದ್ದರೆ, ಮತ್ತೆ ಕೆಲ ಇಲಾಖೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಎಲ್ಲ ಇಲಾಖೆಗಳಲ್ಲಿರುವ ಬಿ, ಸಿ ಮತ್ತು ಡಿ ದರ್ಜೆಯ ನೌಕರರನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಿ, ವರ್ಗಾವಣೆ ಮಾಡಬೇಕು. ಆದ್ಯತೆ ಮೇರೆಗೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಎಂದು ಶಿಫಾರಸಿನಲ್ಲಿ ತಿಳಿಸಿದೆ.

ದೇವಾಲಯ ಕಾರ್ಯಪಡೆ ರಚನೆ

ದೇವಸ್ಥಾನದ ದೈನಂದಿನ ಆಡಳಿತ, ಹಣಕಾಸು ನಿರ್ವಹಣೆ, ದೇವಸ್ಥಾನದ ಚಟುವಟಿಕೆಗಳಲ್ಲಿ ಸಮನ್ವಯತೆ ಕಾಯ್ದುಕೊಂಡು ಮೇಲ್ವಿಚಾರಣೆ ನಡೆಸಲು ಕಾರ್ಯಪಡೆ ರಚಿಸಬೇಕು ಎಂದು ಮುಜರಾಯಿ ಇಲಾಖೆಗೆ ಶಿಫಾರಸು ಮಾಡಿದೆ. ಅರ್ಚಕರು ಸೇರಿ ಮುಜರಾತಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ನಿವೃತ್ತಿ ವಯಸ್ಸನ್ನು 65 ವರ್ಷದಿಂದ 60 ವರ್ಷಕ್ಕೆ ಇಳಿಸಬೇಕು ಹೇಳಿದೆ.

ನಗರಾಭಿವೃದ್ಧಿ ಪ್ರಾಧಿಕಾರಗಳು ನಿಗದಿತ ಅವಧಿ ಮುಗಿದರೂ ಅಂತಿಮ ಆವೃತ್ತಿಯ ಮಾಸ್ಟರ್‌ ಪ್ಲಾನ್‌ ಸಲ್ಲಿಸಿರುವುದಿಲ್ಲ. ಅಂತಹ ಪ್ರಾಧಿಕಾರಗಳಿಗೆ ದಂಡ ವಿಧಿಸಬೇಕು. ಮುದ್ರಣ ಸೇವೆಗಳಲ್ಲಿ ಗುಣಮಟ್ಟ ಹೆಚ್ಚಿಸಲು ಡಿಜಿಟಲ್‌ ಮುದ್ರಣ, ಸುಧಾರಿತ ತಂತ್ರಜ್ಞಾನ ಬಳಸಬೇಕು. ವಿಧಾನಸೌಧ, ವಿಕಾಸಸೌಧ ಅಥವಾ ಬಹುಮಹಡಿ ಕಟ್ಟಡದ ಬಳಿ ಸರ್ಕಾರಿ ಕೇಂದ್ರ ಲೇಖನ ಸಾಮಗ್ರಿ ಮಳಿಗೆ ಸ್ಥಾಪಿಸಬೇಕು.

ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಇಎ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳು ಬೆಂಗಳೂರು ಹೊರತುಪಡಿಸಿ ಧಾರವಾಡದಲ್ಲೂ ನಡೆಸಲು ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿ ದತ್ತಾಂಶವನ್ನು ಜನನ ಮತ್ತು ಮರಣ ನೋಂದಣಿ ತಂತ್ರಾಂಶದೊಂದಿಗೆ (ಇ-ಜನ್ಮ) ಸಂಯೋಜಿಸಬೇಕು. ಇದರಿಂದ ಮೃತ ಸದಸ್ಯರ ಹೆಸರು ರದ್ದು ಮಾಡಲು ಅನುಕೂಲವಾಗಲಿದೆ ಎಂದು ಆಯೋಗ ಶಿಫಾರಸಿನಲ್ಲಿ ತಿಳಿಸಿದೆ.

ಉನ್ನತ ವ್ಯಾಸಂಗಕ್ಕೆ ಪ್ರವೇಶ ಅಥವಾ ಬಡ್ತಿಗಾಗಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಆದಾಯ ಅಥವಾ ಜಾತಿ ಪ್ರಮಾಣ ಪತ್ರಗಳ ಹಾರ್ಡ್‌ ಕಾಪಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸೂಚಿಸಿ ಎಲ್ಲ ಇಲಾಖೆಗಳು, ವಿವಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಬೇಕು. ಜಾತಿ, ಹುಟ್ಟಿದ ದಿನಾಂಕ, ವಿಳಾಸ ಮತ್ತು ಇತರೆ ಮಾಹಿತಿಯನ್ನು ಸಂಬಂಧಪಟ್ಟ ಡೇಟಾಬೇಸ್‌ಗಳಿಂದ ನೇರವಾಗಿ ಪಡೆಯುವಂತೆ ಆದಾಯ ಪ್ರಮಾಣಪತ್ರ ಡೇಟಾಬೇಸ್‌ಗೆ ಲಿಂಕ್‌ ನೀಡಬೇಕು. ಇಡೀ ಕುಟುಂಬಕ್ಕೆ ಏಕೀಕೃತ ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ಆಡಳಿತ ಸುಧಾರಣಾ ಆಯೋಗ ಹೇಳಿದೆ.

Read More
Next Story