ವಿಧಾನಸಭೆಯಲ್ಲಿ ಭೂ ಕಬಳಿಕೆ ಸಮರ: ಅಶೋಕ್ ಆರೋಪಕ್ಕೆ ತೊಡೆತಟ್ಟಿದ ಕೃಷ್ಣ ಬೈರೇಗೌಡ

ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಭೂ ಕಬಳಿಕೆಯ ಆರೋಪವನ್ನು ಮಂಡಿಸಿದರು ಮತ್ತು ತಕ್ಷಣ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

Update: 2025-12-18 07:58 GMT

 ಕೃಷ್ಣ ಬೈರೇಗೌಡ

Click the Play button to listen to article

ವಿಧಾನಸಭೆಯ ಕಲಾಪದಲ್ಲಿ ಇಂದು ಭೂ ಕಬಳಿಕೆ ಆರೋಪದ ಕಿಡಿ ಹೊತ್ತಿಕೊಂಡಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಭೂ ಕಬಳಿಕೆ ಆರೋಪ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ನೀಡಲೇಬೇಕೆಂದು ಪಟ್ಟು ಹಿಡಿದರು. ಇದರಿಂದ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಅಶೋಕ್ ಅವರ ಆರೋಪಕ್ಕೆ ಆಕ್ರೋಶದ ಪ್ರತ್ಯುತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ, ತನಿಖೆ ಅಥವಾ ಚರ್ಚೆಗೆ ತಾವು ಹೆದರುವುದಿಲ್ಲ ಎಂದು ಎದೆಯುಬ್ಬಿಸಿ ನಿಂತರು. "ನಿಯಮಾವಳಿಗಳ ಪ್ರಕಾರ ಸದನದ ಸದಸ್ಯನೊಬ್ಬನ ವಿರುದ್ಧ ಆರೋಪ ಮಾಡುವುದಿದ್ದರೆ, ಒಂದು ವಾರ ಮುಂಚಿತವಾಗಿಯೇ ನೋಟಿಸ್ ನೀಡಬೇಕು. ಯಾರ ವಿರುದ್ಧ ಆರೋಪ ಮಾಡಲಾಗುತ್ತಿದೆಯೋ ಅವರಿಗೆ ಮತ್ತು ಸಭಾಧ್ಯಕ್ಷರಿಗೆ ಮಾಹಿತಿ ನೀಡಬೇಕು. ಆದರೆ, ಅಶೋಕ್ ಅವರು ನನಗೆ ಯಾವುದೇ ನೋಟಿಸ್ ನೀಡಿಲ್ಲ. ಆದರೂ ಪರವಾಗಿಲ್ಲ, ನಿಯಮದ ಪ್ರಕಾರ ನನಗೆ ಸಿಗಬೇಕಾದ ಹಕ್ಕನ್ನು (Notice Period Privilege) ನಾನೇ ಬಿಟ್ಟುಕೊಡುತ್ತೇನೆ. ಅವರು ಈಗಲೇ ಚರ್ಚೆ ಮಾಡಲಿ, ನಾನು ಉತ್ತರ ಕೊಡಲು ಸಿದ್ಧನಿದ್ದೇನೆ," ಎಂದು ಸಚಿವರು ಸವಾಲು ಹಾಕಿದರು.

ನಿಯಮಾವಳಿ ಮುಂದಿಟ್ಟ ಸ್ಪೀಕರ್​

ಸಚಿವರೇ ಚರ್ಚೆಗೆ ಸಿದ್ಧರಿದ್ದರೂ, ಸಭಾಧ್ಯಕ್ಷ ಯು.ಟಿ. ಖಾದರ್ ಅವರು ನಿಯಮಾವಳಿಗಳನ್ನು ಮುಂದಿಟ್ಟು ಚರ್ಚೆಗೆ ತಕ್ಷಣದ ಅನುಮತಿ ನಿರಾಕರಿಸಿದರು. "ನೀವು ಆರೋಪ ಮಾಡಲು ಸಿದ್ಧರಿರಬಹುದು, ಸಚಿವರು ಉತ್ತರ ಕೊಡಲು ಸಿದ್ಧರಿರಬಹುದು. ಆದರೆ, ಪೀಠದಿಂದ ನಾನು ಸಮಯ ಕೊಡಲು ಸಿದ್ಧನಿಲ್ಲ. ಇದು ಸದನದ ನಿಯಮಾವಳಿ ಪ್ರಕಾರ ಇಲ್ಲ. ಈಗ ಸರ್ಕಾರದ ಮಸೂದೆಗಳ ಮಂಡನೆ ಮತ್ತು ಅಂಗೀಕಾರದ ಕೆಲಸ ನಡೆಯಬೇಕಿದೆ. ಬಿಲ್ ಪಾಸ್ ಆದ ಮೇಲೆ ಈ ವಿಷಯವನ್ನು ಪರಿಶೀಲಿಸೋಣ," ಎಂದು ಸ್ಪೀಕರ್ ಖಡಕ್ ಆಗಿ ಹೇಳಿದರು.

ಕೃಷ್ಣ ಬೈರೇಗೌಡ ಅವರು ಚರ್ಚೆಗೆ ಮುಕ್ತ ಆಹ್ವಾನ ನೀಡಿದರೂ, ಸ್ಪೀಕರ್ ಅವರ 'ರೂಲ್ಸ್' ಅಸ್ತ್ರದಿಂದಾಗಿ ಭೂ ಕಬಳಿಕೆ ಆರೋಪದ ಚರ್ಚೆ ಸದ್ಯಕ್ಕೆ ಮುಂದೂಡಲ್ಪಟ್ಟಿದೆ. ಈ ಬೆಳವಣಿಗೆಯಿಂದಾಗಿ ಸದನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಕಾವು ಜೋರಾಗಿತ್ತು.

Tags:    

Similar News