ಭೂ ಕಬಳಿಕೆ ಆರೋಪ| ಕೃಷ್ಣ ಬೈರೇಗೌಡ ರಾಜೀನಾಮೆಗೆ ಹೆಚ್ಚಿದ ಒತ್ತಡ ; ಶೂನ್ಯ ವೇಳೆಯಲ್ಲಿ ಜೋರು ಚರ್ಚೆ ಸಾಧ್ಯತೆ
ವಿಧಾನಸಭೆ ಅಧಿವೇಶನದ ಹೊರಗೆ ಕಂದಾಯ ಸಚಿವರ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಯಾರಿ ನಡೆಸಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ʼಕ್ಲೀನ್ ಹ್ಯಾಂಡ್ʼ ಎಂದೇ ಕರೆಸಿಕೊಂಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಕೇಳಿ ಬಂದಿರುವ ತೀವ್ರ ಗಂಭೀರ ಸ್ವರೂಪದ ಭೂ ಕಬಳಿಕೆ ಆರೋಪವು ತೀವ್ರ ರಾಜಕೀಯ ಕೋಲಾಹಲ ಸೃಷ್ಟಿಸಿದೆ.
ಬಿಜೆಪಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾಡಿರುವ ಆರೋಪದ ಹಿನ್ನೆಲೆ ಸಚಿವರ ರಾಜೀನಾಮೆಗೆ ಒತ್ತಡವೂ ಹೆಚ್ಚುತ್ತಿದೆ. ಸಚಿವರ ವಿರುದ್ಧ ಭೂ ಕಬಳಿಕೆ ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ತೀರ್ಮಾನಿಸಿರುವ ಬಿಜೆಪಿ ಸದಸ್ಯರು, ಕಲಾಪದಲ್ಲಿ ಚರ್ಚೆಗೆ ಪಟ್ಟು ಹಿಡಿದಿದ್ದಾರೆ.
ವಿಧಾನಸಭೆ ಅಧಿವೇಶನದ ಹೊರಗೆ ಕಂದಾಯ ಸಚಿವರ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಯಾರಿ ನಡೆಸಿದೆ. ಈ ಮಧ್ಯೆ, ಬಿಜೆಪಿ ಕಾರ್ಯಕರ್ತರು ದಾಖಲೆ ಕಳವು ಸಾಧ್ಯತೆ ಹಿನ್ನೆಲೆಯಲ್ಲಿ ಕೋಲಾರ ತಾಲೂಕು ಕಚೇರಿಯಲ್ಲಿ ಬುಧವಾರ ಇಡೀ ರಾತ್ರಿ ಕಾವಲು ಕಾಯ್ದ ಪ್ರಸಂಗ ನಡೆದಿದೆ.
ಬಿಜೆಪಿ ಸದಸ್ಯರ ಆರೋಪ ನಿರಾಕರಿಸಿರುವ ಕಂದಾಯ ಸಚಿವರು, ತಮ್ಮಿಂದ ಯಾವುದೇ ಭೂ ಕಬಳಿಕೆ ಆಗಿಲ್ಲ. ತಮ್ಮ ವಿರುದ್ಧ ಯಾವುದೇ ಸ್ವತಂತ್ರ ತನಿಖೆ ಸಂಸ್ಥೆಗಳಿಂದಾದರೂ ತನಿಖೆ ನಡೆಸಲಿ, ಅಧಿವೇಶನದಲ್ಲೂ ಚರ್ಚಿಸಿದರೂ ಅದಕ್ಕೆ ಉತ್ತರ ನೀಡಲು ಸಿದ್ಧ ಎಂದು ಹೇಳುವ ಮೂಲಕ ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದ್ದಾರೆ.
ಶೂನ್ಯ ವೇಳೆಯಲ್ಲಿ ಕಂದಾಯ ಸಚಿವರ ವಿರುದ್ಧದ ಭೂ ಕಬಳಿಕೆ ಆರೋಪ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ವಿಧಾನಸಭಾಧ್ಯಕ್ಷರನ್ನು ಒತ್ತಾಯಿಸಿದ್ದು, ಮಸೂದೆಗಳ ಮಂಡನೆ ಪೂರ್ಣವಾದ ಬಳಿಕ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವರ ವಿರುದ್ಧ ಕೇಳಿ ಬಂದಿರುವ ವೈಯಕ್ತಿಕ ಭೂ ಕಬಳಿಕೆ ಆರೋಪವು ಆಡಳಿತ ಹಾಗೂ ಪ್ರತಿಪಕ್ಷ ಮಧ್ಯೆ ತೀವ್ರ ಗದ್ದಲ ಸೃಷ್ಟಿಸುವ ಸಾಧ್ಯತೆ ಇದೆ.
ತಾಲೂಕು ಕಚೇರಿಗೆ ಭದ್ರತೆ ಒದಗಿಸಿದ ಬಿಜೆಪಿ
ಕಂದಾಯ ಸಚಿವರ ವಿರುದ್ಧ ಭೂ ಕಬಳಿಕೆಯ ಗುರುತರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೋಲಾರ ತಾಲೂಕು ಕಚೇರಿಗೆ ಬಿಜೆಪಿ ಕಾರ್ಯಕರ್ತರು ಇಡೀ ರಾತ್ರಿ ಕಾವಲು ಕುಳಿತ ಘಟನೆ ನಡೆದಿದೆ.
ಕೋಲಾರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿಯ ಮುಂದೆ ಜಮಾಯಿಸಿ ದಾಖಲೆ ರಕ್ಷಿಸುವ ಉದ್ದೇಶದಿಂದ ಇಡೀ ರಾತ್ರಿ ಕಾವಲು ಕಾದರು. ತನಿಖೆ ನಡೆಯುವವರೆಗೆ ಯಾವುದೇ ದಾಖಲೆ ತಿದ್ದುವ ಅಥವಾ ಪ್ರಭಾವ ಬಳಸಿ ಕಡತಗಳನ್ನು ತೆಗೆದುಕೊಂಡು ಹೋಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿಗೆ ಭದ್ರತೆ ಒದಗಿಸಿದರು.
ಏನಿದು ಭೂ ಕಬಳಿಕೆ ಆರೋಪ?
ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದರು.
ಕೃಷ್ಣ ಬೈರೇಗೌಡ ಅವರು ತಮ್ಮ ಹುಟ್ಟೂರು ಗರುಡಪಾಳ್ಯದಲ್ಲಿ ಸರ್ಕಾರಿ ಖರಾಬು ಜಮೀನು ಕಬಳಿಸಿದ್ದಾರೆ. ಸರ್ವೆ ನಂಬರ್ 46 ಮತ್ತು 47ರಲ್ಲಿ ಒಟ್ಟು 21 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗಿದೆ ಎಂದು ಆರೋಪಿಸಿದ್ದರು. ಆದರೆ, ಈ ಆರೋಪವನ್ನು ನಿರಾಕರಿಸಿದ್ದ ಕೃಷ್ಣ ಬೈರೇಗೌಡ ಅವರು, ಗರುಡನಪಾಳ್ಯದ ಭೂಮಿ ನನ್ನ ತಾತನವರಿಂದ ಬಂದ ಪಿತ್ರಾರ್ಜಿತ ಆಸ್ತಿ. ನಮ್ಮ ತಂದೆಯ ಮೂಲಕ ಭಾಗವಾಗಿ ಬಂದಿದೆ. ಅದನ್ನು ಯಾವ ಮೂಲದಿಂದಲಾದರೂ ಪರಿಶೀಲಿಸಿಕೊಳ್ಳಲಿ. ಯಾವ ಕಾಲದಲ್ಲಿ ಏನೇನಾಗಿದೆ ಎಂಬುದನ್ನು ಪರೀಕ್ಷಿಸಲಿ ಎಂದು ಹೇಳಿದ್ದರು.
ನನ್ನ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಲಿ, ಲೋಕಾಯುಕ್ತಕ್ಕೆ ನ್ಯಾಯಾಲಯಕ್ಕೆ ದೂರು ನೀಡಿ ತನಿಖೆ ಮಾಡಿಸಲಿ, ಈ ವಿಚಾರದಲ್ಲಿ ನನ್ನ ತಪ್ಪಿದೆ ಎಂದು ಸಾಬೀತಾದರೆ ನಾನು ತಲೆಬಾಗುತ್ತೇನೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕೆಸರೆರಚಾಟ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ಆರೋಪದ ಚರ್ಚೆಗೆ ಸಿದ್ಧ
ಸದನದ ಸದಸ್ಯನಾಗಿ ನನ್ನ ಹಕ್ಕು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ನಾನು ಚರ್ಚೆಗೆ ಸಿದ್ದ ಎಂದು ಸಚಿವ ಕೃಷ್ಣ ಬೈರೇಗೌಡ ಬಹಿರಂಗ ಸವಾಲು ಹಾಕಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾಡಿರುವ ಸ್ಮಶಾನಭೂಮಿ ಒತ್ತುವರಿ ಆರೋಪದ ಬಗ್ಗೆ ಶೂನ್ಯ ವೇಳೆಯಲ್ಲಿ ಚರ್ಚಿಸಲು ಅವಕಾಶ ನೀಡುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ. ಸದನದ ಸದಸ್ಯರ ಬಗ್ಗೆ ಯಾವುದೇ ವೈಯಕ್ತಿಕ ವಿಚಾರ ಪ್ರಸ್ತಾಪ ಮಾಡಬೇಕಿದ್ದರೆ ಅದಕ್ಕೊಂದು ನಿಯಮಾವಳಿ ಇದೆ. ಕನಿಷ್ಠ ವಾರಕ್ಕೂ ಮುಂಚೆ ಸದಸ್ಯರಿಗೆ ನೋಟಿಸ್ ನೀಡಬೇಕು. ಆದರೆ, ಈ ವಿಚಾರದಲ್ಲಿ ದಿಢೀರನೇ ಆರೋಪ ಮಾಡಿ ಚರ್ಚೆಗೆ ಅವಕಾಶ ಕೇಳುತ್ತಿದ್ದಾರೆ. ಆದರೂ, ನಾನು ಸದನದ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಮೇಲಿನ ಆರೋಪದ ಬಗ್ಗೆ ಸದನದಲ್ಲಿ ಚರ್ಚಿಸಲು ಹಾಗೂ ಉತ್ತರ ನೀಡಲು ಅಭ್ಯಂತರ ಇಲ್ಲ. ಈ ವಿಚಾರ ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
ಮಧ್ಯ ಪ್ರವೇಶಿಸಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಲಾಪದಲ್ಲಿ ಮಂಡನೆಗೆ ಸಾಕಷ್ಟು ವಿಧೇಯಕಗಳು ಬಾಕಿ ಇವೆ. ಇದಾದ ನಂತರ ಚರ್ಚಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಕಂದಾಯ ಸಚಿವರ ವಿರುದ್ಧದ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೋಲಿಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಪ್ರತಿಭಟನಕಾರರನ್ನು ಬಂಧಿಸಲಾಗಿತ್ತು.
ಕಾಂಗ್ರೆಸ್ ಪಕ್ಷದಲ್ಲಿ ಕ್ಲೀನ್ ಹ್ಯಾಂಡ್ ಎಂದು ಬಿಂಬಿಸಿಕೊಂಡಿರುವ ಕೃಷ್ಣ ಬೈರೇಗೌಡ ಅವರ ವಿರುದ್ಧದ ಭೂಕಬಳಿಕೆ ಅಕ್ರಮವು ಮುಡಾ ಹಗರಣಕ್ಕಿಂತ ದೊಡ್ಡ ಭ್ರಷ್ಟಾಚಾರವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು.