ಧರ್ಮಸ್ಥಳ ಪ್ರಕರಣ|ರಾಯಚೂರಿಗೆ ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು

ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಹೊರಗಿಡುವಂತೆ ಪುತ್ತೂರು ಉಪ ವಿಭಾಗದ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಮತ್ತೆ ಗಡಿಪಾರು ಆದೇಶದ ನೋಟಿಸ್‌ ನೀಡಿದ್ದಾರೆ.

Update: 2025-12-18 06:57 GMT

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ದೂರುದಾರ ಚಿನ್ನಯ್ಯ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೊಸದಾಗಿ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಹೊರಗಿಡುವಂತೆ ಪುತ್ತೂರು ಉಪ ವಿಭಾಗದ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಮತ್ತೆ ಗಡಿಪಾರು ಆದೇಶ ಹೊರಡಿಸಿದ್ದಾರೆ.

ಡಿ.7ರಂದು ನೀಡಲಾಗಿದ್ದ ಮೊದಲ ಗಡಿಪಾರು ನೋಟಿಸ್‌ಗೆ ಮಹೇಶ್‌ ಶೆಟ್ಟಿ ತಿಮರೋಡಿ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈ ವೇಳೆ ವಕೀಲರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿತ್ತು. ಅಂತಿಮವಾಗಿ ಪೂರಕ ದಾಖಲೆಗಳು ಹಾಗೂ ಹಾಲಿ ಪ್ರಕರಣಗಳನ್ನು ಪರಿಗಣಿಸಿ ಅಧಿಕಾರಿಗಳು ಹೊಸದಾಗಿ ಗಡಿಪಾರು ಆದೇಶ ಜಾರಿ ಮಾಡಿದ್ದಾರೆ.

ಒಂದು ವರ್ಷದ ಗಡಿಪಾರು ಅವಧಿ

ತಿಮರೋಡಿ ವಿರುದ್ಧದ ಹಾಲಿ ಹಾಗೂ ಹಿಂದಿನ ಪ್ರಕರಣಗಳನ್ನು ಪರಿಗಣಿಸಿ ಹೊಸ ಗಡಿಪಾರು ಆದೇಶ ಹೊರಡಿಸಲಾಗಿದೆ. ಇಂದಿನಿಂದ (ಡಿ.18) 2026ರ ಡಿಸೆಂಬರ್ 17ರವರೆಗೆ ಗಡಿಪಾರು ಆದೇಶ ಮಾನ್ಯವಾಗಿರಲಿದೆ. ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಹೈಕೋರ್ಟ್ ಮಧ್ಯಪ್ರವೇಶದಿಂದ ಹೊಸ ಆದೇಶ

ತಮ್ಮ ವಿರುದ್ಧ ಜಾರಿ ಮಾಡಿದ್ದ ಗಡಿಪಾರು ಆದೇಶಗಳನ್ನು ಪ್ರಶ್ನಿಸಿ ತಿಮರೋಡಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಈ ಹಿಂದಿನ ಗಡಿಪಾರು ಆದೇಶವನ್ನು ರದ್ದುಗೊಳಿಸಿ, ದೋಷ ನಿಗದೀಕರಣ ಮಾಡಿರುವ ಹೊಸ ಆದೇಶ ಹೊರಡಿಸುವಂತೆ ಸೂಚಿಸಿತ್ತು. ಹೈಕೋರ್ಟ್ ಸೂಚನೆ ನಂತರ ನಿಗದಿತ ಕಾನೂನು ಪ್ರಕ್ರಿಯೆ ಅನುಸರಿಸಿ ಉಪವಿಭಾಗಾಧಿಕಾರಿಗಳು ಈಗ ಮರು ಆದೇಶ ಹೊರಡಿಸಿದ್ದಾರೆ.

Tags:    

Similar News