‘ದ್ವೇಷ ಭಾಷಣ’ ವಿಧೇಯಕ: ಪ್ರತಿಪಕ್ಷಗಳ ಗದ್ದಲ ನಡುವೆ ಮಸೂದೆ ಅಂಗೀಕಾರ

ಕರಾವಳಿಯವರು ಬೆಂಕಿ ಹಚ್ಚುವವರು ಎಂಬ ಸಚಿವ ಬೈರತಿ ಸಚಿವರ ಹೇಳಿಕೆ ವಿವಾದದ ಕೇಂದ್ರಬಿಂದುವಾಯಿತು. ಸಚಿವರ ಹೇಳಿಕೆಯು ಕರಾವಳಿ ಭಾಗದ ಬಿಜೆಪಿ ಶಾಸಕರನ್ನು ಕೆರಳಿಸಿತು. ಸದನದಲ್ಲಿ ಗದ್ದಲ, ವಾಕ್ಸಮರ.

Update: 2025-12-18 09:24 GMT

ಸಮಾಜದಲ್ಲಿ ಸೌಹಾರ್ದತೆ ಕಾಪಾಡುವ ಮತ್ತು ದ್ವೇಷದ ಮಾತುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಡಿಸಿದ "ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ವಿಧೇಯಕ"ವು ಸದನದಲ್ಲಿ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ಗದ್ದಲದ ನಡುವೆಯೇ ವಿಧೇಯಕ ಅಂಗೀಕಾರಗೊಂಡಿತು. ವಿಧೇಯಕದ ಚರ್ಚೆಯು ಕೇವಲ ಕಾನೂನಿನ ಚೌಕಟ್ಟಿಗೆ ಸೀಮಿತವಾಗದೆ, ಪ್ರಾದೇಶಿಕ ಅಸ್ಮಿತೆ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಮತ್ತು ಪೊಲೀಸ್ ವ್ಯವಸ್ಥೆಯ ದುರುಪಯೋಗದಂತಹ ಗಂಭೀರ ವಿಷಯಗಳ ಕುರಿತು ಚರ್ಚೆಗೆ ಕಾರಣವಾಯಿತು. 

ಗೃಹ ಸಚಿವ ಜಿ. ಪರಮೇಶ್ವರ್ ಸದನದಲ್ಲಿ ವಿಧೇಯಕವನ್ನು ಅಂಗೀಕರಿಸುವಂತೆ ಮನವಿ ಮಾಡಿ ವಿಧೇಯಕ ಕುರಿತು ಸ್ಪಷ್ಟನೆ ನೀಡಿದರು. ಪ್ರಸ್ತುತ ಸಮಾಜದಲ್ಲಿ ಹೆಚ್ಚುತ್ತಿರುವ ಕೋಮು ದ್ವೇಷ ಮತ್ತು ಪ್ರಚೋದನಾಕಾರಿ ಭಾಷಣಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆಯನ್ನು ಪ್ರತಿಪಾದಿಸಿದರು. ಸಮಾಜಘಾತುಕ ಶಕ್ತಿಗಳು ಧರ್ಮ, ಜಾತಿ ಅಥವಾ ಸಮುದಾಯದ ಹೆಸರಿನಲ್ಲಿ ದ್ವೇಷ ಹರಡುವುದನ್ನು ತಡೆಯುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಸಚಿವ ಸಂತೋಷ್ ಲಾಡ್ ಸಹ ಸರ್ಕಾರದ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡರು. "ದ್ವೇಷ ಹರಡುವವರಿಗೆ, ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುವವರಿಗೆ ಮಾತ್ರ ಈ ಕಾನೂನು ಭಯ ಹುಟ್ಟಿಸಬೇಕು. ಅಮಾಯಕರು ಅಥವಾ ಕಾನೂನು ಪಾಲಿಸುವವರು ಇದಕ್ಕೆ ಹೆದರುವ ಅಗತ್ಯವಿಲ್ಲ" ಎಂದು ಪ್ರತಿಪಾದಿಸಿದರು. ಈ ವೇಳೆ ಪ್ರತಿಪಕ್ಷದವರು ಟೀಕಿಸಿದಾಗ ನೀವು ಪ್ರಚೋದನೆ ಮಾಡದಿದ್ದರೆ ನಿಮಗೇಕೆ ಭಯ? ಎಂದು ಪ್ರಶ್ನಿಸಿದರು.

ಸಚಿವ ಬೈರತಿ ಸುರೇಶ್‌ ಹೇಳಿಕೆ: ಕರಾವಳಿ ಶಾಸಕರ ಕಿಡಿ

ವಿಧೇಯಕದ ಮೇಲಿನ ಚರ್ಚೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆಡಿದ ಒಂದು ಮಾತು ಇಡೀ ಸದನವನ್ನು ರಣರಂಗವನ್ನಾಗಿ ಬದಲಿಸಿತು. ಬಿಜೆಪಿ ಶಾಸಕರ ಆಕ್ಷೇಪಗಳಿಗೆ ಪ್ರತಿಕ್ರಿಯಿಸುವ ಭರದಲ್ಲಿ ಸುರೇಶ್, "ನೀವು ಕರಾವಳಿಯವರು ಬೆಂಕಿ ಹಚ್ಚುವವರು," ಎಂಬ ಹೇಳಿಕೆ ನೀಡಿದ್ದು ವಿವಾದದ ಕೇಂದ್ರಬಿಂದುವಾಯಿತು. ಈ ಹೇಳಿಕೆಯು ಕರಾವಳಿ ಭಾಗದ ಬಿಜೆಪಿ ಶಾಸಕರಾದ ಸುನೀಲ್ ಕುಮಾರ್, ವೇದವ್ಯಾಸ ಕಾಮತ್ ಮತ್ತು ಇತರರನ್ನು ಕೆರಳಿಸಿತು. ಇದನ್ನು ಕೇವಲ ರಾಜಕೀಯ ಟೀಕೆಯಾಗಿ ನೋಡದೆ, ಇಡೀ ಕರಾವಳಿ ಭಾಗದ ಜನತೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಶಾಸಕ ಸುನೀಲ್ ಕುಮಾರ್,  ಸ್ವತಃ ಕರಾವಳಿ ಮೂಲದವರಾದ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಉದ್ದೇಶಿಸಿ, "ನೀವು ಕರಾವಳಿ ಭಾಗದವರಲ್ಲವೇ? ಈ ಮಾತು ನಿಮಗೆ ಅನ್ವಯಿಸುವುದಿಲ್ಲವೇ?" ಎಂದು ಭಾವನಾತ್ಮಕವಾಗಿ ಪ್ರಶ್ನಿಸಿದರು. ಸಚಿವ ಸುರೇಶ್ ಅವರ "ಬೆಂಕಿ ಹಚ್ಚುವವರು" ಎಂಬ ಪದಪ್ರಯೋಗಕ್ಕೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಕರಾವಳಿಯನ್ನು ಕೋಮುಗಲಭೆಯ ತಾಣ ಎಂದು ಬಿಂಬಿಸುವ ಪ್ರಯತ್ನ ಎಂದು ಅವರು ಕಿಡಿಕಾರಿದರು.  ಸಭಾಧ್ಯಕ್ಷ ಯು.ಟಿ. ಖಾದರ್  ಪರಿಸ್ಥಿತಿಯನ್ನು ತಿಳಿಗೊಳಿಸಲು ಸದರಿ ಪದಗಳನ್ನು ಕಡತದಿಂದ ತೆಗೆದುಹಾಕುವುದಾಗಿ ಭರವಸೆ ನೀಡಿದರೂ, ಬಿಜೆಪಿ ಶಾಸಕರು ಸಚಿವರ ಕ್ಷಮೆಯಾಚನೆಗೆ ಪಟ್ಟುಹಿಡಿದು ಬಾವಿಗಿಳಿದು ಪ್ರತಿಭಟಿಸಿದರು.

ಆರ್. ಅಶೋಕ್ ಪ್ರಬಲ ಆಕ್ಷೇಪಗಳು

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಈ ವಿಧೇಯಕವನ್ನು ಕಟುವಾಗಿ ಟೀಕಿಸಿದರು. ಈ ವಿಧೇಯಕವನ್ನು ಅವರು 1975ರ ತುರ್ತು ಪರಿಸ್ಥಿತಿಗೆ ಹೋಲಿಸಿದರು. ತುರ್ತು ಪರಿಸ್ಥಿತಿ ಹೇರಿದ ಪಕ್ಷದಿಂದ ಪ್ರಜಾಪ್ರಭುತ್ವದ ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಈ ಕಾಯ್ದೆಯು ಪೊಲೀಸರಿಗೆ ಅನಿಯಮಿತ ಅಧಿಕಾರವನ್ನು ನೀಡುತ್ತದೆ. ಇದರಿಂದ ಪೊಲೀಸರು 'ಹಿಟ್ಲರ್'ಗಳಂತೆ ವರ್ತಿಸುವ ಸಾಧ್ಯತೆಯಿದೆ. ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಪೊಲೀಸರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು. 

ಅಶೋಕ್ ಅವರು ಎತ್ತಿದ ಅತ್ಯಂತ ಗಂಭೀರವಾದ ಅಂಶವೆಂದರೆ ಪತ್ರಿಕಾ ಸ್ವಾತಂತ್ರ್ಯ. ಪತ್ರಕರ್ತರು ಭ್ರಷ್ಟಾಚಾರದ ವಿರುದ್ಧ ಅಥವಾ ಸರ್ಕಾರದ ವಿರುದ್ಧ ವರದಿ ಮಾಡಿದರೆ, ಅದನ್ನು 'ದ್ವೇಷ ಭಾಷಣ' ಎಂದು ಬಿಂಬಿಸಿ ಜೈಲಿಗೆ ಕಳುಹಿಸುವ ಅಪಾಯವಿದೆ. "ನೋ ಬೇಲ್, ಗೋ ಟು ಜೈಲ್" (ಜಾಮೀನು ಇಲ್ಲ, ನೇರ ಜೈಲು) ಎಂಬ ನೀತಿಯು ತನಿಖಾ ಪತ್ರಿಕೋದ್ಯಮವನ್ನು ಕೊಲ್ಲುತ್ತದೆ ಎಂದು ಎಚ್ಚರಿಸಿದರು. ಸಂವಿಧಾನದ 19(a) ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಈ ಮಸೂದೆಯು ಆ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂಬುದು ಬಿಜೆಪಿಯ ಪ್ರಮುಖ ವಾದವಾಗಿತ್ತು.

ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಕಾನೂನುಗಳಿವೆ. ಹೀಗಿರುವಾಗ ರಾಜ್ಯ ಸರ್ಕಾರ ಪ್ರತ್ಯೇಕ ಕಾಯ್ದೆ ತರುವ ಮೂಲಕ ಕೇಂದ್ರದ ಕಾನೂನಿನೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿದೆ ಮತ್ತು ಇದು ಅನಗತ್ಯ ಎಂದು ಅಶೋಕ್ ಪ್ರತಿಪಾದಿಸಿದರು.

ಶಾಸಕ ಸುನೀಲ್ ಕುಮಾರ್, ಯಾವುದೋ ಹಳೆಯ ಧಾರ್ಮಿಕ ಗ್ರಂಥಗಳಲ್ಲಿ ಅಥವಾ ಇತಿಹಾಸದಲ್ಲಿ ಬರುವ ದ್ವೇಷದ ಮಾತುಗಳನ್ನು ಉಲ್ಲೇಖಿಸಿ ಮಾತನಾಡಿದರೆ, ಅದಕ್ಕೂ ಈ ಕಾನೂನು ಅನ್ವಯವಾಗುತ್ತದೆಯೇ?" ಎಂಬ ಪ್ರಶ್ನೆಗೆ, ಗೃಹ ಸಚಿವ ಪರಮೇಶ್ವರ್ "ಹೌದು, ಅದಕ್ಕೂ ಅನ್ವಯವಾಗುತ್ತದೆ," ಎಂದು ಉತ್ತರಿಸಿದರು. ಈ ಉತ್ತರವು ಬಿಜೆಪಿಯ ಆಕ್ರೋಶಕ್ಕೆ ತುಪ್ಪ ಸುರಿಯಿತು. ಇದು ಇತಿಹಾಸ, ಸಾಹಿತ್ಯ ಮತ್ತು ಧಾರ್ಮಿಕ ಚರ್ಚೆಗಳ ಮೇಲೂ ನಿಯಂತ್ರಣ ಹೇರುವ ಪ್ರಯತ್ನ ಎಂದು ಬಿಜೆಪಿ ಶಾಸಕರು ಆರೋಪಿಸಿದರು. "ಆಲೋಚನೆ ಮಾಡದೆ ಕಾನೂನು ತರುತ್ತಿದ್ದೀರಿ, ಇದು ಅಪಾಯಕಾರಿ," ಎಂದು ಸುನೀಲ್ ಕುಮಾರ್  ಆಕ್ರೋಶ ವ್ಯಕ್ತಪಡಿಸಿದರು. 

ಗದ್ದಲದ ನಡುವೆ ವಿಧೇಯಕ ಅಂಗೀಕಾರ ಮತ್ತು ಪ್ರಜಾಪ್ರಭುತ್ವದ ವಿಪರ್ಯಾಸ

ಅಂತಿಮವಾಗಿ, ಸದನದಲ್ಲಿ ತೀವ್ರ ಗದ್ದಲ, ಘೋಷಣೆಗಳು ಮತ್ತು ಪ್ರತಿಭಟನೆಯ ನಡುವೆಯೇ ಸ್ಪೀಕರ್ ಯು.ಟಿ. ಖಾದರ್ ಅವರು ವಿಧೇಯಕವನ್ನು ಮತಕ್ಕೆ ಹಾಕಿದರು. ಧ್ವನಿಮತದ ಮೂಲಕ ವಿಧೇಯಕವು ಅಂಗೀಕಾರವಾಯಿತು. ಈ ಪ್ರಕ್ರಿಯೆಯನ್ನು ವಿರೋಧಿಸಿ ಆರ್. ಅಶೋಕ್ ಅವರು ವಿಧೇಯಕದ ಪ್ರತಿಯನ್ನು ಹರಿದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Tags:    

Similar News