ದ್ವೇಷ ಭಾಷಣ ಮಾಡಿದರೆ ಶಿಕ್ಷೆ ಏನು, ಹೇಗಿವೆ ಮಸೂದೆ ಅಂಶಗಳು?

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಹಗೆತನ, ದ್ವೇಷ, ಕೆಡುಕಿನ ಭಾವನೆ ಮೂಡಿಸಲು ಯತ್ನಿಸಿದರೆ ಕನಿಷ್ಠ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಏಳು ವರ್ಷದವರೆಗೆ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿದೆ.

Update: 2025-12-18 11:21 GMT

ಸಮಾಜದಲ್ಲಿ ಹೆಚ್ಚುತ್ತಿರುವ ಅಸಹನೆ, ಸಾಮಾಜಿಕ ಜಾಲತಾಣಗಳ ದುರ್ಬಳಕೆ, ರಾಜಕೀಯ-ಧಾರ್ಮಿಕ ಉದ್ವಿಗ್ನತೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಂಡನೆ ಮಾಡಿರುವ ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು ಗದ್ದಲದ ನಡುವೆ ಗುರುವಾರ ಅಂಗೀಕರಿಸಲಾಯಿತು.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಹಗೆತನ, ದ್ವೇಷ, ಕೆಡುಕಿನ ಭಾವನೆ ಮೂಡಿಸಲು ಯತ್ನಿಸಿದರೆ ಕನಿಷ್ಠ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಏಳು ವರ್ಷದವರೆಗೆ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿದೆ. ಅಪರಾಧವು ಪುನರಾವರ್ತನೆಯಾದರೆ ಎರಡು ವರ್ಷಗಳಿಗೆ ಕಡಿಮೆ ಇಲ್ಲದಂತೆ ಏಳು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. 

ಮೂಲ ಮಸೂದೆಯಲ್ಲಿ ಪುನರಾವರ್ತಿತ ಅಪರಾಧಕ್ಕೆ ಎರಡು ವರ್ಷಗಳಿಗೆ ಕಡಿಮೆ ಇಲ್ಲದಂತೆ ಹತ್ತು ವರ್ಷಗಳವರೆಗೆ ಶಿಕ್ಷೆ ವಿಧಿಸಲು ಪ್ರಸ್ತಾಪಿಸಲಾಗಿತ್ತು. ವಿಪಕ್ಷ ಸದಸ್ಯರು ಸಲಹೆ ಆಧರಿಸಿ ಗರಿಷ್ಠ ಶಿಕ್ಷೆಯನ್ನು ಏಳು ವರ್ಷಗಳಿಗೆ ಇಳಿಸಲಾಗಿದೆ.

ದ್ವೇಷ ಭಾಷಣ ಮಾಡಿದರೆ ಜಾಮೀನು ಇಲ್ಲ

ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ ಬಿತ್ತುವುದು, ಪ್ರಚಾರ ಮಾಡುವುದಕ್ಕೆ ಮಸೂದೆಯಲ್ಲಿ ನಿರ್ಬಂಧವಿದೆ.  ದ್ವೇಷ ಅಪರಾಧದಿಂದ ಸಂತ್ರಸ್ತರಾದವರಿಗೆ ಪ್ರಾಣ ಅಥವಾ ಮಾನಹಾನಿಯಾದಲ್ಲಿ ಪರಿಹಾರಕ್ಕೂ ನ್ಯಾಯಾಲಯ ಸೂಚಿಸಲಿದೆ. ವಿಶೇಷವೆಂದರೆ ಈ ಅಧಿನಿಯಮದಡಿ ದ್ವೇಷ ಅಪರಾಧವು ಜಾಮೀನು ರಹಿತ ಪ್ರಕರಣವಾಗಿದೆ. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ವಿಚಾರಣೆಗೆ ಒಳಪಡಿಸಬಹುದಾಗಿದೆ.

ದ್ವೇಷ ಹರಡುವಿಕೆಗೆ ಬೀಳಲಿದೆ ಕಡಿವಾಣ

 ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯು ಸಾಮಾಜಿಕ ಸಾಮರಸ್ಯ ಕಾಪಾಡುವ ಜತೆಗೆ ಇನ್ನು ಮುಂದೆ ಸಮಾಜದಲ್ಲಿ ದ್ವೇಷ ಹರಡುವಿಕೆಯನ್ನು ನಿಯಂತ್ರಿಸಲಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಕಾನೂನು ಅನ್ವಯವಾಗಲಿದೆ. ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಪ್ರತಿಯೊಬ್ಬ ವ್ಯಕ್ತಿಯು ವೇದಿಕೆ ಕಾರ್ಯಕ್ರಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವಾಗ ಜಾಗರೂಕತೆ ವಹಿಸುವುದು ಅಗತ್ಯವಾಗಿದೆ. 

ದ್ವೇಷ ಅಪರಾಧವು ವ್ಯಕ್ತಿಯ ಅರಿವಿಗೆ ಬಾರದೇ ನಡೆದಿದ್ದರೆ ಅಥವಾ ಅಪರಾಧ ತಡೆಯಲು ಅಗತ್ಯ ಜಾಗರೂಕತೆ ವಹಿಸಿರುವುದನ್ನು ಸಾಬೀತುಪಡಿಸಿದರೆ ದಂಡನೆಯಿಂದ ವಿನಾಯ್ತಿ ಸಿಗಲಿದೆ. ಮಾಧ್ಯಮದಲ್ಲಿ ಪ್ರಸಾರವಾದ ದ್ವೇಷದ ವಿಷಯವನ್ನು ತೆಗೆದು ಹಾಕುವ ಅಧಿಕಾರ, ಸಂಬಂಧಿತ ಅಧಿಕಾರಿಗಳಿಗೆ ನೀಡಲಾಗಿದೆ. 

ಏನೆಲ್ಲಾ ದ್ವೇಷ ಭಾಷಣ ಆಗಲಿದೆ? 

ಯಾವುದೇ ವ್ಯಕ್ತಿಗೆ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿ ಮಾಡುವುದು, ಪ್ರಚಾರ ಹಾಗೂ ಮಾತುಗಳಿಂದ ತೇಜೋವಧೆ ಮಾಡುವುದು ದ್ವೇಷ ಭಾಷಣವಾಗಲಿದೆ. ಸಾಮರಸ್ಯ, ವ್ಯಕ್ತಿತ್ವ, ಸಮಾಜಕ್ಕೆ ಧಕ್ಕೆ ತರುವ ದತ್ತಾಂಶ ಸಂದೇಶ, ಪಠ್ಯ, ಚಿತ್ರಗಳು, ಧ್ವನಿ ಹಾಗೂ ಸಂಕೇತಗಳನ್ನು ಮಸೂದೆಯಡಿ ನಿರ್ಬಂಧಿಸಲಾಗಿದೆ.

ಕಂಪ್ಯೂಟರ್ ಪ್ರೋಗ್ರಾಂಗಳು, ಸಾಫ್ಟ್‌ವೇರ್‌, ಡಾಟಾ ಬೇಸ್ ಸಂಸ್ಥೆಗಳು ಹಾಗೂ ಮೈಕ್ರೋ ಫಿಲ್ಡ್ ಸೇರಿ ಯಾವುದೇ ಮಾಧ್ಯಮಗಳ ಮೂಲಕ ದ್ವೇಷ ಹರಡುವಂತಿಲ್ಲ. ದ್ವೇಷ ಭಾಷಣ ಕುರಿತ ಅಪರಾಧವು ಈಗಿನ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 153ಎ, ಸೆಕ್ಷನ್ 295ಎ, ಸೆಕ್ಷನ್ 505 ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬಹುದಾಗಿದೆ. 

Tags:    

Similar News