ತಿದ್ದುಪಡಿಯೊಂದಿಗೆ ಸಾಮಾಜಿಕ ಬಹಿಷ್ಕಾರ ತಡೆ ಮಸೂದೆಗೆ ಒಪ್ಪಿಗೆ; ಅನಿಷ್ಟ ಪದ್ಧತಿ ಆಚರಿಸಿದರೆ ದಂಡ, ಶಿಕ್ಷೆ ಖಚಿತ!

ರಾಜ್ಯ ಸರ್ಕಾರ ತಡವಾಗಿಯಾದರೂ ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ ಜಾರಿಗೆ ತಂದಿರುವುದು ಸ್ವಾಗತಾರ್ಹ ಕ್ರಮ ಎಂದು ಬಿಜೆಪಿ ಸದಸ್ಯರು ಹೇಳಿದರು.

Update: 2025-12-18 09:25 GMT

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಗುರುವಾರ 2025ನೇ ಸಾಲಿನ ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧಕ, ನಿಷೇಧ ಮತ್ತು ಪರಿಹಾರ) ವಿಧೇಯಕವನ್ನು ಸರ್ವ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದರು. 

ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪ ಅವರು ಮಸೂದೆ ಮಂಡನೆ ಮಾಡಿದರು. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಮಸೂದೆಯನ್ನು ಸ್ವಾಗತಿಸಿದರು. ಕಾಂಗ್ರೆಸ್‌ ಸದಸ್ಯ ಟಿ.ಬಿ. ಜಯಚಂದ್ರ, ಜೆಡಿಎಸ್‌ ಸದಸ್ಯ ನೇಮಿರಾಜನಾಯ್ಕ್‌  ಸೇರಿ ಹಲವರು ಮಸೂದೆ ದುರ್ಬಳಕೆ ತಡೆಗೂ ಕ್ರಮ ಕೈಗೊಳ್ಳಲು ಸುಮೊಟೊ ಪ್ರಕರಣ ಸೇರಿಸುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪಿಗೆ ನೀಡಿದ ಸಚಿವರು, ಸೂಕ್ತ ತಿದ್ದುಪಡಿಗಳೊಂದಿಗೆ ಮೇಲ್ಮನೆಯಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಭರವಸೆ ನೀಡಿದರು.

ಮಸೂದೆ ಸ್ವಾಗತಿಸಿದ ಬಿಜೆಪಿ

ರಾಜ್ಯ ಸರ್ಕಾರ ತಡವಾಗಿಯಾದರೂ ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ ಜಾರಿಗೆ ತಂದಿರುವುದು ಸ್ವಾಗತಾರ್ಹ ಕ್ರಮ. ಆದರೆ, ಈ ಕಾನೂನಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹೆಚ್ಚು ಅಗತ್ಯ ಎಂದು ಸಲಹೆ ನೀಡಿದರು.

ಸರ್ಕಾರದ ಒಂದು ವರ್ಷ , ಎರಡು ವರ್ಷದ ಸಾಧನೆಗಳನ್ನು ದೊಡ್ಡದಾಗಿ ಪ್ರಚಾರ ಫಲಕ ಅಳವಡಿಸುತ್ತೀರಲ್ಲಾ, ಅದೇ ರೀತಿಯಲ್ಲಿ ಇಂತಹ ಉಪಯುಕ್ತ ಕಾನೂನು ಬಗ್ಗೆ ತಾಲೂಕು, ಗ್ರಾಮ ಮಟ್ಟದಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾತನಾಡಿ, ಬಹಳ ದಿನಗಳ ಬಳಿಕ ಸರ್ಕಾರ ಈ ಕಾನೂನು ತಂದಿರುವುದು ವಿಪರ್ಯಾಸ. ಈ ಮೊದಲೇ ತರಬೇಕಿತ್ತು. ಸಾಮಾಜಿಕ ಬಹಿಷ್ಕಾರ ಎಂಬುದು ಮಾನಸಿಕತೆಯ ಪ್ರಶ್ನೆ. ಎಷ್ಟರ ಮಟ್ಟಿಗೆ ಕಾನೂನಿನ ಮೂಲಕ ನಿಯಂತ್ರಣ ಮಾಡಲಾಗುವುದು ಎಂಬುದು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾನೂನಿನ ಜೊತೆ ಜನರ ಮಾನಸಿಕತೆ ಬದಲಾಗಬೇಕು. ಶಾಲೆಗಳಲ್ಲಿ ಹೊಸ ರೀತಿಯ ಅಸ್ಪೃಶ್ಯತೆ ನೋಡುತ್ತಿದ್ದೇವೆ. ಇದೆಲ್ಲವೂ ಸಾಮಾಜಿಕ ಬಹಿಷ್ಕಾರ ತಡೆ ಕಾನೂನಿನಿಂದ ನಿಲ್ಲಬೇಕು. ರಾಜಕೀಯ ರಂಗದಲ್ಲಿರುವ ನಾವು ಕೂಡ ಅಸ್ಪೃಶ್ಯತೆಗೆ ಮನ್ನಣೆ ನೀಡುವ ರೀತಿ ಮಾತಾಡಬಾರದು. ನಮ್ಮಿಂದಲೇ ಬದಲಾವಣೆ ಆರಂಭವಾಗಬೇಕು ಎಂದು ಹೇಳಿದರು.

ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಈ ದೇಶದಲ್ಲಿ ಎಲ್ಲರು ಸಾಮಾಜಿಕವಾಗಿ ಒಂದಾಗಬೇಕೆಂದು ಆರ್ಎಸ್ಎಸ್ ಕೆಲಸ ಮಾಡುತ್ತಿದೆ. ಈ ಆಶಯಕ್ಕೆ ಪೂರಕವಾಗಿ ಸರ್ಕಾರ ಮಸೂದೆ ತಂದಿರುವುದು ಶ್ಲಾಘನೀಯ ಎಂದರು. ಪೂಂಜಾ ಮಾತಿಗೆ ಸಚಿವರಾದ ಹೆಚ್.ಸಿ.ಮಹಾದೇವಪ್ಪ ಹಾಗೂ ಸಂತೋಷ್ ಲಾಡ್ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ ತಂದಿರುವುದು ಆರ್ಎಸ್ಎಸ್ ಆಶಯದಂತೆ ಅಲ್ಲ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳಿಗೆ ಪೂರಕವಾಗಿ ಎಂದು ತಿರುಗೇಟು ನೀಡಿದರು.

ʼಸುಮೊಟೊ ಕೇಸ್ʼ ದಾಖಲು ಸೇರ್ಪಡೆ

ಸಮಾಜದಲ್ಲಿ ಬಹಿಷ್ಕಾರಕ್ಕೆ ಒಳಗಾದವರ ಕುರಿತು ಪೊಲೀಸರು ಸುಮೊಟೊ ಪ್ರಕರಣ ದಾಖಲಿಸುವುದನ್ನು ವಿಧೇಯಕದಲ್ಲಿ ಸೇರಿಸಬೇಕೆಂಬ ಸದಸ್ಯರ ಒತ್ತಾಯಕ್ಕೆ ಸಚಿವರು ಸ್ಪಂದಿಸಿದರು.

ಈ ಕಾನೂನು ದುರ್ಬಳಕೆ ಮಾಡಿಕೊಳ್ಳುವವರು ಸೇರಿದಂತೆ ಯಾವ ಅಧಿಕಾರಿ ಕೆಲಸ ಮಾಡುವುದಿಲ್ಲವೋ ಅಂತವರ ವಿರುದ್ಧವೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಈ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗುವುದು ಎಂದು ಸಚಿವರು ಹೇಳಿದರು.

ಮೂರು ವರ್ಷ ಸಜೆ, 1ಲಕ್ಷ ರೂ. ದಂಡ

'ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ-2025' ಅಡಿ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದು ನಿಷಿದ್ಧ. ಬಹಿಷ್ಕಾರ ಹಾಕಿದವರಿಗೆ 1 ಲಕ್ಷ ರೂ. ದಂಡ ಮತ್ತು ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಬಹಿಷ್ಕಾರದ ಸಭೆ ನಡೆಸಿದವರು, ಅದಕ್ಕೆ ಕಾರಣರಾದವರು ಮತ್ತು ಬೆಂಬಲಿಸಿದವರೂ ಕೂಡ ಶಿಕ್ಷೆಗೆ ಗುರಿಯಾಗಲಿದ್ದಾರೆ.

ಬಹಿಷ್ಕಾರ ಹಾಕುವ ಉದ್ದೇಶದಿಂದ ಸಭೆ, ಜಮಾವಣೆ, ಸಮಾವೇಶ ನಡೆಸುವುದು ಅಕ್ರಮ. ಧಾರ್ಮಿಕ ಪದ್ಧತಿ, ಆಚರಣೆಗಳನ್ನು ಪಾಲಿಸದಿದ್ದರೆ, ಜಾತಿಯ ಹೊರಗೆ ಮದುವೆಯಾದರೆ, ಇಷ್ಟದ ಉಡುಪು ಧರಿಸಿದರೆ, ಇಷ್ಟದ ಭಾಷೆ ಮಾತನಾಡಿದರೆ ಬಹಿಷ್ಕರಿಸುವುದು ಸಹ ಮಸೂದೆ ವ್ಯಾಪ್ತಿಗೆ ಒಳಪಡಲಿದೆ. 

Tags:    

Similar News