ರಾಜಕೀಯವಾಗಿ ನಾನು ಯಾವಾಗಲೂ ಶಕ್ತಿಯಾಗಿದ್ದೇನೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ
ಬೆಳಗಾವಿ ಅಧಿವೇಶನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಚರ್ಚೆಗೆ ಕೊನೆಯ ದಿನ ಉತ್ತರ ನೀಡುತ್ತಿರುವ ಮುಖ್ಯಮಂತ್ರಿಗಳು, ವಿಪಕ್ಷಗಳ ಕಾಲೆಳೆಯುವ ತಂತ್ರಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದರು.
ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ನಾನು ರಾಜಕೀಯವಾಗಿ ಯಾವಾಗಲೂ ಶಕ್ತಿಯಾಗಿಯೇ ಇದ್ದೇನೆ. ರಾಜಕೀಯವಾಗಿ ನಿಶಕ್ತಿಯಾಗಲು ಸಾಧ್ಯವೇ ಇಲ್ಲ. ಶಾರೀರಿಕವಾಗಿ ಮಾತ್ರ ಸ್ವಲ್ಪ ನಿಶಕ್ತಿ ಇರಬಹುದು ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿವೇಶನದಲ್ಲಿ ಪ್ರತಿಪಕ್ಷಗಳಿಗೆ ಖಡಕ್ ಉತ್ತರ ನೀಡಿದ್ದಾರೆ.
ಬೆಳಗಾವಿ ಅಧಿವೇಶನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಚರ್ಚೆಗೆ ಕೊನೆಯ ದಿನ ಉತ್ತರ ನೀಡುತ್ತಿರುವ ಮುಖ್ಯಮಂತ್ರಿಗಳು, ವಿಪಕ್ಷಗಳ ಕಾಲೆಳೆಯುವ ತಂತ್ರಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದರು.
ಶಕ್ತಿ-ನಿಶಕ್ತಿ ಕುರಿತ ವಾಕ್ಸಮರ
ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆಗೆ ಉತ್ತರಿಸಲು ನಿಂತ ಸಿದ್ದರಾಮಯ್ಯ, "ನಿನ್ನೆ ನನಗೆ ಸ್ವಲ್ಪ ಶಾರೀರಿಕವಾಗಿ ನಿಶಕ್ತಿ ಇದ್ದ ಕಾರಣ ಇಂದು ಉತ್ತರ ನೀಡುತ್ತಿದ್ದೇನೆ," ಎಂದು ಮಾತು ಆರಂಭಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಸುನಿಲ್ ಕುಮಾರ್, "ನೀವು ರಾಜಕೀಯವಾಗಿ ನಿಶಕ್ತಿ ಆಗಿದ್ದೀರಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ," ಎಂದು ವ್ಯಂಗ್ಯವಾಡಿದರು.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಿಎಂ, "ಕೂತ್ಕೋಳಪ್ಪ ಸುನಿಲ್ ಕುಮಾರ್, ರಾಜಕೀಯವಾಗಿ ಶಕ್ತಿ ಕೊಡೋದು ಜನರೇ ಹೊರತು ನೀವಲ್ಲ. ರಾಜಕೀಯವಾಗಿ ನಾನು ಹಿಂದೆಯೂ ನಿಶಕ್ತಿ ಆಗಿರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ. ನೀವೇನಾದರೂ ನಾನು ರಾಜಕೀಯವಾಗಿ ನಿಶಕ್ತಿ ಎಂದು ಭಾವಿಸಿದ್ದರೆ ಅದು ನಿಮ್ಮ ತಪ್ಪು ಮಾಹಿತಿ ಅಷ್ಟೆ," ಎಂದು ಗುಡುಗಿದರು.
ಸಿಎಂ ಕಾಲೆಳೆದ ಆರ್. ಅಶೋಕ್
ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿಗಳ ಕಾಲೆಳೆಯುತ್ತಾ, "ಈಗ ನಿಮಗೆ ಶಕ್ತಿ ಬಂದಿದೆ ತಾನೇ? ರಾಜಕೀಯವಾಗಿ ಶಕ್ತಿ ಬಂದಂತೆ ಕಾಣುತ್ತಿದೆ, ಮುಖದಲ್ಲಿ ಆ ಕಳೆ ಕೂಡ ಎದ್ದು ಕಾಣುತ್ತಿದೆ," ಎಂದು ಹಾಸ್ಯ ಚಟಾಕಿ ಹಾರಿಸಿದರು. ಸದನದಲ್ಲಿ ಈ ಮಾತುಗಳು ಕೆಲಕಾಲ ನಗೆಯ ಅಲೆಯನ್ನು ಎಬ್ಬಿಸಿದವು.
ಅಧಿವೇಶನದ ವಿಶೇಷತೆ
ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಮೇಟಿ ಅವರ ನಿಧನದಿಂದಾಗಿ ಮೊದಲ ದಿನ ಕಲಾಪ ಮುಂದೂಡಲ್ಪಟ್ಟಿತ್ತು. ಹೀಗಾಗಿ ಎರಡನೇ ದಿನದಿಂದಲೇ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅಧಿವೇಶನದ ಅಂತಿಮ ದಿನವಾದ ಇಂದು ಮುಖ್ಯಮಂತ್ರಿಗಳು ಈ ಎಲ್ಲ ವಿಷಯಗಳಿಗೆ ಸಮಗ್ರವಾಗಿ ಉತ್ತರ ನೀಡುತ್ತಿದ್ದಾರೆ.