ಕೇಂದ್ರದ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ: ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದ ರಾಜ್ಯ
ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ನಿರ್ಣಯ ಮಂಡಿಸಿದ್ದು, ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಒತ್ತಾಯಗಳನ್ನು ಈಡೇಸುವಂತೆ ಕೇಂದ್ರದ ವಿರುದ್ಧ ನಿರ್ಣಯ ಅಂಗೀಕರಿಸಲಾಯಿತು
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ, ರಾಜ್ಯ ಸರ್ಕಾರವು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಮುಂದೆ ಹಲವು ಮಹತ್ವದ ಒತ್ತಾಯಗಳನ್ನು ಮಾಡಿದೆ.
ಈ, ವಿಧಾನಸಭೆಯಲ್ಲಿ ರಾಜ್ಯದ ನೀರಾವರಿ, ಕೃಷಿ, ಪ್ರಾದೇಶಿಕ ಅಸಮತೋಲನ ನಿವಾರಣೆ ಮತ್ತು ಆರ್ಥಿಕ ನ್ಯಾಯದ ಕುರಿತು ನಿರ್ಣಯವನ್ನು ಕೈಗೊಂಡಿದೆ. ಸಚಿವ ಎಚ್.ಕೆ. ಪಾಟೀಲ್ ಅವರು ನಿರ್ಣಯ ಮಂಡಿಸಿದ್ದು, ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಒತ್ತಾಯಗಳನ್ನು ಈಡೇಸುವಂತೆ ಕೇಂದ್ರದ ವಿರುದ್ಧ ನಿರ್ಣಯ ಅಂಗೀಕರಿಸಲಾಯಿತು.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಾಷ್ಟ್ರೀಯ ಯೋಜನೆಯ ಬೇಡಿಕೆ
ಉತ್ತರ ಕರ್ನಾಟಕದ "ಜೀವನಾಡಿ" ಎಂದೇ ಪರಿಗಣಿಸಲಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಲು ಸದನವು ಕೇಂದ್ರವನ್ನು ಒತ್ತಾಯಿಸಿದೆ. ಈ ಯೋಜನೆಯನ್ನು ತಕ್ಷಣವೇ "ರಾಷ್ಟ್ರೀಯ ಯೋಜನೆ" ಎಂದು ಘೋಷಿಸಬೇಕು ಮತ್ತು ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2 (ಬ್ರಿಜೇಶ್ ಕುಮಾರ್ ಆಯೋಗ) ರ ಅಂತಿಮ ತೀರ್ಪನ್ನು ಕೇಂದ್ರ ಸರ್ಕಾರವು ಗೆಜೆಟ್‌ನಲ್ಲಿ ಕೂಡಲೇ ಅಧಿಸೂಚಿಸಬೇಕು ಮತ್ತು ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸುವುದರಿಂದ ಸುಮಾರು 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದು ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಸಂಜೀವಿನಿಯಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಎಥನಾಲ್ ಉತ್ಪಾದನೆ ಮತ್ತು ಹಂಚಿಕೆ
ರಾಜ್ಯದ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಈ ನಿರ್ಣಯವು ಕೇಂದ್ರದ ಗಮನ ಸೆಳೆದಿದೆ. ಕರ್ನಾಟಕವು ಕಬ್ಬು ಮತ್ತು ಮೆಕ್ಕೆಜೋಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದರೂ, ತೈಲ ಮಾರುಕಟ್ಟೆ ಕಂಪನಿಗಳು ರಾಜ್ಯದಿಂದ ಎಥನಾಲ್ ಖರೀದಿಸುವ ಪ್ರಮಾಣವನ್ನು ಕಡಿಮೆ ನಿಗದಿಪಡಿಸಿವೆ. ಆದರೆ, ಹರಿಯಾಣ, ಗುಜರಾತ್ ಮತ್ತು ಬಿಹಾರದಂತಹ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಲಾಗುತ್ತಿದೆ ಎಂದು ನಿರ್ಣಯದಲ್ಲಿ ಆಕ್ಷೇಪಿಸಲಾಗಿದೆ.
ಕರ್ನಾಟಕದ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಎಥನಾಲ್ ಹಂಚಿಕೆ ಕೋಟಾವನ್ನು ಹೆಚ್ಚಿಸಬೇಕು. ಇದು ರೈತರ ಆದಾಯ ಹೆಚ್ಚಳಕ್ಕೆ ಮತ್ತು ಕಬ್ಬಿನ ಬಾಕಿ ಪಾವತಿಗೆ ಸಹಕಾರಿಯಾಗಲಿದೆ.
ವಿಕೇಂದ್ರೀಕರಣ: ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸುವಿಕೆ
ರಾಜ್ಯದ ಆಡಳಿತ ಮತ್ತು ಅಭಿವೃದ್ಧಿ ಕೇವಲ ಬೆಂಗಳೂರು ಕೇಂದ್ರಿತವಾಗಬಾರದು ಎಂಬ ಉದ್ದೇಶದಿಂದ ಒಂದು ಕ್ರಾಂತಿಕಾರಿ ಪ್ರಸ್ತಾಪವನ್ನು ಮಾಡಲಾಗಿದೆ. ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಕೇಂದ್ರೀಕೃತವಾಗಿರುವ 73 ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ಪೈಕಿ ಕನಿಷ್ಠ 25 ಪ್ರಮುಖ ಸಂಸ್ಥೆಗಳನ್ನು ಉತ್ತರ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗಕ್ಕೆ ವರ್ಗಾಯಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು.
ಇದು ಬೆಂಗಳೂರಿನ ಮೇಲಿನ ಜನಸಂಖ್ಯೆಯ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಹಿಂದುಳಿದ ಪ್ರದೇಶಗಳ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಇದು ಕೇವಲ ಕಚೇರಿಗಳ ಬದಲಾವಣೆಯಲ್ಲ. ಈ ಸಂಸ್ಥೆಗಳು ಉತ್ತರ ಕರ್ನಾಟಕಕ್ಕೆ ಬಂದರೆ ಅಲ್ಲಿಯೂ ಉತ್ತಮ ಶಿಕ್ಷಣ, ಸಂಶೋಧನೆ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದು "ಸಮಗ್ರ ಕರ್ನಾಟಕ"ದ ಪರಿಕಲ್ಪನೆಗೆ ಪೂರಕವಾಗಿದೆ.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಒತ್ತು
ಸಂವಿಧಾನದ 371(ಜೆ) ತಿದ್ದುಪಡಿಯ ಮೂಲಕ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದ್ದರೂ, ಆರ್ಥಿಕ ಮತ್ತು ಸಾಮಾಜಿಕ ಸೂಚ್ಯಂಕಗಳಲ್ಲಿ ಈ ಭಾಗ ಇನ್ನೂ ಹಿಂದುಳಿದಿದೆ. ಈ ಅಸಮತೋಲನವನ್ನು ನಿವಾರಿಸಲು ಎರಡು ಪ್ರಮುಖ ನಿರ್ಣಯಗಳನ್ನು ಮಂಡಿಸಲಾಗಿದೆ. ರಾಯಚೂರು ಜಿಲ್ಲೆಯು ಆರೋಗ್ಯ ಮತ್ತು ಶಿಕ್ಷಣದಲ್ಲಿ ಹಿಂದುಳಿದಿದೆ . ಇಲ್ಲಿ "ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ" (ಏಮ್ಸ್ ) ಸ್ಥಾಪನೆಯಾದರೆ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಮತ್ತು ನೆರೆಯ ತೆಲಂಗಾಣದ ಗಡಿ ಭಾಗದ ಜನರಿಗೆ ಉನ್ನತ ಮಟ್ಟದ ಆರೋಗ್ಯ ಸೇವೆ ಸಿಗಲಿದೆ. ಇದು ಕೇವಲ ಕಟ್ಟಡವಲ್ಲ, ಬದಲಾಗಿ ಆ ಭಾಗದ ಜನರ ದಶಕಗಳ ಕನಸಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರವು ಬಜೆಟ್ ನಲ್ಲಿ 5ಸಾವಿರ ಕೋಟಿ ರೂ. ನೀಡುತ್ತಿದೆ. ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ಇದಕ್ಕೆ ಸಮನಾಗಿ ಐದು ಸಾವಿರ ಕೋಟಿ ರೂ.ಗಳ "ಮ್ಯಾಚಿಂಗ್ ಗ್ರಾಂಟ್" ನೀಡಬೇಕು ಎಂಬುದು ಒತ್ತಾಯ. ಕೇಂದ್ರದ ನೆರವಿಲ್ಲದೆ ಕೇವಲ ರಾಜ್ಯದ ಅನುದಾನದಿಂದ ಪ್ರಾದೇಶಿಕ ಅಸಮತೋಲನ ಹೋಗಲಾಡಿಸುವುದು ಕಷ್ಟ ಎಂಬ ವಾಸ್ತವವನ್ನು ಇದು ಎತ್ತಿ ತೋರಿಸಿದೆ.
ಮಹದಾಯಿ ಯೋಜನೆ: ಪರಿಸರ ಅನುಮತಿಗೆ ಆಗ್ರಹ
ಕುಡಿಯುವ ನೀರು ಮನುಷ್ಯನ ಮೂಲಭೂತ ಹಕ್ಕು. ಹುಬ್ಬಳ್ಳಿ-ಧಾರವಾಡ ಮತ್ತು ಉತ್ತರ ಕರ್ನಾಟಕದ ಜನರಿಗೆ ಮಹದಾಯಿ (ಕಳಸಾ-ಬಂಡೂರಿ) ಯೋಜನೆಯು ಅತ್ಯಂತ ಅಗತ್ಯವಾಗಿದೆ. ಮಹದಾಯಿ ಜಲವಿವಾದ ನ್ಯಾಯಾಧಿಕರಣದ ತೀರ್ಪು ಬಂದು, ಸುಪ್ರೀಂ ಕೋರ್ಟ್ ತಡೆಯಾಜ್ಞೆ ಇಲ್ಲದಿದ್ದರೂ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ನಿರ್ಣಯವು ಟೀಕಿಸಿದೆ. ಕಳಸಾ-ಬಂಡೂರಿ ನಾಲಾ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಪರಿಸರ ಇಲಾಖೆಯ ಅನುಮತಿ ಇನ್ನೂ ಸಿಕ್ಕಿಲ್ಲ. ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ, ಕಾನೂನಾತ್ಮಕವಾಗಿ ಕರ್ನಾಟಕಕ್ಕೆ ಯೋಜನೆ ಜಾರಿಗೊಳಿಸುವ ಹಕ್ಕಿದೆ. ಉತ್ತರ ಕರ್ನಾಟಕದ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರವು ತಕ್ಷಣವೇ ಅರಣ್ಯ ಮತ್ತು ಪರಿಸರ ಅನುಮತಿ ನೀಡಬೇಕು.
ಮಹದಾಯಿ ಜಲವಿವಾದ ನ್ಯಾಯಾಧಿಕರಣವು ಕರ್ನಾಟಕಕ್ಕೆ ನೀರು ಹಂಚಿಕೆ ಮಾಡಿ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಕೂಡ ಯಾವುದೇ ತಡೆಯಾಜ್ಞೆ ನೀಡಿಲ್ಲ. ಆದರೂ, ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಗಳು ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ನೀಡಲು ವಿಳಂಬ ಮಾಡುತ್ತಿವೆ. ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ಕೇಂದ್ರವು ಕರ್ನಾಟಕದ ವಿರುದ್ಧ "ಮಲತಾಯಿ ಧೋರಣೆ" ಅನುಸರಿಸುತ್ತಿದೆ ಎಂಬ ಗಂಭೀರ ಆರೋಪವನ್ನು ಈ ನಿರ್ಣಯದಲ್ಲಿ ಮಾಡಲಾಗಿದೆ. ಯಾವುದೇ ಕಾನೂನಿನ ಅಡೆತಡೆ ಇಲ್ಲದಿದ್ದರೂ ಅನುಮತಿ ನೀಡದಿರುವುದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂಬ ಸಂದೇಶವನ್ನು ಈ ನಿರ್ಣಯ ರವಾನಿಸಿದೆ.