ಅನುಸೂಚಿತ ಜಾತಿಗಳ ಉಪ ವರ್ಗೀಕರಣ ಮಸೂದೆ ಅಂಗೀಕಾರ; ಒಳ ಮೀಸಲಾತಿಗೆ ತಾತ್ಕಾಲಿಕ ಮಾನ್ಯತೆ

ನಾನು ದಲಿತರ ಮೀಸಲಾತಿ ವಿರುದ್ಧ ಮಾತನಾಡಿಲ್ಲ. ಬೆಲ್ಲದ್ ಸುಳ್ಳು ಹೇಳುತ್ತಿದ್ದಾರೆ. ನಾನು ಎಲ್ಲಿ ಹೇಳಿದ್ದೀನಿ ಎಂಬ ದಾಖಲೆ ಕೊಡ್ತೀರಾ, ಹೀಗೆಲ್ಲಾ ಸುಳ್ಳು ಹೇಳಬಾರದು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

Update: 2025-12-18 14:45 GMT

ಪರಿಶಿಷ್ಟ ಜಾತಿಗಳಿಗೆ ಕಲ್ಪಿಸಿರುವ ಒಳ ಮೀಸಲಾತಿಗೆ ಕಾನೂನು ಬಲ ತುಂಬಲು ರಾಜ್ಯ ಸರ್ಕಾರ ಮಹತ್ವದ 2025ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ಮಸೂದೆ ಮಂಡಿಸಿ, ಅಂಗೀಕಾರ ಪಡೆದಿದೆ.

ಬೆಳಗಾವಿಯಲ್ಲಿ ನಡೆದ 9ನೇ ದಿನ ಕಲಾಪದಲ್ಲಿ ಮಸೂದೆಯನ್ನು ಚರ್ಚೆಗೆ ಹಾಕಿ ಅಂತಿಮವಾಗಿ ಸದನದ ಅಂಗೀಕಾರ ಪಡೆಯಲಾಯಿತು. ನಿವೃತ್ತ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಆಯೋಗದ ವರದಿ ಆಧರಿಸಿ ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ.17ರಷ್ಟು ಮೀಸಲಾತಿಯಲ್ಲಿ ‘6-6-5’ ಸೂತ್ರದಡಿ ಒಳ ಮೀಸಲಾತಿ ಜಾರಿ ಮಾಡುವ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು, ಈಗ ಅದಕ್ಕೆ ಮಸೂದೆಯ ಮೂಲಕ ಕಾನೂನು ಬಲ ನೀಡಿದೆ.

ಮಸೂದೆ ಅಂಗೀಕಾರದ ಬಳಿಕ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಆಹಾರ ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.

ಇದಕ್ಕೂ ಮುನ್ನ ನಡೆದ ಒಳ ಮೀಸಲಾತಿ ಮಸೂದೆ ಮೇಲಿನ ಚರ್ಚೆಯಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ. ನಮ್ಮ ಸರ್ಕಾರ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15 ರಿಂದ 17ಕ್ಕೆ ಹೆಚ್ಚಿಸಿತು. ಆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಶೇ 17 ರಷ್ಟು ಮೀಸಲಾತಿ ಏರಿಕೆಯು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದು ಹುಯಿಲೆಬ್ಬಿಸಿದ್ದರು. ಈಗ ಅದೇ ಶೇ 17ರ ಅಡಿ ಸಿಎಂ ಸಿದ್ದರಾಮಯ್ಯ ಅವರು ಒಳಮೀಸಲಾತಿ ಮಸೂದೆ ತಂದಿದ್ದಾರೆ ಎಂದು ಹೇಳಿದರು.

ಬೆಲ್ಲದ್ ಹೇಳಿಕೆಗೆ ಸಿಎಂ ಆಕ್ಷೇಪ

ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದರು. ನಾನು ದಲಿತರ ಮೀಸಲಾತಿ ವಿರುದ್ಧ ಮಾತನಾಡಿಲ್ಲ. ಬೆಲ್ಲದ್ ಸುಳ್ಳು ಹೇಳುತ್ತಿದ್ದಾರೆ. ನಾನು ಎಲ್ಲಿ ಹೇಳಿದ್ದೀನಿ ಎಂಬ ದಾಖಲೆ ಕೊಡ್ತೀರಾ, ಹೀಗೆಲ್ಲಾ ಸುಳ್ಳು ಹೇಳಬಾರದು ಎಂದು ಕಿಡಿಕಾರಿದರು.

ದಲಿತ ಸಮುದಾಯದವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು ಎಂದು ನಾನು ಮೊದಲಿನಿಂದಲೂ ಹೋರಾಟ ಮಾಡುತ್ತಿದ್ದೇನೆ. ಬಿಜೆಪಿ ಶಾಸಕರು ಸುಳ್ಳು ಹೇಳುತ್ತಿದ್ದಾರೆ. ಮೀಸಲಾತಿ ಶೇ 50 ದಾಟಬಾರದು ಎಂದು ನಾನು ಹೇಳುವವನಲ್ಲ. ಮೀಸಲಾತಿ ಶೇ 75 ಇರಬೇಕು ಅಂತ ಹೇಳುವವನು ನಾನು. ಬಿಜೆಪಿಯವರು ಶೇ 10 ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿದರು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದು ಸಂವಿಧಾನದಲ್ಲಿ ಇದೆಯೇ ಎಂದು ಪ್ರಶ್ನಿಸಿದರು.

ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಕೊಡಬೇಕು ಎಂದು ಸಂವಿಧಾನ ಕಲಂ 15 ಮತ್ತು 16 ರಲ್ಲಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕೆಂದು ಹೇಳಿಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

Tags:    

Similar News