ಬೆಳಗಾವಿ| ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ
x

 ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. 

ಬೆಳಗಾವಿ| ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆ ಇದೆ.


Click the Play button to hear this message in audio format

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಚಿವ ಸಂಪುಟ ಸಭೆ ಜರುಗಲಿದೆ. ಸಂಜೆ 7 ಗಂಟೆಗೆ ಆರಂಭವಾಗಲಿರುವ ಈ ಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ವಿಶೇಷ ಪ್ಯಾಕೇಜ್‌ಗೆ ಅಧಿಕೃತ ಮುದ್ರೆ ಬೀಳುವ ಸಾಧ್ಯತೆಯಿದೆ. ರಾಜ್ಯದ ಸಿವಿಲ್ ಸೇವಾ ಹುದ್ದೆಗಳ ಮುಂಬಡ್ತಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ಸಮಾಲೋಚನೆ ನಡೆಸಲಾಗುತ್ತಿದ್ದು, ಇದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಂತ ಮಹತ್ವದ ನಿರ್ಧಾರವೆನಿಸಿದೆ.

ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ, 5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು 2025ರ ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ದೊರೆಯಲಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ 'ಇಂದಿರಾ ಆಹಾರ ಕಿಟ್'ನಲ್ಲಿರುವ ಪೌಷ್ಠಿಕಾಂಶದ ಅಂಶಗಳಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ. ಬೆಂಗಳೂರಿನ ಹಜ್ ಭವನದ ಆವರಣದಲ್ಲಿ 16.60 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುವುದು.

ನೀರಾವರಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬೆಳಗಾವಿ ನಗರದ ಸಂಚಾರ ದಟ್ಟಣೆ ನಿವಾರಣೆಗೆ ರಾಷ್ಟ್ರೀಯ ಹೆದ್ದಾರಿ-48 ರಿಂದ ಧರ್ಮವೀರ ಸಂಭಾಜಿ ವೃತ್ತದವರೆಗೆ 275.53 ಕೋಟಿ ರೂ. ವೆಚ್ಚದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಚಾಲನೆ ಸಿಗಲಿದೆ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ 73.75 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ನೀಡಲಾಗುತ್ತಿದೆ. ಬೆಂಗಳೂರಿನ ಕಾವೇರಿ ನೀರು ಸರಬರಾಜು ಯೋಜನೆಯ ಹಳೆಯ ಪಂಪ್‌ಗಳ ಬದಲಾವಣೆ ಹಾಗೂ 550 ಎಂಎಲ್ಡಿ ಜಲಶುದ್ಧೀಕರಣ ಘಟಕದ ನಿರ್ವಹಣೆಗಾಗಿ ಸುಮಾರು 87 ಕೋಟಿ ರೂ.ಗಳ ಯೋಜನೆಗಳಿಗೆ ಮಂಜೂರಾತಿ ಸಿಗಲಿದೆ.

ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಗಾಗಿ ಪಿಪಿಪಿ ಮಾದರಿಯ 1714.83 ಕೋಟಿ ರೂ.ಗಳ ಬೃಹತ್ ಯೋಜನೆಗೆ ಅನುಮೋದನೆ ದೊರೆಯಲಿದ್ದರೆ, ಉತ್ತರ ಕರ್ನಾಟಕದ ರಾಯಚೂರು, ಬಾಗಲಕೋಟೆ, ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಗಳ ವಿವಿಧ ಏತ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲು ಸಂಪುಟ ನಿರ್ಧರಿಸಿದೆ. ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಯೋಜನೆ, ಕೆರೂರು ಏತ ನೀರಾವರಿ ಯೋಜನೆಯ ಪರಿಷ್ಕೃತ ಅಂದಾಜು ಹಾಗೂ ಕೃಷ್ಣಾ ನದಿಯಿಂದ ಕೆರೆ ತುಂಬಿಸುವ ಯೋಜನೆಗಳು ಈ ಪಟ್ಟಿಯಲ್ಲಿವೆ. ಕೊನೆಯದಾಗಿ, ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ 'ಕರ್ನಾಟಕ ಜಿಲ್ಲಾ ನ್ಯಾಯಾಂಗ ಸುಧಾರಣೆಗಳ ವಿಧೇಯಕ-2025'ಕ್ಕೂ ಈ ಸಭೆಯಲ್ಲಿ ಹಸಿರು ನಿಶಾನೆ ಸಿಗಲಿದೆ.

Read More
Next Story