ಅಧಿಕಾರ ಹಂಚಿಕೆ ಒಪ್ಪಂದ| ಸಿಎಂಗೆ ಡಿಕೆಶಿ ಟಾಂಗ್; ನಮ್ಮಿಬ್ಬರ ಒಪ್ಪಂದ ಹೈಕಮಾಂಡ್‌ಗೂ ಗೊತ್ತಿದೆ ಎಂದ ಡಿಸಿಎಂ
ನಾನು ಯಾವತ್ತೂ ಐದು ವರ್ಷ ಇರಲ್ಲ ಎಂದು ಹೇಳಿಲ್ಲ, ಹೈಕಮಾಂಡ್ ನಿರ್ಧಾರ ಮಾಡಿದೆ. ಹೈಕಮಾಂಡ್ ಸಿಎಂ ಪರವಾಗಿ ಇದ್ದುದ್ದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಬೆಳಗಾವಿ ಚಳಿಗಾಲಯದ ಅಧಿವೇಶನ ಮುಕ್ತಾಯದ ದಿನದಿಂದಲೇ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರ ಮತ್ತೊಮ್ಮೆ ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆ ಹಾಗೂ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಅಧಿವೇಶನದಲ್ಲಿ ನಾನೇ ಮುಂದಿನ ಎರಡೂವರೆ ವರ್ಷ ಸಿಎಂ, ಅಧಿಕಾರ ಹಂಚಿಕೆ ಕುರಿತಂತೆ ಯಾವುದೇ ಒಪ್ಪಂದಗಳಾಗಿಲ್ಲ ಎಂದು ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ನೇರ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯ ವೇಳೆ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ನಿಜ, ಇದು ಹೈಕಮಾಂಡ್ ನಾಯಕರಿಗೂ ಗೊತ್ತಿಗೆ ಎಂದು ಹೇಳಿರುವುದು ಸಂಚಲನ ಮೂಡಿಸಿದೆ.
"ಸರ್ಕಾರ ರಚನೆ ಸಂದರ್ಭದಲ್ಲಿ ಆಗಿರುವ ಒಪ್ಪಂದದಂತೆ ನಡೆದುಕೊಳ್ಳುತ್ತೇನೆ. ನಾನು ಹಾಗೂ ಸಿಎಂ ಸಿದ್ದರಾಮಯ್ಯ ಇಬ್ಬರೂ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್‌ಗೂ ವಿಷಯ ತಿಳಿಸಿದ್ದೇವೆ" ಎಂದು ಹೇಳುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ.
ಶುಕ್ರವಾರ ಕಾರವಾರದ ಆಂದ್ಲೆ ಜಗದೀಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. "ನಾನು ಯಾವತ್ತೂ ಐದು ವರ್ಷ ಇರಲ್ಲ ಎಂದು ಹೇಳಿಲ್ಲ, ಹೈಕಮಾಂಡ್ ನಿರ್ಧಾರ ಮಾಡಿದೆ. ಹೈಕಮಾಂಡ್ ಸಿಎಂ ಪರವಾಗಿ ಇದ್ದುದ್ದಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎನ್ನುವ ಮೂಲಕ ಶಾಸಕರ ಬಲ ಮುಖ್ಯವಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಇಚ್ಛೆ ಹಾಗೂ ಸಮಸ್ಯೆ ಪರಿಹಾರದ ಬಗ್ಗೆ ದಿನಾಂಕ ನಿಗದಿ ಕುರಿತ ಪತ್ರಕರ್ತರ ಪ್ರಶ್ನೆಗೆ ಮುಗುಳು ನಗುತ್ತಾ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಲು ನಿರಾಕರಿಸಿದರು.
"5 ವರ್ಷದ ಹಿಂದೆಯೂ ಈ ದೇವಾಲಯಕ್ಕೆ ಕುಟುಂಬದ ಬಂದು ಪ್ರಾರ್ಥನೆ ಮಾಡಿದ್ದೆ, ಅದು ಈಡೇರಿದೆ. ಮತ್ತೆ ಇಲ್ಲಿಗೆ ಬರುತ್ತೇನೆ ಎಂದು ಹರಕೆ ಹೊತ್ತಿದ್ದೆ. ಈಗ ಮತ್ತೆ ಬಂದಿದ್ದೇನೆ, ಮತ್ತೆ ಆಶಿರ್ವಾದ ಮಾಡು ತಾಯಿ ಎಂದು ಕೇಳಿಕೊಂಡಿದ್ದೇನೆ" ಎಂದರು.
ದೇವಾಲಯದಲ್ಲಿ ಒಂದೂವರೆ ತಾಸಿಗೂ ಅಧಿಕ ಕಾಲ ದೇವಿಯಲ್ಲಿ ಪ್ರಶ್ನಾಕಾರ್ಯದಲ್ಲಿ ಕುಳಿತುಕೊಂಡಿದ್ದ ಡಿಸಿಎಂ, ನಂತರ ನಾಗದೇವತೆ ಮತ್ತು ತುಳಸಿಗೆ ವಿಶೇಷ ಪೂಜೆ ನೆರವೇರಿಸಿದರು. ಇದಕ್ಕೂ ಮೊದಲು ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಟೆಂಪಲ್‌ರನ್ ಹೆಚ್ಚಿಸಿದ ಡಿಸಿಎಂ
ಇತ್ತೀಚಿನ ದಿನಗಳಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ದೇವಾಲಯಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ನವೆಂಬರ್ ಅಂತ್ಯದಲ್ಲಿ ಮಂಡ್ಯದ ಕಲ್ಲಹಳ್ಳಿ ಭೂವರಾಹನಾಥ ದೇವಾಲಯಕ್ಕೆ ಭೇಟಿ ನೀಡಿ ಹೋಮ, ಹವನ ಮತ್ತು ಪೂರ್ಣಾಹುತಿಯಲ್ಲಿ ಭಾಗವಹಿಸಿದ್ದರು. ಅಕ್ಟೋಬರ್ ಅಂತ್ಯದಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡಿ ಮಂಚಾಲಮ್ಮ ಹಾಗೂ ರಾಯರ ದರ್ಶನ ಪಡೆದಿದ್ದರು. ಅಲ್ಲದೆ ಮಠದ ಗೋಶಾಲೆಯಲ್ಲಿ 'ಗೋ ಪೂಜೆ' ನೆರವೇರಿಸಿದ್ದರು.
ಇತ್ತೀಚೆಗೆ ಮಧ್ಯಪ್ರದೇಶದ ಉಜ್ಜಯಿನಿಗೆ ಭೇಟಿ ನೀಡಿ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಉತ್ತರಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಕೇರಳದ ಕಂಜೆಂಗಾಡ್‌ನ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ರಾಜಕೀಯ ಮತ್ತು ವೈಯಕ್ತಿಕ ಯಶಸ್ಸಿಗಾಗಿ ಇಲ್ಲಿ ವಿಶೇಷ 'ಶತ್ರು ಸಂಹಾರ' ಯಾಗದಲ್ಲಿ ಭಾಗವಹಿಸಿದ್ದರು. ತಮ್ಮ ರಾಜಕೀಯ ಗುರುಗಳೆಂದು ನಂಬುವ ನೊಣವಿನಕೆರೆಯ ಕಾಡಸಿದ್ಧೇಶ್ವರ ಮಠಕ್ಕೆ ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದಿದ್ದರು.