ಸೂಕ್ತ ಸಂದರ್ಭದಲ್ಲಿ ಸಿಎಂ - ನಾನು ದೆಹಲಿಗೆ ಪ್ರಯಾಣ: ಡಿಸಿಎಂ ಹೊಸ ದಾಳ

ರಾಜ್ಯದ ಪ್ರಮುಖ ಯೋಜನೆಗಳಾದ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Update: 2025-12-20 13:19 GMT

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ 

Click the Play button to listen to article

“ನಮ್ಮ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ನನಗೆ ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದು ಹೇಳಿದ್ದಾರೆ. ಆಗ ಇಬ್ಬರೂ ದೆಹಲಿಗೆ ಹೋಗುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಹೇಳಿಕೆ ನೀಡಿದ್ದು, ನಾಯಕತ್ವದ ಗೊಂದಲದ ಚರ್ಚೆಯನ್ನು ಮತ್ತಷ್ಟ ಜೀವಂತವಾಗಿರುವಂತೆ ಮಾಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಶನಿವಾರ(ಡಿ.20) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಹಾಕಿದ್ದ ಚಾರ್ಜ್ ಶೀಟ್ ಕೋರ್ಟ್‌ನಲ್ಲಿ ತಿರಸ್ಕೃತಗೊಂಡಿದ್ದು, ಈಗ ಒಂದು ಎಫ್ಐಆರ್ ಮಾತ್ರ ಬಾಕಿ ಉಳಿದುಕೊಂಡಿದೆ. ನಮ್ಮ ಮೇಲೆ ಯಾವ ರೀತಿ ದಬ್ಬಾಳಿಕೆ ನಡೆಯುತ್ತಿದೆ ಎಂದು ತಿಳಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದರು.

ಮಂಗಳವಾರ ದೆಹಲಿಗೆ ಪ್ರಯಾಣ

“ನಾನು ಮಂಗಳವಾರ ದೆಹಲಿಗೆ ಹೋಗುತ್ತಿದ್ದು, ದೆಹಲಿ ಪೊಲೀಸರನ್ನು ಭೇಟಿ ಮಾಡುವೆ. ಕೇಂದ್ರ ಜಲಶಕ್ತಿ ಸಚಿವರು ನದಿ ಜೋಡಣೆ ವಿಚಾರವಾಗಿ ಸಭೆ ಕರೆದಿದ್ದಾರೆ. ರಾಜ್ಯದ ಪ್ರಮುಖ ಯೋಜನೆಗಳಾದ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಚರ್ಚೆ ಮಾಡುತ್ತೇನೆ. ಇದೇ ವೇಳೆ ಕೇಂದ್ರ ಅರಣ್ಯ ಸಚಿವರು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿರುವೆ. ರಾಜ್ಯದ ಹಿತಾಸಕ್ತಿ ವಿಚಾರವಾಗಿ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದ್ದೇನೆ. ರಾಜ್ಯದ ಸಂಸದರ ಜೊತೆಗೆ ಭೇಟಿಯಾಗುವ ಆಲೋಚನೆ ಇತ್ತು. ಇವೆಲ್ಲ ಆದ ನಂತರ ಅವರು ಬಂದರೆ ಪ್ರಧಾನಮಂತ್ರಿಗಳನ್ನೂ ಭೇಟಿ ಮಾಡುವೆ” ಎಂದು ತಿಳಿಸಿದರು.

ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಸಹಾಯ

ನಾಗಸಾಧುಗಳು ಮನೆಗೆ ಹುಡುಕಿಕೊಂಡು ಬಂದು ಆಶೀರ್ವಾದ ಮಾಡಿದ್ದಾರೆ. ಮನೆಗೆ ಬಂದವರನ್ನು ಬೇಡ ಎನ್ನಲು ಆಗುವುದಿಲ್ಲ. ರಾಜಕೀಯದಲ್ಲಿರುವ ಕಾರಣ ನಮಗೆ ಸಾಧು ಸಂತರು, ಸ್ವಾಮೀಜಿಗಳು, ಹಿರಿಯರು ಸೇರಿದಂತೆ ಎಲ್ಲಾ ರೀತಿಯ ಜನರೂ ನಮಗೆ ಬೇಕು. ನಮ್ಮ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ನಡೆಸುತ್ತಿದೆ. ವಕ್ಫ್, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಸಹಾಯ ಮಾಡಲಾಗುತ್ತಿದೆ ಎಂದರು. 

ಇಬ್ಬರ ನಡುವೆ ಒಪ್ಪಂದ: ಡಿಸಿಎಂ ಸ್ಪಷ್ಟನೆ

ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಶನಿವಾರ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಐದು ವರ್ಷವೂ ನಾನೇ ಸಿಎಂ ಎಂದು ತಿಳಿಸಿದ್ದರು. ಇದಕ್ಕೆ ತಿರಗೇಟು ನೀಡುವಂತೆ ಕಾರವಾರದಲ್ಲಿ ಉತ್ತರಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌, "ನನ್ನ ಹಾಗೂ ಸಿಎಂ ಸಿದ್ದರಾಮಯ್ಯನವರ ನಡುವೆ ಒಪ್ಪಂದವಾಗಿದ್ದು, ಹೈಕಮಾಂಡ್‌ಗೂ ಈ ವಿಷಯ ತಿಳಿದಿದೆ" ಎಂದು ಹೇಳಿಕೆ ನೀಡುವ ಮೂಲಕ ಸಿಎಂ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದರು.

Tags:    

Similar News