ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಎಲ್ಲಾ 7 ಆರೋಪಿಗಳು ಯಾದಗಿರಿಗೆ ಗಡಿಪಾರು
ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಅವರು ಡಿಸೆಂಬರ್ 18ರಂದು ಈ ಆದೇಶ ಹೊರಡಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಸ್ತಾವನೆಯ ಮೇರೆಗೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಗಡಿಪಾರಾದ ಆರೋಪಿಗಳು
ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಏಳು ಪ್ರಮುಖ ಆರೋಪಿಗಳನ್ನು ಹಾವೇರಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಅವರು ಡಿಸೆಂಬರ್ 18ರಂದು ಈ ಆದೇಶ ಹೊರಡಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಸ್ತಾವನೆಯ ಮೇರೆಗೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳನ್ನು ಈಗಾಗಲೇ ಯಾದಗಿರಿ ಜಿಲ್ಲೆಯ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸ್ಥಳಾಂತರಿಸಲಾಗಿದೆ.
ಗಡಿಪಾರಾದ ಆರೋಪಿಗಳು ಯಾರು?
ಅಕ್ಕಿಆಲೂರಿನ ನಿವಾಸಿಗಳಾದ ಸಮೀವುಲ್ಲಾ ಲಾಲನವರ, ಅಫ್ತಾಬ್ ಚಂದನಕಟ್ಟೆ, ಮದಾರಸಾಬ್ ಮಂಡಕ್ಕಿ, ಮೊಹಮ್ಮದ್ ಸಾದಿಕ್ ಅಗಸಿಮನಿ, ಶೋಯೆಬ್ ಮುಲ್ಲಾ, ತೌಸಿಫ್ ಚೋಟಿ ಮತ್ತು ರಿಯಾಜ್ ಸಾವಿಕೇರಿ ಅವರನ್ನು ಗಡಿಪಾರು ಮಾಡಲಾಗಿದೆ.
ಪದೇ ಪದೇ ಅಪರಾಧ ಕೃತ್ಯ: ಎಸ್‌ಪಿ ವರದಿ
ಈ ಏಳು ಆರೋಪಿಗಳು ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಎಸ್‌ಪಿ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. "ಕಳೆದ ಐದಾರು ವರ್ಷಗಳಿಂದ ಇವರು ಯುವತಿಯರನ್ನು ಚುಡಾಯಿಸುವುದು, ಅಪಹರಣ, ಗಲಭೆಗೆ ಪ್ರಚೋದನೆ ಮತ್ತು ಹಲ್ಲೆಯಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಎಚ್ಚರಿಕೆ ನೀಡಿದ್ದರೂ, ಸಾಕ್ಷಿದಾರರಿಗೆ ಬೆದರಿಕೆ ಹಾಕುತ್ತಿದ್ದರು," ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಇವರಿಂದ ಸಾರ್ವಜನಿಕ ಶಾಂತಿಗೆ ಭಂಗವಾಗುವ ಸಾಧ್ಯತೆ ಇರುವುದರಿಂದ ಗಡಿಪಾರು ಶಿಕ್ಷೆ ವಿಧಿಸಲಾಗಿದೆ.
ಹಿನ್ನೆಲೆ ಏನು?
2024ರ ಜನವರಿ 8ರಂದು ಹಾನಗಲ್ ಸಮೀಪದ ನಾಲ್ಕರ ಕ್ರಾಸ್ ಬಳಿಯ ಲಾಡ್ಜ್ ಒಂದರಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದ ಬಳಿಕ, ತೆರೆದ ಜೀಪಿನಲ್ಲಿ ಕೇಕೆ ಹಾಕುತ್ತಾ ಮೆರವಣಿಗೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.