
ಬೆಂಗಳೂರು ಹೋಟೆಲ್‌ನಲ್ಲಿ ಪೈಲಟ್‌ನಿಂದ ಸಹೋದ್ಯೋಗಿ ಮೇಲೆ ಅತ್ಯಾಚಾರ
ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ನವೆಂಬರ್ 18ರಂದು ಹೋಟೆಲ್‌ನಲ್ಲಿ ತಂಗಿದ್ದಾಗ ಆರೋಪಿ ಪೈಲಟ್ 'ಸಿಗರೇಟ್ ಸೇದೋಣ ಬಾ' ಎಂದು ಆಕೆಯನ್ನು ತನ್ನ ರೂಮಿನ ಬಳಿ ಕರೆದು ಅತ್ಯಾಚಾರ ಮಾಡಿದ್ದಾನೆ.
ಖಾಸಗಿ ವಿಮಾನಯಾನ ಸಂಸ್ಥೆಯೊಂದರ 60 ವರ್ಷದ ಪೈಲಟ್ ಒಬ್ಬರು ತನ್ನ ಸಹೋದ್ಯೋಗಿ ಮೇಲೆ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ನವೆಂಬರ್ 18ರಂದು ಈ ಘಟನೆ ನಡೆದಿದ್ದು, ಸಂತ್ರಸ್ತೆ ಹೈದರಾಬಾದ್‌ನಲ್ಲಿ 'ಝೀರೋ ಎಫ್‌ಐಆರ್' ದಾಖಲಿಸಿದ್ದಾರೆ.
ಆರೋಪಿ ಪೈಲಟ್ ರೋಹಿತ್ ಸರನ್, ಸಂತ್ರಸ್ತೆ ಹಾಗೂ ಮತ್ತೊಬ್ಬ ಸಹೋದ್ಯೋಗಿ ಹೈದರಾಬಾದ್‌ನ ಬೇಗಂಪೇಟೆಯಿಂದ ಆಂಧ್ರಪ್ರದೇಶದ ಪುಟ್ಟಪರ್ತಿಗೆ ಚಾರ್ಟರ್ಡ್ ವಿಮಾನದಲ್ಲಿ ಬಂದಿದ್ದರು. ನವೆಂಬರ್ 19ರಂದು ಪುಟ್ಟಪರ್ತಿಗೆ ಮರಳುವ ಮುನ್ನ ವಿಶ್ರಾಂತಿಗಾಗಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ತಂಗಿದ್ದರು.
ಸಿಗರೇಟ್ ಸೇದುವ ನೆಪದಲ್ಲಿ ಕೃತ್ಯ
ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ನವೆಂಬರ್ 18ರಂದು ಹೋಟೆಲ್‌ನಲ್ಲಿ ತಂಗಿದ್ದಾಗ ಆರೋಪಿ ಪೈಲಟ್ 'ಸಿಗರೇಟ್ ಸೇದೋಣ ಬಾ' ಎಂದು ಆಕೆಯನ್ನು ತನ್ನ ರೂಮಿನ ಬಳಿ ಕರೆದೊಯ್ದಿದ್ದಾನೆ. ಬಳಿಕ ಆಕೆಯನ್ನು ಬಲವಂತವಾಗಿ ತನ್ನ ರೂಮಿನೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಬೇಗಂಪೇಟೆ ಟು ಹಲಸೂರು: ಪ್ರಕರಣ ವರ್ಗಾವಣೆ
ನವೆಂಬರ್ 20ರಂದು ಹೈದರಾಬಾದ್‌ನ ಬೇಗಂಪೇಟೆಗೆ ಮರಳಿದ ಸಂತ್ರಸ್ತೆ, ಮೊದಲು ಸಂಸ್ಥೆಯ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಬೇಗಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಬೆಂಗಳೂರಿನಲ್ಲಿ ನಡೆದಿದ್ದರೂ, ಅಪರಾಧ ನಡೆದ ಸ್ಥಳ ಪರಿಗಣಿಸದೆ 'ಝೀರೋ ಎಫ್‌ಐಆರ್' ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 63ರ (ಅತ್ಯಾಚಾರ ಅಪರಾಧ) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಳಿಕ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ರೀತಿಯ ಘಟನೆ ಜುಲೈ 2025ರಲ್ಲೂ ನಡೆದಿತ್ತು. ಲಂಡನ್ ಮೂಲದ ಏರ್‌ಲೈನ್ ಉದ್ಯೋಗಿಯೊಬ್ಬ ಮುಂಬೈನಲ್ಲಿ ಏರ್‌ಹೋಸ್ಟೆಸ್‌ಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

