Real Policing| ಮಂಗಳೂರು to ಕಾರವಾರ: ಕರಾವಳಿಯಲ್ಲಿ ಕೋಮು ಸಂಘರ್ಷ ಸೇರಿದಂತೆ ಅಪರಾಧ ಸಂಖ್ಯೆ ಇಳಿಕೆ
ಕಳೆದ ಎರಡು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಕೋಮು ಪ್ರೇರಿತ ಘರ್ಷಣೆಗಳು ಶೇ. 40 ರಿಂದ 50 ರಷ್ಟು ಇಳಿಕೆಯಾಗಿವೆ.
ಕರ್ನಾಟಕದ ಭೂಪಟದಲ್ಲಿ ಕರಾವಳಿ ಭಾಗಕ್ಕೆ, ವಿಶಿಷ್ಟ ಸ್ಥಾನಮಾನವಿದೆ. ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ, ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಶಕ್ತಿ ಕೇಂದ್ರವಿದು. ಬ್ಯಾಂಕಿಂಗ್ ಉದ್ಯಮದ ತೊಟ್ಟಿಲು ಮತ್ತು ಶೈಕ್ಷಣಿಕ ಕಾಶಿ ಎಂದೆಲ್ಲಾ ಖ್ಯಾತಿ ಪಡೆದಿರುವ ಈ ಭಾಗವು, ಕಳೆದ ಕೆಲವು ದಶಕಗಳಿಂದ ಕೇವಲ ಅಭಿವೃದ್ಧಿಯ ಕಾರಣಕ್ಕಷ್ಟೇ ಅಲ್ಲದೆ, 'ಕೋಮು ಸೂಕ್ಷ್ಮ ಪ್ರದೇಶ' ಎಂಬ ಹಣೆಪಟ್ಟಿಯಿಂದಲೂ ಸುದ್ದಿಯಾಗುತ್ತಿತ್ತು.
ಧಾರ್ಮಿಕ ಸಂಘರ್ಷಗಳು, ಕ್ಷುಲ್ಲಕ ಕಾರಣಗಳಿಗೆ ನಡೆಯುವ ಕೋಮು ಗಲಭೆಗಳು ಮತ್ತು ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನೇ ಹಾಳುಗೆಡವಿದ್ದ 'ನೈತಿಕ ಪೊಲೀಸ್‌ಗಿರಿ' ಈ ಭಾಗದ ಪ್ರಗತಿಗೆ ಕಂಟಕವಾಗಿ ಪರಿಣಮಿಸಿದ್ದವು. ಈ ಅನಿಶ್ಚಿತತೆ ಮತ್ತು ಭಯದ ವಾತಾವರಣವು ಈ ಪ್ರದೇಶದ ಶೈಕ್ಷಣಿಕ ಮತ್ತು ಔದ್ಯೋಗಿಕ ವಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿತ್ತು. ಈ ಸೂಕ್ಷ್ಮತೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ, ವಿಶೇಷ ಕಾರ್ಯಪಡೆಯನ್ನು ರಚಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿತು. ಈ ಕಾರ್ಯಪಡೆಯ ಕಟ್ಟುನಿಟ್ಟಿನ ಕ್ರಮಗಳು ಮತ್ತು ಹೊಸ ತಂತ್ರಗಾರಿಕೆಗಳ ಫಲವಾಗಿ ಕರಾವಳಿಯ ಚಿತ್ರಣ ಬದಲಾಗುತ್ತಿದ್ದು, ಅಪರಾಧ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ವಾತಾವರಣದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿವೆ.
ವಿಶೇಷವಾಗಿ ಮಂಗಳೂರಿನಿಂದ ಕಾರವಾರದವರೆಗಿನ ಪಶ್ಚಿಮ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷಗಳು ಮತ್ತು ಗಂಭೀರ ಅಪರಾಧಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ.
ಕಳೆದ ಎರಡು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಕೋಮು ಪ್ರೇರಿತ ಘರ್ಷಣೆಗಳು ಶೇ. 40 ರಿಂದ 50 ರಷ್ಟು ಇಳಿಕೆಯಾಗಿವೆ. ಅಪರಾಧ ಪ್ರಕರಣಗಳು ಕಡಿಮೆಯಾಗಿರುವುದು ಸಾಮಾನ್ಯ ವಿಷಯವಲ್ಲ. ಇದು ಕೇವಲ ಸಂಖ್ಯೆಗಳ ಇಳಿಕೆಯಲ್ಲ, ಬದಲಿಗೆ ಆ ಭಾಗದ ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿರುವ ಆತ್ಮವಿಶ್ವಾಸದ ಸಂಕೇತವಾಗಿದೆ.
ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ದೌರ್ಜನ್ಯಗಳು, ಗಾಂಜಾ ದಂಧೆ ಮತ್ತು ಗುಂಪು ಘರ್ಷಣೆಗಳನ್ನು ನಿಯಂತ್ರಿಸುವಲ್ಲಿ ವಿಶೇಷ ಕಾರ್ಯಪಡೆ ಯಶಸ್ವಿಯಾಗಿದೆ ಎಂಬುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ. ಶೈಕ್ಷಣಿಕ ವಲಯದಲ್ಲಿ ಶಾಂತಿ ನೆಲೆಸಿದರೆ ಮಾತ್ರ ಸರಸ್ವತಿಯ ಆರಾಧನೆ ನಿರ್ವಿಘ್ನವಾಗಿ ಸಾಗಲು ಸಾಧ್ಯ ಎಂಬ ಸತ್ಯವನ್ನು ಪೊಲೀಸ್ ಇಲಾಖೆ ಮನಗಂಡು ಕಾರ್ಯಪ್ರವೃತ್ತವಾಗಿದೆ.
ಜೈನ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಮೂಡುಬಿದಿರೆ, ಇಂದು ರಾಜ್ಯದ ಪ್ರಮುಖ ಶೈಕ್ಷಣಿಕ ಹಬ್ ಆಗಿ ಗುರುತಿಸಿಕೊಂಡಿದೆ. ದೇಶ-ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲಿ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರ ದಟ್ಟಣೆ ಹೆಚ್ಚಿರುತ್ತದೆಯೋ, ಅಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರಿಗೆ ಒಂದು ಸವಾಲಿನ ಕೆಲಸವಾಗಿರುತ್ತದೆ. ಈ ಹಿಂದೆ ಇಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ಘಟನೆಗಳೂ ದೊಡ್ಡ ಮಟ್ಟದ ಕೋಮು ಬಣ್ಣ ಪಡೆದುಕೊಳ್ಳುತ್ತಿದ್ದವು. ಈಗ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಠಿಣವಾಗಿ ಜಾರಿಗೊಳಿಸುತ್ತಿರುವ ಕಾರಣ ಇದಕ್ಕೆಲ್ಲಾ ಕಡಿವಾಣ ಹಾಕಲಾಗುತ್ತಿದೆ.
ಕರಾವಳಿ ಭಾಗದ ಅಪರಾಧ ಅಂಕಿಅಂಶಗಳ ವಿವರ
1. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ (ಅತಿ ಹೆಚ್ಚು ಇಳಿಕೆ ಕಂಡ ಪ್ರದೇಶ)
ವಿಶೇಷ ಕಾರ್ಯಪಡೆ ಮತ್ತು ಕೋಮು ನಿಗ್ರಹ ಪಡೆ ಈ ವ್ಯಾಪ್ತಿಯಲ್ಲಿ ಸಕ್ರಿಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಪರಾಧ ಪ್ರಕರಣಗಳಲ್ಲಿ ಶೇ.15 ರಿಂದ 20 ರಷ್ಟು ಇಳಿಕೆ ಕಂಡುಬಂದಿದೆ. ಮೂಡುಬಿದಿರೆಯಲ್ಲಿ 224 ರಿಂದ 174ಕ್ಕೆ ಇಳಿಕೆಯಾಗಿದೆ. ಮುಲ್ಕಿಯಲ್ಲಿ 149 ರಿಂದ 121ಕ್ಕೆ ಇಳಿಕೆಯಾಗಿದ್ದು, 28 ಪ್ರಕರಣಗಳು ಕಡಿಮೆಯಾಗಿವೆ. ಈ ವ್ಯಾಪ್ತಿಯಲ್ಲಿ ಬರ್ಕೆ, ಪಾಂಡೇಶ್ವರ ಮತ್ತು ಉರ್ವ ಠಾಣೆಗಳು ಬರಲಿದ್ದು, ಸರಗಳ್ಳತನ ಮತ್ತು ದರೋಡೆ ಪ್ರಕರಣಗಳು ಶೇ. 10 ರಷ್ಟು ಕಡಿಮೆಯಾಗಿವೆ. 'ನೈತಿಕ ಪೊಲೀಸ್‌ಗಿರಿ' ಪ್ರಕರಣಗಳು 2023ರಲ್ಲಿ 10ಕ್ಕೂ ಹೆಚ್ಚಿದ್ದವು, 2024ರಲ್ಲಿ ಇದು ಬೆರಳೆಣಿಕೆಯಷ್ಟು (1-3) ಮಾತ್ರ ವರದಿಯಾಗಿದೆ.
2. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ಈ ವ್ಯಾಪ್ತಿಗೆ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಪೊಲೀಸ್ ಠಾಣೆಗಳು ಬರಲಿದ್ದು, ಗ್ರಾಮಾಂತರ ಭಾಗದಲ್ಲಿ ಕೋಮು ಗಲಭೆಗಳಿಗಿಂತ ಹೆಚ್ಚಾಗಿ ಅಕ್ರಮ ಮದ್ಯ, ಮರಳುಗಾರಿಕೆ ಮತ್ತು ಗಾಂಜಾ ಪ್ರಕರಣಗಳು ಹೆಚ್ಚಿರುತ್ತಿದ್ದವು. 2023 ರಲ್ಲಿ ಸುಮಾರು 2,100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. 2024ರಲ್ಲಿ ಸುಮಾರು 1,850 - 1,900ರ ಆಸುಪಾಸಿಗೆ ಇಳಿದಿದೆ ಎಂದು ಅಂದಾಜಿಸಲಾಗಿದೆ. ಬಂಟ್ವಾಳ ಮತ್ತು ಪುತ್ತೂರು ಉಪವಿಭಾಗಗಳಲ್ಲಿ ಕೋಮು ಸಂಘರ್ಷದ ಪ್ರಕರಣಗಳು ಶೇ. 30% ರಷ್ಟು ಕಡಿಮೆಯಾಗಿವೆ. ರೌಡಿ ಶೀಟರ್‌ಗಳ ಮೇಲಿನ ನಿಗಾ ಮತ್ತು ಗಡಿಪಾರು ಶಿಕ್ಷೆಯು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
3. ಉಡುಪಿ ಜಿಲ್ಲಾ ಪೊಲೀಸ್
ಈ ವ್ಯಾಪ್ತಿಗೆ ಉಡುಪಿ ನಗರ, ಮಣಿಪಾಲ, ಕುಂದಾಪುರ, ಕಾರ್ಕಳ ಪೊಲೀಸ್ ಠಾಣೆಗಳು ಬರಲಿದ್ದು, ಉಡುಪಿಯಲ್ಲಿ ಪ್ರಮುಖವಾಗಿ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚು. ಇಲ್ಲಿ ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ ಸೇವನೆ ಪ್ರಕರಣಗಳ ಮೇಲೆ ಹೆಚ್ಚು ನಿಗಾ ಇಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 12 ರಷ್ಟು ಇಳಿಕೆ ಕಂಡುಬಂದಿವೆ.
ಸಿಸಿಟಿವಿ ಅಳವಡಿಕೆ ಹೆಚ್ಚಾದ ಕಾರಣ, ಕಳ್ಳತನ ಪ್ರಕರಣಗಳು ಗಣನೀಯವಾಗಿ ತಗ್ಗಿವೆ. ಕಳೆದ ವರ್ಷ 180 ಇದ್ದದ್ದು ಈ ವರ್ಷ 130ಕ್ಕೆ ಇಳಿದಿದೆ.
ಮಣಿಪಾಲದಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಹೆಚ್ಚು ಕೇಸುಗಳನ್ನು ದಾಖಲಿಸುವ ಮೂಲಕ ಪೂರೈಕೆಯನ್ನು ನಿಯಂತ್ರಿಸಲಾಗಿದೆ, ಇದರಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿನ ಗಲಾಟೆಗಳು ಕಡಿಮೆಯಾಗಿವೆ.
4. ಉತ್ತರ ಕನ್ನಡ ಜಿಲ್ಲಾ ಪೊಲೀಸ್
ಈ ವ್ಯಾಪ್ತಿಯಲ್ಲಿ ಕಾರವಾರ, ಭಟ್ಕಳ, ಶಿರಸಿ, ದಾಂಡೇಲಿ ಪೊಲೀಸ್ ಠಾಣೆಗಳು ಬರಲಿವೆ. ಅಪರಾಧ ಪ್ರಮಾಣ ಕರಾವಳಿಯ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮೊದಲೇ ಕಡಿಮೆಯಿತ್ತು. ಆದರೂ ಪ್ರವಾಸಿ ತಾಣಗಳಲ್ಲಿನ ಸುರಕ್ಷತೆಗೆ ಒತ್ತು ನೀಡಲಾಗಿದೆ. ಭಟ್ಕಳ ಮತ್ತು ಹೊನ್ನಾವರ ಭಾಗದಲ್ಲಿ ಹಿಂದಿನ ವರ್ಷಗಳಲ್ಲಿ ಆಗಾಗ ಕೇಳಿಬರುತ್ತಿದ್ದ ಅಶಾಂತಿ ಈಗ ಸಂಪೂರ್ಣ ಹತೋಟಿಯಲ್ಲಿದೆ. ಅಪರಾಧ ಪ್ರಕರಣಗಳಲ್ಲಿ ಶೇ. 8-10 ರಷ್ಟು ಇಳಿಕೆ ದಾಖಲಾಗಿದೆ.
ಕೋಮು ಗಲಭೆ ಹತೋಟಿ
ಹಿಂದಿನ ವರ್ಷಗಳಿಗೆ (2022 ಅಥವಾ 2023) ಹೋಲಿಸಿದರೆ, 2025ರಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚಿನ ಕೋಮು ಗಲಭೆಗಳು ನಡೆದಿಲ್ಲ. 2025ರ ಫೆಬ್ರವರಿ ಮತ್ತು ಆಗಸ್ಟ್ ತಿಂಗಳಲ್ಲಿ (ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣೇಶ ಹಬ್ಬದ ಸಂದರ್ಭದಲ್ಲಿ) ಸಾಮಾಜಿಕ ಜಾಲತಾಣದಲ್ಲಿ ಅನ್ಯ ಧರ್ಮವನ್ನು ನಿಂದಿಸುವ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಇದು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಮಂಗಳೂರು ಸೈಬರ್ ಠಾಣೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಪ್ರಚೋದನಕಾರಿ ಪೋಸ್ಟ್ ಹಾಕಿದ 4 ಜನರನ್ನು ಬಂಧಿಸಿದರು. ವಿಷಯ ಬೀದಿಗೆ ಬರುವ ಮುನ್ನವೇ ಇತ್ಯರ್ಥವಾಯಿತು.
ಏ.27ರಂದು ಮುಹಮ್ಮದ್ ಅಶ್ರಫ್ ಎಂಬಾತ ಕೇರಳ ಮೂಲದ ವ್ಯಕ್ತಿಯನ್ನು ಮಂಗಳೂರು ಹೊರವಲಯದ ಹತ್ಯೆ ಮಾಡಲಾಯಿತು. ಮುಹಮ್ಮದ್ ಅಶ್ರಫ್ ಅವರು ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕುಡುಪುವಿನಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದಾಗ ಅಲ್ಲಿ ಜಗಳ ಉಂಟಾಗಿತ್ತು. ಅಶ್ರಫ್ ಅವರು ಮೈದಾನದಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ಘೋಷಣೆ ಕೂಗಿದರು ಎಂಬ ಆರೋಪದ ಮೇಲೆ ಅಲ್ಲಿದ್ದ ಗುಂಪೊಂದು ಅವರನ್ನು ಹಿಡಿದು ಮನಬಂದಂತೆ ಥಳಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಶ್ರಫ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಅಶ್ರಫ್ ಅವರ ಕುಟುಂಬದವರು ಮತ್ತು ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಶ್ರಫ್ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು.
ಇನ್ನು, ಬಜರಂಗದಳದ ಮಾಜಿ ಕಾರ್ಯಕರ್ತ ಸುಹಾಸ್ ಶೆಟ್ಟಿ (30) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಇನ್ನೂ ಮೂವರನ್ನು ಬಂಧಿಸಿದ್ದಾರೆ. ಪತ್ರಿಕಾ ಪ್ರಕಟಣೆಯ ಪ್ರಕಾರ, ಅಜರುದ್ದೀನ್ ಶೆಟ್ಟಿಯ ಚಲನವಲನಗಳ ಬಗ್ಗೆ ದಾಳಿಕೋರರಿಗೆ ಮಾಹಿತಿ ನೀಡಿದ್ದಾರೆ.
ಸುಹಾಸ್ ಶೆಟ್ಟಿ ಎಂಬಾತ ಕರಾವಳಿಯ ರೌಡಿ ಶೀಟರ್ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತನಾಗಿದ್ದ. 2018ರಲ್ಲಿ ಇಲ್ಯಾಸ್ ಎಂಬಾತನ ಹತ್ಯೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಇದೇ ದ್ವೇಷದಿಂದಾಗಿ ಮೇ 1 ರಂದು ಬಜ್ಪೆಯಲ್ಲಿ ನಡೆದ ಹತ್ಯೆ ಮಾಡಲಾಯಿತು. ಕೋಮು ಹತ್ಯೆಯಾದರೂ ಪೊಲೀಸರು ಕೋಮು ಗಲಭೆಯನ್ನು ನಿಯಂತ್ರಿಸಿದರು. ವರ್ಷದ ಆರಂಭದಲ್ಲಿ (ಜನವರಿ-ಮಾರ್ಚ್ ಅವಧಿಯಲ್ಲಿ) ದಕ್ಷಿಣ ಕನ್ನಡದ ಗ್ರಾಮಾಂತರ ಭಾಗದಲ್ಲಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಸಣ್ಣ ಘರ್ಷಣೆಗಳು ವರದಿಯಾಗಿದ್ದವು. ಆದರೆ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕರಾವಳಿ ಭಾಗದಲ್ಲಿ, ವಿಶೇಷವಾಗಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲು ಪೊಲೀಸ್ ಇಲಾಖೆ ಕೈಗೊಂಡ 'ಬಹುಮುಖ ತಂತ್ರಗಾರಿಕೆ' ಪ್ರಮುಖ ಕಾರಣವಾಗಿದೆ. ಪೊಲೀಸರು ಕೈಗೊಂಡ ತಂತ್ರಗಾರಿಕೆಗಳು ಇಂತಿವೆ.
ಕೋಮು ನಿಗ್ರಹ ಪಡೆ
ಕರಾವಳಿಯಲ್ಲಿ ಶಾಂತಿ ಕದಡಲು ಮುಖ್ಯ ಕಾರಣವಾಗಿದ್ದೇ ಕೋಮು ಸಂಘರ್ಷಗಳು ಮತ್ತು ನೈತಿಕ ಪೊಲೀಸ್‌ಗಿರಿ. ಇದನ್ನು ತಡೆಯಲು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ 'ಕೋಮು ವಿರೋಧಿ ದಳ' ರಚಿಸಲಾಯಿತು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಕೋಮು ಪ್ರಕರಣಗಳನ್ನು ನಿರ್ವಹಿಸಲು ಈ ವಿಶೇಷ ಪಡೆಯನ್ನು 2023ರ ಜೂನ್ ತಿಂಗಳಲ್ಲಿ ರಚಿಸಲಾಯಿತು. ಇದರ ಪರಿಣಾಮವಾಗಿ, 2023ರಲ್ಲಿ 15ರಷ್ಟಿದ್ದ ನೈತಿಕ ಪೊಲೀಸ್‌ಗಿರಿ ಪ್ರಕರಣಗಳು, 2024ರಲ್ಲಿ 8ಕ್ಕೆ ಮತ್ತು 2025ರಲ್ಲಿ ಕೇವಲ 1-2ಕ್ಕೆ ಇಳಿದಿವೆ. ಈ ಪಡೆಯು ಕೇವಲ ನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗುವವರನ್ನು ಬಂಧಿಸುವುದಲ್ಲದೆ, ಅವರ ಆರ್ಥಿಕ ಮೂಲಗಳು ಮತ್ತು ಹಿನ್ನೆಲೆಯನ್ನು ತನಿಖೆ ಮಾಡಲು ಪ್ರಾರಂಭಿಸಿತು. ಇದರಿಂದ ಕಿಡಿಗೇಡಿಗಳಲ್ಲಿ ಭಯ ಹುಟ್ಟಿ, ಅಪರಾಧ ಕೃತ್ಯಗಳು ಕಡಿಮೆಯಾಗಲು ಕಾರಣವಾಯಿತು.
ರೌಡಿಗಳ ಗಡಿಪಾರು ಅಸ್ತ್ರದ ಬಳಕೆ
ಕಳೆದ ಎರಡು ವರ್ಷಗಳಲ್ಲಿ ಪೊಲೀಸ್ ಕಮಿಷನರೇಟ್ ಇತಿಹಾಸದಲ್ಲೇ ಅತಿ ಹೆಚ್ಚು ರೌಡಿ ಶೀಟರ್‌ಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಗಲಭೆ ಸೃಷ್ಟಿಸುವ ಪ್ರಮುಖ "ಕಿಂಗ್‌ಪಿನ್"ಗಳನ್ನು ಊರ ಬಿಟ್ಟು ಓಡಿಸಿದ್ದು ಶಾಂತಿ ನೆಲೆಸಲು ಮುಖ್ಯ ಕಾರಣವಾಯಿತು. ಹಿಂದೆ ರೌಡಿ ಶೀಟರ್‌ಗಳು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದು ಮತ್ತೆ ಅಪರಾಧ ಮಾಡುತ್ತಿದ್ದರು. ಆದರೆ ಕಳೆದ ಒಂದು ವರ್ಷದಲ್ಲಿ ಪೊಲೀಸರು ವಿಭಿನ್ನ ಕ್ರಮ ಅನುಸರಿಸಿದರು ಸಮಾಜಕ್ಕೆ ಕಂಟಕವಾಗಿದ್ದ ಪ್ರಮುಖ ರೌಡಿಗಳನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಲಾಯಿತು. ಸಣ್ಣಪುಟ್ಟ ಅಪರಾಧ ಮಾಡುವವರಿಂದಲೂ ಮುಂಚಿತವಾಗಿಯೇ "ಮತ್ತೆ ತಪ್ಪು ಮಾಡುವುದಿಲ್ಲ" ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಯಿತು. ಒಂದು ವೇಳೆ ಬಾಂಡ್ ಉಲ್ಲಂಘಿಸಿದರೆ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಯಿತು. ಇದು ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಗೆ ಕಾರಣ ಎಂದು ಹೇಳಲಾಗಿದೆ.
ಸಾಮಾಜಿಕ ಜಾಲತಾಣಗಳ ಮೇಲೆ 'ಹದ್ದಿನ ಕಣ್ಣು'
2020-21ರಲ್ಲಿ ನಡೆದ ಶೇ.60ರಷ್ಟು ಗಲಾಟೆಗಳಿಗೆ ವಾಟ್ಸಾಪ್ ಮತ್ತು ಫೇಸ್‌ಬುಕ್ ಪೋಸ್ಟ್‌ಗಳೇ ಕಾರಣವಾಗಿದ್ದವು. ಈಗ ವಿಶೇಷ ಸೈಬರ್ ತಂಡವು ಇಂತಹ ಪೋಸ್ಟ್ ಹಾಕುವವರನ್ನು ಕೇವಲ ಗಂಟೆಗಳ ಅವಧಿಯಲ್ಲಿ ಪತ್ತೆ ಹಚ್ಚಿ ಬಂಧಿಸುತ್ತಿದೆ. ಸುಳ್ಳು ಸುದ್ದಿ ಹಬ್ಬಿಸಿದರೆ ಜೈಲು ಗ್ಯಾರಂಟಿ ಎಂಬ ಭಯ ಹುಟ್ಟಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಧಾರಿತ ತಂತ್ರಜ್ಞಾನ ಬಳಸಿ, ಸುಳ್ಳು ಸುದ್ದಿ ಹಬ್ಬಿಸುವವರನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ಬಂಧಿಸಲಾಯಿತು. "ಮೊಬೈಲ್‌ನಲ್ಲಿ ಬರೆದರೆ ಜೈಲಿಗೆ ಹೋಗಬೇಕಾಗುತ್ತದೆ" ಎಂಬ ಸಂದೇಶ ರವಾನೆಯಾದ್ದರಿಂದ ಆನ್‌ಲೈನ್ ದ್ವೇಷ ಪ್ರಚಾರ ಕಡಿಮೆಯಾಯಿತು.
ಡ್ರಗ್ಸ್ ವಿರುದ್ಧದ ಸಮರ
ಅನೇಕ ಸರಗಳ್ಳತನ, ದರೋಡೆ ಮತ್ತು ಹಲ್ಲೆ ಪ್ರಕರಣಗಳ ಮೂಲ ಗಾಂಜಾ ಮತ್ತು ಮಾದಕ ದ್ರವ್ಯಗಳ ಸೇವನೆಯಾಗಿತ್ತು. ಮೂಡುಬಿದಿರೆ ಮತ್ತು ಮಣಿಪಾಲದಂತಹ ಶೈಕ್ಷಣಿಕ ಕೇಂದ್ರಗಳಲ್ಲಿ ಪೊಲೀಸರು 'ಸಪ್ಲೈಯರ್'ಗಳನ್ನೇ ಗುರಿಯಾಗಿಸಿಕೊಂಡರು. ಮಾದಕ ವಸ್ತುಗಳ ಪೂರೈಕೆ ಸರಪಳಿ ಕಟ್ ಆದಾಗ, ಅದನ್ನು ಅವಲಂಬಿಸಿದ್ದ ಸಣ್ಣಪುಟ್ಟ ಅಪರಾಧಗಳೂ ತಾನಾಗಿಯೇ ಕಡಿಮೆಯಾದವು.
ತಾಂತ್ರಿಕ ಸಾಕ್ಷ್ಯ ಮತ್ತು ಸಿಸಿಟಿವಿ ಕಣ್ಗಾವಲು
ಮುಲ್ಕಿಯಂತಹ ಹೆದ್ದಾರಿ ಪ್ರದೇಶಗಳಲ್ಲಿ ಮತ್ತು ಮೂಡುಬಿದಿರೆಯ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಅಪರಾಧ ಮಾಡಿದರೆ ಕ್ಯಾಮೆರಾದಲ್ಲಿ ಸೆರೆಯಾಗುತ್ತೇವೆ ಮತ್ತು ಸಿಕ್ಕಿಬೀಳುತ್ತೇವೆ ಎಂಬ ಭಯ ಕಳ್ಳರಲ್ಲಿ ಮೂಡಿತು. ಅಲ್ಲದೆ, ಹಳೆಯ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ತಾಂತ್ರಿಕ ಸಾಕ್ಷ್ಯಗಳು ಬಲ ನೀಡಿದವು.
ಸಮುದಾಯದ ವಿಶ್ವಾಸ
ಪೊಲೀಸರು ಕೇವಲ ಲಾಠಿ ಬೀಸದೆ, ಜನರ ಬಳಿ ತೆರಳಿದರು. ಹಬ್ಬಗಳ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರನ್ನು ಒಂದೇ ಕಡೆ ಸೇರಿಸಿ ಶಾಂತಿ ಸಭೆ ನಡೆಸಲಾಯಿತು. ಠಾಣೆಗೆ ದೂರು ನೀಡಲು ಬರುವ ಸಾಮಾನ್ಯ ಜನರೊಂದಿಗೆ ಪೊಲೀಸರ ವರ್ತನೆಯಲ್ಲಿ ಸುಧಾರಣೆ ಕಂಡುಬಂದಿತು. ಇದರಿಂದಾಗಿ ಸಣ್ಣ ಸಮಸ್ಯೆಯೂ ದೊಡ್ಡದಾಗುವ ಮುನ್ನವೇ ಪೊಲೀಸರ ಗಮನಕ್ಕೆ ಬರುವಂತಾಯಿತು. ಮುಲ್ಕಿ ಮತ್ತು ಮೂಡುಬಿದಿರೆಯಲ್ಲಿ ಪೊಲೀಸರು ಕೇವಲ ಠಾಣೆಗೆ ಸೀಮಿತವಾಗದೆ, ಕಾಲೇಜುಗಳಿಗೆ ಮತ್ತು ಸಾರ್ವಜನಿಕ ಸಮಾರಂಭಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.
ಹಳೆಯ ತಂತ್ರಜ್ಞಾನ, ಹೊಸ ತಂತ್ರ: ಪೊಲೀಸ್ ಆಯುಕ್ತರ ದಿಟ್ಟ ಹೆಜ್ಜೆ
ಆಧುನಿಕ ಯುಗದಲ್ಲಿ ಸಂವಹನಕ್ಕಾಗಿ ಎಷ್ಟೇ ಹೈಟೆಕ್ ಉಪಕರಣಗಳು ಬಂದಿದ್ದರೂ, ಪೊಲೀಸ್ ಇಲಾಖೆಯ ಬೆನ್ನೆಲುಬಾಗಿರುವ ಹಳೆಯ 'ವೈರ್‌ಲೆಸ್ ಸೆಟ್' ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದನ್ನು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತೋರಿಸಿಕೊಟ್ಟಿದ್ದಾರೆ. ಅವರು ಆರಂಭಿಸಿರುವ "ಬೆಳಗಿನ ವೈರ್‌ಲೆಸ್ ಕಾನ್ಫರೆನ್ಸ್" ಪ್ರಯೋಗವು ಇಲಾಖೆಯ ಕಾರ್ಯವೈಖರಿಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.
ಕಾರ್ಯಾಚರಣೆಯ ವಿಧಾನ
ಸಮಯ ಮತ್ತು ವ್ಯಾಪ್ತಿ: ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಈ ಕಾನ್ಫರೆನ್ಸ್ ಆರಂಭವಾಗುತ್ತದೆ. ಸುಮಾರು 20 ರಿಂದ 30 ನಿಮಿಷಗಳ ಕಾಲ ನಡೆಯುವ ಈ ಸಂವಹನವು, ಕಮಿಷನರೇಟ್ ವ್ಯಾಪ್ತಿಯ 1,300 ಸಿಬ್ಬಂದಿಗಳ ಪೈಕಿ ಸುಮಾರು ಶೇ.60 ರಿಂದ 70 ರಷ್ಟು ಸಿಬ್ಬಂದಿಯನ್ನು ಏಕಕಾಲದಲ್ಲಿ ತಲುಪುತ್ತದೆ. ಅಂದಿನ ದಿನದ ವಿಐಪಿ ಚಲನವಲನಗಳು, ನ್ಯಾಯಾಲಯದ ವಿಚಾರಣೆಗಳು, ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳು ಮತ್ತು ದಿನದ ಕರ್ತವ್ಯಗಳ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗುತ್ತದೆ.
ಸಮಯ ಉಳಿತಾಯ ಮತ್ತು ನೇರ ಸಂಪರ್ಕ
ಹಿಂದೆ ಹಿರಿಯ ಅಧಿಕಾರಿಗಳು ಸೂಚನೆಗಳನ್ನು ನೀಡಲು ವೀಡಿಯೊ ಕಾನ್ಫರೆನ್ಸ್ ನಡೆಸುತ್ತಿದ್ದರು ಅಥವಾ ಪ್ರತಿಯೊಬ್ಬ ಇನ್ಸ್‌ಪೆಕ್ಟರ್‌ಗೂ ಪ್ರತ್ಯೇಕವಾಗಿ ಕರೆ ಮಾಡಬೇಕಿತ್ತು. ಆದರೆ, ವೈರ್‌ಲೆಸ್ ಕಾನ್ಫರೆನ್ಸ್ ಮೂಲಕ ಕಮಿಷನರ್ ಅವರು ಒಂದೇ ಬಾರಿಗೆ ಎಲ್ಲರಿಗೂ ಸ್ಪಷ್ಟ ಸೂಚನೆಗಳನ್ನು ನೀಡುತ್ತಾರೆ. ಇದು ಸಮಯವನ್ನು ಉಳಿಸುವುದಲ್ಲದೆ, ಮಾಹಿತಿಯು ಕೆಳಹಂತದ ಸಿಬ್ಬಂದಿಗೆ ಯಾವುದೇ ಗೊಂದಲವಿಲ್ಲದೆ ತಲುಪುವುದನ್ನು ಖಚಿತಪಡಿಸುತ್ತದೆ. ಇದು ಕೇವಲ ಆದೇಶ ನೀಡುವ ವೇದಿಕೆಯಾಗಿಲ್ಲ. ಕಮಿಷನರ್ ಅವರು ನೀಡುವ ಮಾರ್ಗದರ್ಶನ ಮತ್ತು ಪ್ರೋತ್ಸಾಹದಾಯಕ ಮಾತುಗಳು ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಸ್ಫೂರ್ತಿ ತುಂಬುತ್ತವೆ.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಆಯುಕ್ತರು ಅಪಾರ ಜ್ಞಾನದ ಆಧಾರದ ಮೇಲೆ ನೀಡುವ ನಿರ್ದೇಶನಗಳು ಸಿಬ್ಬಂದಿ ಪ್ರತಿದಿನ ಎದುರುನೋಡುವಂತೆ ಮಾಡಿವೆ. ಈ ವ್ಯವಸ್ಥೆಯ ಅತ್ಯಂತ ದೊಡ್ಡ ಲಾಭವೆಂದರೆ ಅಂತರ-ಠಾಣಾ ಮಾಹಿತಿ ವಿನಿಮಯವಾಗುತ್ತದೆ.
ಕೋಣಾಜೆ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ 'ನಜ್ಜು' ಎಂಬಾತನನ್ನು ಬಂಧಿಸಿದ ವಿಷಯವನ್ನು ವೈರ್‌ಲೆಸ್ ಕಾನ್ಫರೆನ್ಸ್‌ನಲ್ಲಿ ಹಂಚಿಕೊಂಡರು. ಈ ಮಾಹಿತಿಯನ್ನು ಕೇಳಿಸಿಕೊಂಡ ಉಳ್ಳಾಲ ಠಾಣಾ ಪೊಲೀಸರು, ಆತ ತಮ್ಮ ವ್ಯಾಪ್ತಿಯಲ್ಲಿಯೂ 8-10 ಪ್ರಕರಣಗಳಲ್ಲಿ ಬೇಕಾದವನು ಎಂಬುದನ್ನು ತಕ್ಷಣ ಗುರುತಿಸಿದರು. ಹೀಗೆ ಒಂದು ಠಾಣೆಯ ಮಾಹಿತಿ ಮತ್ತೊಂದು ಠಾಣೆಗೆ ತ್ವರಿತವಾಗಿ ತಲುಪುವಂತಾಗಿದೆ ಎಂದು ಸುಧೀರ್ ಕುಮಾರ್ ರೆಡ್ಡಿ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸ ತಂತ್ರಗಾರಿಕೆಗಳ ಅನುಷ್ಠಾನ
ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವರ್ಷಗಟ್ಟಲೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು, ಪಾಕ್ಷಿಕ ಸಭೆಯಲ್ಲಿ ಅನುಮೋದಿಸಲಾದ ಹೊಸ ತಂತ್ರವನ್ನು ಕಾನ್ಫರೆನ್ಸ್ ಮೂಲಕ ಜಾರಿಗೊಳಿಸಲಾಯಿತು. ಆರೋಪಿಗಳಿಗೆ ಜಾಮೀನು ನೀಡುವಾಗ ಸಹಿ ಹಾಕಿದ ಭರವಸೆದಾರರ ಮೇಲೆ ಪೊಲೀಸರು ಒತ್ತಡ ಹೇರಲು ಆರಂಭಿಸಿದರು. ಇದರ ಪರಿಣಾಮವಾಗಿ, ಇಬ್ಬರು ಆರೋಪಿಗಳು ಇತ್ತೀಚೆಗೆ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಕೇವಲ ಸೂಚನೆ ನೀಡುವುದು ಮಾತ್ರವಲ್ಲದೆ, ನೀಡಿದ ಸೂಚನೆಗಳು ಪಾಲನೆಯಾಗುತ್ತಿವೆಯೇ ಎಂದು ಪರಿಶೀಲಿಸಲೂ ಈ ವ್ಯವಸ್ಥೆ ಸಹಕಾರಿಯಾಗಿದೆ. ಈ ನಿರಂತರ ಸಂಪರ್ಕದಿಂದಾಗಿ ಪೊಲೀಸ್ ವ್ಯವಸ್ಥೆಯು ತನ್ನ ದಿಕ್ಕನ್ನು ಕಳೆದುಕೊಳ್ಳದಂತೆ ಎಚ್ಚರವಹಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಅಪರಾಧ ಪ್ರಕರಣಗಳ ಇಳಿಕೆ ಸಂಬಂಧ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲಾಗುತ್ತಿದೆಯೇ ಹೊರತು ಬೇರೇನು ಇಲ್ಲ. ಪೊಲೀಸರ ಕಾರ್ಯವೈಖರಿಯನ್ನೇ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ. ಅಲ್ಲದೇ, ಎಲ್ಲಾ ಪೊಲೀಸ್ ಠಾಣೆಗಳೊಂದಿಗೆ ಸಂಪರ್ಕ ಮತ್ತುಸಮನ್ವಯದೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.