ನೌಕರನ ಜಾತಿ ವಿಚಾರಣೆ ನಡೆಸಲು ಉದ್ಯೋಗದಾತರಿಗೆ ಅಧಿಕಾರವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಉದ್ಯೋಗಿಯ ಜಾತಿ ಪ್ರಮಾಣಪತ್ರ ಅಥವಾ ಜಾತಿ ಸ್ಥಿತಿಗತಿಯನ್ನು ಪರಿಶೀಲಿಸುವ ಅಧಿಕಾರ ಉದ್ಯೋಗದಾತ ಇಲಾಖೆಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್
ಉದ್ಯೋಗಿಯ ಜಾತಿಯ ಕುರಿತು ವಿಚಾರಣೆ ನಡೆಸುವ ಅಧಿಕಾರ ಉದ್ಯೋಗದಾತರಿಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಮಹತ್ವದ ತೀರ್ಪು ನೀಡಿದೆ. ಕಾರವಾರದ ಅಗ್ನಿಶಾಮಕ ಠಾಣಾಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ
ಅರ್ಜಿದಾರ ರಾಜು ತಳವಾರ್ ಅವರು ಅಗ್ನಿಶಾಮಕ ಠಾಣಾಧಿಕಾರಿಯಾಗಿ ಇತರ ಹಿಂದುಳಿದ ವರ್ಗಗಳ (OBC-I) ಅಡಿಯಲ್ಲಿ ನೇಮಕಗೊಂಡಿದ್ದರು. 2020ರಲ್ಲಿ ತಳವಾರ್ ಜಾತಿಯನ್ನು ಪರಿಶಿಷ್ಟ ಪಂಗಡದ (ST) ಪಟ್ಟಿಗೆ ಸೇರಿಸಲಾಯಿತು. ನಂತರ ಸರ್ಕಾರವು ಈ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಿತ್ತು. ಈ ಬದಲಾವಣೆಯ ಆಧಾರದ ಮೇಲೆ ಅರ್ಜಿದಾರರು ಪರಿಶಿಷ್ಟ ಪಂಗಡದ ಅಡಿಯಲ್ಲಿ ಬಡ್ತಿ ಪಡೆದಿದ್ದರು. ಆದರೆ, ಅವರ ನೇಮಕಾತಿ ಮತ್ತು ಜಾತಿ ಸ್ಥಿತಿಯ ಕುರಿತು ವಿಚಾರಣೆ ನಡೆಸಲು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ರಾಜು ತಳವಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೋರ್ಟ್‌ಗೆ ಆದೇಶದಲ್ಲೇನಿದೆ?
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಕಾಯ್ದೆ 1990ರ ಅಡಿಯಲ್ಲಿ ಜಾತಿ ಸ್ಥಿತಿಯನ್ನು ವಿಚಾರಣೆ ನಡೆಸುವ ಅಧಿಕಾರ ಕೇವಲ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಮಾತ್ರ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
"ನೌಕರನ ಜಾತಿ ಯಾವುದು ಎಂದು ಪ್ರಶ್ನಿಸುವ ಅಥವಾ ತನಿಖೆ ನಡೆಸುವ ಕಾನೂನುಬದ್ಧ ಅಧಿಕಾರ ಉದ್ಯೋಗದಾತ ಇಲಾಖೆಗೆ ಇಲ್ಲ. ಅಗ್ನಿಶಾಮಕ ದಳವು ಕಾಯ್ದೆಯ ಅಡಿಯಲ್ಲಿ ಇಂತಹ ವಿಚಾರಣೆ ನಡೆಸಲು ಅಧಿಕಾರ ಹೊಂದಿರುವ ಸಂಸ್ಥೆಯಲ್ಲ. ಈ ಕುರಿತಾದ ಅನೇಕ ತೀರ್ಪುಗಳು ಈಗಾಗಲೇ ಸ್ಪಷ್ಟವಾಗಿವೆ" ಎಂದು ತಿಳಿಸಿದ ನ್ಯಾಯಾಲಯವು, ಇಲಾಖೆಯು ನೀಡಿದ್ದ ನೋಟಿಸ್ ಅನ್ನು ರದ್ದುಗೊಳಿಸಿ ಅರ್ಜಿಯನ್ನು ಪುರಸ್ಕರಿಸಿತು.