
Namma Metro| ಉತ್ತರ ಕರ್ನಾಟಕಕ್ಕೆ ಕೊಂಡಿಯಾಗಲಿರುವ ಮೊದಲ ಅಂತರ್ಜಿಲ್ಲಾ ʼನಮ್ಮ ಮೆಟ್ರೋʼ!
ನಮ್ಮ ಮೆಟ್ರೋದ ಹಸಿರು ಮಾರ್ಗವನ್ನು ಮಾದಾವರದಿಂದ ತುಮಕೂರಿಗೆ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ರಾಜ್ಯದ ಮೊಟ್ಟ ಮೊದಲ ಅಂತರ್-ಜಿಲ್ಲಾ ಮೆಟ್ರೋ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ದಶಕಗಳಿಂದ ಕೇವಲ ಕನಸಾಗಿಯೇ ಉಳಿದಿದ್ದ, ಬೆಂಗಳೂರಿನಿಂದ ಹೊರಗೊಂದು ಜಿಲ್ಲೆಗೆ ‘ನಮ್ಮ ಮೆಟ್ರೋ’ ಸಂಪರ್ಕ ಕಲ್ಪಿಸುವ ಬೃಹತ್ ಯೋಜನೆ ನನಸಾಗುವತ್ತ ಸಾಗಿದ್ದು, ಅಧಿಕೃತವಾಗಿ ಕಾರ್ಯರೂಪಕ್ಕೆ ಇಳಿಯುವ ಹಂತಕ್ಕೆ ಬಂದಿದೆ.
ನಮ್ಮ ಮೆಟ್ರೋದ ಹಸಿರು ಮಾರ್ಗವನ್ನು ಬೆಂಗಳೂರಿನ ಮಾದಾವರದಿಂದ ಕಲ್ಪತರು ನಾಡು ವಿಸ್ತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ರಾಜ್ಯದ ಮೊಟ್ಟ ಮೊದಲ ಅಂತರ್-ಜಿಲ್ಲಾ ಮೆಟ್ರೋ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಉತ್ತರ ಕರ್ನಾಟಕ ಭಾಗವನ್ನು ಬೆಂಗಳೂರಿಗೆ, ಅದರಲ್ಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಲಿದೆ ಈ ಮೆಟ್ರೋ!
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇದು, ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಬದಲಿಗೆ ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ರಾಜ್ಯದ ಇತರ ನಗರಗಳ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯುವ ದೂರದೃಷ್ಟಿಯ ಕ್ರಮ ಎಂದು ನಗರ ತಜ್ಞರು ವಿಶ್ಲೇಷಿಸಿದ್ದಾರೆ. ನಮ್ಮ ಮೆಟ್ರೋದ ಹಸಿರು ಮಾರ್ಗವು ರೇಷ್ಮೆ ಸಂಸ್ಥೆಯಿಂದ ತುಮಕೂರು ರಸ್ತೆಯಲ್ಲಿರುವ ಮಾದಾವರದವರೆಗೂ (ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ) ಕಾರ್ಯನಿರ್ವಹಿಸುತ್ತಿದೆ. ಈ ಮಾರ್ಗವನ್ನು ಮಾದಾವರದಿಂದ ತುಮಕೂರಿನವರೆಗೆ ಸುಮಾರು 59.6 ಕಿಲೋಮೀಟರ್‌ಗಳಷ್ಟು ವಿಸ್ತರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಉದ್ದನೆಯ ಮಾರ್ಗದಲ್ಲಿ ಸಂಪೂರ್ಣವಾಗಿ ಎತ್ತರಿಸಿದ ಹಳಿಯನ್ನು ನಿರ್ಮಿಸಲಾಗುತ್ತಿದ್ದು, ಒಟ್ಟು 25 ರಿಂದ 27 ನಿಲ್ದಾಣಗಳು ನಿರ್ಮಾಣವಾಗಲಿವೆ. ಈ ಮಾರ್ಗವು ಮಾದಾವರದಿಂದ ಆರಂಭಗೊಂಡು ಮಾಕಳಿ, ದಾಸನಪುರ, ನೆಲಮಂಗಲ, ದಾಬಸ್‌ಪೇಟೆ, ಸೋಂಪುರ ಕೈಗಾರಿಕಾ ಪ್ರದೇಶ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಕ್ಯಾತಸಂದ್ರದಂತಹ ಪ್ರಮುಖ ಆರ್ಥಿಕ ಹಾಗೂ ಜನನಿಬಿಡ ಪ್ರದೇಶಗಳ ಮೂಲಕ ಹಾದು ತುಮಕೂರು ನಗರವನ್ನು ತಲುಪಲಿದೆ. ಈ ಮೂಲಕ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಿಗುವ ನಿರೀಕ್ಷೆಯಿದೆ.
ಹೂಡಿಕೆಗೆ ಮುಂದಾದ ಕತಾರ್ ಮೂಲದ ಕಂಪನಿ
ತುಮಕೂರುವರೆಗೆ ಮೆಟ್ರೋ ಕೊಂಡೊಯ್ಯುವ ಬಗ್ಗೆ ಸರ್ಕಾರ ಮುಂದಾಗಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ವಿವರವಾದ ಯೋಜನಾ ವರದಿ (ಡಿಪಿಆರ್) ಅನ್ನು ಸಿದ್ಧಪಡಿಸಲು ಟೆಂಡರ್ ಅನ್ನು ಆಹ್ವಾನಿಸಿದೆ. ಸುಮಾರು 20,649 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಬೃಹತ್ ಯೋಜನೆಗೆ ಸಂಪನ್ಮೂಲ ಕ್ರೋಢೀಕರಿಸಲು ರಾಜ್ಯ ಸರ್ಕಾರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಎರಡು-ಮೂರು ಕಂಪನಿಗಳು ಪಿಪಿಪಿ ಮಾದರಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಅಲ್ಲದೇ, ಹೂಡಿಕೆ ಮಾಡಲು ಸಿದ್ಧ ಇರುವುದಾಗಿ ಕತಾರ್ ಮೂಲದ ಕಂಪನಿಯೊಂದು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕೃತವಾಗಿ ಪತ್ರ ನೀಡಿದೆ.
ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಿಸಲಾಗಿದೆ. ಈಗಾಗಲೇ 200 ಕೈಗಾರಿಕೆಗಳು ಬಂದಿವೆ. ಫುಡ್‌ಪಾರ್ಕ್, ಟೈಮೆಕ್ ಜಪಾನೀಸ್ ಫ್ಯಾಕ್ಟರಿ, ಜಪನೀಸ್ ಟೌನ್‌ಶಿಪ್‌ಗೆ ಜಾಗ ನೀಡಲಾಗಿದೆ. ರಸ್ತೆ, ಮೆಟ್ರೋ ಮತ್ತು ರೈಲು ಸಂಪರ್ಕದಿಂದ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ. ರಾಮನಗರ, ಕೋಲಾರ, ತುಮಕೂರು ನಗರಗಳನ್ನು ಬೆಳೆಸಿದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂಬ ಸಾರ್ವಜನಿಕರ ಅಭಿಪ್ರಾಯವಾಗಿದೆ.
ಆರ್ಥಿಕತೆಗೆ ಹೊಸ ವೇಗ
ತುಮಕೂರು ಕೇವಲ ಜಿಲ್ಲಾ ಕೇಂದ್ರವಾಗಿ ಉಳಿದಿಲ್ಲ, ಬದಲಿಗೆ ಇದು ರಾಜ್ಯದ ಪ್ರಮುಖ ಕೈಗಾರಿಕಾ ಮತ್ತು ಶೈಕ್ಷಣಿಕ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ವಸಂತನರಸಾಪುರ ತುಮಕೂರು ಜಿಲ್ಲೆಯಲ್ಲಿ ನೆಲೆಯೂರಿದ್ದು, ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಿದೆ. ಪ್ರತಿನಿತ್ಯ ಸಾವಿರಾರು ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳು ತುಮಕೂರಿನಿಂದ ಬೆಂಗಳೂರಿಗೆ ಬಸ್ಸು ಮತ್ತು ರೈಲುಗಳ ಮೂಲಕ ಪ್ರಯಾಣಿಸುತ್ತಾರೆ. ಈ ನಿರಂತರ ಪ್ರಯಾಣದ ಒತ್ತಡವನ್ನು ಕಡಿಮೆ ಮಾಡಲು ಮತ್ತು ತುಮಕೂರಿನ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಮೆಟ್ರೋ ಸಂಪರ್ಕ ಅತ್ಯಗತ್ಯ ಎಂಬುದು ಕೈಗಾರಿಕೋದ್ಯಮಿಗಳು, ಸ್ಥಳೀಯ ಜನಪ್ರತಿನಿಧಿಗಳ ಬಹುಕಾಲದ ಬೇಡಿಕೆಯಾಗಿತ್ತು. ಈ ಯೋಜನೆ ಪೂರ್ಣಗೊಂಡರೆ, ಸರಕು ಸಾಗಣೆ ಮತ್ತು ಉದ್ಯೋಗಿಗಳ ಪ್ರಯಾಣ ಸುಲಭವಾಗಿ, ತುಮಕೂರು ಬೆಂಗಳೂರಿನ ಸ್ಯಾಟಲೈಟ್ ಟೌನ್ ಆಗಿ ಇನ್ನಷ್ಟು ಪ್ರಗತಿ ಸಾಧಿಸಲಿದೆ.
ಬಹುಮುಖಿ ಪ್ರಯೋಜನಗಳು
ತುಮಕೂರುವರೆಗೆ ಮೆಟ್ರೋ ವಿಸ್ತರಣೆಯಾದರೆ ಈ ಮಾರ್ಗ ಕೇವಲ ಬೆಂಗಳೂರು-ತುಮಕೂರು ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದಲ್ಲದೆ, ಹಲವು ಆಯಾಮಗಳಲ್ಲಿ ಪ್ರಯೋಜನಕಾರಿಯಾಗಲಿದೆ. ತುಮಕೂರು ಜಿಲ್ಲೆ ಸಮೀಪ ಭವಿಷ್ಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ, ಈ ಮೆಟ್ರೋ ಮಾರ್ಗವು ನೇರ ಸಂಪರ್ಕ ಕಲ್ಪಿಸಲಿದೆ.
ಉತ್ತರ ಕರ್ನಾಟಕಕ್ಕೆ ಹೆಬ್ಬಾಗಿಲಾಗಲಿದೆ. ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳಿಗೆ ಪ್ರಯಾಣಿಸುವವರಿಗೆ ತುಮಕೂರು ಒಂದು ಪ್ರಮುಖ ಮಧ್ಯಂತರ ಕೇಂದ್ರವಾಗಿದೆ. ಅಲ್ಲಿಂದ ಬೆಂಗಳೂರಿಗೆ ಬರಲು ಮೆಟ್ರೋ ಒಂದು ಸುಲಭ ಮತ್ತು ವೇಗದ ಸಾರಿಗೆ ಮಾಧ್ಯಮವಾಗಲಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂದಣಿ, ಸಂಚಾರ ದಟ್ಟಣೆ, ವಸತಿ ಸಮಸ್ಯೆಗಳಿಗೆ ಪರಿಹಾರವಾಗಿ, ತುಮಕೂರು ಮತ್ತು ನೆಲಮಂಗಲದಂತಹ ಪ್ರದೇಶಗಳಲ್ಲಿ ಜನರು ವಾಸಿಸಲು ಇದು ಪ್ರೋತ್ಸಾಹ ನೀಡಲಿದೆ.
ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ವಿರೋಧವೂ ವ್ಯಕ್ತವಾಗುತ್ತಿದೆ
'ನಮ್ಮ ಮೆಟ್ರೊ' ಜಾಲವನ್ನು ಬೆಂಗಳೂರಿನಿಂದ ತುಮಕೂರಿನವರೆಗೆ ವಿಸ್ತರಣೆಯನ್ನು ಕೆಲವರು ಸ್ವಾಗತಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಡಿಪಿಆರ್ ಸಿದ್ದಪಡಿಸಲು ಮುಂದಾಗಿರುವುದು ಸಾರ್ವಜನಿಕರ ಹಣವನ್ನು ಪೋಲು ಮಾಡುವ ಕ್ರಮವಾಗಲಿದೆ. ಮೆಟ್ರೊ ರೈಲು ವಿನ್ಯಾಸವಾಗಿರುವುದು ನಗರವೊಂದರ ಒಳಗಿನ ಸಂಚಾರ ಸುಗಮವಾಗಲೆಂದು. ಮೆಟ್ರೊ ರೈಲು ಮಾರ್ಗದಲ್ಲಿ ನಿಲ್ದಾಣಗಳ ನಡುವಿನ ಅಂತರವು ಕಡಿಮೆ ಇರುತ್ತದೆ. ಇಂಥದ್ದೊಂದು ಸಾರಿಗೆ ವ್ಯವಸ್ಥೆಯನ್ನು 70 ಕಿ.ಮೀ. ದೂರವಿರುವ ಇನ್ನೊಂದು ನಗರಕ್ಕೆ ಸಂಪರ್ಕ ಕಲ್ಪಿಸಲು ವಿಸ್ತರಿಸುವುದು ಇದರ ಮೂಲ ಉದ್ದೇಶಕ್ಕೆ ವಿರುದ್ಧವಾಗಿರುತ್ತದೆ.
ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ತುಮಕೂರಿನ ನಡುವೆ ನಾಲ್ಕು ಪಥಗಳ ರೈಲು ಹಳಿ ನಿರ್ಮಾಣಕ್ಕೆ 3,500 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಇದು ಮೆಟ್ರೊ ಮಾರ್ಗವನ್ನು ತುಮಕೂರಿಗೆ ವಿಸ್ತರಿಸಲು ಅಗತ್ಯವಿರುವ ಅಂದಾಜು ವೆಚ್ಚಕ್ಕೆ ಹೋಲಿಸಿದರೆ ಬಹಳ ಕಡಿಮೆ. ತುಮಕೂರಿಗೆ ಉಪನಗರ ರೈಲು ಮಾರ್ಗ ನಿರ್ಮಿಸುವ ಪ್ರಸ್ತಾವನೆಯನ್ನು ಕೆ-ರೈಡ್ ಹೊಂದಿದೆ. ಮೇಲ್ದರ್ಜೆಗೆ ಬರಲಿರುವ ರೈಲ್ವೆ ಕಾರಿಡಾರ್‌ಗೆ ಪರ್ಯಾಯವಾಗಿ ಮೆಟ್ರೊ ರೈಲು ಮಾರ್ಗವನ್ನು ನಿರ್ಮಾಣ ಮಾಡುವುದು ವ್ಯರ್ಥ ವೆಚ್ಚ ಎಂಬ ಆರೋಪಗಳು ಕೇಳಿಬಂದಿವೆ.
ಸಂಸದ ತೇಜಸ್ವಿ ಸೂರ್ಯ ಅವರಿಂದ ವಿರೋಧ
ತುಮಕೂರು ಬೆಂಗಳೂರು ಮೆಟ್ರೋ ರೈಲು ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಬಿಎಂಆರ್ ಸಿಎಲ್ ಮುಂದಾಗಿದೆ. ಇದಕ್ಕೆ ಸಂಸದ ತೇಜಸ್ವಿಸೂರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ತುಮಕೂರಿನಿಂದ ಬೆಂಗಳೂರಿಗೆ ತ್ವರಿತವಾಗಿ ತ್ವರಿತ ಸಾರಿಗೆಯಂಥ ಸೌಲಭ್ಯವೊಂದು ಬರಬೇಕು. ಆದರೆ, ಮೆಟ್ರೋ ಅನಗತ್ಯ. ತುಮಕೂರು-ಬೆಂಗಳೂರಿಗೆ ವಿಶ್ವ ದರ್ಜೆಯ ಸಂಪರ್ಕದ ಅಗತ್ಯವಿದೆ. ಆದರೆ ಮೆಟ್ರೋ ಸರಿಯಾದ ಆಯ್ಕೆ ಸರಿಯಲ್ಲ. ತುಮಕೂರಿಗೆ ಮೆಟ್ರೋ ನಿರ್ಮಿಸುವುದು ನಗರ ಯೋಜನಾ ದುಃಸ್ವಪ್ನ. ಅದನ್ನು ನಿರ್ಮಿಸಲು ಅತಿಯಾದ ವೆಚ್ಚವು ಅರ್ಥಹೀನವಾಗಿದೆ. ಇದಕ್ಕಾಗಿಯೇ ಉಪನಗರ ರೈಲುಗಳನ್ನು ಹೊಂದಿದ್ದೇವೆ. ಆದರೆ ಬಹಳ ದಿನಗಳಿಂದ ಬಾಕಿ ಉಳಿದಿರುವ ಉಪನಗರ ರೈಲು ಅಭಿವೃದ್ಧಿ ಮತ್ತು ತುಮಕೂರಿಗೆ ಸಂಪರ್ಕವನ್ನು ಸುಧಾರಿಸುವ ಬದಲು, ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ವರ್ಷಾನುಗಟ್ಟಲೆ ತೆಗೆದುಕೊಳ್ಳುವ ಮೆಟ್ರೋ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಕೋಟಿಗಟ್ಟಲೆ ಖರ್ಚು ಮಾಡಲು ಬಯಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಪರಮೇಶ್ವರ್ ತಿರುಗೇಟು
ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯ ಅನೇಕ ವಿಚಾರಗಳು ಸಂಸದ ತೇಜಸ್ವಿಸೂರ್ಯ ಅವರ ಗಮನದಲ್ಲಿಲ್ಲ. ಇದೇ ಕಾರಣದಿಂದಾಗಿ ಯೋಜನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರಬಹುದು. ಪ್ರತಿನಿತ್ಯ ತುಮಕೂರಿನಿಂದ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ನೆಲಮಂಗಲ, ದಾಬಸ್‌ಪೇಟೆ, ಕ್ಯಾತ್ಸಂದ್ರ ಭಾಗ ವೇಗವಾಗಿ ಬೆಳೆಯುತ್ತಿದೆ. ಕೈಗಾರಿಕೆ ಉದ್ದೇಶದಿಂದ ಜನರ ಜೀವನ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಒತ್ತಡ ಜಾಸ್ತಿ ಇದೆ. ಸಂಸದ ತೇಜಸ್ವಿ ಸೂರ್ಯ ಏನು ಅರಿಯದೆ, ಯಾವ ಉದ್ದೇಶಕ್ಕಾಗಿ ಆ ರೀತಿಯಾಗಿ ಮಾತಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಅವರೊಂದಿಗೆ ಮಾತಾಡುತ್ತೇನೆ. ಇದು ಸಂಘರ್ಷದ ಪ್ರಶ್ನೆಯಲ್ಲ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ನಾವು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.
ದುಬಾರಿಯಾಗಲಿದೆಯೇ ಮೆಟ್ರೋ ಶುಲ್ಕ?
ಬೆಂಗಳೂರಿನ ಮೆಜೆಸ್ಟಿಕ್‌ನಿಂದ ತುಮಕೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೂ 70ಕಿ.ಮೀ. ದೂರ ಇದೆ. ಬೆಂಗಳೂರು ಮೆಟ್ರೋ ಸದ್ಯಕ್ಕೆ 1ಕಿ.ಮೀ. ದೂರಕ್ಕೆ 3 ರೂಪಾಯಿ ಶುಲ್ಕ ಪಡೆದುಕೊಳ್ಳುತ್ತಿದೆ. ಬೆಂಗಳೂರಿನಿಂದ ತುಮಕೂರಿನ 70 ಕಿ.ಮೀ. ದೂರಕ್ಕೆ 210 ರೂಪಾಯಿ ಶುಲ್ಕ ವಿಧಿಸಬಹುದು. ಸದ್ಯ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು 91 ರೂಪಾಯಿ ಬಸ್ ದರ ಇದೆ. ಹೀಗಾಗಿ ಮೆಟ್ರೋದಲ್ಲಿ ತುಮಕೂರಿಗೆ ಓಡಾಡುವವರಿಗೆ ದುಬಾರಿಯೂ ಆಗಬಹುದು ಎಂದು ಹೇಳಲಾಗಿದೆ.
ಎಲ್ಲಾ ಸವಾಲುಗಳು ಮತ್ತು ಅಭಿಪ್ರಾಯಗಳ ನಡುವೆಯೂ, ಸರ್ಕಾರವು ಯೋಜನೆಯನ್ನು ಮುನ್ನಡೆಸಲು ದೃಢವಾದ ಹೆಜ್ಜೆ ಇಟ್ಟಿದೆ. ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯು ಕೇವಲ ಒಂದು ಸಾರಿಗೆ ಮೂಲಸೌಕರ್ಯವಾಗಿರದೆ, ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಒಂದು ಹೊಸ ಅಧ್ಯಾಯ ಬರೆಯುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.

