ರಾಜ್ಯಾದ್ಯಂತ ತೀವ್ರಗೊಂಡ ಶೀತಗಾಳಿ- ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
x

ಸಾಂದರ್ಭಿಕ ಚಿತ್ರ 

ರಾಜ್ಯಾದ್ಯಂತ ತೀವ್ರಗೊಂಡ ಶೀತಗಾಳಿ- ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯಾದ್ಯಂತ ಶೀತಗಾಳಿಯ ಅಬ್ಬರ ಜೋರಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ತೀವ್ರವಾಗಿದೆ. ಹಲವು ಜಿಲ್ಲೆಗಳಿಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.


Click the Play button to hear this message in audio format

ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಚಳಿಯ ಅಬ್ಬರ ಜೋರಾಗಿದ್ದು, ವಿಶೇಷವಾಗಿ ಉತ್ತರ ಕರ್ನಾಟಕದ ಜನತೆ ಶೀತಗಾಳಿಗೆ ತತ್ತರಿಸಿದ್ದಾರೆ. ಭಾನುವಾರ ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ 6.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ ಕಳೆದ ಎರಡು ದಶಕಗಳಲ್ಲೇ ಮೂರನೇ ಅತಿ ಕಡಿಮೆ ತಾಪಮಾನ ದಾಖಲಾದಂತಾಗಿದೆ.

ಈ ತೀವ್ರ ಚಳಿಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಇಂದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ತೀವ್ರ ಚಳಿಯಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಕಡ್ಡಾಯವಾಗಿ ಬೆಚ್ಚಗಿನ ಹೊದಿಕೆಗಳನ್ನು ಬಳಸಬೇಕು ಮತ್ತು ಬಿಸಿ ಆಹಾರವನ್ನೇ ಸೇವಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಹವಾಮಾನವು ಪ್ರಮುಖವಾಗಿ ಒಣದಾಗಿರಲಿದೆ ಎಂದು ಇಲಾಖೆ ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.

ರಾಜಧಾನಿ ಬೆಂಗಳೂರಿನಲ್ಲಿಯೂ ಚಳಿಯ ವಾತಾವರಣ ಹೆಚ್ಚಾಗಿದ್ದು, ಗರಿಷ್ಠ ತಾಪಮಾನ 27 ಡಿಗ್ರಿ ಹಾಗೂ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ. ನಗರದಲ್ಲಿ ಮೋಡ ಮುಸುಕಿದ ವಾತಾವರಣವಿರಲಿದ್ದು, ಮಕ್ಕಳು ಮತ್ತು ವೃದ್ಧರು ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪುಗಳನ್ನು ಧರಿಸುವುದು ಅವಶ್ಯಕವಾಗಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ. ನಗರದಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-3 ಡಿ.ಸೆ.ಗಿಂತ ಕಡಿಮೆಯಾಗಿದೆ ಮತ್ತು ವಾರಾಂತ್ಯದಲ್ಲಿಇನ್ನೂ ಒಂದು ಅಥವಾ ಎರಡು ಡಿಗ್ರಿಗಳಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಎರಡೂ ಸಂಸ್ಥೆಗಳ (ಕೆಎಸ್‌ಎನ್‌ಡಿಎಂಸಿ ಮತ್ತು ಐಎಂಡಿ) ಹವಾಮಾನಶಾಸ್ತ್ರಜ್ಞರು ಒಮ್ಮತ ವ್ಯಕ್ತಪಡಿಸಿದ್ದಾಧರೆ. ಚಳಿಯು ತಿಂಗಳಾಂತ್ಯದವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಕೆಎಸ್‌ಎನ್‌ಡಿಎಂಸಿ ದತ್ತಾಂಶದ ಪ್ರಕಾರ, ಈ ಹಿಂದೆ ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ 8.5 ಡಿ.ಸೆ. ಮತ್ತು 8.7 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ. ಈ ವರ್ಷ ಕೂಡ ಈ ದಾಖಲೆ ತಲುಪುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಬೆಂಗಳೂರು ಗ್ರಾಮೀಣ ಪ್ರದೇಶದಲ್ಲಿಬೆಳಗ್ಗೆ 4ರಿಂದ 9.30 ರವರೆಗಿನ ದಟ್ಟವಾದ ಮಂಜು ರಾಷ್ಟ್ರೀಯ ಹೆದ್ದಾರಿ-648 ಮತ್ತು 48 ಹಾಗೂ ಯಲಹಂಕ-ಗೌರಿಬಿದನೂರು ರಾಜ್ಯ ಹೆದ್ದಾರಿ ಸೇರಿದಂತೆ ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿವಾಹನ ಚಾಲನೆ ಕಷ್ಟಕರವಾಗಿಸಿದೆ.


Read More
Next Story