
ರಾಜ್ಯದ ವಿವಿಧ ಭಾಗದಲ್ಲಿ ಹೆಚ್ಚಾಗಿರುವ ಚಳಿಯ ವಾತಾವರಣ
ರಾಜ್ಯದಲ್ಲಿ ನಡುಕ ಹುಟ್ಟಿಸಿದ ಚಳಿ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ವಿಜಯಪುರದಲ್ಲಿ ಶೀತಗಾಳಿಯ ದಾಖಲೆ
ಉತ್ತರ ಒಳನಾಡಿನಲ್ಲಿ ಶೀತ ಮಾರುತಗಳ ಆರ್ಭಟ ಜೋರಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ರಾಜ್ಯದಲ್ಲೇ ಅತ್ಯಂತ ಕನಿಷ್ಠ ಅಂದರೆ 6.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಡಿಸೆಂಬರ್ ತಿಂಗಳ ಕೊನೆಯಲ್ಲಿ ರಾಜ್ಯಾದ್ಯಂತ ಚಳಿಯ ತೀವ್ರತೆ ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜನರು ನಡುಗುವಂತಾಗಿದೆ. ಉಷ್ಣಾಂಶದಲ್ಲಿ ಭಾರಿ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ನಾಳೆ (ಡಿ.21) ಏಳು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸುವ ಮೂಲಕ ಎಚ್ಚರಿಕೆ ನೀಡಿದೆ.
ಉತ್ತರ ಒಳನಾಡಿನಲ್ಲಿ ಶೀತ ಮಾರುತಗಳ ಆರ್ಭಟ ಜೋರಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ರಾಜ್ಯದಲ್ಲೇ ಅತ್ಯಂತ ಕನಿಷ್ಠ ಅಂದರೆ 6.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ತೀವ್ರ ಹವಾಮಾನ ವೈಪರೀತ್ಯವನ್ನು ಪರಿಗಣಿಸಿರುವ ಹವಾಮಾನ ಇಲಾಖೆ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ಈ ಭಾಗದಲ್ಲಿ ವಾಡಿಕೆಗಿಂತ 5 ರಿಂದ 6 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.
ಎಲ್ಲ ಕಡೆಯೂ ಚಳಿ
ಕೇವಲ ಉತ್ತರ ಕರ್ನಾಟಕವಷ್ಟೇ ಅಲ್ಲದೆ, ರಾಜ್ಯದ ಇತರೆ ಭಾಗಗಳಲ್ಲೂ ಚಳಿಯ ಪ್ರಭಾವ ಬಲವಾಗಿದೆ. ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು, ಮಂಡ್ಯ, ಮೈಸೂರು, ಹಾಸನ ಮತ್ತು ಕೋಲಾರ ಸೇರಿದಂತೆ ಒಟ್ಟು 16 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಡಿಸೆಂಬರ್ 22ರಂದೂ ಸಹ ಉತ್ತರ ಒಳನಾಡಿನ ಕೆಲವೆಡೆ ಶೀತ ಮಾರುತದ ಪರಿಸ್ಥಿತಿ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲೂ ಜೋರು ಚಳಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಚಳಿಯ ವಾತಾವರಣ ಕಂಡುಬರುತ್ತಿದೆ. ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ಆಕಾಶ ನಿರ್ಮಲವಾಗಿರಲಿದ್ದು, ಬೆಳಗಿನ ಜಾವ ದಟ್ಟ ಮಂಜು ಕವಿಯುವ ಸಾಧ್ಯತೆಯಿದೆ. ನಗರದ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಂಭವವಿದ್ದು, ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಒಟ್ಟಾರೆ ಕನಿಷ್ಠ ತಾಪಮಾನವು 15 ರಿಂದ 17 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ಬೆಳಗಿನ ಜಾವ ಮತ್ತು ರಾತ್ರಿ ವೇಳೆ ವಿಪರೀತ ಚಳಿ ಇರುವುದರಿಂದ ಮಕ್ಕಳು, ವೃದ್ಧರು ಮತ್ತು ದೀರ್ಘಕಾಲದ ಅನಾರೋಗ್ಯವಿರುವವರು ಎಚ್ಚರಿಕೆ ವಹಿಸಬೇಕು ಹಾಗೂ ಬೆಚ್ಚಗಿನ ಉಡುಪುಗಳನ್ನು ಧರಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

