ಗದ್ದುಗೆ ಗುದ್ದಾಟ| ರಾಹುಲ್ ಗಾಂಧಿ ಮೌನದ ಹಿಂದೆ ಇದ್ಯಾ 'ಮಾಸ್ಟರ್ ಪ್ಲ್ಯಾನ್‌'?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಿಎಂ ಸ್ಥಾನದ ಜಟಾಪಟಿ ನಡುವೆಯೂ ರಾಹುಲ್ ಗಾಂಧಿ ಮೌನವಾಗಿರುವುದೇಕೆ?

Update: 2025-12-23 05:17 GMT
Click the Play button to listen to article

ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ದಿನಕ್ಕೊಂದು ತಿರುವು ಪಡೆಯುತ್ತಿದೆ. "ನಾಯಕತ್ವ ಬದಲಾವಣೆ ಬಗ್ಗೆ ರಾಹುಲ್ ಗಾಂಧಿ ತೀರ್ಮಾನಿಸಬೇಕು" ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಸಿಎಂ ಮತ್ತು ಡಿಸಿಎಂ ಬಣಗಳ ನಡುವೆ ಮಾತಿನ ಸಮರ ತಾರಕಕ್ಕೇರಿದ್ದರೂ, ರಾಹುಲ್ ಗಾಂಧಿ ಅವರು ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ರಾಹುಲ್ ಗಾಂಧಿ ಮೌನಕ್ಕೆ ಕಾರಣಗಳೇನು?

ಸಿದ್ದರಾಮಯ್ಯ ಅವರು ಪದೇ ಪದೇ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸುತ್ತಿದ್ದರೂ, ಅವರು ಏಕೆ ಮೌನವಾಗಿದ್ದಾರೆ ಎಂಬ ಬಗ್ಗೆ ಚರ್ಚೆಗಳು ಭುಗಿಲೆದ್ದಿವೆ. ಹಲವರು ಇದರ ಹಿಂದೆ ಕೆಲವಿ ಪ್ರಮುಖ ಕಾರಣಗಳಿರಬಹುದು ಅಥವಾ ಬಿಕ್ಕಟ್ಟು ಶಮನಕ್ಕೆ ರಾಹುಲ್‌ ಗಾಂಧಿ ಮಾಸ್ಟರ್‌ ಪ್ಲ್ಯಾನ್‌ ಮಾಡುತ್ತಿರಬಹುದೆಂಬುದು ಹಲವರ ಅಭಿಪ್ರಾಯ

  • ಸಿದ್ದರಾಮಯ್ಯ ಅವರ 'ಅಹಿಂದ' ಬಲ: ಸಿದ್ದರಾಮಯ್ಯ ಅವರು ರಾಷ್ಟ್ರಮಟ್ಟದಲ್ಲಿ ಅಹಿಂದ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರನ್ನು ಬದಲಿಸಿದರೆ ಅಹಿಂದ ವರ್ಗಗಳಿಗೆ ತಪ್ಪು ಸಂದೇಶ ಹೋಗುವ ಭೀತಿ ರಾಹುಲ್ ಅವರಿಗಿದೆ.
  • ಡಿಕೆಶಿ ಸೈದ್ಧಾಂತಿಕ ನಿಲುವು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಮಿತ್ ಶಾ, ಸದ್ಗುರು ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಹಾಗೂ ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದು ರಾಹುಲ್ ಗಾಂಧಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
  • ಭೇಟಿಗೆ ನಿರಾಕರಣೆ: ಡಿಕೆಶಿ ಅವರಿಗೆ ಭೇಟಿಗೆ ಅವಕಾಶ ನೀಡದ ರಾಹುಲ್, ಒಂದು ವೇಳೆ ಭೇಟಿಯಾದಲ್ಲಿ ಅವರು ನೇರವಾಗಿಯೇ ಸಿಎಂ ಸ್ಥಾನ ಕೇಳಬಹುದು ಎಂಬ ಆತಂಕದಲ್ಲಿದ್ದಾರೆ.
  • ಅಧಿಕಾರ ಹಂಚಿಕೆ ಒಪ್ಪಂದ: ಅಧಿಕಾರ ಹಂಚಿಕೆಯ ಬಗ್ಗೆ ತಮ್ಮ ಮುಂದೆ ಯಾವುದೇ ಚರ್ಚೆ ನಡೆದಿಲ್ಲ, ಕೇವಲ ಖರ್ಗೆ ಮತ್ತು ವೇಣುಗೋಪಾಲ್ ಮುಂದೆ ಮಾತ್ರ ಚರ್ಚೆಯಾಗಿದೆ ಎಂಬ ನಿಲುವನ್ನು ರಾಹುಲ್ ಹೊಂದಿದ್ದಾರೆ.
  • ಬದಲಿ ಸ್ಥಾನದ ಕೊರತೆ: ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಅವರಿಗೆ ನೀಡಲು ಸೂಕ್ತವಾದ ಪರ್ಯಾಯ ಗೌರವಯುತ ಸ್ಥಾನ ಸದ್ಯಕ್ಕೆ ಲಭ್ಯವಿಲ್ಲ.

ಸಿದ್ದರಾಮಯ್ಯ ಪರವೇ ಒಲವು?

ಒಕ್ಕಲಿಗ ಸಮುದಾಯಕ್ಕೆ ನಾಯಕತ್ವ ನೀಡಿದರೆ ಪಕ್ಷಕ್ಕೆ ಚುನಾವಣಾ ದೃಷ್ಟಿಯಿಂದ ಎಷ್ಟು ಲಾಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್ ಇದೆ. ಅಹಿಂದ ಮತಗಳೇ ಕಾಂಗ್ರೆಸ್‌ನ ಬೆನ್ನೆಲುಬಾಗಿರುವುದರಿಂದ, ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಳ್ಳುವುದು ಅಪಾಯಕಾರಿ ಎಂಬುದು ರಾಹುಲ್ ಗಾಂಧಿ ಅವರ ಲೆಕ್ಕಾಚಾರವಾಗಿದೆ ಎನ್ನಲಾಗುತ್ತಿದೆ. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಉದ್ಯಮಿಗಳ ಅಪಸ್ವರ ಕೂಡ ಡಿಕೆಶಿ ಅವರಿಗೆ ಹಿನ್ನಡೆಯಾಗಿ ಪರಿಣಮಿಸಿದೆ. ಒಟ್ಟಾರೆಯಾಗಿ, ಸದ್ಯಕ್ಕೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಅಗತ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ರಾಹುಲ್ ಗಾಂಧಿ ಬಂದಂತಿದೆ.

Tags:    

Similar News