Gas Geyser Tragedies: ಸಾವಿನ ಮನೆಗಳಾಗುತ್ತಿವೆ ಸ್ನಾನಗೃಹಗಳು; ಐದು ವರ್ಷದಲ್ಲಿ 45 ಸಾವು

ಗ್ಯಾಸ್ ಗೀಸರ್‌ನಿಂದ ಸಂಭವಿಸುವ ಸಾವುಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಿರಲಿವೆ. ಗಾಳಿ ಕಡಿಮೆ ಇರುವಂತಹ ಸ್ನಾನಗೃಹಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಆಧರಿತ ಗೀಸರ್‌ ಬಳಸುವುದು ಹೆಚ್ಚು ಅಪಾಯಕಾರಿ.

Update: 2025-12-23 01:30 GMT

ರಾಜ್ಯದ ಹಲವೆಡೆ  ಗ್ಯಾಸ್ ಗೀಸರ್ ಬಳಕೆಯಿಂದ ಸಂಭವಿಸುತ್ತಿರುವ ಸಾವುಗಳು ಕುಟುಂಬಗಳನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡುತ್ತಿವೆ. ಗ್ಯಾಸ್‌ ಗೀಸರ್ ದುರಂತಗಳಿಂದ ಸ್ನಾನದ ಮನೆಯೇ ಸಾವಿನ ಕೋಣೆಯಾಗುತ್ತಿದೆ. ಗೀಸರ್ ಹೊರಸೂಸುವ ವಿಷಾನಿಲವು ಹಲವರ ಉಸಿರು ನಿಲ್ಲಿಸುತ್ತಿದೆ.

ಕಳೆದ 5 ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ 34 ಗ್ಯಾಸ್ ಗೀಸರ್ ಅನಾಹುತ ಪ್ರಕರಣಗಳು ಸಂಭವಿಸಿದ್ದು, 45ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 2020 ರಲ್ಲಿ ಇಬ್ಬರು, 2021ರಲ್ಲಿ 15 ಮಂದಿ, 2022 ರಲ್ಲಿ 12 ಮಂದಿ, 2023 ರಲ್ಲಿ 10, 2024 ರಲ್ಲಿ ನಾಲ್ವರು, 2025 ನೇ ಸಾಲಿನ ಡಿಸೆಂಬರ್‌ವರೆಗೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣಹಾನಿಗೆ ಕಾರಣವಾಗುತ್ತಿರುವ ಗ್ಯಾಸ್‌ ಗೀಸರ್ ಬಳಕೆಗೆ ನಿಷೇಧ ಹೇರಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಸೈಲೆಂಟ್‌ ಕಿಲ್ಲರ್ ಗ್ಯಾಸ್ ಗೀಸರ್

ನೈಸರ್ಗಿಕ ಅನಿಲ(ಎಲ್‌ಪಿಜಿ) ಬಳಸಿಕೊಂಡು ಗ್ಯಾಸ್ ಗೀಸರ್‌ಗಳಲ್ಲಿ ನೀರು ಕಾಯಿಸಲಾಗುತ್ತದೆ. ಸ್ನಾನದ ಕೋಣೆಯಲ್ಲಿ ಗಾಳಿಯ ವ್ಯವಸ್ಥೆ ಕಡಿಮೆ ಇರುವುದರಿಂದ ಅನಿಲ ಉರಿಯಲು ಅಗತ್ಯವಾದ ಆಮ್ಲಜನಕದ ಕೊರತೆ ಎದುರಾಗುತ್ತದೆ. ಆಗ 'ಕಾರ್ಬನ್ ಮೊನಾಕ್ಸೈಡ್'ಎಂಬ ವಿಷಕಾರಿ ಅನಿಲ ಹೊರಬರುತ್ತದೆ. ಇದು ವಾಸನೆ, ಬಣ್ಣರಹಿತವಾಗಿದ್ದು, ಸದ್ದಿಲ್ಲದೇ ಜೀವ ಕಸಿಯುವ ಅನಿಲವಾಗಿದೆ.

ಸ್ನಾನದ ಮನೆಯ ಬಾಗಿಲು, ಕಿಟಕಿ ಮುಚ್ಚಿಕೊಂಡು ಗ್ಯಾಸ್‌ ಗೀಸರ್ ಉರಿಸುವಾಗ ಕಾರ್ಬನ್‌ ಮಾನಾಕ್ಸೈಡ್‌ ಉತ್ಪತ್ತಿಯಾಗಲಿದೆ. ಸ್ನಾನಕ್ಕೆ ಹೋದವರು ಕೆಲ ನಿಮಿಷಗಳವರೆಗೆ ವಿಷಾನಿಲ ಸೇವಿಸಿದಾಗ ಅದು ಮೆದುಳಿಗೆ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಲಿದೆ. ಪ್ರಜ್ಞೆಹೀನರಾಗಿ ಉಸಿರಾಟ ತೊಂದರೆಯೊಂದಿಗೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಸ್ನಾನಕ್ಕೆ ಹೋದವರು ತಮಗರಿವಿಲ್ಲದಂತೆ ಪ್ರಜ್ಞಾಹೀನರಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಇದನ್ನು 'ಗ್ಯಾಸ್ ಗೀಸರ್ ಸಿಂಡ್ರೋಮ್' ಎಂದು ಕರೆಯಲಾಗುತ್ತದೆ.

"ಆಮ್ಲಜನಕ ಬಳಸಿಕೊಂಡೇ ಬೆಂಕಿ ಉರಿಯುತ್ತದೆ. ಗ್ಯಾಸ್‌ ಗೀಸರ್‌ ಬಳಸುವಾಗ ಬಾಗಿಲು, ಕಿಟಕಿ ಮುಚ್ಚುವುದರಿಂದ ಆಮ್ಲಜನಕ ಪೂರೈಕೆ ಕಡಿಮೆಯಾಗುತ್ತದೆ. ಎಲ್‌ಪಿಜಿ ಪೆಟ್ರೋಲಿಯಂ ಉತ್ಪನ್ನವಾಗಿದ್ದು, ದಹನ ಪ್ರಕ್ರಿಯೆಯಲ್ಲಿ ಆಮ್ಲಜನಕ ಕೊರತೆಯಾಗಿ ಕಾರ್ಬನ್‌ ಮಾನಾಕ್ಸೈಡ್ ಬಿಡುಗಡೆ ಆಗುತ್ತದೆ. ಈ ಅನಿಲವನ್ನು ದೇಹಕ್ಕೆ ತೆಗೆದುಕೊಂಡಾಗ ಆಮ್ಲಜನಕ ಸ್ಥಗಿತವಾಗಿ, ಹೈಪಾಕ್ಸಿಯಾ (ರಕ್ತದಲ್ಲಿರುವ ಆಮ್ಲಜನಕದ ಒತ್ತಡ ಇಳಿಕೆ) ಉಂಟಾಗುತ್ತದೆ. ನಂತರ ಮಿದುಳಿಗೆ ರಕ್ಷ ಪೂರೈಕೆ ಕಡಿಮೆಯಾಗಿ ಉಸಿರಾಟದ ಸಮಸ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಾರೆ” ಎಂದು ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಜಿ.ಪರಮೇಶ್ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

“ಗ್ಯಾಸ್‌ ಗೀಸರ್‌ಗಿಂತ ವಿದ್ಯುನ್ಮಾನ ಹಾಗೂ ಸೋಲರ್‌ ಗೀಸರ್‌ಗಳನ್ನು ಬಳಸುವುದು ಉತ್ತಮ. ಗ್ಯಾಸ್ ಗೀಸರ್‌ ಬಳಸುವಾಗ ಆದಷ್ಟು ಸ್ನಾನದ ಮನೆಗಳಲ್ಲಿ ಗಾಳಿಯಾಡುವಂತೆ ವ್ಯವಸ್ಥೆ ಇರಬೇಕು” ಎಂದು ಸಲಹೆ ನೀಡಿದರು.

ದುರಂತಕ್ಕೆ ಕಾರಣಗಳೇನು?

ಹಳೆಯ, ನಿರ್ವಹಣೆ ಇಲ್ಲದ ಅಥವಾ ತಪ್ಪಾಗಿ ಅಳವಡಿಸಿರುವ ಗ್ಯಾಸ್ ಗೀಸರ್‌ಗಳಲ್ಲೂ ಸಮಸ್ಯೆ ಕಾಣಿಸಬಹುದು. ಕಾರ್ಬನ್‌ ಮಾನಾಕ್ಸೈಡ್‌ಗೆ ಯಾವುದೇ ಬಣ್ಣ, ವಾಸನೆ ಇರುವುದಿಲ್ಲ.

ಒಂದು ವೇಳೆ ಮನೆಯ ಎಲ್ಲಾ ಬಾಗಿಲುಗಳು ಬಂದ್‌ ಆಗಿದ್ದಾಗ ಕಾರ್ಬನ್‌ ಮಾನಾಕ್ಸೈಡ್ ಮನೆಯೊಳಗಿನ ವಾತಾವರಣದಲ್ಲಿ ಬೆರೆತು ಅಪಾಯ ತಂದೊಡ್ಡಲಿದೆ. ವಿಷಾನಿಲವು ದೇಹಕ್ಕೆ ಸೇರಿದರೆ ರಕ್ತದಲ್ಲೂ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಲಿದೆ. ಕ್ರಮೇಣ ಮಿದುಳಿಗೆ ರಕ್ತ ಸರಬರಾಜು ನಿಲ್ಲಿಸಲಿದೆ. ಇದಕ್ಕೂ ಮುನ್ನ ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಲಿದೆ.

ಗ್ಯಾಸ್ ಗೀಸರ್‌ನಿಂದ ಸಂಭವಿಸುವ ಸಾವುಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಿರಲಿವೆ. ಗಾಳಿ ಕಡಿಮೆ ಇರುವಂತಹ ಸ್ನಾನಗೃಹಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಆಧರಿತ ಗೀಸರ್‌ ಬಳಸುವುದು ಹೆಚ್ಚು ಅಪಾಯಕಾರಿ. ಆಮ್ಲಜನಕದ ಕೊರತೆಯಲ್ಲಿ ನೈಸರ್ಗಿಕ ಅನಿಲದ ದಹನ ಪ್ಕ್ರಿಯೆ ನಡೆಯುವುದರಿಂದ ಕಾರ್ಬನ್ ಮಾನಾಕ್ಸೈಡ್, ಹೈಡ್ರೋಕಾರ್ಬನ್ ಅನಿಲ ಮತ್ತು ನೈಟ್ರೋಜನ್ ಆಕ್ಸೈಡ್ ಅನಿಲಗಳು ಉತ್ಪತ್ತಿಯಾಗಲಿವೆ.

ಮುನ್ನೆಚ್ಚರಿಕೆ ಕ್ರಮಗಳೇನು?

ಗ್ಯಾಸ್‌ ಗೀಸರ್ ಬಳಕೆ ಸಂದರ್ಭದಲ್ಲಿ ಹೊರ ಬರುವ ಕಾರ್ಬನ್‌ ಮಾನಾಕ್ಸೈಡ್ ನಿಂದ ಯಾರಾದರೂ ಅಸ್ವಸ್ಥಗೊಂಡಾಗ ತಕ್ಷಣ ಉಸಿರಾಟದ ವ್ಯವಸ್ಥೆ ಹಾಗೂ ತಕ್ಷಣ ಚಿಕಿತ್ಸೆ ಕೊಡಿಸಬೇಕು.

ಸಾಕಷ್ಟು ಮನೆಗಳಲ್ಲಿ ಹೆಚ್ಚು ಹೊತ್ತು ಗ್ಯಾಸ್ ಗೀಸರ್ ಉರಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ನಾನಗೃಹದ ಬಾಗಿಲು, ಕಿಟಕಿ ತೆರೆದಿಬೇಕು. ಗ್ಯಾಸ್‌ ಗೀಸರ್‌ ದುರಂತಗಳಿಂದ ಸಾಕಷ್ಟ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಜನಜಾಗೃತಿ ಮೂಡಿಸುತ್ತಿದ್ದಾರೆ.

ಗ್ಯಾಸ್ ಗೀಸರ್ ಮೂಲಕ ದೀರ್ಘಾವಧಿಯ ಸ್ನಾನ ತಪ್ಪಿಸಬೇಕು. ನೀರನ್ನು ಬಿಸಿ ಮಾಡುವ ಹೀಟರ್(ಕಪ್ಪು ರಬ್ಬು), ಜ್ವಾಲೆಯ ಬಣ್ಣದಲ್ಲಾಗುವ ದೋಷಗಳನ್ನು ಗಮನಿಸಬೇಕು. ಅಸುರಕ್ಷಿತ ಸ್ಥಳಗಳಲ್ಲಿ ಗ್ಯಾಸ್‌ ಗೀಸರ್‌ ಅಳವಡಿಕೆಯನ್ನು ತಡೆಯಬೇಕು.

"ನೈಸರ್ಗಿಕ ಅನಿಲ ಬಳಸುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಅದು ಅಡುಗೆಗಿರಲಿ, ಸ್ನಾನಕ್ಕಿರಲಿ. ಇತ್ತೀಚೆಗೆ ಹಲವೆಡೆ ಗ್ಯಾಸ್‌ ಗೀಸರ್‌ ದುರಂತಗಳು ಸಂಭವಿಸುತ್ತಿರುವುದು ಕಳವಳಕಾರಿ. ಸಂಬಂಧಪಟ್ಟ ಇಲಾಖೆಗಳು ಗ್ಯಾಸ್‌ ಗೀಸರ್‌ ಬಳಕೆಗೆ ಸ್ಪಷ್ಟ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಯಾವುದೇ ಪ್ರಕರಣ ಸಂಭವಿಸಿದಾಗ ಪೊಲೀಸರು ಜಾಗೃತಿ ಮೂಡಿಸಬಹುದಷ್ಟೇ, ಅದಕ್ಕೆ ಪರಿಹಾರ ಸೂಚಿಸಲು ಆಗುವುದಿಲ್ಲ. ಸರ್ಕಾರ ಜಾಗೃತಿ ಮೂಡಿಸಬೇಕು. ಜತೆಗೆ ಜನರೂ ಸಹ ವಿವೇಚನೆಯಿಂದ ಗ್ಯಾಸ್‌ ಗೀಸರ್‌ ಬಳಸಬೇಕು" ಎಂದು ಪೊಲೀಸ್‌ ಅಧಿಕಾರಿಯೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು. 

ಐಎಸ್‌ಐ ಗುರುತಿಲ್ಲದ ಗೀಸರ್‌ಗಳಿಂದಲೂ ದುರಂತ

ಮಾರ್ಗಸೂಚಿ ಅನ್ವಯ ಗ್ಯಾಸ್‌ ಗೀಸರ್‌ಗಳನ್ನು ತಯಾರು ಮಾಡಿರದ ಹಾಗೂ ಐಎಸ್ಐ ಗುರುತಿಲ್ಲದ ಗೀಸರ್‌ಗಳು ಅಪಾಯ ತಂದೊಡ್ಡಲಿವೆ. ಗೀಸರ್ ಹಾಗೂ ಎಲ್‌ಪಿಜಿ ಸಿಲಿಂಡರ್‌ಗಳನ್ನು ತೆರೆದ ಜಾಗದಲ್ಲಿ ಇರುವ ಬದಲು ಸ್ನಾನದ ಕೋಣೆಯಲ್ಲಿ ಇಡಲಾಗುತ್ತದೆ. ಗುಣಮಟ್ಟದ್ದಲ್ಲದ ಉಪಕರಣ ಮತ್ತು ದೋಷಪೂರಿತ ಅಳವಡಿಕೆಗಳಿಂದ ಅನಿಲ ಸೋರಿಕೆ ಅಥವಾ ಸ್ಫೋಟಕ್ಕೆ ಕಾರಣವಾಗಬಹುದು.

ಬಹಳಷ್ಟು ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದ್ದು, ನಕಲಿ ಐಎಸ್ಐ ಗುರುತು ಹೊಂದಿರುತ್ತವೆ. ಸರ್ಕಾರವು ಸರಿಯಾದ ಮಾರ್ಗಸೂಚಿಗಳನ್ನು ನಿಯಂತ್ರಿಸದ ಕಾರಣ ಅವಗಢಗಳು ಹೆಚ್ಚುತ್ತಿವೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ಗೀಸರ್ಗಳಲ್ಲಿ ಉಷ್ಣತೆಯನ್ನು ಸ್ವಯಂ ನಿಯಂತ್ರಿಸಿಕೊಳ್ಳುವ ವ್ಯವಸ್ಥೆ ಇದೆ. ಆದರೆ, ಗ್ಯಾಸ್‌ ಗೀಸರ್‌ಗಳಲ್ಲಿ ನಿರಂತರವಾಗಿ ಹೀಟರ್‌ ಬಿಸಿಯಾಗುತ್ತಲೇ ಇರುತ್ತದೆ. ಇದರಿಂದ ಸ್ನಾನಗೃಹದ ಆಮ್ಲಜನಕ ಪ್ರಮಾಣ ತೀವ್ರ ಕಡಿಮೆಯಾಗಲಿದೆ ಎನ್ನಲಾಗಿದೆ.

“ಗ್ಯಾಸ್‌ ಗೀಸರ್‌ ಬೆಲೆ ಕಡಿಮೆ ಇರುವುದರಿಂದ ಬಹುತೇಕರು ಖರೀದಿ ಮಾಡುತ್ತಾರೆ. ವಿವಿಧ ಬ್ರ್ಯಾಂಡ್‌ಗಳ ಗೀಸರ್‌ಗಳು ಲಭ್ಯವಿವೆ. ಆದರೆ, ಅವುಗಳನ್ನು ಬಳಸುವಾಗ ಎಚ್ಚರದಿಂದರಬೇಕು. ಗೀಸರ್‌ ಖರೀದಿಸುವಾಗಲೇ ಬಹುತೇಕರಿಗೆ ಯೂಸರ್‌ ಮ್ಯಾನುವಲ್‌ ಬಗ್ಗೆ ಹೇಳಿರುತ್ತೇವೆ. ಆದಾಗ್ಯೂ, ಅಸಮರ್ಪಕ ನಿರ್ವಹಣೆ, ಅಭ್ಯಾಸಗಳಿಂದ ಇಂತಹ ಪ್ರಾಣಿಗಳು ಸಂಭವಿಸುತ್ತಿದೆ. ಇತ್ತೀಚೆಗೆ ಪ್ರಾಣಹಾನಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್‌ ಹಾಗೂ ಸೋಲರ್ ಗೀಸರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ” ಎಂದು ಗೀಸರ್‌ ಅಂಗಡಿ ಮಾಲೀಕರೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ವಿದ್ಯುತ್ ವ್ಯತ್ಯಯದ ಸಂದರ್ಭದಲ್ಲೂ ಗ್ಯಾಸ್ ಗೀಸರ್ ಬಳಸಿ ಬಿಸಿ ನೀರು ಪಡೆಯಬಹುದು. ಜತೆಗೆ ವಿದ್ಯುತ್‌ಗಿಂತ ಎಲ್‌ಪಿಜಿ ಅನಿಲ ಅಗ್ಗವಾಗಿರುವುದರಿಂದ ಬಹುತೇಕರು ಗ್ಯಾಸ್‌ ಗೀಸರ್‌ ಖರೀದಿಸುತ್ತಾರೆ. ಸೋಲರ್‌ ಹಾಗೂ ಎಲೆಕ್ಟ್ರಿಕ್‌ ದುಬಾರಿ ಬೆಲೆಯಾಗಿರುವುದು ಕೂಡ ಇವುಗಳ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದರು.

ಗ್ಯಾಸ್‌ ಗೀಸರ್‌ ಬಳಕೆಗೆ ನಿಯಂತ್ರಣ ಅಗತ್ಯ

ಗ್ಯಾಸ್‌ ಗೀಸರ್‌ ದುರಂತಗಳನ್ನು ತಪ್ಪಿಸಲು ಸರ್ಕಾರ ಕಠಿಣ ಮಾನದಂಡಗಳನ್ನು ಜಾರಿ ಮಾಡಬೇಕು. ಕಡ್ಡಾಯವಾಗಿ ಐಎಸ್ಐ ಪ್ರಮಾಣಿತ ಉತ್ಪನ್ನಗಳನ್ನೇ ಬಳಸಬೇಕು. ಅಳವಡಿಕೆ, ಸುರಕ್ಷತೆ ಹಾಗೂ ಬಳಕೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಪದೇ ಪದೇ ಘಟನೆಗಳು ಮರುಕಳುಹಿಸುತ್ತಿರುವುದರಿಂದ ಗ್ಯಾಸ್ ಗೀಸರ್ಗಳ ಮೇಲೆ ನಿಷೇಧ ಅಥವಾ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಗ್ಯಾಸ್‌ ಗೀಸರ್ ಬಳಸುವವರು ಸಾಧ್ಯವಾದಷ್ಟೂ ಕಾರ್ಬನ್‌ ಮಾನಾಕ್ಸೈಡ್ ಪತ್ತೆ ಉಪಕರಣ(ಡಿಟೆಕ್ಟರ್) ಬಳಸಬೇಕು. ಗೃಹಬಳಕೆಯ ಗ್ಯಾಸ್ ಗೀಸರ್ಗಳು ಐಎಸ್ 15558 ಮಾನದಂಡಗಳಿಗೆ ಅನುಗುಣವಾಗಿ ಉತ್ಪಾದನೆ ಮತ್ತು ಪರೀಕ್ಷೆಗೊಳಪಡಬೇಕು.

ಗೀಸರ್‌ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಆಕ್ಟ್, 2016 ಮತ್ತು ಅದರ ಅಡಿ ರೂಪಿಸಿದ ನಿಯಮಗಳು ಮತ್ತು ನಿಬಂಧನೆಗಳ ಮೂಲಕ ಪ್ರಮಾಣೀಕರಿಸಬೇಕು. ಐಎಸ್ಐ ಉತ್ಪನ್ನ ತಯಾರಕರು ಭಾರತೀಯ ಮಾನದಂಡಗಳ ಬ್ಯೂರೋದಿಂದ BIS ಪರವಾನಗಿ ಪಡೆದಿರಬೇಕು. ಗೀಸರ್‌ನಲ್ಲಿ ವೈಫಲ್ಯ ಸಂಭವಿಸಿದರೆ ಜ್ವಾಲೆ ಆರಿಸುವ ಸಾಧನ, ಹೆಚ್ಚು ಬಿಸಿಯಾದರೆ ತಡೆಯುವ ಸಾಧನ, ಆಮ್ಲಜನಕ ಹಾಗೂ ಕಾರ್ಬನ್‌ ಮಾನಾಕ್ಸೈಡ್‌ ಪತ್ತೆ ಸೆನ್ಸರ್, ಸುರಕ್ಷತಾ ದಹನ ವ್ಯವಸ್ಥೆ ಒಳಗಗೊಂಡಿರುವಂತೆ ಗೀಸರ್‌ ತಯಾರಿಕೆಗೆ ಕ್ರಮ ಕೈಗೊಳ್ಳಬೇಕು.

Tags:    

Similar News