
ಮೃತಪಟ್ಟ ತಾಯಿ ಚಾಂದಿನಿ ಮತ್ತು ಮಗು ಯುವಿ
ಗ್ಯಾಸ್ ಗೀಸರ್ ಸೋರಿಕೆಗೆ ತಾಯಿ-ಮಗು ಬಲಿ
ಘಟನೆ ಸಂಬಂಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಗ್ಯಾಸ್ ಗೀಸರ್‌ನಿಂದ ಉಂಟಾದ ಅನಿಲ ಸೋರಿಕೆಯಿಂದ ಉಸಿರುಗಟ್ಟಿ ತಾಯಿ ಹಾಗೂ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ನಗರದ ಗೋವಿಂದರಾಜ ನಗರದಲ್ಲಿ ನಡೆದಿದೆ.
ಮೃತರನ್ನು ಚಾಂದಿನಿ (26) ಹಾಗೂ ಅವರ ಮಗು ಯುವಿ (4) ಎಂದು ಗುರುತಿಸಲಾಗಿದೆ. ಸೋಮವಾರ (ಡಿ.8) ಮಧ್ಯಾಹ್ನ ತಾಯಿ ಮತ್ತು ಮಗು ಸ್ನಾನಕ್ಕೆಂದು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಸ್ನಾನದ ಕೋಣೆಯಲ್ಲಿ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ, ಇಬ್ಬರೂ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದಾರೆ ಎನ್ನಲಾಗಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಚಾಂದಿನಿ ಅವರು ಪ್ರತಿದಿನ ಸಂಜೆ 4 ಗಂಟೆಗೆ ಶಾಲೆಯಿಂದ ತಮ್ಮ ದೊಡ್ಡ ಮಗಳನ್ನು ಕರೆತರಲು ಹೋಗುತ್ತಿದ್ದರು. ಆದರೆ ಸೋಮವಾರ ಅವರು ಶಾಲೆಗೆ ಹೋಗಿರಲಿಲ್ಲ. ಇದರಿಂದ ಆತಂಕಗೊಂಡ ಶಾಲಾ ಸಿಬ್ಬಂದಿ, ಚಾಂದಿನಿ ಅವರ ಪತಿ ಕಿರಣ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕಿರಣ್ ಅವರು ಪತ್ನಿ ಚಾಂದಿನಿಗೆ ಫೋನ್ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡ ಕಿರಣ್, ಮನೆಯ ಹತ್ತಿರವಿದ್ದ ತಮ್ಮ ಸಹೋದರ ಪ್ರವೀಣ್ ಅವರಿಗೆ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾರೆ.
ಪ್ರವೀಣ್ ಮನೆಗೆ ಬಂದು ಪರಿಶೀಲಿಸಿದಾಗ, ಸ್ನಾನದ ಕೋಣೆಯಲ್ಲಿ ಚಾಂದಿನಿ ಮತ್ತು ಮಗು ಯುವಿ ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮತ್ತು ಮಗು ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಘಟನೆ ಸಂಬಂಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮರುಕಳಿಸುತ್ತಿರುವ ದುರಂತಗಳು:
ಗ್ಯಾಸ್ ಗೀಸರ್‌ಗಳ ಅವೈಜ್ಞಾನಿಕ ಅಳವಡಿಕೆ ಮತ್ತು ನಿರ್ವಹಣೆಯ ಕೊರತೆ ರಾಜ್ಯದಲ್ಲಿ ಸಾಲು ಸಾಲು ಸಾವುಗಳಿಗೆ ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬೆಟ್ಟದಪುರದಲ್ಲಿ ಸ್ನಾನಕ್ಕೆ ತೆರಳಿದ್ದ ಅಕ್ಕ-ತಂಗಿಯರಿಬ್ಬರು ಇದೇ ರೀತಿ ಗ್ಯಾಸ್ ಗೀಸರ್ ಸೋರಿಕೆಯಿಂದ ಪ್ರಾಣ ಕಳೆದುಕೊಂಡಿದ್ದರು. ಇದೀಗ ರಾಜಧಾನಿಯಲ್ಲೂ ಅಂತದ್ದೇ ದುರಂತ ಮರುಕಳಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಸ್ನಾನದ ಕೋಣೆಯಲ್ಲಿ ಸರಿಯಾದ ಗಾಳಿಯಾಡುವ ವ್ಯವಸ್ಥೆ ಇಲ್ಲದಿದ್ದಾಗ, ಗ್ಯಾಸ್ ಗೀಸರ್‌ನಿಂದ ಹೊರಸೂಸುವ ಇಂಗಾಲದ ಮಾನಾಕ್ಸೈಡ್ ಪ್ರಾಣಾಂತಿಕವಾಗಬಲ್ಲದು ಎಂದು ತಜ್ಞರು ಎಚ್ಚರಿಸಿದ್ದಾರೆ.

