ರಾಹುಲ್ ಗಾಂಧಿಗೆ ಪತ್ರ ಬರೆದ ರಾಜಣ್ಣ; ಡಿಕೆಶಿ ವಿರುದ್ಧ ಪರೋಕ್ಷ ದೂರು, ಸಿಎಂ ಪರ ವಕಾಲತು
ವೋಟ್ ಚೋರಿ ಕುರಿತು ತಾವಾಡಿದ ಮಾತುಗಳಿಗೂ ಸ್ಪಷ್ಟನೆ ನೀಡಿರುವ ಕೆ.ಎನ್. ರಾಜಣ್ಣ ಅವರು ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಎಂಟು ಪುಟಗಳ ಪತ್ರ ಬರೆದಿದ್ದಾರೆ.
ವೋಟ್ ಚೋರಿ ಪ್ರಕರಣದಲ್ಲಿ ಪಕ್ಷದ ವಿರುದ್ಧವೇ ಮಾತನಾಡಿದರೆಂಬ ಕಾರಣಕ್ಕೆ ಸಂಪುಟದಿಂದ ವಜಾಗೊಂಡಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಸಮರಕ್ಕೆ ಇಳಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಭೇಟಿಯಾಗಿ ಚರ್ಚಿಸಿದ ಬೆಳವಣಿಗೆ ಬೆನ್ನಲ್ಲೇ ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವುದು ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿದೆ.
ವೋಟ್ ಚೋರಿ ಕುರಿತು ತಾವಾಡಿದ ಮಾತುಗಳಿಗೂ ಸ್ಪಷ್ಟನೆ ನೀಡಿರುವ ಕೆ.ಎನ್. ರಾಜಣ್ಣ ಅವರು ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಎಂಟು ಪುಟಗಳ ಪತ್ರ ಬರೆದಿದ್ದಾರೆ. ಅಲ್ಲದೇ ಈ ಸಂಬಂಧ ಚರ್ಚಿಸಲು ಭೇಟಿಗೆ ಅವಕಾಶ ನೀಡುವಂತೆಯೂ ಕೆ.ಎನ್. ರಾಜಣ್ಣ ಕೋರಿದ್ದಾರೆ.
ಮಹಾದೇವಪುರ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಕೆ.ಎನ್. ರಾಜಣ್ಣ ಅವರು, ನಮ್ಮ ಸರ್ಕಾರ ಇದ್ದಾಗಲೇ ಮತದಾರರ ಪಟ್ಟಿ ಮಾಡಲಾಗಿದೆ. ಆಗೇನು ಕಣ್ಮುಚ್ಚಿ ಕುಳಿತಿದ್ದರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಪಕ್ಷದ ವಿರುದ್ಧವೇ ಮಾತನಾಡಿದರೆಂದು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್‌ಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿತ್ತು.
ಡಿಕೆಶಿ ಭೇಟಿಯ ಬೆನ್ನಲ್ಲೇ ಬೆಳವಣಿಗೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಆಪ್ತರಾದ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಅಲ್ಲದೇ ಬೆಳಗಾವಿ ಅಧಿವೇಶನದಲ್ಲಿ ಎಲ್ಲ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು.
ಎರಡು ದಿನಗಳ ಹಿಂದಷ್ಟೇ ಡಿ.ಕೆ. ಶಿವಕುಮಾರ್ ಅವರು ಕೆ.ಎನ್. ರಾಜಣ್ಣ ಅವರನ್ನು ಬೆಂಗಳೂರಿನ ಖಾಸಗಿ ವಸತಿ ಗೃಹದಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಈ ಬೆಳವಣಿಗೆಯಾದ ಎರಡು ದಿನಗಳಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ರಾಜಣ್ಣ ಅವರು ಎಂಟು ಪುಟಗಳ ದೂರು ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ಡಿಕೆ ಶಿವಕುಮಾರ್ ಅವರು ಭೇಟಿಯಾದ ಸಂದರ್ಭದಲ್ಲೂ ತನ್ನ ಹಿಂದಿನ ಎಲ್ಲಾ ಹೇಳಿಕೆಗಳಿಗೆ ಬದ್ಧವಿರುವುದಾಗಿ ರಾಜಣ್ಣ ಸ್ಪಷ್ಟಪಡಿಸಿದ್ದರು.
ರಾಹುಲ್‌ಗೆ ಬರೆದ ಪತ್ರದಲ್ಲಿ ಏನಿದೆ?
ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಗೊಂದಲಗಳು ಮತ್ತು ರಾಜ್ಯ ರಾಜಕೀಯ ಬೆಳವಣಿಗೆಗಳಿಂದ ಪಕ್ಷಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಡಿ. 17ರಂದು ಸುಮಾರು 8 ಪುಟಗಳ ಪತ್ರವನ್ನು ರಾಜಣ್ಣ ಅವರು ರಾಹುಲ್ ಗಾಂಧಿಗೆ ರವಾನಿಸಿದ್ದಾರೆ. ಮತಗಳ್ಳತನದ ಕುರಿತು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ತಿರುಚಲಾಗಿದೆ ಎಂಬುದಕ್ಕೂ ಸ್ಪಷ್ಟೀಕರಣ ನೀಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆ ಮತ್ತು ತಾವು ನೀಡಿದ ಉತ್ತರ ಎರಡನ್ನೂ ಉಲ್ಲೇಖಿಸಿ, ಅದರ ಹಿಂದಿರುವ ನಿಜಾಂಶವನ್ನು ಮುಂದಿಟ್ಟಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮತಗಳ್ಳತನದ ಕುರಿತಾದ ತಾವು ನೀಡಿದ್ದ ಹೇಳಿಕೆಯ ಉದ್ದೇಶವನ್ನು ತಪ್ಪಾಗಿ ರವಾನಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದೇ ವಿಚಾರದ ಸಲುವಾಗಿ ಚರ್ಚಿಸಲು ಭೇಟಿಗೆ ಅವಕಾಶ ನೀಡುವಂತೆ ಕೆ.ಎನ್. ರಾಜಣ್ಣ ಅವರು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಸಿಎಂ ಪರ ಬ್ಯಾಟಿಂಗ್
ರಾಹುಲ್ ಗಾಂಧಿ ಅವರಿಗೆ ಕೆ.ಎನ್. ರಾಜಣ್ಣ ಬರೆದಿರುವ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿಯೂ ಬ್ಯಾಟಿಂಗ್ ಮಾಡಿದ್ದಾರೆ. ಅಹಿಂದ ಸಂಘಟನೆ ಮೂಲಕವೇ 2013 ಮತ್ತು 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಿದೆ. ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಯ ಹಾಗೂ ಅಲ್ಪಸಂಖ್ಯಾತರು, ಬಡವರ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಕಡೆಗಣಿಸಿದರೆ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ರಾಜಕೀಯ ತಂತ್ರಗಾರಿಕೆ ಕುರಿತು ಮಾತನಾಡಿದ ಕೆ.ಎನ್. ರಾಜಣ್ಣ ಅವರು, ಬಿಎಲ್ಎಗಳು ಸರಿಯಾಗಿ ಕೆಲಸ ಮಾಡಿದ್ದರೆ ಇನ್ನೂ 8 ರಿಂದ 10 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸುತ್ತಿತ್ತು. ಬೇರೆ ರಾಜ್ಯಗಳಲ್ಲೂ 30–40 ಸೀಟುಗಳು ಕಾಂಗ್ರೆಸ್ ಪಾಲಾಗುತ್ತಿದ್ದವು. ಆಗ ನರೇಂದ್ರ ಮೋದಿ ಪ್ರಧಾನಿ ಆಗುತ್ತಿರಲಿಲ್ಲ ಎಂದು ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನು ಯಾವುದೇ ಭ್ರಷ್ಟಾಚಾರ ಮಾಡದೇ ಎರಡು ವರ್ಷ ಸಚಿವರಾಗಿ ಕೆಲಸ ಮಾಡಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತಂದಿದ್ದು ನಾನೇ. ಎಸ್ಸಿ/ಎಸ್ಟಿ ಮಹಿಳಾ ಮೀಸಲಾತಿ ಮೂಲಕ ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರಿಗೆ ಲಾಭವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಸನ ಉಸ್ತುವಾರಿಯಾಗಿ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಗೆಲುವಿಗೆ ಶ್ರಮಪಟ್ಟಿದ್ದೇನೆ ಎಂದೂ ತಿಳಿಸಿದ್ದಾರೆ.
ನೆಹರು ಕುಟುಂಬಕ್ಕೆ ನಾನು ಸದಾ ನಿಷ್ಠೆಯಿಂದ ಇದ್ದೇನೆ. ತಮ್ಮ ವಿರುದ್ಧ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ಎಲ್ಲ ವಿಚಾರಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಲು ಭೇಟಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.