ಚಾಮರಾಜನಗರ: ಗ್ರಾಮಸ್ಥರಿಗೆ ಭೀತಿ ಹುಟ್ಟಿಸಿರುವ ಐದು ಹುಲಿಗಳು; ಸೆರೆಗೆ ಶೂಟರ್‌ಗಳ ನಿಯೋಜನೆ, ಆನೆ ಪಡೆ ಅಗಮನ
ಡ್ರೋನ್‌ನಲ್ಲೂ 5 ಹುಲಿಗಳು ಓಡಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಸುತ್ತಲಿನ ಗ್ರಾಮಗಳಲ್ಲಿ ನಾಲ್ಕು ಮರಿಗಳ ಜತೆ ತಾಯಿ ಹುಲಿ ಓಟಾಟ ನಡೆಸಿರುವುದು ಅತಂಕಕೆ ಕಾರಣವಾಗಿದೆ.
ಚಾಮರಾನಗರದ ನಂಜೆದೇವಪುರದಲ್ಲಿ ಕಾಣಿಸಿಕೊಂಡಿರುವ ಐದು ಹುಲಿಗಳನ್ನು ಸುರಕ್ಷಿತವಾಗಿ ರಕ್ಷಿಸಿ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಮೊದಲಿಗೆ ಬೋನುಗಳನ್ನು ಅಳವಡಿಸಲು ಮತ್ತು ಅಗತ್ಯ ಬಿದ್ದರೆ ಅರವಳಿಕೆ ನೀಡಿ ಸೆರೆ ಹಿಡಿಯಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಐದು ಹುಲಿಗಳ ರಕ್ಷಣೆ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಸಲಕರಣೆ, ಹೆಚ್ಚುವರಿ ಪಶುವೈದ್ಯರು, ಶಾರ್ಪ್ ಶೂಟರ್‌ಗಳನ್ನು ಸಹ ನಿಯೋಜನೆ ಮಾಡುವಂತೆ ಹಾಗೂ ಹೆಚ್ಚುವರಿಯಾಗಿ ಆನೆಗಳನ್ನು ತಕ್ಷಣವೇ ತರಿಸಿಕೊಳ್ಳಲು ಇಲಾಖೆ ನಿರ್ಧರಿಸಿದೆ.
ಚಾಮರಾಜನಗರದ ನಂಜೇದೇವನಪುರ ಗ್ರಾಮದ ಬಳಿ 5 ಹುಲಿ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನಂಜೇದೇವನಪುರ, ವೀರನಪುರ ಹಾಗೂ ಉಡಿಗಾಲ ಗ್ರಾಮದ ಜಮೀನುಗಳಲ್ಲಿ ಹುಲಿಗಳು ಕಂಡುಬಂದಿವೆ. ಡ್ರೋನ್‌ನಲ್ಲೂ 5 ಹುಲಿಗಳು ಓಡಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ನಾಲ್ಕು ಮರಿಗಳ ಜತೆ ತಾಯಿ ಹುಲಿ ಜತೆಗೆ ಹಳ್ಳಿಗಳಲ್ಲಿ ಓಟಾಟ ನಡೆಸಿರುವುದು ಅತಂಕಕೆ ಕಾರಣವಾಗಿದೆ.
ಡ್ರೋನ್ ಕ್ಯಾಮರಾಗಳು, ಥರ್ಮಲ್ ಕ್ಯಾಮರಾಗಳನ್ನು ಬಳಸಿ ಹುಲಿಗಳು ಎಲ್ಲಿವೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದು ಗ್ರಾಮಗಳಿಗೆ ಬಂದರೆ ಗ್ರಾಮಸ್ಥರಿಗೆ ಕೂಡಲೇ ಮಾಹಿತಿ ನೀಡಬೇಕು ಮತ್ತು ಅಲ್ಲಿಗೆ ಅರಣ್ಯ ಇಲಾಖೆಯ ತಂಡಗಳನ್ನು ಕಳುಹಿಸಿ ಯಾವುದೇ ಅನಾಹುತವಾಗದಂತೆ ಕ್ರಮ ವಹಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಸಚಿವರ ಸಭೆ
ಈ ಸಂಬಂಧ ಮಂಗಳವಾರ (ಡಿ.23) ಸಚಿವ ಈಶ್ವರ ಖಂಡ್ರೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
"ಹುಲಿಗಳು ಖಾಸಗಿ ಜಮೀನಿನಲ್ಲಿ ಕಾಣಿಸಿಕೊಂಡಿರುವ ಕಾರಣ ಜನರು ಭಯಭೀತರಾಗಿದ್ದು, ಅಮೂಲ್ಯವಾದ ಜೀವಹಾನಿ ಆಗದ ರೀತಿಯಲ್ಲಿ ಮತ್ತು ವನ್ಯಜೀವಿಗಳಿಗೂ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸಬೇಕು. ಹುಲಿಗಳ ಚಲನವಲನದ ಮೇಲೆ ಸತತ ನಿಗಾ ಇಡುವುದು ಅತ್ಯಗತ್ಯವಾಗಿದೆ," ಎಂದಿದ್ದಾರೆ.
ಐದು ಹುಲಿಗಳ ಕಾರ್ಯಾಚರಣೆ ಸುಲಭವಲ್ಲ
ಐದು ಹುಲಿಗಳ ಕಾರ್ಯಾಚರಣೆ ಸುಲಭದ ಕಾಯಕವಲ್ಲ ಎಂಬುದು ತಮಗೂ ಅರಿವಿದೆ. ಹುಲಿಗಳನ್ನು ಹಿಡಿಯುವಾಗ ಹುಲಿಗಳು ಕಾರ್ಯಾಚರಣೆ ತಂಡದ ಮೇಲೆ ದಾಳಿ ಮಾಡದಂತೆ ಮತ್ತು ಬಡಗಲಪುರದಲ್ಲಿ ಹುಲಿ ರಕ್ಷಣೆ ಕಾರ್ಯಾಚರಣೆ ವೇಳೆ ವ್ಯಕ್ತಿಯ ಮೇಲೆ ದಾಳಿ ಆದಂತಹ ಪ್ರಕರಣಗಳು ಮರುಕಳಿಸದಂತೆ ಹಿರಿಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.
ಜನರ ಜೀವ ಪರಮೋಚ್ಚ
ಜನರ ಜೀವದ ಸುರಕ್ಷತೆ ಅತ್ಯಂತ ಪರಮೋಚ್ಚವಾದ್ದು, ಅದೇ ವೇಳೆ ವನ್ಯಜೀವಿಗಳ ರಕ್ಷಣೆಯೂ ಅಷ್ಟೇ ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಬೇಕು, ಸಿಬ್ಬಂದಿಯ ಸುರಕ್ಷತೆಗೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಜೊತೆಗೆ ಕಾರ್ಯಾಚರಣೆ ಸ್ಥಳಕ್ಕೆ ಸಾರ್ವಜನಿಕರು ಬಾರದಂತೆ ಸೆಕ್ಷನ್ 144 ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಹಾಗೂ ಇ-ಗಸ್ತು ಹೆಚ್ಚಿಸಬೇಕು. ಎಲ್ಲಾ ಅರಣ್ಯ ಗಸ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಮೊಬೈಲ್‌ನಲ್ಲಿ ಆಪ್ ಅಳವಡಿಸಿ, ಗಸ್ತಿನ ಮೇಲೆ ಕೇಂದ್ರ ಕಚೇರಿಯಿಂದ ನಿಗಾ ಇಡಬೇಕು ಎಂದರು.
ಶಾಶ್ವತ ಪರಿಹಾರ ಅಗತ್ಯ
ಗಸ್ತಿನಲ್ಲಿ ಯಾವುದೇ ಲೋಪ ಆಗದಂತೆ ಪೂರ್ಣ ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕು ಹಾಗೂ ಕಮಾಂಡ್ ಕೇಂದ್ರಗಳನ್ನು ವಿಳಂಬವಿಲ್ಲದೆ ಎಲ್ಲೆಡೆ ಕಾರ್ಯಾರಂಭ ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗ ನಾವು ಕೈಗೊಳ್ಳುತ್ತಿರುವುದೆಲ್ಲವೂ ತಾತ್ಕಾಲಿಕ ಕ್ರಮಗಳಾಗಿದ್ದು, ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬಾರದಂತೆ ಶಾಶ್ವತ ಪರಿಹಾರ ಏನು ಎಂಬ ಬಗ್ಗೆ ಅಧಿಕಾರಿಗಳು ತಜ್ಞರೊಂದಿಗೆ ಚರ್ಚಿಸಿ ನೀಲನಕ್ಷೆ ತಯಾರಿಸಿ ವರದಿ ಸಲ್ಲಿಸಲು ಸೂಚಿಸಿದರು.
ಚಿರತೆ ಸೆರೆ
ತುರುವೇಕೆರೆಯಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆ, ಮಹಿಳೆಯ ದೇಹದ ಮಾಂಸ ಭಕ್ಷಣೆ ಮಾಡಿರುವ ಕಾರಣ ಅದನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರಿಗೆ ಮಾಹಿತಿ ನೀಡಲಾಯಿತು.
ಇತ್ತೀಚೆಗೆ ನಡೆದ ಹುಲಿಗಳ ಸಾವು ಪ್ರಕರಣ
ಮಲೆ ಮಹದೇಶ್ವರ ಬೆಟ್ಟ: ವಿಷ ಹಾಕಿದ ಹಸುವಿನ ಮಾಂಸ ತಿಂದಿದ್ದರಿಂದ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಸೇರಿದಂತೆ ಐದು ಹುಲಿಗಳು ಅಸುನೀಗಿದವು. ಇದೇ ಪ್ರದೇಶದಲ್ಲಿ ಇತ್ತೀಚೆಗೆ ಇನ್ನೊಂದು ಹುಲಿಯ ಅರ್ಧ ದೇಹ ಪತ್ತೆಯಾಗಿದ್ದು, ಪ್ರಾಣಿಗಳ ಬೇಟೆ ಶಂಕೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆ: ಹುಣಸೂರು ತಾಲೂಕಿನ ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ತಾಯಿ ಹುಲಿಯ ನಾಲ್ಕು ಮರಿಗಳು ಆಹಾರವಿಲ್ಲದೆ ಮತ್ತು ಆಘಾತದಿಂದ ಸಾವನ್ನಪ್ಪಿವೆ.
ಇತರ ಪ್ರದೇಶಗಳು: ನಾಗರಹೊಳೆ, ಬಂಡೀಪುರ, ಕಾವೇರಿ ವನ್ಯಧಾಮಗಳಲ್ಲೂ ಹುಲಿಗಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ.