ಬೆಂಗಳೂರು ಪೊಲೀಸರಿಂದ ಕಾರ್ಯಾಚರಣೆ: 2.74 ಕೋಟಿ ಮೌಲ್ಯದ ಚಿನ್ನಾಭರಣ, ಮಾದಕ ದ್ರವ್ಯ ವಶ

ಶುಭ ಸಮಾರಂಭ ನಡೆಯುವ ಕಲ್ಯಾಣ ಮಂಟಪಗಳಲ್ಲಿ ಸಂಬಂಧಿಕರಂತೆ ಭಾಗವಹಿಸಿ, ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದ ಒಬ್ಬ ಮಹಿಳೆಯ ಬಂಧಿಸಿ, ಆರೋಪಿಯಿಂದ 262 ಗ್ರಾಂ. ಚಿನ್ನಾಭರಣ ಸೇರಿದಂತೆ 32 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Update: 2025-12-23 12:41 GMT

ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಮಾತನಾಡಿದರು.

Click the Play button to listen to article

ಬೆಂಗಳೂರು ನಗರ ಪೊಲೀಸರು ಜೆಪಿ ನಗರ, ಬಸವನಗುಡಿ ಹಾಗೂ ಸಿದ್ಧಾಪುರ ಠಾಣೆ ವ್ಯಾಪ್ತಿಯುಲ್ಲಿನ ಕಳವು ಪ್ರಕರಣಗಳನ್ನು ಬೇಧಿಸಿದ್ದು, ಒಬ್ಬ ಮಹಿಳೆ ಸೇರಿದಂತೆ ನಾಲ್ಕು ಜನರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 997 ಗ್ರಾಂ ಚಿನ್ನ, 1.55 ಕೆ.ಜಿ. ಬೆಳ್ಳಿ, ಒಂದು ಬೈಕ್‌ ಹಾಗೂ 4.60 ಲಕ್ಷ ನಗದು ಸೇರಿದಂತೆ 1.28 ಕೋಟಿ ರೂ. ಮೊತ್ತದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಮಂಗಳವಾರ (ಡಿ.23) ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, ಜೆ.ಪಿ.ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಮನೆಯೊಂದರಲ್ಲಿ ಮಾರ್ಚ್‌ 17ರಂದು ಕಳ್ಳತನವಾಗಿತ್ತು. ನಿರಂತರ ಕಾರ್ಯಾಚರಣೆ ನಂತರ ಆರೋಪಿಯನ್ನು ಬಂಧಿಸಿದ್ದು, ಆರೋಪಿ ಮನೆಯಿಂದ 258 ಗ್ರಾಂ ಚಿನ್ನದಗಟ್ಟಿ, 10 ಗ್ರಾಂ ಚಿನ್ನದ ಚೈನ್, 1.55 ಕೆ.ಜಿ. ಬೆಳ್ಳಿಯ ಗಟ್ಟಿಗಳು, 4,60 ಲಕ್ಷ ನಗದು ಮತ್ತು ಜ್ಯೂವೆಲರಿ ವರ್ಕ್ಸ್‌ ಶಾಪ್ ಮಾಲೀಕನಿಂದ 210 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಯ ಬಂಧನದಿಂದ ಜೆಪಿ ನಗರ ಪೊಲೀಸ್ ಠಾಣೆ, ಬಾಲ್ಕಿ ಪೊಲೀಸ್ ಠಾಣೆ, ಮಳವಳ್ಳಿ ಪೊಲೀಸ್‌ ಠಾಣೆ ಹಾಗೂ ಸಂತೆಮಾರಳ್ಳಿ ಪೊಲೀಸ್ ಠಾಣೆಯ ತಲಾ ಒಂದು ಕಳವು ಪ್ರಕರಣ, ಹುಣಸೂರು ಪೊಲೀಸ್ ಠಾಣೆಯ ಎರಡು ಕಳವು ಪ್ರಕರಣಗಳು ಸೇರಿದಂತೆ ಒಟ್ಟು ಏಳು ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಶುಭ ಸಮಾರಂಭ ನಡೆಯುವ ಕಲ್ಯಾಣ ಮಂಟಪಗಳಲ್ಲಿ ಸಂಬಂಧಿಕರಂತೆ ಭಾಗವಹಿಸಿ, ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದ ಒಬ್ಬ ಮಹಿಳೆಯ ಬಂಧಿಸಿ, ಆರೋಪಿಯಿಂದ 262 ಗ್ರಾಂ. ಚಿನ್ನಾಭರಣ ಸೇರಿದಂತೆ 32 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಂಧನದಿಂದಾಗಿ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಯೊಂದಲ್ಲಿ ಕನ್ನ ಹಾಕಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 257 ಗ್ರಾಂ ಚಿನ್ನಾಭರಣ ಹಾಗೂ 1 ಮೊಬೈಲ್ ಸೇರಿದಂತೆ ಒಟ್ಟು 31.27 ಲಕ್ಷ ರೂ. ಮೌಲ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದಾಗಿ ಠಾಣಾ ವ್ಯಾಪ್ತಿಯಲ್ಲಿ ಎರಡು ಕಳವು ಪ್ರಕರಣ ಪತ್ತೆಯಾಗಿದ್ದು, ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1.46 ಕೋಟಿ ರೂ. ಮೌಲ್ಯದ ಡ್ರಗ್ಸ್‌ವಶ

ಖಾಸಗಿ ಟ್ರಾವೆಲ್ಸ್ ಬಸ್‌ನಲ್ಲಿ ಮುಂಬೈನಿಂದ ಬೆಂಗಳೂರಿಗೆ ಕೊಕೇನ್ ಸಾಗಣೆ ಮಾಡುತ್ತಿದ್ದ ಒಬ್ಬ ವಿದೇಶಿ ಮಹಿಳೆಯನ್ನು ಎನ್‌ಡಿಪಿಎಸ್‌ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿ ಮಹಿಳೆಯಿಂದ 121 ಗ್ರಾಂ ಕೊಕೇನ್, ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ವಶಡಿಸಿಕೊಳ್ಳಲಾಗಿದ್ದು, ಮಾದಕದ್ರವ್ಯದ ಮೌಲ್ಯ ಅಂದಾಜು 1.20 ಕೋಟಿ ರೂ.ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ಮಹಿಳೆಯು 2024ರಲ್ಲಿ ದೆಹಲಿ ವಿಶ್ವವಿದ್ಯಾನಿಲಯಕ್ಕೆ ವ್ಯಾಸಂಗ ಮಾಡುವುದಕ್ಕಾಗಿ ಭಾರತಕ್ಕಬಂದು ಕಾಲೇಜಿಗೆ ದಾಖಲಾಗದೇ ಮುಂಬೈನ ಗಾಲಾನಗರ, ಅಂಬವಾಡಿ, ನಲ್ಲಾಸೋಪ್ರಾ ಕಡೆಗಳಲ್ಲಿ ವಾಸವಾಗಿದ್ದರು. ಮುಂಬೈನಲ್ಲಿದ್ದ ಆಕೆಯ ಸ್ನೇಹಿತನು ನೀಡಿದ ಕೊಕೇನ್ ಅನ್ನು ಪಡೆದುಕೊಂಡು, ಆತನು ಹೇಳಿದ ಸ್ಥಳಗಳಿಗೆ ಸಾಗಣೆ ಮಾಡಿ ಡ್ರಗ್‌ಪೆಡ್ಡಿಂಗ್ ಮಾಡುವ ಕೃತ್ಯದಲ್ಲಿ ತೊಡಗಿಕೊಂಡು ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದರು.

ಮತ್ತೊಂದು ಪ್ರಕರಣದಲ್ಲಿ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ಇಬ್ಬರು ವ್ಯಕ್ತಿಗಳ ಬಂಧಿಸಿ 247 ಗ್ರಾಂ. ಹೈಡ್ರೋ ಗಾಂಜಾ ಮತ್ತು 19 ಗ್ರಾಂ. ಎಂಡಿಎಂಎ ವಶಕ್ಕೆ ಪಡೆದಿದ್ದು, 26.90 ಲಕ್ಷ ರೂ. ಮೌಲ್ಯ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಳಿಂಗರಾವ್ ಸರ್ಕಲ್ ಬಳಿ ಅಪರಿಚಿತ ವ್ಯಕ್ತಿಗಳು ನಿಷೇಧಿತ ಮಾದಕ ವಸ್ತುವಾದ ಹೈಡ್ರೋ ಗಾಂಜಾ ಮತ್ತು ಎಂಡಿಎಂಎನ್ನು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ,ಅಪರಿಚಿತ ವ್ಯಕ್ತಿಯೊಬ್ಬನಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುವಾದ ಹೈಡ್ರೋ ಮತ್ತು ಎಂಡಿಎಂಎ ಖರೀದಿಸಿ, ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Similar News