
ಡ್ರಗ್ಸ್ ಮಾಫಿಯಾ ಮಟ್ಟಹಾಕಲು ಸಮರ: ಗೃಹ ಸಚಿವ ಪರಮೇಶ್ವರ್
ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಬರುವವರೆಗೂ ದಂಧೆಕೋರರ ವಿರುದ್ಧ ಸರ್ಕಾರದ ಸಮರ ಮುಂದುವರೆಯಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಪರಿಷತ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ರಾಜ್ಯ ಸರ್ಕಾರ ಕಠಿಣ ನಿಲುವನ್ನು ತಳೆದಿದ್ದು, ಡ್ರಗ್ಸ್ ನಿಯಂತ್ರಣಕ್ಕೆ ಬರುವವರೆಗೂ ದಂಧೆಕೋರರ ವಿರುದ್ಧ ಸರ್ಕಾರದ ಸಮರ ಮುಂದುವರೆಯಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಸದಸ್ಯ ಕೆ. ಅಬ್ದುಲ್ ಜಬ್ಬರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತುಹಾಕಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ಇಂದು ಕೇವಲ ರಾಜ್ಯ ಅಥವಾ ದೇಶದ ಸಮಸ್ಯೆಯಾಗಿರದೆ, ಜಾಗತಿಕ ಮಟ್ಟದಲ್ಲಿ ಆತಂಕಕಾರಿ ವಿಷಯವಾಗಿದೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ತಂದುಕೊಡುವ ಉದ್ಯಮವಾಗಿ ಇದು ಬದಲಾಗಿರುವುದರಿಂದ, ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಜಾಲಗಳೇ ಇದರಲ್ಲಿ ಸಕ್ರಿಯವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಹಲವು ತಂತ್ರಗಳನ್ನು ರೂಪಿಸಿದೆ. ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿಯನ್ನು ಸಮರ್ಥವಾಗಿ ಎದುರಿಸಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದಲ್ಲಿ 'ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ'ಯನ್ನು ಸ್ಥಾಪಿಸಲಾಗಿದೆ. ಇದು ವಿಶೇಷವಾಗಿ ಡ್ರಗ್ಸ್ ಜಾಲದ ಬೆನ್ನಟ್ಟಿ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲದೇ, ಯುವಜನಾಂಗ ದಾರಿ ತಪ್ಪದಂತೆ ನೋಡಿಕೊಳ್ಳಲು ಶಾಲಾ-ಕಾಲೇಜುಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದು ಕಾನೂನಿನಡಿ ಗಂಭೀರ ಅಪರಾಧ ಎಂಬುದರ ಬಗ್ಗೆ ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿ ವರ್ಷ ಜೂ. 26 ರಂದು 'ಮಾದಕ ವಸ್ತುಗಳ ನಿಗ್ರಹ ದಿನ'ವನ್ನಾಗಿ ಆಚರಿಸಿ ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾನೂನು ಕ್ರಮ ಮತ್ತಷ್ಟು ಬಿಗಿ
ದರೋಡೆ, ಕಳ್ಳತನ ಮತ್ತು ಸುಲಿಗೆ ಪ್ರಕರಣಗಳನ್ನು ಹತ್ತಿಕ್ಕಲು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು. ವಾಹನ ಕಳವು ಪ್ರಕರಣಗಳನ್ನು ನಿಯಂತ್ರಿಸಲು ಹಾಗೂ ಬಾಕಿ ಇರುವ ಪ್ರಕರಣಗಳನ್ನು ಪತ್ತೆ ಹಚ್ಚಲು ನಾನಾ ಕ್ರಮ ತೆಗೆದುಕೊಳ್ಳಲಾಗಿದೆ. ವಾಹನ ಕಳವು ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ, ಸಂಘಟಿತ ವಾಹನ ಕಳವು ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 111 ಅನ್ನು ಅಳವಡಿಸಿ ನಿಯಮಾನುಸಾರ ಅಗತ್ಯವಾದ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕ್ರಮದ ಮೂಲಕ ಸಂಘಟಿತ ಅಪರಾಧ ಚಟುವಟಿಕೆಗಳಿಗೆ ಅಡ್ಡಿ ಉಂಟಾಗುವಂತೆ ಹಾಗೂ ವಾಹನ ಕಳವು ಪ್ರಕರಣಗಳ ಪತ್ತೆ ಮತ್ತು ತಡೆಗಟ್ಟುವಿಕೆಯಲ್ಲಿ ಪರಿಣಾಮಕಾರಿ ಕ್ರಮ ಜರುಗುವಂತೆ ನೋಡಿಕೊಳ್ಳಲಾಗಿದೆ ಎಂದು ನುಡಿದರು.
ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಪ್ರಶ್ನೆಗೆ ಉತ್ತರಿಸಿದ ಅವರು, ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರೆಯದಂತೆ ಕಠಿಣ ಕಾನೂನು ಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಆರೋಪಿಗಳ ಮೇಲಿನ ನಿಗಾವನ್ನು ಮತ್ತಷ್ಟು ಬಲಪಡಿಸಲಾಗಿದೆ. ಕಳವು ಪ್ರಕರಣಗಳನ್ನು ನಿಯಂತ್ರಿಸಲು ರಾತ್ರಿ ರೌಂಡ್ ಹಾಗೂ ರಸ್ತೆ ಗಸ್ತು ಕರ್ತವ್ಯವನ್ನು ಬಿಗಿಗೊಳಿಸಿ, ಠಾಣಾ ವ್ಯಾಪ್ತಿಯಲ್ಲಿ ಸಂಶಯಾಸ್ಪದ ವ್ಯಕ್ತಿಗಳು, ಕಂಡುಬಂದಲ್ಲಿ ಅಂತಹವರ ವಿಚಾರಣೆಯನ್ನು ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿ ಸಿಬ್ಬಂದಿಯವರಿಗೆ ಸೂಚಿಸಲಾಗಿದೆ ಎಂದರು.
ಡೋರ್ ಲಾಕ್ ಹೌಸ್‍ಗಳಿದ್ದಲ್ಲಿ ಅಂತಹ ಮನೆಗಳ ಕುರಿತು ಠಾಣೆಯಲ್ಲಿ ಮಾಹಿತಿಯನ್ನು ಸಂಗ್ರಹಿಸಿ, ಠಾಣಾ ವ್ಯಾಪ್ತಿಯ ಮನೆಗಳಲ್ಲಿ ಸಾರ್ವಜನಿಕರು ಹೆಚ್ಚಿನ ದಿನಗಳು ಮನೆಗೆ ಬೀಗ ಹಾಕಿ ಹೋಗುವ ಸಮಯದಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿಯನ್ನು ನೀಡುವ ಕುರಿತು ಜಾಗೃತಿ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಗಸ್ತು ವಾಹನಗಳ ಹಾಗೂ ಹೊಯ್ಸಳ ವಾಹನದ ಅಧಿಕಾರಿಗಳು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯದಲ್ಲಿ ಡೋರ್ ಲಾಕ್ ಹೌಸ್‍ಗಳ ಮೇಲೆ ನಿಗಾಯಿಟ್ಟು, ಸದರಿ ಪ್ರದೇಶದಲ್ಲಿ ಓಡಾಡುವ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆಯನ್ನು ನಡೆಸಿ ಅಪರಾಧಗಳ ಪತ್ತೆ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ವಾಹನ ಕಳವು ಪ್ರಕರಣಗಳು ನಡೆಯದಂತೆ ತಡೆಗಟ್ಟಲು ಹಾಗೂ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ಸಾರ್ವಜನಿಕರಲ್ಲಿ ವಾಹನಗಳನ್ನು ಪಾಕಿರ್ಂಗ್ ಸ್ಥಳಗಳಲ್ಲಿ ನಿಲ್ಲಿಸುವ ಸಮಯದಲ್ಲಿ ಸರಿಯಾಗಿ ಹ್ಯಾಂಡ್ ಲಾಕ್ ಮಾಡುವಂತೆ ಅರಿವು ಮೂಡಿಸುವ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಠಾಣಾ ವ್ಯಾಪ್ತಿಯಲ್ಲಿ ಸ್ವತ್ತು ಕಳವು ಪ್ರಕರಣವು ಹೆಚ್ಚಾಗಿ ವರದಿಯಾಗುವ ಸ್ಥಳಗಳನ್ನು ಗುರುತಿಸಿ ರಾತ್ರಿ ಪಾಳೆಯ ಕರ್ತವ್ಯದ ಅಧಿಕಾರಿಗಳು ಹಾಗೂ ರಾತ್ರಿ ಗಸ್ತು ಕರ್ತವ್ಯದ ಸಿಬ್ಬಂದಿಗಳು ಪದೇ ಪದೇ ಭೇಟಿ ಮಾಡಿ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಠಾಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳನ್ನು ಕಳವು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಸ್ಥಳಗಳಲ್ಲಿ ರಾತ್ರಿ ತೆರಳಿ ಗಸ್ತು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

