Home Minister Parameshwar participates in ABVP march: Intense debate in political circles
x

ಗೃಹ ಸಚಿವ ಡಾ.ಜಿ. ಪರಮೇಶ್ವರ್‌

ಸಿಎಂ ರೇಸ್‌ಗೆ ಪರಮೇಶ್ವರ್ ಎಂಟ್ರಿ, 'ದಲಿತ ಸಿಎಂ' ಕೂಗು ಮತ್ತೆ ಮುನ್ನೆಲೆಗೆ

2023ರಲ್ಲಿ ಸರ್ಕಾರ ರಚನೆಯಾದಾಗ ಸಿಎಂ ಸಿದ್ದರಾಮಯ್ಯ ಅವರಿಗೆ ಎರಡೂವರೆ ವರ್ಷಗಳ ಅವಧಿ ನಿಗದಿಪಡಿಸಲಾಗಿತ್ತು ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಅಂತಹ ಯಾವುದೇ ಷರತ್ತುಗಳ ಬಗ್ಗೆ ಪ್ರಸ್ತಾಪವಾಗಿರಲಿಲ್ಲ," ಎಂದು ಹೇಳಿದರು.


Click the Play button to hear this message in audio format

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅರ್ಧಾವಧಿ ಪೂರೈಸಿದ ಬೆನ್ನಲ್ಲೇ ನಾಯಕತ್ವ ಬದಲಾವಣೆಯ ಚರ್ಚೆ ತೀವ್ರಗೊಂಡಿದೆ. ಇದರ ನಡುವೆಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ (G. Parameshwara) ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆಯನ್ನು ಪರೋಕ್ಷವಾಗಿ ಹೊರಹಾಕುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಭಾನುವಾರ (ನ. 23) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, "ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ನಾನೇನು ಹೊಸಬನಲ್ಲ, ಯಾವಾಗಲೂ ಇದ್ದೇನೆ. 2013ರಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೆ. ಅಂದು ಚುನಾವಣೆಯಲ್ಲಿ ಸೋಲದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಕಾಂಗ್ರೆಸ್ ಸಂಪ್ರದಾಯದಂತೆ ಪಿಸಿಸಿ ಅಧ್ಯಕ್ಷರಿಗೆ ಸಿಎಂ ಆಗುವ ಅವಕಾಶ ಸಿಗುತ್ತದೆ, ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ," ಎಂದು ಮಾರ್ಮಿಕವಾಗಿ ನುಡಿದರು. ನಾಯಕತ್ವ ಬದಲಾವಣೆಯ ಪರಿಸ್ಥಿತಿ ಬಂದರೆ ಹೈಕಮಾಂಡ್ ಮುಂದೆ ತಮ್ಮ ಬೇಡಿಕೆ ಇಡುವುದಾಗಿ ಅವರು ಸುಳಿವು ನೀಡಿದರು.

ಮತ್ತೆ ಕೇಳಿಬಂತು 'ದಲಿತ ಸಿಎಂ' ಕೂಗು

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ 'ದಲಿತ ಮುಖ್ಯಮಂತ್ರಿ' (Dalit CM) ಕೂಗು ಬಲವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ದಲಿತ ಸಿಎಂ ಆಗಬೇಕೆಂಬ ಬೇಡಿಕೆ ಬಹಳ ದಿನಗಳಿಂದಲೂ ಇದೆ. ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ ಮುಂತಾದ ಸಮುದಾಯದ ನಾಯಕರು ಆಗಾಗ ಭೇಟಿಯಾಗಿ ಸಮಾಜದ ಒಳ ಮೀಸಲಾತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಕೇವಲ ನಾವು ಭೇಟಿಯಾದ ತಕ್ಷಣ ಬದಲಾವಣೆ ಆಗುತ್ತಾ?" ಎಂದು ಪ್ರಶ್ನಿಸಿದರು.

ಹೈಕಮಾಂಡ್ ಅಂಗಳದಲ್ಲಿ ಚೆಂಡು

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ನಡುವಿನ 'ಅಧಿಕಾರ ಹಂಚಿಕೆ' ಒಪ್ಪಂದದ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳನ್ನು ಮಾಧ್ಯಮ ಸೃಷ್ಟಿ ಎಂದು ಪರಮೇಶ್ವರ್ ತಳ್ಳಿಹಾಕಿದರು. "ಈವರೆಗೆ ಹೈಕಮಾಂಡ್ ಆಗಲಿ ಅಥವಾ ಶಾಸಕಾಂಗ ಪಕ್ಷದ ಸಭೆಯಲ್ಲಾಗಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಯಾಗಿಲ್ಲ. ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಮರಳಿದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಅಗತ್ಯವಿದ್ದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ," ಎಂದು ಸ್ಪಷ್ಟಪಡಿಸಿದರು.

2023ರಲ್ಲಿ ಸರ್ಕಾರ ರಚನೆಯಾದಾಗ ಸಿಎಂ ಸಿದ್ದರಾಮಯ್ಯ ಅವರಿಗೆ ಎರಡೂವರೆ ವರ್ಷಗಳ ಅವಧಿ ನಿಗದಿಪಡಿಸಲಾಗಿತ್ತು ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಆಯ್ಕೆ ನಡೆದಾಗ ಅಂತಹ ಯಾವುದೇ ಷರತ್ತುಗಳ ಬಗ್ಗೆ ಪ್ರಸ್ತಾಪವಾಗಿರಲಿಲ್ಲ," ಎಂದು ಹೇಳಿದರು.

ಒಟ್ಟಿನಲ್ಲಿ, 'ನವೆಂಬರ್ ಕ್ರಾಂತಿ' (November Revolution) ಎಂದೇ ಬಿಂಬಿತವಾಗುತ್ತಿರುವ ಈ ರಾಜಕೀಯ ವಿದ್ಯಮಾನಗಳು, ಪರಮೇಶ್ವರ್ ಅವರ ಹೇಳಿಕೆಯಿಂದ ಮತ್ತಷ್ಟು ಕುತೂಹಲ ಕೆರಳಿಸಿವೆ.

Read More
Next Story