
ಎಂ. ಚಿನ್ನಸ್ವಾಮಿ ಕ್ರೀಡಾಂಗಣ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆ; ಇಂದು ಸಂಜೆಯೇ ತೀರ್ಮಾನ
ಸೋಮವಾರ ಮಧ್ಯಾಹ್ನ 3 ಗಂಟೆಗೆ ಅಧಿಕಾರಿಗಳ ನೇತೃತ್ವದ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಭದ್ರತಾ ವ್ಯವಸ್ಥೆ, ವ್ಯವಸ್ಥಾಪನಾ ಕ್ರಮ, ಜನಸಂದಣಿ ನಿಯಂತ್ರಣ ಸೇರಿ ಎಲ್ಲಾ ವಿಷಯಗಳ ಮೌಲ್ಯಮಾಪನ ನಡೆಸಲಿದೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸುವ ಕುರಿತಂತೆ ಉಂಟಾಗಿರುವ ಗೊಂದಲಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಇಂದು ಸಂಜೆಯೇ ಸಮಿತಿ ವರದಿ ನೀಡಲಿದೆ.
ಸೋಮವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಅಧಿಕಾರಿಗಳ ಸಭೆ ನಡೆಸಿದ್ದು, ಭದ್ರತಾ ಪರಿಸ್ಥಿತಿ ಹಾಗೂ ನಿರ್ವಹಣಾ ಸವಾಲುಗಳ ಪರಿಶೀಲನೆಗಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ.
ಸೋಮವಾರ ಮಧ್ಯಾಹ್ನ 3 ಗಂಟೆಗೆ ಅಧಿಕಾರಿಗಳ ನೇತೃತ್ವದ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಭದ್ರತಾ ವ್ಯವಸ್ಥೆ, ವ್ಯವಸ್ಥಾಪನಾ ಕ್ರಮ, ಜನಸಂದಣಿ ನಿಯಂತ್ರಣ ಸೇರಿ ಎಲ್ಲಾ ವಿಷಯಗಳ ಮೌಲ್ಯಮಾಪನ ನಡೆಸಲಿದೆ.
ಸಮಿತಿಯಲ್ಲಿ ನಗರ ಪೊಲೀಸ್ ಕಮಿಷನರ್, ಭದ್ರತಾ ವಿಭಾಗದ ಅಧಿಕಾರಿಗಳು, ಜಿಬಿಎ ಆಯುಕ್ತರು ಹಾಗೂ ಹಲವು ಇಲಾಖೆಗಳ ಅಧಿಕಾರಿಗಳು ಇದ್ದಾರೆ. ಸಂಜೆ 5 ಗಂಟೆಗೆ ಗೃಹ ಇಲಾಖೆಗೆ ಸಮಿತಿಯು ವರದಿ ನೀಡಲಿದೆ.
ಅಧಿಕಾರಿಗಳ ಸಮಿತಿಯ ಈ ವರದಿ ಆಧರಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿಯ ಪಂದ್ಯವನ್ನು ಆಡಿಸಬಹುದೇ ಅಥವಾ ಆಡಬಾರದೇ ಎಂಬ ನಿರ್ಧಾರ ಕೈಗೊಳ್ಳಲಾಗುತ್ತದೆ.
ಪ್ರೇಕ್ಷಕರಿಲ್ಲದೇ ಪಂದ್ಯ ನಡೆಸಲು ಮನವಿ
ಕ್ರೀಡಾಂಗಣದಲ್ಲಿ ಪ್ರೇಕ್ಷರಿಲ್ಲದೇ ಪಂದ್ಯ ಆಯೋಜಿಸಲು ಕೆಎಸ್‌ಸಿಎ ಆಡಳಿತ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿದೆ. ಭದ್ರತಾ ವ್ಯವಸ್ಥೆಯನ್ನು ಖಾತರಿಪಡಿಸಿಕೊಂಡು ಪಂದ್ಯ ರದ್ದಾಗದಂತೆ ನೋಡಿಕೊಳ್ಳಲು ಈ ನಿರ್ಣಯ ಮುಂದಿಟ್ಟಿದೆ ಎಂದು ಹೇಳಲಾಗಿದೆ.
ಸಮಿತಿಯ ವರದಿ ಕುರಿತು ಮತ್ತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಂಜೆ ಅಧಿಕೃತ ಹೇಳಿಕೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಆರ್‌ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಕೆಎಸ್‌ಸಿಎಗೆ ಹೊಸ ವ್ಯವಸ್ಥಾಪನಾ ಮಂಡಳಿ ಬಂದಿದ್ದು, ಪಂದ್ಯಗಳನ್ನು ಆಯೋಜಿಸುವಂತೆ ಮನವಿ ಮಾಡಿತ್ತು. ಈ ಮಧ್ಯೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು.

