ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್: ಆಯೋಜನೆಗೆ ಕಠಿಣ ಷರತ್ತುಗಳನ್ನು ವಿಧಿಸಿದ ಪೊಲೀಸ್ ಇಲಾಖೆ
x

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್: ಆಯೋಜನೆಗೆ ಕಠಿಣ ಷರತ್ತುಗಳನ್ನು ವಿಧಿಸಿದ ಪೊಲೀಸ್ ಇಲಾಖೆ

ಕಳೆದ ಜೂನ್‌ನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಜನದಟ್ಟಣೆ ಮತ್ತು ನೂಕುನುಗ್ಗಲು ಘಟನೆ ಮರುಕಳಿಸದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.


Click the Play button to hear this message in audio format

ಮುಂದಿನ ಐಪಿಎಲ್ ಸೇರಿದಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಬೇಕಾದರೆ, ಭದ್ರತಾ ದೃಷ್ಟಿಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕೆಂದು ಬೆಂಗಳೂರು ನಗರ ಪೊಲೀಸರು ಸೂಚಿಸಿದ್ದಾರೆ.

ಕಳೆದ ಜೂನ್‌ನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಜನದಟ್ಟಣೆ ಮತ್ತು ನೂಕುನುಗ್ಗಲು ಘಟನೆ ಮರುಕಳಿಸದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೊಲೀಸರು ಒಟ್ಟು 17 ಪ್ರಮುಖ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ಇವುಗಳನ್ನು ಪಾಲಿಸಿದರೆ ಮಾತ್ರ ಪಂದ್ಯ ಆಯೋಜನೆಗೆ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ.

ಪೊಲೀಸರು ವಿಧಿಸಿರುವ ಪ್ರಮುಖ ಷರತ್ತುಗಳು

1. ಪ್ರತ್ಯೇಕ ಸರತಿ ಸಾಲು: ಕ್ರೀಡಾಂಗಣದ ಪ್ರವೇಶ ದ್ವಾರಗಳು ಪಾದಚಾರಿ ಮಾರ್ಗದಲ್ಲಿರುವುದರಿಂದ, ಪ್ರೇಕ್ಷಕರು ಸರತಿ ಸಾಲಿನಲ್ಲಿ ನಿಲ್ಲಲು ಕೆಎಸ್‌ಸಿಎ ತನ್ನದೇ ಜಾಗದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.

2. ಗೇಟ್‌ಗಳ ದುರಸ್ತಿ: ಪ್ರಸ್ತುತ ಇರುವ ಕಿರಿದಾದ ಗೇಟ್‌ಗಳನ್ನು ವಿಸ್ತರಿಸಿ ದುರಸ್ತಿಪಡಿಸಬೇಕು.

3. ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ದ್ವಾರ: ಅಂತರರಾಷ್ಟ್ರೀಯ ಪಂದ್ಯಗಳ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು.

4. ತುರ್ತು ಸೇವೆಗೆ ಮಾರ್ಗ: ಆಂಬುಲೆನ್ಸ್ ಸಂಚಾರಕ್ಕೆ ಯಾವುದೇ ಅಡೆತಡೆಯಿಲ್ಲದಂತೆ ಪ್ರತ್ಯೇಕ ಮಾರ್ಗವನ್ನು ಕಾಯ್ದಿರಿಸಬೇಕು.

5. ಆಟಗಾರರಿಗೆ ಪ್ರತ್ಯೇಕ ವ್ಯವಸ್ಥೆ: ಆಟಗಾರರ ಸುರಕ್ಷತೆಗಾಗಿ ಅವರ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದಾರಿಯನ್ನು ಮೀಸಲಿಡಬೇಕು.

6. ತಾಂತ್ರಿಕ ಉನ್ನತೀಕರಣ: ಪ್ರೇಕ್ಷಕರ ನಿಖರ ಸಂಖ್ಯೆಯನ್ನು ತಿಳಿಯಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಅಳವಡಿಸಬೇಕು.

7. ಭದ್ರತಾ ತಪಾಸಣೆ: ಕ್ರೀಡಾಂಗಣದಲ್ಲಿ ಕೆಲಸ ಮಾಡುವ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ಮಳಿಗೆದಾರರ ಪೂರ್ವಾಪರ ಪರಿಶೀಲಿಸಿ ಪೊಲೀಸರಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯ.

8. ವರದಿ ಸಲ್ಲಿಕೆ: ಅಗ್ನಿಶಾಮಕ ದಳ ಮತ್ತು ಬೆಸ್ಕಾಂನಿಂದ ಸುರಕ್ಷತಾ ಪರಿಶೀಲನೆ ನಡೆಸಿ ವರದಿ ಪಡೆಯಬೇಕು.

9. ಪಾರ್ಕಿಂಗ್ ವ್ಯವಸ್ಥೆ: ಪಂದ್ಯ ವೀಕ್ಷಣೆಗೆ ಬರುವವರಿಗೆ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು.

10. ಟಿಕೆಟ್ ನಿರ್ವಹಣೆ: ಟಿಕೆಟ್ ಮಾರಾಟ ಮತ್ತು ವಿಚಾರಣೆಗೆ ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಬೇಕು.

ಶೀಘ್ರದಲ್ಲೇ ಈ ಮಾರ್ಗಸೂಚಿಗಳ ಪಟ್ಟಿಯನ್ನು ಕೆಎಸ್‌ಸಿಎಯ ನೂತನ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಗುವುದು. ಆಯೋಜಕರು ಈ ಲೋಪದೋಷಗಳನ್ನು ಸರಿಪಡಿಸಿದ ನಂತರವಷ್ಟೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read More
Next Story