ಜಿಎಸ್‌ಟಿ ನೋಂದಣಿ ಮಾಡಿಸದ ಮತ್ತಷ್ಟು ವರ್ತಕರಿಗೆ ಶೀಘ್ರವೇ ನೋಟಿಸ್‌; ವಾಣಿಜ್ಯ ತೆರಿಗೆ ಇಲಾಖೆ

ಜಿಎಸ್‌ಟಿ ವಂಚನೆ ಮಾಡಿದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗುವುದು ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.;

Update: 2025-07-22 06:53 GMT
ಸಾಂದರ್ಭಿಕ ಚಿತ್ರ

ಜಿಎಸ್‌ಟಿ ನೋಂದಣಿ ಮಾಡಿಸದೇ ಯುಪಿಐ ಮೂಲಕ ಹೆಚ್ಚಿನ ವ್ಯಾಪಾರ ನಡೆಸಿರುವ ಮತ್ತಷ್ಟು ವರ್ತಕರಿಗೆ ನೋಟಿಸ್‌ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಮೀರಾ ಪಂಡಿತ್‌ ತಿಳಿಸಿದ್ದಾರೆ. 

ಕೋರಮಂಗಲ ವ್ಯಾಪ್ತಿಯಲ್ಲಿ ಯುಪಿಐ ಮೂಲಕ ಕೋಟ್ಯಂತರ ರೂ. ಸ್ವೀಕರಿಸಿದ 850 ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ನೋಟಿಸ್‌ ನೀಡಲಾಗಿದೆ. ಜಿಎಸ್‌ಟಿ ವಂಚನೆ ಮಾಡಿದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗುವುದು ಎಂದು ತಿಳಿಸಿದರು. 

ಗಾಬರಿ ಬೇಡ, ದಂಡ ಕಡಿಮೆಯಾಗಬಹುದು

ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ನೋಟಿಸ್‌ನಲ್ಲಿರುವಷ್ಟು ಸಣ್ಣ ವ್ಯಾಪಾರಿಗಳು ಜಿಎಸ್‌ಟಿ ಹಾಗೂ ದಂಡ ಪಾವತಿಸುವುದು ಕಡ್ಡಾಯವಲ್ಲ. ಜಿಎಸ್‌ಟಿ ಅನ್ವಯವಾಗದ ಹಣ್ಣು, ತರಕಾರಿ, ಹಾಲಿನ ಉತ್ಪನ್ನಗಳು ಇವೆ. ವ್ಯಾಪಾರಿಗಳು ತಮ್ಮದು ಯಾವ ವ್ಯವಹಾರ ಎಂದು ತಿಳಿಸಿದರೆ ದಂಡ ಕಡಿಮೆಯಾಗಲಿದೆ. ನೋಟಿಸ್‌ಗೆ ಉತ್ತರಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಆದರೆ, ವ್ಯಾಪಾರಿಗಳು ಬಯಸಿದರೆ ಕಾಲಾವಕಾಶ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ. 

ಜಿಎಸ್‌ಟಿ ಮಿತಿ ಹೆಚ್ಚಳಕ್ಕೆ ಮನವಿ 

ಸೇವೆ ಸಂಬಂಧಿಸಿದ ವ್ಯಾಪಾರಕ್ಕೆ 20 ಲಕ್ಷ ರೂ. ಹಾಗೂ ಸರಕು ವ್ಯಾಪಾರಕ್ಕೆ 40 ಲಕ್ಷ ರೂ. ಮಿತಿಗೊಳಿಸಿ ಎಂಟು ವರ್ಷಗಳು ಕಳೆದಿವೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು ಲಾಭಾಂಶದಲ್ಲಿ ಕುಸಿತವಾಗಿದೆ. ಆದ್ದರಿಂದ, ಸೇವೆ ಸಂಬಂಧಿಸಿದ ವ್ಯಾಪಾರಕ್ಕೆ 50 ಲಕ್ಷ ರೂ. ಹಾಗೂ ಸರಕು ವ್ಯಾಪಾರಕ್ಕೆ ಒಂದು ಕೋಟಿ ರೂ.ನಿಗದಿಪಡಿಸಬೇಕೆಂದು ವ್ಯಾಪಾರಿಗಳು ಮನವಿ ಮಾಡಿದ್ದಾರೆ.

ಎರಡು ದಿನ ಹಾಲು, ಬೇಕರಿ ಉತ್ಪನ್ನ ಬಂದ್‌ 

ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ವಿರೋಧಿಸಿ ಬೇಕರಿ, ಕಾಫಿ-ಟೀ ಹಾಗೂ ಕಾಂಡಿಮೆಂಟ್ಸ್‌ ಮಾಲೀಕರು ಜು.23 ಮತ್ತು 24 ರಂದು ಹಾಲು ಹಾಗೂ ಬೇಕರಿ ಉತ್ಪನ್ನಗಳ ಮಾರಾಟ ಬಂದ್‌ ಮಾಡಲು ನಿರ್ಧರಿಸಿದ್ದಾರೆ. ಜು. 25 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ರಾಜ್ಯ ಬೇಕರಿ, ಕಾಂಡಿಮೆಂಟ್ಸ್‌ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ.

Tags:    

Similar News